ಹೆಣ್ಣನ್ನು ಪ್ರೀತಿಸುವುದು ಹೇಗೆ : ಓಶೋ ವ್ಯಾಖ್ಯಾನ

ಹೆಣ್ಣನ್ನು ಪ್ರೀತಿಸುತ್ತ ಹೋದಂತೆ, ಒಂದಾದಮೇಲೊಂದರಂತೆ, ಒಂದಕ್ಕಿಂತ ಒಂದು ಎತ್ತರಗಳಿಗೆ, ಆಳಗಳಿಗೆ ಎದುರಾಗುತ್ತೀರಿ. ಆಗ ನೀವು ಅವಳ ಆತ್ಮವನ್ನ ಪ್ರೀತಿಸಲು ಶುರು ಮಾಡುತ್ತೀರಿ.| How to Love a woman By Osho Rajanish; ಕನ್ನಡಕ್ಕೆ: ಚಿದಂಬರ ನರೇಂದ್ರ

ನೀವು ಒಬ್ಬಳು ಹೆಣ್ಣನ್ನು ಪ್ರೀತಿಸುವಾಗ, ಅವಳಲ್ಲಿ ನಿಜವಾಗಿ ಏನನ್ನ ಪ್ರೀತಿಸುತ್ತೀರಿ ? ಬೇರೆ ಬೇರೆ ಜನರಿಗೆ ಬೇರೆ ಬೇರೆ ಕಾರಣಗಳು ಮತ್ತು ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ವಿವರಣೆಗಳು. ನನ್ನ ಪ್ರಕಾರ ನಿಮ್ಮ ನಡುವೆ ನಿಜವಾಗಿಯೂ ಪ್ರೀತಿ ಅರಳುತ್ತಿದ್ದರೆ, ನಿಮ್ಮ ಕಾರಣ ಈ ರೀತಿ ಇರುತ್ತದೆ :

ಮೊದಲು ನೀವು ಹೆಣ್ಣಿಗೆ ಆಕರ್ಷಿತರಾಗುವುದು ಮತ್ತು ಅವಳನ್ನು ಪ್ರೀತಿಸಲು ಶುರು ಮಾಡುವುದು ಅವಳ ಸುಂದರ ದೇಹದ ಕಾರಣವಾಗಿ. ಮೊದಲು ನಿಮ್ಮ ಪ್ರೀತಿಗೆ ಒದಗಿ ಬರುವುದು ಅವಳ ಚೆಲುವು, ಅವಳ ಮುಖ, ಅವಳ ಕಣ್ಣು, ಅವಳ ಮೈಮಾಟ, ಅವಳ ಆಕರ್ಷಕ ನಿಲುವು, ಅವಳ ಸೊಬಗು, ಅವಳಲ್ಲಿ ಉಕ್ಕಿ ಹರಿಯುತ್ತಿರುವ ಶಕ್ತಿ. ಅವಳ ಚೆಲುವಿನ ಕಾರಣವಾಗಿ ನೀವು ಅವಳತ್ತ ಸೆಳೆಯಲ್ಪಡುತ್ತೀರಿ. ಇದು ಬಹುತೇಕ ಯಾವಾಗಲೂ ಮೊದಲ ಹಂತ.

ಕೆಲವು ಸಮಯದ ನಂತರ ನೀವು ಅವಳನ್ನು ಆಳವಾಗಿ ಗಮನಿಸಲು ಶುರುಮಾಡುತ್ತೀರಿ, ನಿಮಗೆ ಅವಳ ಮನಸ್ಸು ಇಷ್ಟವಾಗತೊಡಗುತ್ತದೆ, ಅವಳ ಇನ್ನೂ ಹತ್ತು ಹಲವು ಚೆಲುವು ನಿಮಗೆ ಕಾಣಿಸತೊಡಗಿದಂತೆಲ್ಲ, ಅವಳ ದೇಹ ನಿಮಗೆ ಸೆಕಂಡರಿಯಾಗತೊಡಗುತ್ತದೆ ; ಅವಳ ಹೃದಯ, ಮನಸ್ಸು ನಿಮಗೆ ಪ್ರಮುಖ ಆಕರ್ಷಣೆಯಾಗತೊಡಗುತ್ತದೆ. ಈಗ ನಿಮಗೆ ಅವಳ ಕುರಿತಾಗಿ ಹೊಸದೊಂದು ದೃಷ್ಟಿಕೋನ, ಹೊಸದೊಂದು ತುದಿ ಲಭ್ಯವಾಗಿದೆ. ನೀವು ಈ ಹೆಣ್ಣನ್ನು ಪ್ರೀತಿಸುತ್ತ ಹೋದಂತೆ, ಒಂದಾದಮೇಲೊಂದರಂತೆ, ಒಂದಕ್ಕಿಂತ ಒಂದು ಎತ್ತರಗಳಿಗೆ, ಆಳಗಳಿಗೆ ಎದುರಾಗುತ್ತೀರಿ. ಆಗ ನೀವು ಅವಳ ಆತ್ಮವನ್ನ ಪ್ರೀತಿಸಲು ಶುರು ಮಾಡುತ್ತೀರಿ.

ಅವಳ ಹೃದಯ ಅಷ್ಟೇ ನಿಮ್ಮ ಪ್ರೀತಿಯ ಕೇಂದ್ರವಲ್ಲ, ಅದು ಈಗ ಸೆಕಂಡರಿಯಾಗಿದೆ. ಈಗ ಸಾಕ್ಷಾತ್ ಅವಳ ಹಾಜರಾತಿ, ಅವಳ ಕಾಂತಿ, ಅವಳ ಜೀವಂತಿಕೆ, ಅವಳ ಚೈತನ್ಯ, ಆ ಅಸಾಧಾರಣ ಅಪರಿಚಿತ ಇರುವಿಕೆಯೇ ನಿಮ್ಮನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಪ್ರೀತಿ ಮುಂದುವರೆದಂತೆಲ್ಲ ಆಮೇಲೆ ಒಂದು ದಿನ ಈ ಹೆಣ್ಣಿನ ಇರುವಿಕೆ ನಿನಗೆ ಸೆಕಂಡರಿಯಾಗತೊಡಗುತ್ತದೆ. ಈಗ ನೀವು ಅವಳ ಹೆಣ್ತನವನ್ನ ಪ್ರೀತಿಸುತ್ತಿದ್ದೀರಿ, ಅವಳ ಸ್ತ್ರೀತ್ವ, ಸ್ತ್ರೀ ಸಹಜತೆ, ಹೆಣ್ಣಾಗಿ ಅವಳು ಸ್ವೀಕರಿಸುವ, ಪ್ರತಿಕ್ರಯಿಸುವ ಭಾವಗಳನ್ನ ಪ್ರೀತಿಸುತ್ತಿದ್ದೀರಿ. ಈಗ ಅವಳು ಯಾವುದೋ ನಿರ್ದಿಷ್ಟ ಹೆಣ್ಣಲ್ಲ, ಈಗ ಅವಳು ಇಡೀ ಹೆಣ್ತನದ ಪ್ರತೀಕ. ಈಗ ನೀವು ವೈಯಕ್ತಿಕತೆಯನ್ನ ದಾಟಿ ಹೆಚ್ಚು ಹೆಚ್ಚು ಯುನಿವರ್ಸಲ್ ಆಗುತ್ತಿದ್ದೀರಿ. ಹೀಗೇ ಮುಂದುವರೆದಂತೆ ಅವಳ ಹೆಣ್ತನವೂ ನಿಮಗೆ ಸೆಕಂಡರಿಯಾಗುತ್ತದೆ ಮತ್ತು ಈಗ ನೀವು ಅವಳಲ್ಲಿನ ಮನುಷ್ಯತ್ವವನ್ನು ಪ್ರೀತಿಸುತ್ತಿದ್ದೀರಿ.

ಈಗ ಅವಳು ಕೇವಲ ಹೆಣ್ಣಿನ ಪ್ರತಿನಿಧಿಯಲ್ಲ ಗಂಡಿನ ಪ್ರತಿನಿಧಿಯೂ ಹೌದು. ಆಕಾಶ ವಿಸ್ತಾರಗೊಳ್ಳುತ್ತಿದೆ. ಆಮೇಲೊಂದು ದಿನ ನಿಮಗೆ ಮನುಷ್ಯತ್ವವೂ ಸೆಕಂಡರಿಯಾಗತೊಡುಗುತ್ತದೆ. ಅವಳು ನಿಮಗೆ ಇಡೀ ಅಸ್ತಿತ್ವ ಪ್ರತೀಕವಾಗಿದ್ದಾಳೆ. ಅವಳ ಅಸ್ತಿತ್ವವನ್ನಷ್ಟೇ ನೀವು ಬಯಸುತ್ತಿದ್ದೀರಿ. ನೀವು ದೇವರಿಗೆ ಬಹಳ ಹತ್ತಿರವಾಗುತ್ತಿದ್ದೀರಿ.

ಆಮೇಲಿನದೇ ಕೊನೆಯ ಹಂತ, ಈಗ ಅವಳ ಕುರಿತಾದ ಎಲ್ಲ ಸಮೀಕರಣಗಳು, ಎಲ್ಲ ರೂಹುಗಳು ಮರೆಯಾಗುತ್ತವೆ ಮತ್ತು ನೀವು ದೇವರ ಎದುರು ನಿಂತಿದ್ದೀರಿ. ನೀವು ನಿಮ್ಮ ಹೆಣ್ಣಿನ ( ಅಥವಾ ನಿಮ್ಮ ಗಂಡಿನ) ಮೂಲಕ ದೇವರನ್ನ ಕಂಡುಕೊಂಡಿದ್ದೀರಿ. ಪ್ರತೀ ಪ್ರೀತಿಯೂ ದೈವ ಪ್ರೀತಿಯ ಪ್ರತಿಧ್ವನಿ. ಈಗ ನಿಮಗೆ ನಿಮ್ಮ ಪ್ರೇಮಿಯಲ್ಲಿ ದೇವರು ಕಾಣಿಸುತ್ತಿದ್ದಾನೆ, ನೀವು ದೇವರಲ್ಲಿ ನಿಮ್ಮ ಪ್ರೇಮಿಯನ್ನ ಕಾಣುತ್ತಿದ್ದೀರಿ.

ತನ್ನ ಪ್ರೇಮಿ, ಗೆಳೆಯ ರೂಮಿಯ ಬಗ್ಗೆ, ಶಮ್ಸ್ ಹೇಳುವ ಮಾತು ನೋಡಿ…

ರೂಮಿ ಹೇಳುತ್ತಿದ್ದಾನಂತೆ,

ನನ್ನಂಥವನ ಒಳಗೆ
ಭಗವಂತನನ್ನು ಕಾಣ ಬಯಸುತ್ತಿದ್ದಾನಂತೆ
ಈ ಶಮ್ಸ್ ,

ದಡ್ಡ ರೂಮಿ, ಇದು ಪೂರ್ಣ ತಪ್ಪು ತಿಳುವಳಿಕೆ,

ನಾನು, ಹುಡುಕುತ್ತಿದ್ದೇನೆ ರೂಮಿಯನ್ನು.
ಭಗವಂತನ ಒಳಗೆ.


Leave a Reply