ಮೀನುಗಾರನ ಭಾಗ್ಯ : ಓಶೋ ವ್ಯಾಖ್ಯಾನ

ಬದುಕು ಅತ್ಯಂತ ದೊಡ್ಡ ನಿಧಿಯ ಸಂಗ್ರಹ ಆದರೆ ಮನುಷ್ಯ ತನ್ನ ಸುತ್ತ ಇರುವ ಕತ್ತಲೆಯ ಕಾರಣದಿಂದ ಅದನ್ನ ಗುರುತಿಸದೇ ಎಲ್ಲವನ್ನೂ ಕಳೆದುಕೊಂಡು ಬಿಡುತ್ತಾನೆ… । Osho – From Sex to Super consciousness; ಕನ್ನಡಕ್ಕೆ: ಚಿದಂಬರ ನರೇಂದ್ರ

ಒಂದು ದಿನ ಮುಂಜಾನೆ ಮೀನುಗಾರನೊಬ್ಬ ಮೀನು ಹಿಡಿಯಲು ನದಿ ತೀರಕ್ಕೆ ಬಂದ. ಸೂರ್ಯ ಇನ್ನೂ ಹುಟ್ಟಿರಲಿಲ್ಲ, ಸುತ್ತ ಇನ್ನೂ ಕತ್ತಲೆಯಿತ್ತು. ಬೆಳಗಾಗುವುದನ್ನೇ ಕಾಯುತ್ತ ಮೀನುಗಾರ ನದಿ ತೀರದಲ್ಲಿ ಓಡಾತ್ತಿದ್ದಾಗ ಅವನ ಪಾದಕ್ಕೆ ಏನೋ ಚುಚ್ಚಿದಂತಾಯ್ತು, ನೋಡಿದರೆ ಅದೊಂದು ಚೀಲ, ಚೀಲದ ತುಂಬ ಸಣ್ಣ ಸಣ್ಣ ಕಲ್ಲಿನ ಚೂರುಗಳು.

ಮೀನುಗಾರ ತನ್ನ ಬಲೆಯನ್ನ ಅಲ್ಲೇ ಪಕ್ಕಕ್ಕಿಟ್ಟು ಚೀಲದಲ್ಲಿದ್ದ ಕಲ್ಲಿನ ಚೂರುಗಳನ್ನ ಒಂದೊಂದಾಗಿ ನದಿಗೆ ಎಸೆಯುತ್ತ ಸೂರ್ಯನ ಆಗಮನಕ್ಕಾಗಿ ಕಾಯತೊಡಗಿದ. ಮಾಡಲು ಬೇರೆ ಏನೂ ಕೆಲಸವಿಲ್ಲದ್ದರಿಂದ ಮೀನುಗಾರ ಚೀಲದಲ್ಲಿದ್ದ ಬಹುತೇಕ ಎಲ್ಲ ಕಲ್ಲುಗಳನ್ನ ನೀರಿಗೆ ಎಸೆದಿದ್ದ. ಆಗ ತಾನೇ ಮೂಡಣದಲ್ಲಿ ಸೂರ್ಯ ಹುಟ್ಟತೊಡಗಿದ್ದ, ಬೆಳಕು ಸುತ್ತ ಪಸರಿಸತೊಡಗಿತ್ತು. ಸುತ್ತಲಿನ ವಾತಾವರಣವೆಲ್ಲ ಬೆಳಕನ್ನು ಧರಿಸಿ ಕತ್ತಲಿಗೆ ವಿದಾಯ ಹೇಳಿದ್ದವು.

ಮೀನುಗಾರನ ಎದ್ದು ನಿಂತ, ಪಕ್ಕದಲ್ಲಿದ್ದ ತನ್ನ ಬಲೆಯನ್ನ ಹೆಗಲಿಗೇರಿಸಿಕೊಂಡು ಮೀನು ಹಿಡಿಯಲು ನೀರಿಗಿಳಿಯಲು ಸಿದ್ಧನಾದ. ಅವನ ಕೈಯಲ್ಲಿ ಚೀಲದಲ್ಲಿದ್ದ ಒಂದೇ ಒಂದು ಕಲ್ಲು ಉಳಿದಿತ್ತು. ಇನ್ನೇನು ಆ ಕಲ್ಲನ್ನೂ ನೀರಿಗೆಸೆಯಬೇಕೆಂದು ಮೀನುಗಾರ ಪ್ರಯತ್ನ ಮಾಡಿದಾಗ, ಅವನು ತನ್ನ ಕೈಯಲ್ಲಿ ಹೊಳೆಯುವ ವಸ್ತುವನ್ನ ಕಂಡ. ಅವನ ಕೈಯಲ್ಲಿದ್ದ ಕಲ್ಲು ಸಾಮಾನ್ಯ ಕಲ್ಲಾಗಿರದೇ ರತ್ನದ ಹರಳಾಗಿತ್ತು.

ಮೀನುಗಾರನ ಎದೆ ಒಡೆದುಹೋಯ್ತು. ತನಗೆ ಅರಿವಿಲ್ಲದೆಯೇ ಮೀನುಗಾರ ತನಗೆ ಸಿಕ್ಕಿದ್ದ ರತ್ನದ ಹರಳುಗಳನ್ನೆಲ್ಲ ಸಾಮಾನ್ಯ ಕಲ್ಲುಗಳೆಂದು ತಿಳಿದು ನೀರಿಗೆಸೆದಿದ್ದ. ಕತ್ತಲೆ ಅವನಿಗೆ ಮೋಸ ಮಾಡಿತ್ತು. ತಾನು ಕಳೆದುಕೊಂಡ ಭಾಗ್ಯವನ್ನು ನೆನಸಿಕೊಂಡು ಮೀನುಗಾರ ದುಃಖದಿಂದ ಬಿಕ್ಕಿ ಬಿಕ್ಕಿ ಅಳತೊಡಗಿದ.

ತನ್ನ ಹಲವು ಬದುಕುಗಳನ್ನ ಸುಖವಾಗಿ ಕಳೆಯಬಹುದಾಗಿದ್ದ , ಆಕಸ್ಮಿಕವಾಗಿ ತನಗೆ ದೊರಕಿದ್ದ ಅದೃಷ್ಟವನ್ನ ಕತ್ತಲೆಯಲ್ಲಿ ಗುರುತಿಸಲಾಗದೇ ಹೋದ ಮೀನುಗಾರ ಒಂದು ಅದ್ಭುತ ಅವಕಾಶವನ್ನ ಕಳೆದುಕೊಂಡಿದ್ದ. ಆದರೂ ಮೀನುಗಾರನ ಅದೃಷ್ಟ ಸ್ವಲ್ಪ ಚೆನ್ನಾಗಿತ್ತು. ಅವನ ಕೈಯಲ್ಲಿ ಒಂದು ರತ್ನದ ಹರಳಾದರೂ ಉಳಿದುಕೊಂಡಿತ್ತು. ಬಹಳಷ್ಟು ಜನರಿಗೆ ಈ ಅದೃಷ್ಟವೂ ಇರುವುದಿಲ್ಲ. ಕತ್ತಲೆಯಲ್ಲಿ ಅವರಿಗೆ ತಾವು ಏನು ಕಳೆದುಕೊಂಡಿದ್ದೇವೆ ಎನ್ನುವುದೂ ಗೊತ್ತಿರುವುದಿಲ್ಲ.

ನಮ್ಮ ಸುತ್ತಲೂ ಕತ್ತಲೆಯಿದೆ ಮತ್ತು ಕಾಲ ಯಾರಿಗೂ ಕಾಯದಲೇ ಮುಂದೆ ಸಾಗುತ್ತಲೇ ಇದೆ. ನಮ್ಮ ಬದುಕಿನಲ್ಲಿ ಸೂರ್ಯ ಇನ್ನೂ ಹುಟ್ಟಿಲ್ಲವಾದರೆ ನಾವು ನಮ್ಮ ಹತ್ತಿರ ಇರುವ ಸಮಯ ಎನ್ನುವ ರತ್ನವನ್ನ ಗುರುತಿಸಲಾಗದೇ ಅತ್ಯಮೂಲ್ಯ ಸಂಗತಿಯನ್ನ ಕಳೆದುಕೊಂಡಿದ್ದೇವೆ. ಬದುಕು ಅತ್ಯಂತ ದೊಡ್ಡ ನಿಧಿಯ ಸಂಗ್ರಹ ಆದರೆ ಮನುಷ್ಯ ತನ್ನ ಸುತ್ತ ಇರುವ ಕತ್ತಲೆಯ ಕಾರಣದಿಂದ ಅದನ್ನ ಗುರುತಿಸದೇ ಎಲ್ಲವನ್ನೂ ಕಳೆದುಕೊಂಡು ಬಿಡುತ್ತಾನೆ. ನಮಗೆ ಬದುಕು ಕೊಟ್ಟಿರುವ ಆ ನಿಧಿಯ ಪರಿಚಯವಾಗುವ ಮೊದಲೇ ನಾವು ಅದೃಷ್ಟಕ್ಕೆ ಹೊರತಾಗಿಬಿಟ್ಟಿರುತ್ತೇವೆ. ಬದುಕಿನ ರಹಸ್ಯ, ನಿಗೂಢತೆ, ಮಾಂತ್ರಿಕತೆ, ಆನಂದ ಎಲ್ಲವನ್ನೂ ನಾವು ಗುರುತಿಸುವ ಮೊದಲೇ ಕಳೆದುಕೊಂಡು ಬಿಟ್ಟಿರುತ್ತೇವೆ ಮತ್ತು ಬದುಕು ನಮಗಾಗಿ ಕಾಯದೇ ಕೊನೆಯ ಹಂತಕ್ಕೆ ಬಂದುಬಿಟ್ಟಿರುತ್ತದೆ.

Leave a Reply