ಅಧ್ಯಾತ್ಮ ಡೈರಿ : ಮುಕ್ತವಾಗಿ ಇರುವುದೆಂದರೆ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು ಎಂದಲ್ಲ

ನಮ್ಮ ಹೊಣೆಯನ್ನೇ ಹೊರದೆ ಮುಕ್ತವಾಗಿರಲು ಬಯಸುತ್ತೇವೆ. ನಾವು ನಿಜವಾಗಿಯೂ ಮುಕ್ತವಾಗಿ ಇರಬೇಕೆಂದರೆ, ಮೊದಲು ನಮ್ಮ ಹೊಣೆಗಾರಿಕೆಗಳನ್ನು ಸಮರ್ಥವಾಗಿ ನಿಭಾಯಿಸಬೇಕು ~ ಅಲಾವಿಕಾ

ಮಗೆ ಬಹುತೇಕರಿಗೆ ಇದೊಂದು ಬಯಕೆ ಇರುತ್ತದೆ. “ಫ್ರೀ ಆಗಿರಬೇಕು. ಯಾವ ಜಂಜಡವೂ ಇಲ್ಲದೆ ಮುಕ್ತವಾಗಿರಬೇಕು” ಎಂದು ನಾವು ಹಂಬಲಿಸುತ್ತಲೇ ಇರುತ್ತೇವೆ. ನಮ್ಮ ಹಂಬಲ ಹೇಗೆಂದರೆ, ರೆಂಬೆ ಕೊಂಬೆಗಳನ್ನು ಪೊರೆಯಲು ಬೇರುಗಳೂ ಬೇಕು, ಆಕಾಶದಲ್ಲಿ ಹಾರಲು ರೆಕ್ಕೆಗಳೂ ಬೇಕು! ನಮ್ಮ ವ್ಯಾಖ್ಯಾನದ ಪ್ರಕಾರ ‘ಫ್ರೀ ಆಗಿರುವುದು’ ಅಂದರೇನು? ಇದನ್ನು ಮೊದಲು ಕಂಡುಕೊಳ್ಳೋಣ. ಆಮೇಲೆ ನಮ್ಮ ಈ ಹಂಬಲದ ಔಚಿತ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಮಾತಾಡಬಹುದು.

ನಮಗೆ ಬಹುತೇಕವಾಗಿ ಫ್ರೀ ಆಗಿರುವುದು, ಅಂದರೆ ಮುಕ್ತವಾಗಿರುವುದು – ನಮ್ಮ ಇಷ್ಟದಂತೆ ಜೀವಿಸುವ ಆಯ್ಕೆಯಷ್ಟೆ. ನಮ್ಮ ಇಷ್ಟದ ಊಟ, ಉಡುಗೆ, ಒಡನಾಟ, ಸುತ್ತಾಟಗಳನ್ನು ಸಾಧ್ಯವಾಗಿಸಿಕೊಳ್ಳುವುದು. ಮತ್ತು ಈ ಯಾವುದರ ನಡುವೆಯೂ ಯಾವುದೇ ಜವಾಬ್ದಾರಿ ನುಸುಳಿ ಅಡ್ಡಿ ಪಡಿಸದೆ ಇರುವುದು.

ಈ ಹಂಬಲದ ತೀವ್ರತೆಯಲ್ಲಿ ನಾವು ಒಂದು ಸಂಗತಿಯನ್ನು ಯೋಚಿಸುವುದೇ ಇಲ್ಲ. ನಾವು ಫ್ರೀ ಆಗಿರಬೇಕು, ಜವಾಬ್ದಾರಿಗಳಿಂದ ಹೊರತಾಗಿರಬೇಕು ಎಂದರೆ ನಮ್ಮ ಜವಾಬ್ದಾರಿಯನ್ನು ಯಾರಾದರೂ ಹೊತ್ತುಕೊಂಡಿರಬೇಕು. ನಮ್ಮ ಹೊಣೆಗಾರಿಕೆಯನ್ನು ಮತ್ತೊಬ್ಬರ ಹೆಗಲಿಗೆ ಹೊರೆಸಬೇಕು. ನಮ್ಮ ಕುಟುಂಬ, ಗೆಳೆಯರು, ಸಹೋದ್ಯೋಗಿಗಳು ಇದನ್ನು ನಮಗಾಗಿ ಮಾಡುತ್ತಾರೆ. ನಾವು ಪ್ರತಿಯಾಗಿ ಏನು ಮಾಡುತ್ತೇವೆ? ಅವರ ಸಹಕಾರಕ್ಕೆ ಪ್ರತಿಯಾಗಿ ಏನನ್ನಾದರೂ ಮಾಡುವುದನ್ನು ನಾವು ಹೊರೆ ಎಂದು ಭಾವಿಸತೊಡಗುತ್ತೇವೆ. ಇದರಿಂದ ಸಂಬಂಧಗಳು ಭಾರವಾಗತೊಡಗುತ್ತವೆ. ಮತ್ತೆ ನಾವು ಎಲ್ಲದರಿಂದಲೂ ಬಿಡಿಸಿಕೊಂಡು ಮುಕ್ತರಾಗಬೇಕು ಅನ್ನುವ ಮರೀಚಿಕೆಯ ಹಿಂದೆ ಓಡತೊಡಗುತ್ತೇವೆ!

ಈ ಸಂದರ್ಭದಲ್ಲಿ ಸೂಫಿ ಕಥೆಯೊಂದು ನೆನಪಾಗುತ್ತಿದೆ. ವ್ಯಾಪಾರಿಯೊಬ್ಬ ಪ್ರಾರ್ಥನೆ ಸಲ್ಲಿಸಲು ಮಸೀದಿಯ ಹೊರಗೆ ಒಂಟೆಯನ್ನು ನಿಲ್ಲಿಸಿ ಒಳಹೊಕ್ಕ. ಅರಾಮಾಗಿ ಮಸೀದಿಯೊಳಗೆ ಒಂದು ಗಂಟೆ ಕಳೆದ. ಹೊರಗೆ ಹೋದರೆ ಮತ್ತವೇ ಜಂಜಾಟಕ್ಕೆ ಬೀಳಬೇಕು. ಸ್ವಲ್ಪ ಹೊತ್ತು ಇಲ್ಲೇ ಇರೋಣ ಎಂದುಕೊಂಡು ಮಸೀದಿಯ ಆವರಣದೊಳಗೆ ವಿರಮಿಸುತ್ತಾನೆ. ಹೊರಗೆ ಬರುವಾಗ ಕತ್ತಲಾಗಿರುತ್ತದೆ. ನೋಡಿದರೆ ಅಲ್ಲಿ ಒಂಟೆಯಿಲ್ಲ! ವ್ಯಾಪಾರಿ ದೇವರ ಮೇಲೆ ರೇಗುತ್ತಾನೆ, “ಏನೋ ಸ್ವಲ್ಪ ಹೊತ್ತು ಜಂಜಾಟಮುಕ್ತವಾಗಿ ಇರೋಣ ಅಂದರೆ ಹೀಗೆ ಅನ್ಯಾಯ ಮಾಡಿದೆಯಲ್ಲಾ!” ಎಂದು. ಆಗ ದೇವವಾಣಿ ಮೊಳಗುತ್ತದೆ; “ನೀನು ಜಂಜಾಟ ಮುಕ್ತವಾಗಿ ಇರಬೇಕು ಎಂದರೆ, ಒಂಟೆಯನ್ನು ಕಟ್ಟಿಹಾಕುವ ಹೊಣೆಗಾರಿಕೆಯನ್ನೂ ನಡೆಸಬೇಕಿತ್ತು. ತಪ್ಪು ಯಾರದು?” ಎಂದು.

ನಾವೂ ಮಾಡುವುದು ಹೀಗೆಯೇ. ನಮ್ಮ ಹೊಣೆಯನ್ನೇ ಹೊರದೆ ಮುಕ್ತವಾಗಿರಲು ಬಯಸುತ್ತೇವೆ. ನಾವು ನಿಜವಾಗಿಯೂ ಮುಕ್ತವಾಗಿ ಇರಬೇಕೆಂದರೆ, ಮೊದಲು ನಮ್ಮ ಹೊಣೆಗಾರಿಕೆಗಳನ್ನು ಸಮರ್ಥವಾಗಿ ನಿಭಾಯಿಸಬೇಕು. ನಮ್ಮ ನಮ್ಮ ಕೆಲಸಗಳನ್ನು ನಾವು ಸಮರ್ಪಕವಾಗಿ ಮಾಡಿದರೆ, ನಾವು ಹಗುರಾಗಲು ಅದೇ ಸಾಕಷ್ಟಾಯ್ತು. ಈ ಹಗುರವೇ ನಮ್ಮನ್ನು ಗಾಳಿಯಲ್ಲಿ ತೇಲಾಡಿಸುವುದು, ಮುಕ್ತತೆಯ ಆನಂದವನ್ನು ನೀಡುವುದು. ನಮ್ಮ ಕರ್ತವ್ಯಗಳನ್ನು ನಾವು ಸರಿಯಾಗಿ ನಿಭಾಯಿಸಿದಾಗ ನಾವು ಯಾರಿಗೂ ಉತ್ತರದಾಯಿಯಾಗಿ ಇರುವುದಿಲ್ಲ. ಆಗ ನಾವು ನಮ್ಮ ಇಚ್ಛೆಯಂತೆ ಬಾಳುವ ಎಲ್ಲ ಅವಕಾಶವನ್ನೂ ಪಡೆಯುತ್ತೇವೆ. ನಮ್ಮ ಹಂಬಲದ ‘ಮುಕ್ತ ಬದುಕು’ ನಮ್ಮದಾಗುತ್ತದೆ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply