ಸುರಕ್ಷಿತ ವಲಯದಿಂದ ಹೊರಗೆ ಬರುವ ಧೈರ್ಯ ಮಾಡಿದರಷ್ಟೆ ಹೊಸತೇನಾದರೂ ಸಾಧನೆ ಮಾಡಲು ಸಾಧ್ಯ. ಇದನ್ನು ಸಾರುವ ರಾಮಕೃಷ್ಣ ಪರಮಹಂಸರ ದೃಷ್ಟಾಂತ ಕಥೆ ಇಲ್ಲಿದೆ…
ಸುರಕ್ಷಿತ ವಲಯದಲ್ಲಿರಲು ಯಾರು ಬಯಸುವುದಿಲ್ಲ ಹೇಳಿ? ನಮಗೆ ನಾವು ಏನಾಗಿದ್ದೀವೋ ಅದರಲ್ಲಿ ಸಂತೃಪ್ತಿ ಉಂಟಾಗಿಬಿಟ್ಟರೆ ಹೊಸ ಅವಕಾಶಗಳನ್ನು ಕಂಡುಕೊಳ್ಳಲು ಸಾಧ್ಯವೇ ಆಗುವುದಿಲ್ಲ.
ಇರುವುದರಲ್ಲಿ ಸಂತೃಪ್ತಿ ಕಾಣಬೇಕು ಅನ್ನುವುದು ಬೇರೆ ಮಾತು. ಅದು ಸಂಪತ್ತಿನ ವಿಚಾರಕ್ಕೆ ಅನ್ವಯಿಸುವ ಮಾತು. ವ್ಯಕ್ತಿತ್ವ ವಿಕಸನಕ್ಕೆ, ಆಧ್ಯಾತ್ಮ ಸಾಧನೆಗೆ ಈ ಮಾತು ಅನ್ವಯವಾಗುವುದಿಲ್ಲ.
ಇದನ್ನು ಮನದಟ್ಟು ಮಾಡಿಸುವ ರಾಮಕೃಷ್ಣ ಪರಮಹಂಸರ ದೃಷ್ಟಾಂತ ಕಥೆಯೊಂದಿದೆ.
ಒಮ್ಮೆ ಒಬ್ಬ ತನ್ನ ತೋಟಕ್ಕೆ ಫಲವತ್ತಾದ ಮಣ್ಣನ್ನು ಅಗಿದು ತರಲು ಕಾಡಿಗೆ ಬಂದ. ಅಗಿಯುತ್ತ ಅಗಿಯುತ್ತ ಅವನಿಗೆ ಬೆಳ್ಳಿಯ ಗಣಿ ಸಿಕ್ಕಿತು. ಅವನು ಅದನ್ನು ಮೊಗೆದು ತುಂಬಿಕೊಂಡು ಹೋದ. ದಿನವೂ ಆ ಸ್ಥಳಕ್ಕೆ ಬಂದು ಬೆಳ್ಳಿಯ ಅದಿರನ್ನು ಸಂಗ್ರಹಿಸುತ್ತಿದ್ದ. ಅವನು ಕಾಡಿನಲ್ಲಿ ಮತ್ತೆ ಮುಂದುವರೆಯುವ ಪ್ರಯತ್ನವನ್ನೇ ಮಾಡಲಿಲ್ಲ.
ಅವನ ಕಥೆಯನ್ನು ಕೇಳಿದ ಅವನ ಗೆಳೆಯ ಬೆಳ್ಳಿಯ ಅದಿರು ಸಿಕ್ಕುವ ಜಾಗದಿಂದ ಇನ್ನೂ ಮುಂದಕ್ಕೆ ಹೋಗಿ ಅಗಿಯಲು ಶುರುವಿಟ್ಟ. ಅಲ್ಲಿ ಅವನಿಗೆ ಬಂಗಾರದ ಗಣಿ ಸಿಕ್ಕಿತು. ಅವನು ಅಷ್ಟಕ್ಕೇ ತೃಪ್ತನಾದ. ಬಂಗಾರದ ಅದಿರು ಮೊಗೆದು, ಮಾರಿ ಶ್ರೀಮಂತನೂ ಆದ.
ತನ್ನ ಗೆಳೆಯರಿಬ್ಬರ ಕಥೆಯನ್ನು ಕೇಳಿದ ಮತ್ತೊಬ್ಬ ತಾನೂ ಅದನ್ನೇ ಮುಂದುವರೆಸಿದ. ಆದರೆ ಅವನು ಅವರಿಬ್ಬರಿಗಿಂತ ಮುಂದೆ ಹೋದ. ಅವನಿಗೆ ವಜ್ರದ ಗಣಿ ಸಿಕ್ಕಿತು. ಅವನು ಗೆಳೆಯರಿಬ್ಬರಿಗಿಂತ ಹೆಚ್ಚು ಶ್ರೀಮಂತನಾದ.
ಮೊದಲನೆಯವನು ಬೆಳ್ಳಿ ಗಣಿಯನ್ನು ಕಂಡುಕೊಂಡು ಅಷ್ಟಕ್ಕೇ ಸುಮ್ಮನಾಗದೆ ಮುಂದುವರಿದಿದ್ದರೆ ಅವನಿಗೂ ವಜ್ರದ ಗಣಿ ಸಿಕ್ಕುಬಿಡುತ್ತಿತ್ತು. ಆದರೆ ಅವನು ಅಷ್ಟಕ್ಕೇ ಸಂತೃಪ್ತನಾಗಿಬಿಟ್ಟ. ಸುರಕ್ಷಿತ ವಲಯ ಸೃಷ್ಟಿಸಿಕೊಂಡು ಇದ್ದುಬಿಟ್ಟ.
ಇದರ ಸಾಮತಿ ನೀಡುತ್ತಾ ಪರಮಹಂಸರು ಆಧ್ಯಾತ್ಮಿಕ ಸಂಪತ್ತಿನ ಗಳಿಕೆಗೆ ಇದು ಅನ್ವಯವಾಗಬೇಕು ಎಂದು ಹೇಳುತ್ತಾರೆ. ಇದೇ ಮಾತು ವ್ಯಕ್ತಿತ್ವ ವಿಕಸನಕ್ಕೂ ಅನ್ವಯವಾಗುತ್ತದೆ.