ನಮ್ಮನ್ನು ನಾವು ಮತ್ತೊಬ್ಬರಾಗಿ ಭಾವಿಸಿಕೊಳ್ಳಲು ಆರಂಭಿಸಿದರೆ ಏನಾಗುತ್ತೇವೆ? ನಿಜವಾದ ನಾವು ಇಲ್ಲವಾಗಿಬಿಡುತ್ತೇವೆ. ನಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳುತ್ತೇವೆ. ಸ್ವಂತಿಕೆಯನ್ನು ಕಳೆದುಕೊಂಡರೆ ನಾವು ನಾಶವಾದಂತೆಯೇ.
ನಾನ್ಯದನ್ಯದ್ಭವೇದ್ಯಸ್ಮಾನ್ನಾನ್ಯತ್ಕಿಂಚಿದ್ವಿಚಿಂತಯೇತ್ |
ಅನ್ಯಸ್ಯಾನ್ಯತ್ವಭಾವೇ ಹಿ ನಾಶಸ್ತಸ್ಯ ಧ್ರುವೋ ಭವೇತ್ ||
~ ಶಂಕರಾಚಾರ್ಯರ ಉಪದೇಶ ಸಾಹಸ್ರಿ; ನಾನ್ಯದನ್ಯತ್ ಪ್ರಕರಣ
ಭಾವಾರ್ಥ : ಒಂದು ಮತ್ತೊಂದಾಗಲಾರದು. ಆದುದರಿಂದ ಬೇರೆ ಯಾವುದನ್ನಾದರೂ ತಾನೆಂದು ಭಾವಿಸಬಾರದು. ಏಕೆಂದರೆ ಒಂದು ಮತ್ತೊಂದಾಗುವುದಾದರೆ ಅದಕ್ಕೆ ನಾಶವು ನಿಶ್ಚಯವಾಗಿ ಉಂಟಾಗುವುದು.
ತಾತ್ಪರ್ಯ : ಇಲ್ಲಿ ಒಂದು ಎಂದರೆ ಜೀವ. ಮತ್ತೊಂದು ಅಂದರೆ ಬ್ರಹ್ಮ. ಜೀವವು ಸ್ವರೂಪತಃ ಬ್ರಹ್ಮಕ್ಕಿಂತ ಬೇರೆ ಎಂದಾದರೆ, ಜೀವವು ಎಂದಿಗೂ ಬ್ರಹ್ಮವಾಗಲಾರದು. ಆದರೆ ಜೀವವು ಸ್ವರೂಪತಃ ಬ್ರಹ್ಮಕ್ಕಿಂತ ಬೇರೆ ಅಲ್ಲ.
ಸ್ವರೂಪತಃ ತನ್ನನ್ನು ಬೇರೆ ಎಂದು ಭಾವಿಸಲ್ಪಡುವ ಬ್ರಹ್ಮವು ತನ್ನನ್ನು ಜೀವ ಎಂದು ಭಾವಿಸಬಾರದು. ಏಕೆಂದರೆ ಜೀವವೂ ಬ್ರಹ್ಮವೂ ಒಂದೇ. ಜೀವವು ಬ್ರಹ್ಮಕ್ಕಿಂತ ಬೇರೆಯಾಗಿದ್ದು, ಅದು ಬ್ರಹ್ಮವಾಗುವುದು ಎಂದಾದರೆ – ಜೀವವು ನಾಶವಾದಂತೆಯೇ ಅರ್ಥ.
ಹಾಗಾದರೆ ಬ್ರಹ್ಮವು ಯಾವುದು? ಜೀವವೇ ಬ್ರಹ್ಮವು. ಹಾಗಾದರೆ ಜೀವವು ಯಾವುದು? ಬ್ರಹ್ಮವೇ ಜೀವವೂ. ಅವೆರಡೂ ಪರಸ್ಪರ ಆಗಬೇಕಾಗಿಲ್ಲ. ಅವೆರಡೂ ಮೂಲತಃ ಒಂದೇ ಆಗಿವೆ.
ಈ ಅಲೌಕಿಕವನ್ನು ಲೌಕಿಕಕ್ಕೆ ಅನ್ವಯಿಸಿಕೊಂಡು ನೋಡೋಣ.
ನಮ್ಮನ್ನು ನಾವು ಮತ್ತೊಬ್ಬರಾಗಿ ಭಾವಿಸಿಕೊಳ್ಳಲು ಆರಂಭಿಸಿದರೆ ಏನಾಗುತ್ತೇವೆ? ನಿಜವಾದ ನಾವು ಇಲ್ಲವಾಗಿಬಿಡುತ್ತೇವೆ. ನಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳುತ್ತೇವೆ. ಸ್ವಂತಿಕೆಯನ್ನು ಕಳೆದುಕೊಂಡರೆ ನಾವು ನಾಶವಾದಂತೆಯೇ.
ಆದ್ದರಿಂದ ನಾವು ಮತ್ತೊಬ್ಬರಾಗಲು ಸಾಧ್ಯವಿಲ್ಲ. ಹಾಗೆ ಭಾವಿಸುವುದು, ಭ್ರಮಿಸುವುದು ಅಥವಾ ಅನುಸರಿಸುವುದು ನಮ್ಮ ನಾಶಕ್ಕೆ ದಾರಿ.