ಪ್ರತ್ಯೇಕತೆಯನ್ನು ಮೀರುವುದು… (ಭಾಗ 4) : Art of love #8

“ಮನುಷ್ಯನಿಗೆ ಅತ್ಯಂತ ಅಗತ್ಯವಾದದ್ದು, ಅವನು ತನ್ನ ಒಂಟಿತನವನ್ನ, ಪ್ರತ್ಯೇಕತೆಯನ್ನು ಮೀರುವುದು” ಎಂದು ಪ್ರತಿಪಾದಿಸುವ ಎರಿಕ್ ಫ್ರೋಮ್, ಅದನ್ನು ಸಾಧಿಸುವ ವಿಧಾನಗಳ ಬಗ್ಗೆ ‘Art of love’ ಕೃತಿಯಲ್ಲಿ ಚರ್ಚಿಸುತ್ತಾರೆ. ಈ ಅಧ್ಯಾಯದ 4ನೇ ಭಾಗ ಇಲ್ಲಿದೆ… । ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ… https://aralimara.com/2022/03/19/love-20/

ಬಹುತೇಕ ಆಧುನಿಕ ಕೈಗಾರಿಕೃತ ಸಮಾಜದಲ್ಲಿ ಈ ವ್ಯತ್ಯಾಸಗಳನ್ನು ನಿವಾರಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿರುವುದಕ್ಕೂ ಅಲ್ಲಿನ ಸಮಾನತೆಯ ಸಿದ್ಧಾಂತ ಹಾಗು ಅನುಭವಕ್ಕೂ ತುಂಬ ಹತ್ತಿರದ ಸಂಬಂಧ. ಧಾರ್ಮಿಕತೆಯ ಸಂದರ್ಭದಲ್ಲಿ ಸಮಾನತೆ ಎಂದರೆ, ನಾವೆಲ್ಲರೂ ದೇವರ ಮಕ್ಕಳೆಂಬ ಭಾವ, ನಾವೆಲ್ಲರೂ ಒಂದೇ ಮಾನವೀಯ ದೈವಿಕತೆಯ ಭಾಗವಾಗಿದ್ದೇವೆ ಎನ್ನುವ, ನಾವೆಲ್ಲರೂ ಒಂದು ಎನ್ನುವ ತಿಳುವಳಿಕೆ. ಸಮಾನತೆ ಎಂದರೆ ವ್ಯಕ್ತಿ ವ್ಯಕ್ತಿಗಳ ನಡುವೆ ಇರುವ ಭಿನ್ನತೆಗಳನ್ನು ಗೌರವಿಸುವುದು, ನಾವೆಲ್ಲರೂ ಒಂದು ಎನ್ನುವುದು ನಿಜವಾದರೂ, ನಾವು ಪ್ರತಿಯೊಬ್ಬರು ಅನನ್ಯರು ವ್ಯಕ್ತಿ ವಿಶಿಷ್ಟರು ಎನ್ನುವುದು, ನಾವು ಪ್ರತಿಯೊಬ್ಬರೂ ಒಂದೊಂದು ಬ್ರಹ್ಮಾಂಡ ಎನ್ನುವುದು ಕೂಡ ನಿಜ. ವ್ಯಕ್ತಿಗಳ ಇಂಥದೊಂದು ಖಚಿತವಾದ ಅನನ್ಯತೆಯ ಕುರಿತು ಪ್ರಾಚೀನ ಯಹೂದಿ ನಿಯಮ ಮತ್ತು ಸಂಪ್ರದಾಯ (Talmudic) ದ ಹೇಳಿಕೆಯೊಂದು ಈ ರೀತಿ ಇದೆ, “ ಒಂದು ಜೀವವನ್ನು ರಕ್ಷಿಸಿದರೂ ಅದು ಇಡೀ ಜಗತ್ತನ್ನು ರಕ್ಷಿಸಿದಂತೆ ; ಒಂದು ಜೀವವನ್ನು ನಾಶ ಮಾಡಿದರೂ ಅದು ಸಂಪೂರ್ಣ ಜಗತ್ತನ್ನ ನಾಶಮಾಡಿದಂತೆ. “

Western Enlightenment ನ ಫಿಲಾಸಫಿಯಲ್ಲಿ ಕೂಡ ವೈಯಕ್ತೀಕರಣದ ವಿಕಾಸವೇ ಸಮಾನತೆಯ ಸಿದ್ಧಾಂತದ ನೆಲೆಗಟ್ಟು. ಇದರ ಅರ್ಥ ( ಬಹುತೇಕ ಸ್ಪಷ್ಟವಾಗಿ ಕ್ಯಾಂಟ್ ರಚನೆ ಮಾಡಿದ್ದು) ಯಾವ ಮನುಷ್ಯನೂ ಇನ್ನೊಬ್ಬ ಮನುಷ್ಯನ ಗುರಿಗೆ ಬಳಕೆಯಾಗಬಾರದು. ಎಲ್ಲ ಮನುಷ್ಯರು ಸಮಾನರು ತಮ್ಮ ಗುರಿಯ ಸಾಧಕರು ತಾವೇ, ಕೇವಲ ತಾವೇ ಎನ್ನುವ ಅರ್ಥದಲ್ಲಿಯೇ ಹೊರತು ಪರಸ್ಪರರ ಗುರಿಯ ಸಾಧನೆಗೆ ಸಹಾಯಕರು ಎನ್ನುವ ಅರ್ಥದಲ್ಲಿ ಅಲ್ಲ. Enlightenment ಸಿದ್ಧಾಂತದ ವಿಚಾರಗಳನ್ನು ಮುಂದುವರೆಸುತ್ತ, ಬೇರೆ ಬೇರೆ ಶಾಖೆಗಳ ಸಮಾಜವಾದಿ ವಿಚಾರವಾದಿಗಳು ಸಮಾನತೆಯನ್ನ ಶೋಷಣೆಯ ನಿರ್ಮೂಲನೆ ಎಂದೂ, ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಬಳಸಿಕೊಳ್ಳುವ ( ಅದು ಎಷ್ಟೇ ಕ್ರೂರ ಅಥವಾ ಮಾನವೀಯ ಆಗಿದ್ದರೂ ) ಪದ್ಧತಿಯನ್ನ ನಿಷೇಧ ಮಾಡುವುದೆಂದೂ ವ್ಯಾಖ್ಯಾನ ಮಾಡಿದ್ದಾರೆ.

ಸಮಕಾಲೀನ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸಮಾನತೆಯ ಅರ್ಥವೇ ಮಾರ್ಪಾಡಾಗಿದೆ. ಈಗ ಸಮಾನತೆ ಎಂದರೆ ಯಂತ್ರ ಮಾನವರ ನಡುವಿನ ಸಮಾನತೆ; ತಮ್ಮ ಸ್ವಂತತೆಯನ್ನ ಕಳೆದುಕೊಂಡಿರುವವರ ನಡುವಿನ ಸಮಾನತೆ. ಇವತ್ತು ಸಮಾನತೆ ಎಂದರೆ ಏಕತ್ವ ಅಲ್ಲ, ಏಕ ರೂಪತೆ. ಇದು ಅಮೂರ್ತತೆಗಳ ಏಕರೂಪತೆ, ಒಂದೇ ಮನರಂಜನೆ, ಒಂದೇ ನ್ಯೂಸ್ ಪೇಪರ್ ಓದುವ, ಒಂದೇ ಭಾವನೆ, ಒಂದೇ ವಿಚಾರಗಳ, ಒಂದೇ ಬಗೆಯ ಕೆಲಸ ಮಾಡುವ ಜನರ ನಡುವಿನ ಏಕರೂಪತೆ. ಈ ಹಿನ್ನೆಲೆಯಲ್ಲಿ ನಮ್ಮ ವಿಕಾಸದ ನಿಶಾನೆಗಳೆಂದು ನಾವು ಹೇಳಿಕೊಳ್ಳುವ ನಮ್ಮ ಕೆಲವು ಸಾಧನೆಗಳನ್ನ ಒಂದಿಷ್ಟು ಸಂದೇಹದಿಂದ ನೋಡಬೇಕು.

ಉದಾಹರಣೆಗೆ ಮಹಿಳಾ ಸಮಾನತೆ. ನಾನು ಮಹಿಳಾ ಸಮಾನತೆಯ ವಿರುದ್ಧ ಮಾತನಾಡುತ್ತಿಲ್ಲ ಎನ್ನುವುದನ್ನ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಾದರೂ, ಇಂಥ ಸಮಾನತೆಯ ಪ್ರವೃತ್ತಿಯ ಧನಾತ್ಮಕ ಅಂಶಗಳು ನಮ್ಮನ್ನ ಮೋಸ ಮಾಡಬಾರದು. ಇದು ವ್ಯತ್ಯಾಸಗಳನ್ನು ನಿರ್ಮೂಲನೆ ಮಾಡುವ ಧೋರಣೆಯ ಭಾಗ ಮಾತ್ರ. ಸಮಾನತೆಯನ್ನ ಇಲ್ಲಿ ಬೆಲೆ ಕೊಟ್ಟು ಕೊಂಡುಕೊಳ್ಳಲಾಗಿದೆ : ಮಹಿಳೆಯರು ಸಮಾನರು ಏಕೆಂದರೆ ಈಗ ಅವರು ವಿಭಿನ್ನ ಅಲ್ಲ. Enlightenment ಫಿಲಾಸಫಿಯ ಪ್ರತಿಪಾದನೆಯಾದ, Soul has no sex, ಎನ್ನುವ ಸಂಗತಿ ಈಗ ಸಾಮಾನ್ಯೀಕರಣಗೊಂಡಿದೆ. ಲಿಂಗತ್ವದ ನಡುವಿನ polarity ಮಾಯವಾಗುತ್ತಿದೆ. ಲಿಂಗತ್ವದ ವೈಶಿಷ್ಠ್ಯತೆ ಮಸುಕಾಗುತ್ತಿದೆ ಮತ್ತು ಈ ಕಾರಣವಾಗಿಯೇ ಹುಟ್ಟಿಕೊಂಡಿದ್ದ ಲೈಂಗಿಕ ಶೃಂಗಾರ ಪ್ರೇಮ ಕಾಣದಾಗುತ್ತಿದೆ. ಗಂಡು ಮತ್ತು ಹೆಣ್ಣು ಏಕ ರೂಪವಾಗುತ್ತಿದ್ದಾರೆಯೇ ಹೊರತು ಎರಡು ವಿಭಿನ್ನ, ವಿಶಿಷ್ಟ ಧ್ರುವಗಳನ್ನು ಹೊಂದಿದ ಸಮಾನರಾಗುತ್ತಿಲ್ಲ. ಸಮಕಾಲೀನ ಸಮಾಜ ವ್ಯವಸ್ಥೆ ಇಂಥ ವ್ಯಕ್ತಿ ವಿಶಿಷ್ಠರಹಿತ ಸಮಾನತೆಯನ್ನ ಮಾದರಿ ಎಂದು ಉಪದೇಶ ಮಾಡುತ್ತದೆ, ಏಕೆಂದರೆ ಈ ಸಮಾನತೆಗೆ ಒಂದೇ ಥರ ಕಾಣಿಸುವ ಮಾನವ ಜೀವಕೋಶಗಳು ಬೇಕು, ಯಾವುವು ಕೂಡಿ ಕೆಲಸ ಮಾಡುವಾಗ ಸಂಘರ್ಷಕ್ಕೆ ಅವಕಾಶವಿಲ್ಲದಂತೆ, ಸರಾಗವಾಗಿ, ಎಲ್ಲ ಆದೇಶಗಳನ್ನೂ ಪಾಲಿಸುತ್ತ ಆದರೆ ಪ್ರತಿಯೊಂದೂ ತಾನು ತನ್ನ ಬಯಕೆಗನುಸಾರವಾಗಿಯೇ ಬದುಕುತ್ತಿದ್ದೇನೆ ಎಂದು ಖಡಾ ಖಂಡಿತವಾಗಿ ನಂಬಿರುವಂಥ ಜೀವಕೋಶಗಳು ಬೇಕು. ಹೇಗೆ ಆಧುನಿಕ ಸಮೂಹ ಉತ್ಪಾದನೆಗೆ (mass production) ಸರಕುಗಳ ಸ್ಟ್ಯಾಂಡರ್ಡೈಜೇಶನ್ ಅವಶ್ಯಕವೋ ಹಾಗೆಯೇ ಸಾಮಾಜಿಕ ಪ್ರಕ್ರಿಯೆಗೆ ಮನುಷ್ಯರ ಸ್ಟ್ಯಾಂಡರ್ಡೈಜೇಶನ್ ಬೇಕು ಹಾಗು ಇಂಥ ಸ್ಟ್ಯಾಂಡರ್ಡೈಜೇಶನ್ ನ ಈಗ ಸಮಾನತೆಯ ಹೆಸರಲ್ಲಿ ಗುರುತಿಸಲಾಗುತ್ತದೆ.

ವಿಧೆಯತೆಯ ಮೂಲಕ ಗುಂಪಿನಲ್ಲಿ ಒಂದಾಗುವಿಕೆ, ಗಾಢ ಅಲ್ಲ, ಹಿಂಸಾತ್ಮಕ ಅಲ್ಲ ; ಅದು ಪ್ರಶಾಂತ, ನಿಯಮಿತತೆಯ (routine) ಮೂಲಕ ನಿಯಂತ್ರಿಸಲ್ಪಡುವಂಥದು, ಮತ್ತು ಈ ಕಾರಣವಾಗಿಯೇ ಬಹಳಷ್ಟು ಬಾರಿ ಪ್ರತ್ಯೇಕತೆಯ ಆತಂಕವನ್ನು ತಿಳಿಗೊಳಿಸಲು ಸಾಕಾಗದಿರುವಂಥದು. ಮದ್ಯಪಾನ, ಮಾದಕ ದೃವ್ಯಗಳ ವ್ಯಸನ, ಒತ್ತಾಯದ ಲೈಂಗಿಕ ಕ್ರಿಯೆ ಮತ್ತು ಆತ್ಮಹತ್ಯೆಯ ಘಟನೆಗಳು ಸಮಕಾಲೀನ ಪಾಶ್ಚಿಮಾತ್ಯ ಸಮಾಜದಲ್ಲಿ ಗುಂಪು ವಿಧೆಯತೆ ರಿಲೇಟಿವ್ ಆಗಿ ವಿಫಲವಾಗಿರುವುದರ ಲಕ್ಷಣಗಳು. ಮುಂದುವರೆದು ಹೇಳುವುದಾದರೆ ಈ ಪರಿಹಾರ ಕೇವಲ ಮನಸ್ಸಿಗೆ ಸಂಬಂಧ ಪಡುವಂಥದು ದೇಹಕ್ಕಲ್ಲ, ಮತ್ತು ಈ ಕಾರಣವಾಗಿಯೂ ಲೈಂಗಿಕ ಭಾವೋನ್ನತಿಯ ಸ್ಥಿತಿಗೆ ಹೋಲಿಸಿದರೆ ಕಡಿಮೆ ತೃಪ್ತಿಕರವಾದಂಥದು. ಗುಂಪಿನ ಒಂದಾಗುವಿಕೆಯದು ಕೇವಲ ಒಂದು ಅನುಕೂಲ ಮಾತ್ರ : ಅದು ಶಾಶ್ವತವಾಗಿರುವಂಥದು , ಮತ್ತು ಸಂಕ್ಷಿಪ್ತ ಅಲ್ಲದಿರುವುದು. ವ್ಯಕ್ತಿಯೊಬ್ಬ ಈ ಗುಂಪು ವಿಧೆಯಕೆಯ ಸುಳಿಗೆ ಅವನ ಮೂರು ಅಥವಾ ನಾಲ್ಕನೇ ವಯಸ್ಸಿನಲ್ಲಿ ಪರಿಚಯಿಸಲ್ಪಡುತ್ತಾನೆ ಮತ್ತು ಕೊನೆವರೆಗೂ ಗುಂಪಿನೊಂದಿಗೆ ಸಂಪರ್ಕ ಕಡಿದುಕೊಳ್ಳುವುದಿಲ್ಲ. ಕೊನೆಗೆ ಅವನ ಶವ ಸಂಸ್ಕಾರವೂ ಯಾವುದು ಅವನ ಕೊನೆಯ ಮಹಾ ಸಾಮಾಜಿಕ ಸಂಬಧವೋ ಅದು ಕೂಡ ಈ ವಿಧೆಯತೆಯ ಪರಿಧಿಯಲ್ಲಿಯೇ ಕಟ್ಟು ನಿಟ್ಟಾಗಿ ನಿರ್ವಹಿಸಲ್ಪಡುವುದು.

1 Comment

Leave a Reply