ಅನುಭಾವಿಯ ಕೊನೆಯ ಸಂದೇಶ ~ ಝೆನ್ ಕಥೆ

ಅನುಭಾವಿ ಸನ್ಯಾಸಿ ತನ್ನ ಶಿಷ್ಯರಿಗೆ ಕೊಟ್ಟು ಹೋದ ಕೊನೆಯ ಸಂದೇಶ ಯಾವುದು ಗೊತ್ತಾ…


ಬ್ಬ ಝೆನ್ ಅನುಭಾವಿ ತನ್ನ ಕಟ್ಟ ಕಡೆಯ ನುಡಿಗಳನ್ನು ಲಿಪಿರೂಪಕ್ಕಿಳಿಸದೇ ತೀರಿಕೊಂಡ. ಅಗಲಿಕೆಯ ದುಃಖದಲ್ಲಿ ಮುಳುಗಿದ್ದ ಶಿಷ್ಯರಿಗೆ ಅದು ನೆನಪೇ ಆಗಲಿಲ್ಲ.
ಆ ಶಿಷ್ಯರು ಕಳೇಬರವನ್ನು ಗುಡಿಸಲಿನಿಂದ ಹೊರಕ್ಕೆ ತಂದು ಚಿತೆಯನ್ನು ಸಿದ್ಧಪಡಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಆ ಗುರು ಕಣ್ತೆರೆದ.
“ಅರೆ, ಮರೆತೇ ಬಿಟ್ಟಿರಲ್ಲ, ಹೋಗಿ ನನ್ನ ಪುಸ್ತಕ ತನ್ನಿ. ತನ್ನ ಕಡೆಯ ಸಂದೇಶವನ್ನು ಹೇಳದೇ ತೀರಿಕೊಂಡನೆಂದು ಮುಂಬರುವ ತಲೆಮಾರುಗಳು ನನ್ನನ್ನು ಆಕ್ಷೇಪಿಸಬಾರದು, ಹೋಗಿ ಕೂಡಲೆ ತನ್ನಿ” ಎಂದ.
ಪುಸ್ತಕವನ್ನು ತಂದ ಮೇಲೆ ಅದರಲ್ಲಿ ಒಂದು ಪುಟ್ಟ ಸಾಲು ಬರೆದು ತನ್ನ ರುಜು ಹಾಕಿ ಕಣ್ಮುಚ್ಚಿ ಮತ್ತೆ ಸತ್ತುಹೋದ.
ಈ ಸಲ ಶಿಷ್ಯರು ಅವನ ಕಳೇಬರವನ್ನು, ಅವನ ನಾಡಿಮಿಡಿತ, ಉಸಿರಾಟ ಮುಂತಾದವನ್ನು ಜಾಗರೂಕತೆಯಿಂದ ಪರೀಕ್ಷಿಸಿದರು. ಆ ಕಳೇಬರವನ್ನು ಮತ್ತೆ ಮತ್ತೆ ಅಲ್ಲಾಡಿಸಿ ನೋಡಿದರು. ಕಳೇಬರದಿಂದ ಯಾವ ಸ್ಪಂದನೆಯೂ ಬರಲಿಲ್ಲ.
ಶಿಷ್ಯರು “ಈಗ ನಿಜವಾಗಿಯೂ ತೀರಿಕೊಂಡಿದ್ದಾರೆ” ಎಂದು ಮಾತಾಡಿಕೊಂಡರು.
ಆದರೆ, ಅಷ್ಟರಲ್ಲಿ ಅನುಭಾವಿ ಗಹಗಹಿಸಿ ನಕ್ಕ. “ಈಗ ನಾನು ನಿಜವಾಗಿಯೂ ಸಾಯುತ್ತಿದ್ದೀನಿ. ಮತ್ತೆ ನನ್ನನ್ನು ಪರೀಕ್ಷಿಸಲು ಹೋಗಬೇಡಿ. ಆಗ, ನೀವು ಪರೀಕ್ಷಿಸುತ್ತಿದ್ದಾಗ ನಾನು ಸುಮ್ಮನೆ ಕಾಯುತ್ತ ಮಲಗಿದ್ದೆ. ನಗುವೇ ನನ್ನ ಕೊನೆಯ ಸಂದೇಶ, ಬರೆದುಕೊಳ್ಳಿ” ಎಂದು ಹೇಳಿ ನಿಜವಾಗಿಯೂ ಸತ್ತುಹೋದ.
ಸಂಗ್ರಹ ಮತ್ತು ಅನುವಾದ : ಅಲಾವಿಕಾ

Leave a Reply