ಓಶೋ ರಜನೀಶ್ | ಕನ್ನಡಕ್ಕೆ: ಚಿದಂಬರ ನರೇಂದ್ರ
ಕೆಲವೊಮ್ಮೆ ನಾನು ಕತೆಗಳನ್ನ ಬದಲಾಯಿಸಿಬಿಡುತ್ತೇನೆ. ಬುದ್ಧನ ಕುರಿತಾದ ಕೆಲವು ಕತೆಗಳನ್ನ ಓದಿದಾಗ ನನಗೆ ಅವು ಸುಳ್ಳು ಅನಿಸುತ್ತವೆ, ಬುದ್ಧನ ಜೊತೆ ಹೀಗಾಗಿರಲು ಸಾಧ್ಯವೇ ಇಲ್ಲ ಅನಿಸುತ್ತದೆ. ಆಗ ನಾನು ಆ ಕಥಾ ಹಂದರದಲ್ಲಿಯೇ ಹೊಸ ಕತೆಗಳನ್ನು ಹುಟ್ಟು ಹಾಕುತ್ತೇನೆ.
ಒಮ್ಮೆ ಬೌದ್ಧ ಧರ್ಮದ ಮಹಾ ವಿದ್ವಾಂಸರಾದ ಭದಂತ ಆನಂದ ಕೌಸಲ್ಯಾಯನರು ನನ್ನ ಭೇಟಿಗೆ ಬಂದಿದ್ದರು. ನನ್ನ ಜೊತೆ ಮಾತಾಡುವಾಗ ಅವರು ತಮ್ಮ ಒಂದು ಸಂಶಯವನ್ನ ನನ್ನ ಜೊತೆ ಹಂಚಿಕೊಂಡರು,
“ ನೀವು ಬುದ್ಧನ ಬಗ್ಗೆ ಹೇಳುವುದೆಲ್ಲ ತುಂಬ ಅದ್ಭುತವಾಗಿರುತ್ತದೆ, ತುಂಬಾ ಮನಮುಟ್ಟುವಂತೆ ಬುದ್ಧನ ಕುರಿತಾದ ಕತೆಗಳನ್ನ ಹೇಳುತ್ತೀರಿ. ನೀವು ಹೇಳಿದ ಕೆಲ ಕತೆಗಳು ಸುಂದರವಾಗಿವೆ ಎನ್ನುವುದೇನೋ ನಿಜ ಆದರೆ ಅಂಥ ಕತೆಗಳನ್ನ ನಾನು ಯಾವ ಬೌದ್ಧ ಶಾಸ್ತ್ರಗಳಲ್ಲಿ, ಗ್ರಂಥಗಳಲ್ಲಿ ಓದಿಲ್ಲವಲ್ಲ.”
“ ಅಂಥ ಯಾವುದಾದರೊಂದು ಕತೆಯನ್ನು ಉದಾಹರಣೆಯಾಗಿ ಹೇಳಿ” ನಾನು ಭದಂತರನ್ನು ಕೇಳಿಕೊಂಡೆ.
“ ಒಂದು ಉದಾಹರಣೆಯೆಂದರೆ, ನಾನು ಮೊನ್ನೆ ನೀವು ಹೇಳಿದ ಸುಂದರವಾದ ಬುದ್ಧನ ಕತೆಯೊಂದನ್ನ ಓದುತ್ತಿದ್ದೆ :
ಒಮ್ಮೆ ಬುದ್ಧ ತನ್ನ ಶಿಷ್ಯ ಆನಂದನೊಡನೆ ಒಂದು ಊರಿನ ದಾರಿಯಲ್ಲಿ ಮಾತನಾಡುತ್ತ ನಡೆದುಕೊಂಡು ಹೋಗುತ್ತಿರುವಾಗ, ಒಂದು ನೊಣ ಹಾರಿ ಬಂದು ಬುದ್ಧನ ಮೂಗಿನ ಮೇಲೆ ಕೂರುತ್ತದೆ. ಬುದ್ಧ ಮಾತು ಮುಂದುವರೆಸುತ್ತಲೇ ಕೈಯಿಂದ ಮೂಗಿನ ಮೇಲೆ ಕೂತಿದ್ದ ನೊಣವನ್ನು ಓಡಿಸಿ ಮುಂದೆ ನಡೆಯುತ್ತಾನೆ. ಸ್ನಲ್ಪ ದೂರ ಹೋದ ಮೇಲೆ ಬುದ್ಧನಿಗೆ ಏನೋ ನೆನಪಾದಂತಾಗಿ, ಅವನು ರಸ್ತೆಯ ಮಧ್ಯೆ ನಿಂತು, ಧ್ಯಾನ ಮಗ್ನನಾಗಿ ತನ್ನ ಮೂಗಿನ ಮೇಲೆ ಕೈಯಾಡಿಸಿಕೊಳ್ಳುತ್ತಾನೆ, ಅಲ್ಲಿ ಕೂತಿರಬಹುದಾದ ನೊಣವನ್ನು ಓಡಿಸುವವನಂತೆ. ಇದನ್ನ ನೋಡಿ ಶಿಷ್ಯ ಆನಂದನಿಗೆ ಆಶ್ಚರ್ಯವಾಗುತ್ತದೆ, ಅವನು ಬುದ್ಧನನ್ನು ಪ್ರಶ್ನೆ ಮಾಡುತ್ತಾನೆ,
“ ನೊಣ ಹಾರಿಹೋಗಿ ಎಷ್ಟೋ ಹೊತ್ತಾಯಿತು. ನಿಮ್ಮ ಮೂಗಿನ ಮೇಲೆ ಈಗ ಏನೂ ಕೂತಿರಲಿಲ್ಲ ಆದರೂ ಏಕೆ ನೀವು ಧ್ಯಾನಸ್ಥರಾಗಿ ಮೂಗಿನ ಮೇಲೆ ಕೈಯಾಡಿಸಿಕೊಂಡಿರಿ?”
ಬುದ್ಧ ಹೇಳಿದ, “ ಹೌದು, ಆವಾಗ ನಾನು ಆ ನೊಣವನ್ನ ಹೀಗೆ ಓಡಿಸಬೇಕಿತ್ತು. ನಿಜ, ಈಗ ನೊಣ ನನ್ನ ಮೂಗಿನ ಮೇಲೆ ಕೂತಿರಲಿಲ್ಲ. ಆದರೆ ಈ ಮೊದಲು ನನ್ನ ಮೂಗಿನ ಮೇಲೆ ನೊಣ ಕೂತಿದ್ದಾಗ ನಾನು ಯಾಂತ್ರಿಕವಾಗಿ ನಿನ್ನ ಜೊತೆ ಮಾತು ಮುಂದುವರೆಸುತ್ತಲೇ ನನ್ನ ಮೂಗಿನ ಕೈಯಾಡಿಸಿಕೊಂಡು ನೊಣವನ್ನು ಓಡಿಸಿದ್ದೆ. ನನ್ನ ಪ್ರಕಾರ ಅದು ಸರಿಯಾದ ವಿಧಾನ ಅಲ್ಲ. ನಾನು ಪ್ರಜ್ಞಾಪೂರ್ವಕವಾಗಿ ನನ್ನ ಕೈಗಳನ್ನ ಮೂಗಿನ ಮೇಲೆ ಆಡಿಸಿ ಪೂರ್ಣ ಅರಿವಿನಿಂದ ಆ ನೊಣವನ್ನು ಓಡಿಸಬೇಕಿತ್ತು. ಆಗ ಮಾಡದ ಕೆಲಸವನ್ನ ಈಗ ಮಾಡಿದೆ ಅಷ್ಟೇ. “
“ ನಾನು ಬಹುತೇಕ ಎಲ್ಲ ಬೌದ್ಧ ಗ್ರಂಥಗಳನ್ನ ಓದಿದ್ದೇನೆ, ಆದರೆ ಬುದ್ಧನ ಕುರಿತಾದ ಈ ಕತೆಯನ್ನ ಎಲ್ಲೂ ಗಮನಿಸಿಲ್ಲ.” ಆನಂದ ಕೌಸಲ್ಯಾಯನರು ತಮ್ಮ ಸಂಶಯವನ್ನ ನನ್ನೆದುರು ವಿಶದೀಕರಿಸಿದರು.
“ ಈ ಕತೆ ಸುಂದರವಾಗಿದೆ ಅಲ್ವಾ” ನಾನು ಕೇಳಿದೆ
“ ಹೌದು ಬಹಳ ಸುಂದರ ಕತೆ” ಬಧಂತರು ತಮ್ಮ ಒಪ್ಪಿಗೆ ಸೂಚಿಸಿದರು.
“ ಹಾಗಾದರೆ ಶಾಸ್ತ್ರಗಳನ್ನು ತೆಗೆದುಕೊಂಡು ಮಾಡಬೇಕಾದ್ದೇನಿದೆ, ನಿಮಗೆ ಈ ಕತೆಯಲ್ಲಿ ಬುದ್ಧಿಸ್ಟ್ ಫ್ಲೇವರ್ ನ ಅನುಭವ ಆಯ್ತಾ?” ಮತ್ತೆ ಬಧಂತರನ್ನು ಕೇಳಿದೆ ನಾನು .
ಅವರು, ಹೌದು ಈ ಕತೆಯಲ್ಲಿ ಬೌದ್ಧ ಚಿಂತನೆಯ ರುಚಿ ಇದೆಯೆಂದು ಒಪ್ಪಿಕೊಂಡರು.
ಸಾಕಲ್ವಾ ಇಷ್ಟು. ನಾನು ಇಲ್ಲಿ ಎಲ್ಲ ವಿಷಯ ಸಂಗ್ರಹಿಸಿಕೊಂಡಿರುವ ಮನುಷ್ಯನ ಹಾಗೆ ಮಾತಾಡುತ್ತಿಲ್ಲ, ತಿಳಿದುಕೊಂಡಿರುವ ಮನುಷ್ಯನಂತೆ ಮಾತಾಡುತ್ತಿದ್ದೇನೆ.