ಪಂಡೋರಾ ಬಾಕ್ಸ್ ಅಂತಾರಲ್ಲ, ಅದ್ಯಾಕೆ ಗೊತ್ತಾ!?

ಒಂದು ಅಪೂರ್ವವಾದ ಪೆಟ್ಟಿಗೆಯನ್ನು ಕೊಟ್ಟ ಸ್ಯೂಸ್, “ಇದರೊಳಗೆ ಏನಿದೆ ಎಂದು ಯಾವತ್ತೂ ತೆರೆದು ನೋಡಬೇಡ” ಎಂದು ಸೂಚಿಸಿದ. ಅನಂತರ ದೇವತೆಗಳೆಲ್ಲರೂ ಸೇರಿ ಅವಳಿಗೆ ‘ಪಂಡೋರಾ’ ಎಂದು ಹೆಸರಿಟ್ಟರು. ಪಂಡೊರಾಳ ರಹಸ್ಯ ಪೆಟ್ಟಿಗೆ ಹುಟ್ಟಿಸಿದ್ದ ಕುತೂಹಲವೇ ಇಂದಿನ ‘ಪಂಡೊರಾ ಬಾಕ್ಸ್’ ಎಂಬ ನುಡಿಗಟ್ಟಿನ ಮೂಲ । ಸಂಗ್ರಹ & ಅನುವಾದ: ಚೇತನಾ 

ಪ್ರೊಮಿಥ್ಯೂಸನು ಮನುಷ್ಯ ಕುಲದ ಹಿತಚಿಂತಕ. ದೇವತೆಗಳಿಗೂ ಅವನಿಗೂ ಅಷ್ಟಕ್ಕಷ್ಟೇ. ಬಲಿ ಉತ್ಸವ ನಡೆಸಿದಾಗೆಲ್ಲ ದೇವತೆಗಳಿಗೆ ಮೂಳೆಗಳೂ ಮನುಷ್ಯರಿಗೆ ಮಾಂಸವೂ ಸಲ್ಲುವಂತೆ ಅವನು ವ್ಯವಸ್ಥೆ ಮಾಡಿದ್ದ. ಹಾಗೂ ಸ್ವರ್ಗಲೋಕದಿಂದ ಬೆಂಕಿಯನ್ನು ಕದ್ದುತಂದು ಮನುಷ್ಯಲೋಕದಲ್ಲಿ ಹಂಚಿದ್ದೂ ಅವನೇ. ಆದ್ದರಿಂದ ದೇವರ ದೇವ ಸ್ಯೂಸನಿಗೆ ಪ್ರೊಮಿಥ್ಯೂಸನ ಮೇಲೆ ಕೋಪವಿತ್ತು. ಅವನಿಗೆ ಸರಿಯಾದ ಪಾಠವನ್ನೇ ಕಲಿಸಬೇಕೆಂದು ತೀರ್ಮಾನಿಸಿದ.

ಅದರಂತೆ ಸಂಚುಹೂಡಿದ ಸ್ಯೂಸ್, ಅಗ್ನಿದೇವತೆಯೂ ದೇವಶಿಲ್ಪಿಯೂ ಆಗಿದ್ದ ತನ್ನ ಮಗ ಹೆಫೀಸ್ಟಸ್’ನನ್ನು ಕರೆಸಿ, ಅತ್ಯಂತ ಸುಂದರಿಯಾದ ಹೆಣ್ಣೊಂದನ್ನು ಸೃಷ್ಟಿಸುವಂತೆ ಹೇಳಿದ. ಅವನ ಈ ಸಂಚಿನಲ್ಲಿ ಇತರ ದೇವತೆಗಳೂ ಶಾಮೀಲಾಗಿದ್ದರು. ಹೆಣ್ಣಿನ ವಿಗ್ರಹ ತಯಾರಾದಮೇಲೆ ಎಲ್ಲ ದೇವತೆಗಳೂ ಸೇರಿ ಅದಕ್ಕೆ ಜೀವತುಂಬಿ, ತಮ್ಮ ತಮ್ಮ ಗುಣವೀಶೇಷಗಳನ್ನು ಅವಳಿಗೆ ಉಡುಗೊರೆಯಾಗಿ ಕೊಟ್ಟರು. ಸ್ಯೂಸ್ ಮಾತ್ರ ಅವಳ ಅಂತರಂಗದಲ್ಲಿ ಅವಿಧೇಯತೆ ಮತ್ತು ಅವಿವೇಕಗಳನ್ನು ಅಡಗಿಸಿದ. ಒಂದು ಅಪೂರ್ವವಾದ ಪೆಟ್ಟಿಗೆಯನ್ನು ಕೊಟ್ಟು, “ಇದರೊಳಗೆ ಏನಿದೆ ಎಂದು ಯಾವತ್ತೂ ತೆರೆದು ನೋಡಬೇಡ” ಎಂದು ಸೂಚಿಸಿದ. ಅನಂತರ ದೇವತೆಗಳೆಲ್ಲರೂ ಸೇರಿ ಅವಳಿಗೆ ‘ಪಂಡೋರಾ’ ಎಂದು ಹೆಸರಿಟ್ಟರು. ಪಂಡೊರಾಳ ರಹಸ್ಯ ಪೆಟ್ಟಿಗೆ ಹುಟ್ಟಿಸಿದ್ದ ಕುತೂಹಲವೇ ಇಂದಿನ ‘ಪಂಡೊರಾ ಬಾಕ್ಸ್’ ಎಂಬ ನುಡಿಗಟ್ಟಿನ ಮೂಲ.

ಸ್ಯೂಸ್ ‘ನ ಆದೇಶದಂತೆ ಹರ್ಮಿಸನು ಪಂಡೋರಾಳನ್ನು ಪ್ರೊಮಿಥ್ಯೂಸನ ತಮ್ಮ ಎಪಿಮೀಥ್ಯೂಸನ ಬಳಿ ಕರೆದೊಯ್ದ. “ಸ್ಯೂಸ್ ದೇವ ಈಕೆಯನ್ನು ನಿನಗೆ ಉಡುಗೊರೆಯಾಗಿ ನೀಡಿದ್ದಾನೆ. ಇವಳನ್ನು ಮದುವೆಯಾಗು” ಅಂದ. ಪ್ರೊಮಿಥ್ಯೂಸ್ ಇದರಲ್ಲೇನೋ ಸಂಚಿದೆ ಎಂದು ತಿಳಿದು, ಪ್ರಸ್ತಾಪವನ್ನು ನಿರಾಕರಿಸಿ ಆಕೆಯನ್ನು ಮರಳಿ ಕಳಿಸು ಎಂದು ತಮ್ಮನಿಗೆ ಸೂಚಿಸಿದ. ಆದರೆ ಪಂಡೊರಾಳ ಸೌಂದರ್ಯಕ್ಕೆ ಮಾರುಹೋಗಿದ್ದ ಎಪಿಮೀಥ್ಯೂಸ್ ಅದಕ್ಕೆ ಕಿವಿಗೊಡಲಿಲ್ಲ. ಪಂಡೊರಾಳನ್ನು ಮದುವೆಯಾದ.

ಒಂದು ದಿನ ಪಂಡೊರಾಳಿಗೆ ಸ್ಯೂಸ್ ದೇವ ಕೊಟ್ಟ ಪೆಟ್ಟಿಗೆಯ ರಹಸ್ಯ ತೆರೆದುನೋಡುವ ಬಯಕೆಯಾಯಿತು. ಅವಳಲ್ಲಿ ಸ್ಯೂಸ್ ಅಡಗಿಸಿಟ್ಟಿದ್ದ ಅವಿವೇಕ ಮತ್ತು ಅವಿಧೇಯತೆಗಳು ಜಾಗೃತಗೊಂಡವು. ತೆಗೆಯಕೂಡದೆಂದು ಸ್ಯೂಸನ ಸೂಚನೆಯಿದ್ದರೂ ಅದನ್ನು ಕಡೆಗಣಿಸಿ, ಗಂಡನನ್ನು ಪಕ್ಕ ಕುಳ್ಳಿರಿಸಿಕೊಂಡು ಪೆಟ್ಟಿಗೆ ತೆರೆದಳು ಪಂಡೊರಾ.

ಮುಚ್ಚಲ ತೆರೆಯುತ್ತಿದ್ದಂತೆಯೇ ಪೆಟ್ಟಿಗೆಯೊಳಗಿಂದ ರೋಗ, ರುಜಿನ, ರಾಗ, ದ್ವೇಷ, ಮುಪ್ಪು, ಬಡತನ, ಸುಳ್ಳು, ವಂಚನೆ ಮೊದಲಾದ ಕೀಟಗಳು ರೊಂಯ್ಯನೆ ಹಾರಿಬಂದು ಮೊದಲು ಪಂಡೊರಾಳನ್ನೂ ನಂತರ ಎಪಿಮೀಥ್ಯೂಸನನ್ನೂ ಕಡಿದವು. ಅನಂತರ ಇಡೀ ಭೂಮಿ ಸುತ್ತಾಡಿ ಒಂದು ಕಡೆಯಿಂದ ಎಲ್ಲರನ್ನೂ ಕಡಿಯುತ್ತಾ ಹಾರಿದವು. ಗ್ರೀಕ್ ಪುರಾಣದ ಪ್ರಕಾರ ಭೂಮಿಯಲ್ಲಿ ಮೊದಲ ಬಾರಿಗೆ ರೋಗ, ರುಜಿನ, ಸುಳ್ಳು, ವಂಚನೆ ಇತ್ಯಾದಿಗಳು ಆರಂಭಗೊಂಡಿದ್ದು ಹೀಗೆ!

ಪೆಟ್ಟಿಗೆಯಲ್ಲಿದ್ದ ಕೀಟಗಳೆಲ್ಲ ಹಾರಿ ಹೊರಗೆ ಬಂದಾಗ ಹೆದರಿದ ಪಂಡೊರಾ ಅದರ ಮುಚ್ಚಳ ಮುಚ್ಚಿಬಿಟ್ಟಳು. ಅದರೊಳಗೆ ಆಸೆ, ಭರವಸೆ, ನಂಬಿಕೆ ಎಂಬ ಬಿಳಿ ರೆಕ್ಕೆಗಳ ಮೂರು ಕೀಟಗಳು ಹಾಗೆಯೇ ಉಳಿದುಹೋದವು.

ಆದ್ದರಿಂದಲೇ, ಇಂದಿಗೂ ಜನರು ಎಷ್ಟೇ ಕಷ್ಟ ಬಂದರೂ ‘ಪಂಡೊರಾ ಪೆಟ್ಟಿಗೆ’ಯಿಂದ ಒಳಿತು ಹೊರಬರುತ್ತದೆ ಎಂಬ ನಿರೀಕ್ಷೆ ಇಟ್ಟುಕೊಳ್ಳೋದು!

Leave a Reply