“ಚಪಲಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು” ಅನ್ನುತ್ತದೆ ಇಂದಿನ ಸುಭಾಷಿತ…
ನ ಪಾಣಿಪದ ಚಪಲೋ ನ ನೇತ್ರ ಚಪಲೋ ನೃಜುಃ |
ನ ಸ್ಯಾದ್ವಾಕ್ಚಪಲಶ್ಚೈವ ನ ಪರದ್ರೋಹ ಕರ್ಮಧೀಃ ||
ಅರ್ಥ: ಬೇಡದ ಕೆಲಸಕ್ಕೆ ಕೈ ಹಾಕುವುದು ಕಂಡ-ಕಂಡದ್ದನ್ನೆಲ್ಲಾ ಮುಟ್ಟಿ ನೋಡುವುದು-ಇದೆಲಾ ಪ್ರಾಣಿ ಚಪಲ. ಇದು ಮಾಡಬಾರದು. ಎಲ್ಲೆಂದರಲ್ಲಿ ನಡೆದಾಡುವುದು. ಕಾಲ ಮೇಲೆ ಕಾಲು ಹಾಕಿಕೊಂಡು ಅಲುಗಾಡಿಸುತ್ತಿರುವುದು- ಇದೆಲ್ಲಾ ಪಾದ ಚಪಲ. ಇದು ಕೂಡದು. ಎಲ್ಲೆಂದರಲ್ಲಿ ಕಣ್ಣು ಹಾಯಿಸುವುದು, ಮನಸ್ಸನ್ನು ಕೆರಳಿಸುವಂಥದ್ದನ್ನು ನೋಡುವುದು-ಇವೆಲ್ಲಾ ನೇತ್ರ ಚಪಲ. ಇವು ನಮ್ಗೆ ತೊಂದರೆಯನ್ನಷ್ಟೆ ತರುವವು.
ತಾತ್ಪರ್ಯ: ಸುಳ್ಳು ಹೇಳುವುದು, ಮೋಸದಿಂದ ನಡೆದುಕೊಳ್ಳುವುದು ದುಷ್ಟತನ. ಹರಟೆ ಹೊಡೆಯುವುದು, ಕುಚೇಷ್ಟೆಯ ಮಾತನಾಡುವುದು. ಇವೆಲ್ಲಾ ವಾಕ್ ಚಪಲ. ಹೇಳುವುದೊಂದು ಮಾಡುವುದು ಮತ್ತೊಂದು, ಇತರರನ್ನು ಚೆನ್ನಾಗಿ ನಂಬಿಸಿ ಸಮಯ ನೋಡಿ ಕೈಕೊಡುವುದು- ಇವೆಲ್ಲಾ ದೋಷ ಪೂರ್ಣ ದ್ರೋಹಬುದ್ಧಿ. ಇದು ಕೂಡದು, ಇವನ್ನೆಲ್ಲಾ ಮಾಡಬಾರದು. ಇದರಿಂದ ದೊಡ್ಡ ಅನಾಹುತವೇ ಆದೀತು.
ಮರದ ಸೀಳಿಗೆ ಸಿಕ್ಕಿಕೊಂಡ ಕೋತಿಯ ಕಥೆಯನ್ನು ನೀವು ಓದಿಯೇ ಇರುತ್ತೀರಿ. ಅರ್ಧ ಕಡಿದು ಬೀಳಿಸಿದ ಮರದ ಸೌದೆಯ ನಡುವೆ ಕೊಡಲಿ ಸಿಕ್ಕಿಸಿ ಮರಕುಟಿಗ ಎಲ್ಲಿಯೋ ಹೋಗಿರುತ್ತಾನೆ. ಕೋತಿಯು ಸೀಳೀನಲ್ಲಿ ಏನಿದೆ ಎಂದು ನೋಡುವ ಚಪಲದಿಂದ ಇಣುಕಿ, ಕೊಡಲಿಯನ್ನು ಹೊರಗೆ ತೆಗೆಯುತ್ತದೆ. ಈ ಮೂರ್ಖತನದಿಂದ ಅದರ ಪ್ರಾಣಕ್ಕೇ ಕುತ್ತು ಉಂಟಾಗಿ, ಕೋತಿಯು ಸೌದೆಯ ಸೀಳಿನ ನಡುವೆ ಸಿಲುಕಿ ಒದ್ದಾಡಿ ಸತ್ತು ಹೋಗುತ್ತದೆ.
ಆದ್ದರಿಂದ ಚಪಲಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇವಕ್ಕೆ ಒಳಗಾದ ನಮಗೆ ಅದರ ಗಂಭೀರ ಪರಿಣಾಮಗಳು ಅರಿವಾಗುವುದಿಲ್ಲ. ಅನಾಹುತ ಘಟಿಸಿದಮೇಲಷ್ಟೇ ನಮಗೆ ಎಚ್ಚರವಾಗುವುದು. ಆದರೆ, ಅಷ್ಟು ಹೊತ್ತಿಗೆ ಕಾಲ ಮೀರಿಬಿಟ್ಟಿರುತ್ತದೆ. ಆದ್ದರಿಂದ ಮೊದಲೇ ಜಾಗ್ರತೆಯಿಂದ ಇರುವುದು ಉತ್ತಮ.