‘ವಿಕೃತ ಸುಖ’ : ಜಿಡ್ಡು ಕಂಡ ಹಾಗೆ

ಕೆಲವು ಜನರಿಗೆ ಬೇರೆಯವರು ಸಂಕಟದಿಂದ ನರಳುವುದನ್ನ ನೋಡುವುದರಲ್ಲಿ ಒಂದು ಬಗೆಯ ವಿಶೇಷ ತೃಪ್ತಿ. ಈಗ ನಿಮ್ಮೊಳಗನ್ನ ಒಮ್ಮೆ ಸೂಕ್ಷ್ಮವಾಗಿ ಗಮನಿಸಿ ಈ ತರಹದ ಭಾವನೆ ನಿಮ್ಮೊಳಗೂ ಯಾವುದೋ ಒಂದು ರೂಪದಲ್ಲಿ ಮನೆ ಮಾಡಿಕೊಂಡಿದೆಯೇ ? ಗಮನಿಸಿ ~ ಜಿಡ್ಡು ಕೃಷ್ಣಮೂರ್ತಿ| ಕನ್ನಡಕ್ಕೆ : ಚಿದಂಬರ ನರೇಂದ್ರ

‘Sadism’ ಎನ್ನುವ ಒಂದು ಸಂಗತಿ ಇದೆ. ಈ ಪದದ ಅರ್ಥ ನಿಮಗೆ ಗೊತ್ತೆ? ಮಾರ್ಕೈಸ್ ದಿ ಸೇಡ್ ಎನ್ನುವ ಒಬ್ಬ ಫ್ರೆಂಚ್ ಬರಹಗಾರ, ಜನರನ್ನ ಹಿಂಸಿಸುತ್ತ, ಆ ಹಿಂಸೆಯಿಂದ ಜನ ನರಳುವುದನ್ನ ನೋಡಿ ಸುಖಪಡುವ ಮನುಷ್ಯನೊಬ್ಬನ ಬಗ್ಗೆ ಒಂದು ಪುಸ್ತಕ ಬರೆದಿದ್ದಾನೆ. ಈ ಬರಹಗಾರ ಸೇಡ್ ನಿಂದಾಗಿ ‘Sadism’ ಎನ್ನುವ ಪದ ಹುಟ್ಟಿಕೊಂಡಿದ್ದು, ಮತ್ತು ಇದರ ಅರ್ಥ ಬೇರೆಯವರ ಯಾತನೆಯಿಂದ ಸುಖ ಹೊಂದುವುದು.

ಕೆಲವು ಜನರಿಗೆ ಬೇರೆಯವರು ಸಂಕಟದಿಂದ ನರಳುವುದನ್ನ ನೋಡುವುದರಲ್ಲಿ ಒಂದು ಬಗೆಯ ವಿಶೇಷ ತೃಪ್ತಿ. ಈಗ ನಿಮ್ಮೊಳಗನ್ನ ಒಮ್ಮೆ ಸೂಕ್ಷ್ಮವಾಗಿ ಗಮನಿಸಿ ಈ ತರಹದ ಭಾವನೆ ನಿಮ್ಮೊಳಗೂ ಯಾವುದೋ ಒಂದು ರೂಪದಲ್ಲಿ ಮನೆ ಮಾಡಿಕೊಂಡಿದೆಯೇ ? ಗಮನಿಸಿ. ಈ ಭಾವನೆ ಸ್ಪಷ್ಟವಾಗಿ ಅಥವಾ ಢಾಳಾಗಿ ನಿಮ್ಮೊಳಗೆ ಕಾಣಿಸದೇ ಇರಬಹುದು ಆದರೆ ಅದು ನಿಮ್ಮೊಳಗೆ ಇರುವುದು ನಿಜವಾದರೆ, ನೀವು ಈ ಭಾವನೆಯ ಅಭಿವ್ಯಕ್ತಿಯನ್ನ ನಿಮ್ಮ ಕೆಲ ಸಣ್ಣ ಸಣ್ಣ ಪ್ರತಿಕ್ರಿಯೆಗಳಲ್ಲಿ ಗುರುತಿಸಬಹುದು.

ಉದಾಹರಣೆಗೆ ಯಾರೋ ಎಡವಿದಾಗ ನಿಮ್ಮಲ್ಲಿ ಒಂದು ಸಣ್ಣ ನಗೆ, ನಿಮಗಿಂತ ಎತ್ತರದ ಜಾಗೆಯಲ್ಲಿರುವವರನ್ನ ಎಳೆದು ಬೀಳಿಸುವ ಬಗ್ಗೆ ಹುಕಿ ಅಥವಾ ಹಾಗೆ ಅವರನ್ನ ಬೀಳಿಸುವವರ ಬಗ್ಗೆ ಅಭಿಮಾನ, ಗಾಸಿಪ್, ವಿಮರ್ಶೆಯ ಹೆಸರಲ್ಲಿ ಚುಚ್ಚುವುದು…ಇತ್ಯಾದಿ. ಇವೆಲ್ಲ ಸಂವೇದನಾಶೀಲತೆಯ ಕೊರತೆಯ ಮತ್ತು ಇತರರನ್ನ ನೋಯಿಸುವ ಸೇಡಿಸಂ ನ ವಿವಿಧ ಪ್ರಕಾರಗಳೇ.

ಒಬ್ಬರು ಇನ್ನೊಬ್ಬರನ್ನ ಉದ್ದೇಶಪೂರ್ವಕವಾಗಿಯೇ ದ್ವೇಷ ಕಾರಣವಾಗಿ ಘಾಸಿ ಮಾಡಬಹುದು ಅಥವಾ ಅಪ್ರಜ್ಞಾಪೂರ್ವಕವಾಗಿ ಮಾತುಗಳಿಂದ, ಸನ್ನೆಗಳಿಂದ , ನೋಟಗಳಿಂದ ನೋಯಿಸಬಹುದು, ಆದರೆ ಆಂತರ್ಯದಲ್ಲಿ ಈ ಎರಡೂ ರೀತಿಗಳ ಉದ್ದೇಶ ಇನ್ನೊಬ್ಬರನ್ನು ನೋಯಿಸಿ ಸುಖ ಪಡುವುದೇ ಆಗಿದೆ. ಎಷ್ಟೇ ದೊಡ್ಡ ಅಥವಾ ಸಣ್ಣ ಪ್ರಮಾಣದಲ್ಲಿಯಾದರೂ.

ಈ ವಿಕೃತ ಆನಂದವನ್ನ ತೊರೆಯುವುದಕ್ಕಾಗಿ ಸತತವಾಗಿ ನಮ್ಮನ್ನ ನಾವೇ ಪರೀಕ್ಷೆಗೆ ಗುರಿಪಡಿಸಿಕೊಳ್ಳುತ್ತ ನಮ್ಮೊಳಗೆ ಇರುವ ಈ ಭಾವನೆಯ ನಿಜ ಸ್ವರೂಪವನ್ನ ಗುರುತಿಸಬೇಕು ಮತ್ತು ಹಾಗೆ ಗುರುತಿಸಿದಾಗಲೇ ಈ ಭಾವನೆ ತನ್ನಿಂದ ತಾನೆ ನಮ್ಮಿಂದ ಕಳಚಿ ಬೀಳುವುದು.

Leave a Reply