ನಾವು ಪ್ರೀತಿಸುವುದು ನಮ್ಮ ಸುಖಕ್ಕಾಗಿಯೇ : ಸ್ವಾಮಿ ರಾಮತೀರ್ಥ

ramathirtha

ಯಾವುದಾದರೂ ವಸ್ತುವನ್ನು ನಾವು ಪ್ರೀತಿಸುವುದು ಆ ವಸ್ತುವಿನ ಸಲುವಾಗಿಯೇ ಎಂದು ಜನರು ಹೇಳುತ್ತಾರೆ. ಆದರೆ ಇದು ನಿಜವಲ್ಲ. ಸಾಹಿತ್ಯಕ್ಕಾಗಿ ಸಾಹಿತ್ಯ; ಸಂಗೀತಕ್ಕಾಗಿ ಸಂಗೀತ; ಕಲೆಗಾಗಿ ಕಲೆ ಎಂದು ಮೊದಲಾಗಿ ಕೆಲವರು ವಾದಿಸುವುದುಂಟು. ಇದು ಸುಳ್ಳು. ಪ್ರಪಂಚದಲ್ಲಿ ಯಾವುದನ್ನು ಅಭಿಮಾನಿಸಿದರೂ ಅದು ನಮಗಾಗಿ, ನಮ್ಮ ಸುಖಕ್ಕಾಗಿ ~ ಸ್ವಾಮಿ ರಾಮತೀರ್ಥ

ನಾವು ಯಾರನ್ನಾದರೂ ಪ್ರೇಮಿಸುವುದು ನಮಗೆ ಹಿತವಾಗುತ್ತದೆ ಎಂದೇ ಹೊರತು ಅವರಿಗೆ ಪ್ರಿಯವಾಗುತ್ತದೆ ಎಂದಲ್ಲ. ನಮ್ಮೊಳಗಿನ ಆತ್ಮಚೈತನ್ಯದ ಪ್ರಿಯಭಾವನೆ ಎಂಬ ಬೆಳಕು ಯಾವ ವಸ್ತುವಿನ ಮೇಲೆ ಬೀಳುತ್ತದೆಯೋ ಅದು ಪ್ರಿಯವಾಗಿಯೂ ಸುಖವಾಗಿಯೂ ತೋರುತ್ತದೆ. ಸುಖದ ಕಲ್ಪನೆಯ ಬಿಸಿಲುಕುದುರೆಯು ಒಮ್ಮೆ ವಿದ್ಯೆಯಲ್ಲಿಯೂ ಒಮ್ಮೆ ಹಣದಲ್ಲಿಯೂ ಇನ್ನೊಮ್ಮೆ ಗಂಡು – ಹೆಣ್ಣಿನಲ್ಲಿಯೂ ಮತ್ತೊಮ್ಮೆ ಮಕ್ಕಳಲ್ಲಿಯೂ ಕ್ಷಣಕಾಲ ನಿಂತು ಬೆಳಗುತ್ತಾ ಮುಂದೆ ಮುಂದೆ ಓಡುತ್ತಲೇ ಇರುತ್ತದೆ. ಇದರ ಮೂಲವು ಮಾತ್ರ ನಿಶ್ಚಲವಾಗಿ ತನ್ನೊಳಗೇ ಇರುತ್ತದೆ.

ನಮಗೆ ಮಕ್ಕಳು ಪ್ರಿಯರಾಗುವುದು ಮಕ್ಕಳಿಗಾಗಿ ಅಲ್ಲ. ಹೌದು, ಮಕ್ಕಳಿಗಾಗಿ ಮಕ್ಕಳು ಪ್ರಿಯರಾಗುವುದಿಲ್ಲ. ತನಗಾಗಿಯೇ ಮಕ್ಕಳು ಪ್ರಿಯರಾಗುವುದು. ಗಂಡ ಅಥವಾ ಹೆಂಡತಿಯ ಸಲುವಾಗಿ ಅವರು ನಮಗೆ ಪ್ರಿಯರಾಗುವುದಿಲ್ಲ; ತನ್ನ ಸಲುವಾಗಿಯೇ ಗಂಡ / ಹೆಂಡತಿ ಪ್ರಿಯರಾಗುವುದು. ಗಂಡ ಹೆಂಡತಿಯರಲ್ಲಿ ಪರಸ್ಪರ ಪ್ರೀತಿ ಹುಟ್ಟುವುದು ತಮ್ಮ ಸುಖಕ್ಕಾಗಿಯೇ. ಇದೇ ಸತ್ಯ. ಉಪನಿಷತ್ತು ಕೂಡಾ ಇದನ್ನೇ ಹೇಳುತ್ತದೆ.

ಯಾವುದಾದರೂ ವಸ್ತುವನ್ನು ನಾವು ಪ್ರೀತಿಸುವುದು ಆ ವಸ್ತುವಿನ ಸಲುವಾಗಿಯೇ ಎಂದು ಜನರು ಹೇಳುತ್ತಾರೆ. ಆದರೆ ಇದು ನಿಜವಲ್ಲ. ಸಾಹಿತ್ಯಕ್ಕಾಗಿ ಸಾಹಿತ್ಯ; ಸಂಗೀತಕ್ಕಾಗಿ ಸಂಗೀತ; ಕಲೆಗಾಗಿ ಕಲೆ ಎಂದು ಮೊದಲಾಗಿ ಕೆಲವರು ವಾದಿಸುವುದುಂಟು. ಇದು ಸುಳ್ಳು. ಪ್ರಪಂಚದಲ್ಲಿ ಯಾವುದನ್ನು ಅಭಿಮಾನಿಸಿದರೂ ಅದು ನಮಗಾಗಿ, ನಮ್ಮ ಸುಖಕ್ಕಾಗಿ. ಸುಖವನ್ನು ಕೊಡುತ್ತಿದ್ದ ಪ್ರಿಯ ಪತ್ನಿಯು ಅದಕ್ಕೆ ವಿರೋಧಿಯಾದರೆ ದೂರ ಮಾಡಲ್ಪಡುತ್ತಾಳೆ. ಒಮ್ಮೆ ಸುಖವನ್ನು ಕೊಡುತ್ತಿದ್ದ ಪ್ರಿಯಕರನು ಕಷ್ಟ ನೀಡತೊಡಗಿದರೆ ತಿರಸ್ಕರಿಸಲ್ಪಡುತ್ತಾನೆ. ನಮ್ಮ ಸುಖವನ್ನು ಕೆಡಿಸುವ ಸಂಪತ್ತು ಕೂಡಾ ತ್ಯಾಜ್ಯವಾಗುತ್ತದೆ. ಯಾವುದೇ ಕಲೆ ಅಥವಾ ವಿದ್ಯೆ ಸುಖಕ್ಕೆ ಸಾಧನವಾಗದೆ ದುಃಖವನ್ನು ನೀಡಿದರೆ ಅವು ಸೇವಿಸಲ್ಪಡುವುದಿಲ್ಲ. ಆದ್ದರಿಂದ ಇದು ಸ್ಪಷ್ಟ. ನಮಗೆ ಹಿತ ಕೊಡುವವರೆಗೂ ನಮಗೆ ಅದರ ಮೇಲೆ ಪ್ರೀತಿ. ಅಹಿತ ಕೊಡುವುದನ್ನೂ ನಾವು ಜೊತೆಗಿಟ್ಟುಕೊಂಡರೆ ಒಂದೋ ಅದು ವ್ಯಾಮೋಹ, ಗೀಳು, ಆಕರ್ಷಣೆ ಅಥವಾ ನಮ್ಮ ದೌರ್ಬಲ್ಯವೇ ಹೊರತು ಪ್ರೀತಿಯಲ್ಲ.

ಒಂದು ಸಿಹಿಯ ಮೇಲೆ ನಮಗೆ ಪ್ರೀತಿ. ನಮಗೆ ಕಾಯಿಲೆ ಆದಾಗ ಆ ನಮ್ಮ ಪ್ರೀತಿಯ ತಿನಿಸೇ ನಮಗೆ ವಿಷ. ನಮಗೆ ಅಹಿತ. ಅನಂತರವೂ ಪ್ರೀತಿ ಇದೆಯೆಂದು ಅದನ್ನು ತಿನ್ನುತ್ತಿದ್ದರೆ, ಅದು ನಮ್ಮ ಗೀಳು ಅಥವಾ ದೌರ್ಬಲ್ಯವೇ ಸರಿ. ಹಾಗೆಯೇ ಪ್ರೇಮವೂ. ಅದು ನಮ್ಮ ಅಂತರಂಗದ ವಿಕಾಸಕ್ಕೆ ಪೂರಕವಾಗದೆ ಇದ್ದರೆ, ನಾವು ಅದನ್ನು ನಮ್ಮ ಇತರ ಬಯಕೆಗಳೊಡನೆ ವ್ಯಾಖ್ಯಾನ ಮಾಡುತ್ತಾ ಹೋದರೆ ಸಮಸ್ಯೆ ನಮಗೇ!

ಬರೀ ಪ್ರೀತಿಯನ್ನಷ್ಟೇ ಅಲ್ಲ, ನಾವು ವಿನಾಶ ಬಯಸೋದದೂ ನಮ್ಮ ತೃಪ್ತಿಗಾಗೇ!
ವಿವೇಕಿಯಾದ ರಾಜನು ತನ್ನ ರಾಜಧಾನಿಯನ್ನೂ ರಾಜ್ಯವನ್ನೂ ಅಭಿವೃದ್ಧಿಪಡಿಸುವುದರಲ್ಲಿ ಸುಖಸಂತೋಷವನ್ನು ಹೊಂದಿದರೆ, ನೀರೋ ಎಂಬ ಮೂರ್ಖ ರಾಜನು ತನ್ನ ಸುಂದರ ರಾಜಧಾನಿಯಾದ ರೋಂ ನಗರವನ್ನು ಸುಟ್ಟು ಸೂರೆ ಮಾಡುವುದರಲ್ಲಿ ಹೆಚ್ಚಿನ ಸಂತೋಷವನ್ನು ಕಂಡನು. ಅವನು ಸಮೀಪದಲ್ಲಿದ್ದ ಒಂದು ಪರ್ವತ ಶಿಖರದ ಮೇಲೆ ಕುಳಿತು, ಆಕಾಶವನ್ನೆಲ್ಲ ಭಯಂಕರ ಕೆನ್ನಾಲಗೆಗಳಿಂದ ಬೆಳಗಿಸುವ ಅದ್ಭುತವಾದ ಬೆಂಕಿಯ ರಾಶಿಯನ್ನು ನೋಡಿ ಸಂತೋಷಪಡಬೇಕೆಂದು ಬಯಸಿದನು. ಮತ್ತು ಅದಕ್ಕಾಗಿ ಪ್ರಜಾಸಂಪದ್ಭರಿತವಾದ ರೋಂ ನಗರಕ್ಕೆ ಬೆಂಕಿ ಹೊತ್ತಿಸಲು ಸೈನಿಕರಿಗೆ ಆಜ್ಞೆ ಮಾಡಿದನು. ಅದರಂತೆ ಇಡೀ ರೋಂ ನಗರವೇ ಬೆಂಕಿಯಿಂದ ಸುಟ್ಟು ಬೂದಿಯಾಗುತ್ತಿದ್ದಾಗ ಆ ರುದ್ರರಮಣೀಯ ದೃಶ್ಯವನ್ನು ನೋಡುತ್ತಾ ಪರಮಾನಂದದಿಂದ ನೀರೋ ಮಹಾಶಯನು ಪಿಟೀಲು ನುಡಿಸುತ್ತ ಕುಳಿತಿದ್ದನಂತೆ. ಹೀಗೆ ವಿನಾಶವನ್ನಾದರೂ ನಾವು ಬಯಸುವುದು ನಮ್ಮ ಸುಖಕ್ಕಾಗಿ ಎಂದು ಇದರಿಂದ ಸಿದ್ಧವಾಗುತ್ತದೆ.

Leave a Reply