ಸತ್ಯ ಸೆಕೆಂಡ್ ಹ್ಯಾಂಡ್ ಅಲ್ಲ! : ಓಶೋ ವ್ಯಾಖ್ಯಾನ

ಸಂಜೆಯವರೆಗೂ ಜನ ನಸ್ರುದ್ದೀನ್ ನ ಮನೆಗೆ ಬರುತ್ತಲೇ ಹೋದರು. ನಸ್ರುದ್ದೀನ್ ಬಂದವರಿಗೆಲ್ಲ ಬಾತುಕೋಳಿ ಊಟ ಹಾಕಿದ. ಕೊನೆಗೆ ಇದೆಲ್ಲದರಿಂದಾಗಿ ನಸ್ರುದ್ದೀನ್ ಗೆ ರೇಗಿ ಹೋಯಿತು! ಆಮೇಲೆ… ~ ಓಶೋ – A Cup of Tea | ಕನ್ನಡಕ್ಕೆ : ಚಿದಂಬರ ನರೇಂದ್ರ

ಸತ್ಯ ಯಾವತ್ತೂ ಸೆಕೆಂಡ್ ಹ್ಯಾಂಡ್ ಅಲ್ಲ ಹಾಗಾಗಿ ಸತ್ಯವನ್ನ ಇನ್ನೊಬ್ಬರಿಗೆ ವರ್ಗಾಯಿಸಲಾಗದು. ಸತ್ಯವನ್ನ ಒಬ್ಬ ತನ್ನ ಅನುಭವದಿಂದ ಮಾತ್ರ ಗ್ರಹಿಸುವುದು ಸಾಧ್ಯ. ಆದ್ದರಿಂದಲೇ ಎಲ್ಲ ಸಂಪ್ರದಾಯಗಳು ಸತ್ಯವನ್ನ ಮಿಥ್ಯೀಕರಿಸುತ್ತವೆ ಹಾಗು ಎಲ್ಲ ಶಾಸ್ತ್ರಗಳಲ್ಲಿ, ಪವಿತ್ರಗ್ರಂಥಗಳಲ್ಲಿ ಇರುವುದೆಲ್ಲ ಕೊನೆಗೆ ನಸ್ರುದ್ದೀನ್ ನ ಸೂಪ್ ನಂತೆ.

ಮೊದಲು ನಸ್ರುದ್ದೀನ್ ನ ಕತೆ ಹೇಳುತ್ತೇನೆ ಕೇಳಿ.

ಒಮ್ಮೆ ದೂರ ದೇಶದಿಂದ ನಸ್ರುದ್ದೀನ್ ಸಂಬಂಧಿಯೊಬ್ಬ ಅವನನ್ನು ಭೇಟಿಯಾಗಲು ಬಂದ. ಆ ಸಂಬಂಧಿ ನಸ್ರುದ್ದೀನ್ ಗಾಗಿ ಒಂದು ಬಾತುಕೋಳಿ ತಂದಿದ್ದ. ಸಂಬಂಧಿಯ ಈ ಗೆಶ್ಚರ್ ನಿಂದಾಗಿ ನಸ್ರುದ್ದೀನ್ ತುಂಬ ಖುಶಿಯಾಯಿತು, ಆ ಬಾತುಕೋಳಿಯನ್ನು ಬಳಸಿ ಅದ್ಭುತ ಅಡುಗೆ ಮಾಡಿಸಿ ಸಂಬಂಧಿಯೊಂದಿಗೆ ಊಟಕ್ಕೆ ಕುಳಿತ.

ಆ ಸಮಯದಲ್ಲಿಯೇ ಸಂಬಂಧಿಯ ಗೆಳೆಯನೆಂದು ಹೇಳಿಕೊಂಡ ಮನುಷ್ಯ ಅಲ್ಲಿಗೆ ಬಂದ, ನಸ್ರುದ್ದೀನ್ ಅವನಿಗೂ ಊಟ ಬಡಿಸಿದ. ಹೀಗೆಯೇ ಅವರ ಗೆಳೆಯ, ಇವನ ಸಂಬಂಧಿ ಎಂದು ಹೇಳಿಕೊಂಡು ಹಲವರು ಅಲ್ಲಿ ಬಂದರು. ನಸ್ರುದ್ದೀನ್ ನ ಮನೆ ಹೊಟೇಲಿನಂತಾಯಿತು. ನಸ್ರುದ್ದೀನ್ ಎಲ್ಲರಿಗೂ ಬಾತುಕೊಳಿಯ ಅಡುಗೆ ಹಂಚಿದ. ಸಂಜೆಯವರೆಗೂ ಜನ ನಸ್ರುದ್ದೀನ್ ನ ಮನೆಗೆ ಬರುತ್ತಲೇ ಹೋದರು. ನಸ್ರುದ್ದೀನ್ ಬಂದವರಿಗೆಲ್ಲ ಬಾತುಕೋಳಿ ಊಟ ಹಾಕಿದ. ಕೊನೆಗೆ ಇದೆಲ್ಲದರಿಂದಾಗಿ ನಸ್ರುದ್ದೀನ್ ಗೆ ರೇಗಿ ಹೋಯಿತು.

ಮರುದಿನ ಬೆಳಿಗ್ಗೆ ಒಬ್ಬ ಮನುಷ್ಯ ನಸ್ರುದ್ದೀನ್ ಮನೆ ಬಾಗಿಲು ಬಾರಿಸಿದ. ಅವನು ತನ್ನನ್ನು ನಸ್ರುದ್ದೀನ್ ಗೆ ಬಾತುಕೊಳಿ ತಂದು ಕೊಟ್ಟು ಗೆಳೆಯನ ಗೆಳೆಯನ ಗೆಳೆಯನ ಗೆಳೆಯನ ಗೆಳೆಯ ಎಂದು ಪರಿಚಯಿಸಿಕೊಂಡ. ಬಾತುಕೋಳಿಯ ಊಟಕ್ಕೆ ಬಂದಿರುವುದಾಗಿ ಹೇಳಿದ.

ಮನೆಗೆ ಬಂದ ಅತಿಥಿಯನ್ನು ನಸ್ರುದ್ದೀನ್ ಬಾಗಿಲು ತೆರೆದು ಸ್ವಾಗತಿಸಿದ. ಅತಿಥಿಗಾಗಿ ಬಾತುಕೋಳಿಯ ಸೂಪ್ ತರುವಂತೆ ಹೆಂಡತಿಗೆ ಕೂಗಿ ಹೇಳಿದ. ನಸ್ರುದ್ದೀನ್ ನ ಹೆಂಡತಿ ತಂದಿಟ್ಟ ಸೂಪ್ ಬಾಯಿಗೆ ಹಾಕಿಕೊಂಡ ಅತಿಥಿಗೆ ಅದು ಕೇವಲ ಬಿಸಿ ನೀರಿನ ಹಾಗಿತ್ತು.

“ ಇದೆಂಥ ಸೂಪ್? ಬಿಸಿ ನೀರಿನ ಹಾಗಿದೆ.”

ಅತಿಥಿ ತನ್ನ ಬೆಸರ ಹೊರಹಾಕಿದ.

“ ನೀನು ಹೇಗೆ ನನ್ನ ಸಂಬಂಧಿಯ ಗೆಳೆಯನ ಗೆಳೆಯನ ಗೆಳೆಯನ ಗೆಳೆಯನ ಗೆಳೆಯನೋ ಹಾಗೆಯೇ ಇದು ಬಾತುಕೋಳಿಯ ಸೂಪ್ ನ ಸೂಪ್ ನ ಸೂಪ್ ನ ಸೂಪ್ !”

ನಸ್ರುದ್ದೀನ್ ಅತಿಥಿಗೆ ಸಮಜಾಯಿಶಿ ಹೇಳಿದ.


Leave a Reply