ಹಿಂದೆ ಕೆಡುಕನ್ನ ಕೆಡುಕೆಂದು, ಕೊಲೆಯನ್ನು ಕೊಲೆಯೆಂದೇ ಗುರುತಿಸಲಾಗುತ್ತಿತ್ತು, ಆದರೆ ಈಗ ಕೊಲೆಯನ್ನ ಮಹೋನ್ನತ ಉದ್ದೇಶ ಸಾಧನೆಗಾಗಿರುವ ಅಸ್ತ್ರವೆಂದು ಬಳಸಲಾಗುತ್ತಿದೆ ~ ಜಿಡ್ಡು ಕೃಷ್ಣಮೂರ್ತಿ | ಕನ್ನಡಕ್ಕೆ : ಚಿದಂಬರ ನರೇಂದ್ರ
ಇಡೀ ಜಗತ್ತು ಎದುರಿಸುತ್ತಿರುವ ಪ್ರಸ್ತುತ ಬಿಕ್ಕಟ್ಟಿಗೆ ಯಾವ ಹೋಲಿಕೆಗಳಿಲ್ಲ, ಯಾವುದೂ ಸರಿಸಾಟಿಯಲ್ಲ. ನಾವು ಇತಿಹಾಸದುದ್ದಕ್ಕೂ ಹಲವು ಥರದ ಬಿಕ್ಕಟ್ಟುಗಳನ್ನ ಹಲವು ಕಾಲಘಟ್ಟಗಳಲ್ಲಿ ಎದುರಿಸಿದ್ದೇವೆ, ಸಾಮಾಜಿಕ, ರಾಷ್ಟ್ರೀಯ, ರಾಜಕೀಯ ಮುಂತಾಗಿ. ಈ ಬಿಕ್ಕಟ್ಟುಗಳು ಬಂದು ಹೋಗುವಂಥವು; ಆರ್ಥಿಕ ಹಿನ್ನಡೆ, ಕುಸಿತ ಮುಂತಾದವು ಆಗಾಗ್ಗೆ ಬರುತ್ತವೆ, ಮಾರ್ಪಾಟುಗೊಳ್ಳುತ್ತವೆ ಮತ್ತು ಹೊಸ ರೂಪದಲ್ಲಿ ಮುಂದುವರೆಯುತ್ತವೆ; ನಮಗೆ ಈ ಬಗ್ಗೆ ಗೊತ್ತು, ಈ ಪ್ರಕ್ರಿಯೆಯ ಸಾಧಕ ಬಾಧಕಗಳನ್ನು ನಾವು ಮುಂದಾಲೋಚಿಸಬಲ್ಲೆವು, ಎದುರಿಸಬಲ್ಲೆವು.
ಆದರೆ ಸಧ್ಯದ ಬಿಕ್ಕಟ್ಟು ಮಾತ್ರ ಅಭೂತಪೂರ್ವವಾದುದು. ಈ ಸಮಸ್ಯೆ ಯಾಕೆ ಗಂಭೀರ ಎಂದರೆ, ಇಲ್ಲಿ ಹಣದ ನೇರ ವ್ಯವಹಾರವಿಲ್ಲ. ಕೈಗೆಟಕುವ ವಸ್ತುಗಳ, ಸಂಗತಿಗಳೊಂದಿಗೆ ಸೆಣಸಾಟವಿಲ್ಲ ಆದರೆ ನಮ್ಮ ಸಂಘರ್ಷ ಇರೋದು ಹೊಸದಾಗಿ ಎದುರಾಗುತ್ತಿರುವ ಐಡಿಯಾಗಳೊಂದಿಗೆ. ಬಿಕ್ಕಟ್ಟು ಗಂಭೀರ ಯಾಕೆಂದರೆ ನಾವು ವೈಚಾರಿಕ ಜಗತ್ತಿನಲ್ಲಿ ತಿಕ್ಕಾಟ ಮಾಡಬೇಕಿದೆ. ನಾವು ಐಡಿಯಾಗಳೊಂದಿಗೆ ಹೋರಾಟ ಮಾಡುತ್ತಿದ್ದೇವೆ, ಕೊಲೆಗಳನ್ನು ಸಮರ್ಥಿಸಿಕೊಳ್ಳುತ್ತಿದ್ದೇವೆ ; ಇಡಿ ಜಗತ್ತಿನಲ್ಲಿ ಒಳ್ಳೆಯ ಉದ್ದೇಶಕ್ಕಾಗಿ ಎಂಬಂತೆ ಕೊಲೆಗಳು ನಡೆಯುತ್ತಿವೆ, ಇದು ಅಭೂತಪೂರ್ವವಾದುದು.
ಹಿಂದೆ ಕೆಡುಕನ್ನ ಕೆಡುಕೆಂದು, ಕೊಲೆಯನ್ನು ಕೊಲೆಯೆಂದೇ ಗುರುತಿಸಲಾಗುತ್ತಿತ್ತು, ಆದರೆ ಈಗ ಕೊಲೆಯನ್ನ ಮಹೋನ್ನತ ಉದ್ದೇಶ ಸಾಧನೆಗಾಗಿರುವ ಅಸ್ತ್ರವೆಂದು ಬಳಸಲಾಗುತ್ತಿದೆ. ಕೊಲೆ, ಅದು ಒಬ್ಬ ಮನುಷ್ಯನದೇ ಆಗಿರಲಿ ಅಥವಾ ಸಮೂಹಗಳದ್ದೇ ಆಗಿರಲಿ, ಕೊಲೆಗಾರ ಅಥವಾ ಕೊಲೆಗಾರನನ್ನು ಬೆಂಬಲಿಸುತ್ತಿರುವ ಗುಂಪು ಕೊಲೆಯನ್ನ ಮಾನವ ಕುಲದ ಶ್ರೇಯೋಭಿವೃದ್ಧಿಗಾಗಿ ಎಂದು ಬಿಂಬಿಸುತ್ತದೆ. ಹಾಗೆಂದರೆ, ನಾವು ವರ್ತಮಾನವನ್ನ ಭವಿಷ್ಯಕ್ಕಾಗಿ ಬಲಿ ಕೊಡುತ್ತಿದ್ದೇವೆ ಮತ್ತು ಈ ಬಲಿಯನ್ನು ಪವಿತ್ರ ಎಂದು ಪ್ರಚಾರ ಮಾಡುತ್ತಿದ್ದೇವೆ. ಆದರೆ ಈ ಪ್ರಕ್ರಿಯೆಯಲ್ಲಿ ನಾವು ತುಳಿಯುತ್ತಿರುವ ದಾರಿಯ ಬಗ್ಗೆ ನಮಗೆ ಚಿಂತೆಯಿಲ್ಲ, ಈ ದಾರಿಯ ಮೂಲಕ ನಮ್ಮ ಆತ್ಯಂತಿಕ ಗುರಿ, ಯಾವುದನ್ನ ನಾವು ಮನುಕುಲದ ಒಳಿತಿಗಾಗಿ ಎಂದು ಬಿಂಬಿಸುತ್ತಿದ್ದೇವೆಯೋ ಆ ಗುರಿಯ ಸಾಧನೆಯಾದರೆ ಸಾಕು.
ಆದ್ದರಿಂದಲೇ ತಪ್ಪು ದಾರಿಯನ್ನ ಪವಿತ್ರ ದಾರಿಯೆಂದು ವೈಚಾರಿಕವಾಗಿ ನಾವು ಸಮರ್ಥನೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಕೃತ್ಯಗಳ ಸಮರ್ಥನೆಗಾಗಿ ಭವ್ಯ ವೈಚಾರಿಕ ರಚನೆಯೊಂದನ್ನ ನಿರ್ಮಿಸಿಕೊಂಡಿದ್ದೇವೆ ಆದರೆ ಕೆಡುಕು ಯಾವತ್ತೂ ಕೆಡುಕು ಮತ್ತು ಕೆಡುಕಿನಿಂದ ಯಾವ ಒಳ್ಳೆಯದೂ ಸಂಭವಿಸಲಾರದು ಎನ್ನುವುದನ್ನ ಮರೆಯುತ್ತಿದ್ದೇವೆ. ಯುದ್ಧದಿಂದ ಯಾವ ಶಾಂತಿಯನ್ನೂ ಸ್ಥಾಪಿಸುವುದು ಸಾಧ್ಯವಿಲ್ಲ.