ಈ ಭವ್ಯವೂ ಸಮೃದ್ಧವೂ ಆದ ಇಡೀ ವಿಶ್ವವೆಂಬ ಮಹಾರಣ್ಯದಲ್ಲಿ ಇಕ್ಕಟ್ಟಾದ ಕಂಠವುಳ್ಳ ಒಂದು ಹೂಜಿ ಇದೆ. ನಿಮ್ಮ ಪುಟ್ಟ ಮೆದುಳೇ ಆ ಸಂಕುಚಿತ ಕಂಠದ ಹೂಜಿ. ಇವು ನಮಗೆ ಇಷ್ಟವಾದವು, ಇವು ನಮ್ಮಮೆಚ್ಚಿನವು ಎಂದು ನೀವು ಅಕಾರಣವಾಗಿ ಕಲ್ಪಿಸಿಕೊಂಡ ಕೆಲವು ವಿಷಯಗಳೇ ನಿಮ್ಮ ಮೆದುಳೆಂಬ ಹೂಜಿಯಲ್ಲಿ ನೀವು ಹಾಕಿಟ್ಟುಕೊಂಡಿರುವ ತಿನಿಸುಗಳು. ನಿಮ್ಮ ಮನಸ್ಸೆಂಬ ಮಂಗ ಇವು ನನಗೆ ಬೇಕು, ಇವು ನನ್ನವು ಎಂದು ನಿಮ್ಮ ಮೆದುಳಿನಲ್ಲಿ ನೀವೇ ಇಟ್ಟುಕೊಂಡಿರುವ ಮೆಚ್ಚಿನ ತಿಂಡಿಗಳನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತದೆ. : ಸ್ವಾಮಿ ರಾಮತೀರ್ಥ । ಆಕರ: ಪರಮಾತ್ಮಾನುಭವದ ಮಹಾರಣ್ಯಗಳಲ್ಲಿ; ಅನುವಾದ: ಶ್ರೀಮೂರ್ತಿ
ಜರ್ಮನಿಯ ಜನಪ್ರಿಯವಾದ ಕಥೆಗಳಲ್ಲಿ ತನ್ನ ನೆರಳು ಕಳೆದುಕೊಂಡ ಒಬ್ಬ ಮನುಷ್ಯನ ವಿಚಾರವನ್ನು ಕೇಳುತ್ತೇವೆ. ಅದೊಂದು ಬಹಳ ವಿಚಿತ್ರವಾದ ವಿಷಯ. ನೆರಳನ್ನು ಕಳೆದುಕೊಂಡಂಥ ಮನುಷ್ಯ ಅದಕ್ಕಾಗಿ ಬಹಳ ಕಷ್ಟಪಡಬೇಕಾಯಿತು. ಅವನ ಎಲ್ಲಮಿತ್ರರೂ ಅವನನ್ನು ಪರಿತ್ಯಜಿಸಿದರು; ಎಲ್ಲ ಭಾಗ್ಯವೂ ಅವನನ್ನು ಬಿಟ್ಟು ತೊಲಗಿತು; ಅದಕ್ಕಾಗಿ ಅವನು ಬಹಳ ದುಃಖಿತನಾಗಿದ್ದನು. ಹೀಗಿರುವಾಗ, ನೆರಳನ್ನು ಕಳೆದುಕೊಳ್ಳುವುದಕ್ಕೆ ಬದಲು ಮೂಲವನ್ನು (ದೇಹವನ್ನು) ಕಳೆದುಕೊಳ್ಳುವ ಒಬ್ಬ ಮನುಷ್ಯನ ವಿಚಾರದಲ್ಲಿ ಏನು ಯೋಚಿಸುವಿರಿ? ನೆರಳನ್ನು ಮಾತ್ರ ಕಳೆದುಕೊಳ್ಳುವ ಮನುಷ್ಯನಿಗೆ ಏನಾದರೂ ಆಶೆಯಿದ್ದೀತು; ಆದರೆ ಮೂಲವನ್ನೆ – ದೇಹವನ್ನೆ ಕಳೆದುಕೊಳ್ಳುವ ಮನುಷ್ಯನಿಗೆ ಯಾವ ಪ್ರತ್ಯಾಶೆ ಇದ್ದೀತು?
ಈ ಪ್ರಪಂಚದಲ್ಲಿ ಬಹು ಜನರ ಸ್ಥಿತಿ ಹೀಗೆಯೇ ಇದೆ. ಬಹಳ ಜನರು ತಮ್ಮನೆರಳನ್ನು ಕಳೆದುಕೊಂಡಿಲ್ಲ, ಆದರೆ ತಮ್ಮ ವಸ್ತುವನ್ಹೇ- ಅಂದರೆ ನೈಜವನ್ನೇ ಕಳೆದುಕೊಂಡಿದ್ದಾರೆ. ಪ್ರತಿಯೊಬ್ಬರೂ ತಮ್ಮ ನೆರಳಿನ ವಿಷಯವನ್ನು ನಮಗೆ ಹೇಳುತ್ತಾರೆ. ಪ್ರತಿಯೊಬ್ಬರೂ ಅವರವರ ದೇಹದ ವಿಷಯವಾಗಿ ಏನನ್ನಾದರೂ ಹೇಳುತ್ತ ಇರುತ್ತಾರೆ. ಆದರೆ ತಮ್ಮ ನಿಜವಾದ ವಸ್ತುವಿನ ಬಗ್ಗೆ ಅಂದರೆ ಆತ್ಮದ ಬಗ್ಗೆ ಹೇಳುವವರೇ? ಆ ಬಗ್ಗೆ ಚಿಂತಿಸುವವರೇ ಅತ್ಯಂತ ಕಡಿಮೆ! ಸ್ವಂತ ಆತ್ಮವನ್ನೆ ಕಳೆದುಕೊಂಡು ಜಗತ್ತನ್ನೆ ಗಳಿಸಿದರೂ ಏನು ಪ್ರಯೋಜನವಾಯ್ತು? ಆದರೆ ಜನರು ತಮ್ಮ ಆತ್ಮವನ್ನು ಕಳೆದುಕೊಂಡಾದರೂ ಇಡಿಯ ಜಗತ್ತನ್ನುಸಂಪಾದಿಸುವ ಪ್ರಯತ್ನದಲ್ಲಿದ್ದಾರೆ.
ಜನರು ಸ್ವಾತಂತ್ರ್ಯದ ವಿಷಯವಾಗಿಯೂ ವಿಮೋಚನೆಯ ವಿಷಯವಾಗಿಯೂ ವಿಮೋಚನೆಯ ವಿಚಾರವಾಗಿಯೂ ಬಹಳ ಮಾತಾಡುತ್ತಾರೆ. ನಿಮ್ಮನ್ನು ಬಂಧಿಸಿರುವುದು ಯಾವುದು? ಮೊದಲು ಇದನ್ನು ವಿಚಾರ ಮಾಡಬೇಕು. ನಿಮಗೆ ಸ್ವಾತಂತ್ರ್ಯವೂ ಮೋಕ್ಷವೂ ಬೇಕಾದರೆ ನಿಮ್ಮ ಬಂಧನಕ್ಕೆ ಕಾರಣವೇನೆಂಬುದನ್ನು ಮೊದಲು ತಿಳಿಯಬೇಕು.
ಈ ಸಂದರ್ಭದಲ್ಲಿ ಒಂದು ಮಂಗನ ಕತೆ ನೆನಪಿಗೆ ಬರುತ್ತದೆ. ಹಳ್ಳಿಗಳಲ್ಲಿ ಮಂಗಗಳನ್ನು ಹಿಡಿಯಲು ವಿಚಿತ್ರ ತಂತ್ರವನ್ನು ಬಳಸುತ್ತಾರೆ. ಬಹಳ ವಿಚಿತ್ರ ರೀತಿಯದು. ಒಂದು ಇಕ್ಕಟ್ಟಾದ ಕುತ್ತಿಗೆಯುಳ್ಳ ಹೂಜಿಯನ್ನುನೆಲದಲ್ಲಿ ಅರ್ಧದಷ್ಟು ಭದ್ರವಾಗಿ ಹೂಳಿಡುತ್ತಾರೆ. ಮಂಗಗಳಿಗೆ ಇಷ್ಟವಾಗುವ ಬೀಜಗಳನ್ನೂ ಕಾಳುಗಳನ್ನೂ ತಿಂಡಿಗಳನ್ನೂ ಅದರಲ್ಲಿ ಇಡುತ್ತಾರೆ. ಆ ತಿಂಡಿಯ ಆಶೆಯಿಂದ ಮಂಗವು ಓಡಿ ಬಂದು ಆ ಹೂಜಿಯಲ್ಲಿ ಕ್ಕೆ ತುರುಕಿ ಅದರಲ್ಲಿರುವ ತಿಂಡಿಯನ್ನು ಮುಷ್ಟಿಯಿಂದ ತುಂಬಿಕೊಳ್ಳುತ್ತದೆ. ಆ ಮುಷ್ಟಿಯು ದಪ್ಪವಾಗುವುದರಿಂದ ಹೂಜಿಯ ಇಕ್ಕಟ್ಟಾದ ಕುತ್ತಿಗೆಯಿಂದ ಹೊರಗೆ ಎಳೆದುಕೊಳ್ಳುವುದಕ್ಕೆ ಬರುವುದಿಲ್ಲ ಇಷ್ಟವಾದ ತಿಂಡಿಯು ಕೈಯೊಳಗೆ ಸಿಕ್ಕಿರುವುದರಿಂದ ಮುಷ್ಟಿಯನ್ನು ಬಿಚ್ಚಿ ಪಾರಾಗುವುದಕ್ಕೂ ಅದಕ್ಕೆ ಮನಸಿಲ್ಲ! ಮುಷ್ಟಿ ಬಿಚ್ಚದ ಹೊರತು ಅದಕ್ಕೆ ಬಿಡುಗಡೆ ಇಲ್ಲ. ಹೀಗಾಗಿ ಬಹಳ ವಿಚಿತ್ರ ರೀತಿಯಿಂದ ಅದು ತಾನಾಗಿಯೇ ಸಿಕ್ಕಿ ಹಾಕಿಕೊಳ್ಳುತ್ತದೆ. ತಾನು ಸೆರೆ ಸಿಕ್ಕಿದ್ದಕ್ಕೆ ಕಾರಣವನ್ನೂ ವಿಚಾರ ಮಾಡಲಾರದು; ಆಶೆಯನ್ನೂ ಬಿಡಲಾರದು; ಆದ್ದರಿಂದ ಅದು ತಪ್ಪಿಸಿಕೊಂಡೂ ಹೋಗಲಾರದು. ತನ್ನ ಬಂಧನಕ್ಕೂ ದುಃಖಕ್ಕೂ ಅದು ತಾನೇ ಕಾರಣವಾಗುತ್ತದೆ.
ನಮ್ಮಕತೆಯೂ ಹೀಗೇ ಆಗಿದೆ. ಲಾಲಸೆಯ ಬಂಧನದಲ್ಲಿ ಸಿಲುಕಿಕೊಳ್ಳುತ್ತೇವೆ ಮತ್ತು ಅದರಿಂದ ಹೊರಬರಲು ಚಡಪಡಿಸುತ್ತೇವೆ. ನಾವು ಬಂಧನದಲ್ಲಿದ್ದೇವೆ ಎಂದು ನಮಗೆ ತಿಳಿಯುತ್ತದೆ. ಆದರೆ ಹೇಗೆ ಸಿಲುಕಿದ್ದೇವೆ, ಅದರಿಂದ ಹೇಗೆ ಹೊರಬರಲು ಸಾಧ್ಯ ಎಂದು ನಾವು ಯೋಚಿಸುವುದಿಲ್ಲ. ಬಂಧನ ಬಿಡಿಸಿಕೊಳ್ಳಬೇಕು ಎಂದರೆ ಲಾಲಸೆಯನ್ನು ಬಿಡಬೇಕು ಎಂದು ನಮಗೆ ತೋಚುವುದಿಲ್ಲ.
ನಿಮ್ಮನ್ನು ಬಂಧಿಸಿರುವುದಾದರೂ ಯಾವುದು? ಇದು ಮೂಲಭೂತವಾಗಿ ತಿಳಿಯಬೇಕಾದ ಪ್ರಶ್ನೆ. ನಿಮಗೆ ನೀವೇ ಬಂಧನವನ್ನೂ ಗುಲಾಮಗಿರಿಯನ್ನೂ ತಂದುಕೊಂಡಿದ್ದೀರಿ. ಇಲ್ಲಿ ಇಡೀ ವಿಶಾಲ ಜಗತ್ತೇ ಇದೆ. ಈ ಭವ್ಯವೂ ಸಮೃದ್ಧವೂ ಆದ ಇಡೀ ವಿಶ್ವವೆಂಬ ಮಹಾರಣ್ಯದಲ್ಲಿ ಇಕ್ಕಟ್ಟಾದ ಕಂಠವುಳ್ಳ ಒಂದು ಹೂಜಿ ಇದೆ. ನಿಮ್ಮ ಪುಟ್ಟ ಮೆದುಳೇ ಆ ಸಂಕುಚಿತ ಕಂಠದ ಹೂಜಿ. ಇವು ನಮಗೆ ಇಷ್ಟವಾದವು, ಇವು ನಮ್ಮಮೆಚ್ಚಿನವು ಎಂದು ನೀವು ಅಕಾರಣವಾಗಿ ಕಲ್ಪಿಸಿಕೊಂಡ ಕೆಲವು ವಿಷಯಗಳೇ ನಿಮ್ಮ ಮೆದುಳೆಂಬ ಹೂಜಿಯಲ್ಲಿ ನೀವು ಹಾಕಿಟ್ಟುಕೊಂಡಿರುವ ತಿನಿಸುಗಳು. ನಿಮ್ಮ ಮನಸ್ಸೆಂಬ ಮಂಗ ಇವು ನನಗೆ ಬೇಕು, ಇವು ನನ್ನವು ಎಂದು ನಿಮ್ಮ ಮೆದುಳಿನಲ್ಲಿ ನೀವೇ ಇಟ್ಟುಕೊಂಡಿರುವ ಮೆಚ್ಚಿನ ತಿಂಡಿಗಳನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತದೆ. ಅದನ್ನು ಬಿಡಲಾರದೆ ಅದರ ಮೋಹದಲ್ಲಿ ಸಿಕ್ಕ ಸಿಕ್ಕಿಕೊಂಡ ಮನಸೆಂಬ ಕಪಿಯು ಪೇಚಾಡುತ್ತದೆ. ಇಷ್ಟವಾದ ವಿಷಯಗಳು ತನಗೆ ಬೇಕು ಎನ್ನುವ ರಾಗವೂ ಅನಿಷ್ಟ ವಿಷಯಗಳು ತನಗೆ ಬೇಡ ಎನ್ನುವ ದ್ವೇಷವೂ, ದೊರೆತಿರುವುದರಲ್ಲಿ ಇವು ನನ್ನವು ಎನ್ನುವ ಮಮತೆಯೂ ಆ ವಿಷಯಸುಖವು ಯಾವಾಗಲೂ ತನಗೇ ಇರಬೇಕೆಂಬ ಲೋಭವೂ ಆಸಕ್ತಿಯೂ ನಿಮ್ಮ ಮನೋಮರ್ಕಟದ ಬಂಧಕ್ಕೂ ದುಃಖಕ್ಕೂ ಕಾರಣವಾಗಿದೆ.
ಮನಸ್ಸೂ ದೇಹಾದಿಗಳೂ ನಾನೆಂಬ ಅಭಿಮಾನವೇ ಅಹಂಕಾರ. ಆದ್ದರಿಂದ ಮನಸ್ಸು ಬುದ್ಧಿ. ಮೊದಲಾದವು ಮಾಡಿದ್ದನ್ನೆಲ್ಲ ನಾವು ಮಾಡಿದ್ದು ಎಂದು ನೀವು ತಿಳಿಯುತ್ತೀರಿ. ಇಕ್ಕಟ್ಟಾದ ಕುತ್ತಿಗೆಯುಳ್ಳ ಹೂಜಿಯಂತಿರುವ ನಿಮ್ಮಪುಟ್ಟ ಮೆದುಳಲ್ಲಿ ಇಷ್ಟ ವಿಷಯಗಳ ಭ್ರಮೆಯಿಂದ ಸಿಕ್ಕಿಕೊಂಡಿರುವ ನಿಮ್ಮ ಮನಸ್ಸೆಂಬ ಮಂಗವನ್ನೇ ನೀವು ಎಂದು ತಿಳಿದಿದ್ದೀರಿ. ಚಿಂತೆಗೂ ಭಯಕ್ಕೂ ಎಲ್ಲ ಬಗೆಯ ತೊಂದರೆಗಳಿಗೂ ನಿಮ್ಮನ್ನು ಗುಲಾಮರನ್ನಾಗಿ ಮಾಡಿರುವುದೇ ನಿಮ್ಮ ಈ ತಪ್ಪುತಿಳುವಳಿಕೆ. ನಿಮ್ಮನ್ನು ಬಂಧಿಸಿರುವುದೂ ಇದೇ.
ಈ ಪ್ರಪಂಚದಲ್ಲಿರುವ ಸಕಲ ಸಂಕಷ್ಟಗಳಿಗೂ ಇದೇ ಕಾರಣ. ನಿಮಗೆ ಮೋಕ್ಷವೂ ಸ್ವಾತಂತ್ರ್ಯವೂ ಬೇಕಾದರೆ, ಮುಚ್ಚಿಕೊಂಡಿರುವ ನಿಮ್ಮ ಹಿಡಿಯನ್ನು ಬಿಚ್ಚಿಬಿಡಿ. ವಿಶಾಲ ವಿಶ್ವದ ಮಹಾರಣ್ಯವೇ ನಿಮ್ಮದಾಗಿದೆ. ನೀವು ಮರದಿಂದ ಮರಕ್ಕೆ ಸ್ವೇಚ್ಛೆಯಾಗಿ ಹಾರಿ ಅಲ್ಲಿರುವ ಕಾಯಿಗಳನ್ನೂ ಹಣ್ಣುಗಳನ್ನೂ ತಿನ್ನಿರಿ. ಎಲ್ಲಾ ನಿಮ್ಮವೇ. ನಿಮ್ಮ ಉದ್ದಾರಕರೂ ನೀವೇ.