“ಬೆರಗು ಕಳೆದುಕೊಂಡ ಮನುಷ್ಯ ಧರ್ಮಗಳ ಅಡಿಯಾಳಾಗಿ ಬದುಕನ್ನ ನರಕ ಮಾಡಿಕೊಳ್ಳುತ್ತಾನೆ” ಅನ್ನುತ್ತಾರೆ ಓಶೋ | ಕನ್ನಡಕ್ಕೆ : ಚಿದಂಬರ ನರೇಂದ್ರ
ಬೆರಗು ಕಳೆದುಕೊಂಡವರು
ಧರ್ಮಕ್ಕೆ ಶರಣಾಗುತ್ತಾರೆ.
ಸ್ವಂತದ ಬಗ್ಗೆ ನಂಬಿಕೆಯಿಲ್ಲದವರು
ಅಧಿಕಾರವನ್ನು ಆಶ್ರಯಿಸುತ್ತಾರೆ.
ಆದ್ದರಿಂದಲೇ ಸಂತ
ಜನರಿಗೆ ಗೊಂದಲವಾಗದಿರಲೆಂದು
ಒಂದು ಹೆಜ್ಜೆ ಹಿಂದೆ ನಿಲ್ಲುತ್ತಾನೆ.
ಅವನು ಕಲಿಸುವ ರೀತಿ ಹೇಗೆಂದರೆ
ಜನರಿಗೆ
ಕಲಿಯುವ ಪ್ರಮೇಯವೇ ಇರುವುದಿಲ್ಲ.
~ ಲಾವೋತ್ಸು.
ಮಾಸ್ಟರ್ ಹಸ್ಸೀದ್ ಸಾವಿನ ಹಾಸಿಗೆಯ ಮೇಲಿದ್ದ. ಆತ ಒಬ್ಬ ಅಸಾಧಾರಣ ವ್ಯಕ್ತಿತ್ವದ ಮುಗ್ಧ ಮತ್ತು ಉಲ್ಲಾಸದ ಮನುಷ್ಯ. ಮಾಸ್ಟರ್ ಗೆ ನಗುವುದು, ಹಾಡವುದು, ಕುಣಿಯುವುದು ಎಂದರೆ ಪಂಚಪ್ರಾಣ. ಹಸ್ಸೀದರು ಇರುವುದೇ ಹಾಗೆ.
ಯಹೂದಿಗಳಿಗೆ ಹಸ್ಸೀದರ ಬಗ್ಗೆ ಒಳ್ಳೆಯ ಭಾವನೆ ಇರಲಿಲ್ಲ. ಅವರು ಅಸಂಪ್ರದಾಯಕರಷ್ಟೇ ಅಲ್ಲ ಸಂಪ್ರದಾಯ ವಿರೋಧಿಗಳು ಎನ್ನುವುದು ಯಹೂದಿಗಳ ತಕರಾರು. ಇದು ಯಾವಾಗಲೂ ಹಾಗೇ ಅಲ್ಲವೇ, ನಿಜವಾದ ಅಧ್ಯಾತ್ಮ ಜೀವಿಗಳು ಯಾವಾಗಲೂ ಸಂಪ್ರದಾಯಗಳನ್ನು ಒಪ್ಪಿಕೊಂಡವರಲ್ಲ, ಮತ್ತು ಈ ಕಾರಣಕ್ಕಾಗಿಯೇ ಪುರೋಹಿತಶಾಹಿಯ ಕೆಂಗಣ್ಣಿಗೆ ಗುರಿಯಾದವರು. ಮಾಸ್ಟರ್ ಹಸ್ಸೀದ್ ಕೂಡ ಯಹೂದಿಗಳ ತಿರಸ್ಕಾರಕ್ಕೆ, ನಿಂದನೆಗೆ ಒಳಗಾಗಿದ್ದ ಮನುಷ್ಯ. ಅವನ ಮಾತು, ಕೃತಿ ಯಾವಾಗಲೂ ಹೊಸತು, ಸಾಂಪ್ರದಾಯಿಕ ಧಾರ್ಮಿಕ ಕಟ್ಟುಪಾಡುಗಳಿಗೆ ವಿರುದ್ಧವಾಗಿ.
ಇಂಥ ಮಾಸ್ಟರ್ ಹಸ್ಸೀದ್ ಸಾವಿಗೆ ಹತ್ತಿರವಾಗುತ್ತ ಹೋದಾಗ, ಅವನ ಶಿಷ್ಯರಲ್ಲಿ ಒಂದು ಪ್ರಶ್ನೆ ಹುಟ್ಟಿಕೊಂಡಿತು. ಅವರು ಮಾಸ್ಟರ್ ನ ಪ್ರಶ್ನೆ ಮಾಡಿದರು,
“ ಮಾಸ್ಟರ್, ನಿನ್ನ ಸಾವಿನ ನಂತರ ನಿನ್ನ ದೇಹವನ್ನು ಏನು ಮಾಡುವುದು ? ನಿನ್ನ ಇಡೀ ಬದುಕು ಸಂಪ್ರದಾಯ ವಿರೋಧಿಯಾದದ್ದು, ನಿನ್ನ ಮೃತ ದೇಹವನ್ನ ಸುಡುವುದಾ? ಅಥವಾ ಮಣ್ಣು ಮಾಡುವುದಾ ? ನೀನು ಏನನ್ನು ಬಯಸುತ್ತೀ? “
ಸಾವಿನ ಹಾಸಿಗೆಯಲ್ಲಿದ್ದ ಮಾಸ್ಟರ್ ನಿಧಾನವಾಗಿ ಕಣ್ಣು ತೆರೆದು ಒಮ್ಮೆ ತನ್ನ ಶಿಷ್ಯರನ್ನೆಲ್ಲ ನೋಡಿ, ಜೋರಾಗಿ ನಕ್ಕು ಉತ್ತರಿಸಿದ,
“ Surprise Me “
ಈ ಒಂದು ವಾಕ್ಯದ ಉತ್ತರದ ನಂತರ ಕಣ್ಣುಮುಚ್ಚಿ ಮಾಸ್ಟರ್ ತನ್ನ ಇಹ ಲೋಕದ ಯಾತ್ರೆಯನ್ನ ಮುಗಿಸಿದ.
ಇದು ಒಬ್ಬ ಅತ್ಯಂತ ಮುಗ್ಧ ಹೇಳಬಹುದಾದ ಮಾತು, Surprise Me ! . ಮಾಸ್ಟರ್ ಸಾವಿನಲ್ಲೂ ಒಂದು ಮುಗ್ಧತೆಯನ್ನ, ನಗುವನ್ನ ತುಂಬಿಕೊಂಡಿದ್ದ. ಅವನಿಗೆ ಸಾವಿನ ಕುರಿತಾಗಿ ಯಾವ ನೋವು, ದೂರುಗಳೂ ಇರಲಿಲ್ಲ. ಅವನು ಒಂದು ಆಶ್ಚರ್ಯವನ್ನು ಎದುರುಗೊಳ್ಳಲು ಕಾತುರದಿಂದ ಸಿದ್ಧನಾಗಿದ್ದ. ನೀವು ಅವನನ್ನು ಸುಡುತ್ತೀರೋ, ಮಣ್ಣು ಮಾಡುತ್ತೀರೋ, ಅಥವಾ ಮತ್ತೇನಾದರೂ ಮಾಡುತ್ತೀರೋ, ನೀವು ನಿರ್ಧರಿಸಿ. ನೀವು ಏನು ಮಾಡಿದರೂ ಅದು ಆಶ್ಚರ್ಯಕರವಾದಂಥದಾಗಿರಲಿ. ಅವನನ್ನು ಏನೂ ಕೇಳಬೇಡಿ, ಯಾವ ಸಲಹೆ, ನೀತಿ, ನಿಯಮಗಳನ್ನೂ ಪಾಲಿಸಬೇಡಿ, ಹಾಗೇನಾದರೂ ಮಾಡಿದಿರಾದರೆ ಅದರಲ್ಲಿ ಯಾವ ಆಶ್ಚರ್ಯವೂ ಉಳಿಯುವುದಿಲ್ಲ.
ಬೆರಗು ಕಳೆದುಕೊಂಡ ಮನುಷ್ಯ ಧರ್ಮಗಳ ಅಡಿಯಾಳಾಗಿ ಬದುಕನ್ನ ನರಕ ಮಾಡಿಕೊಳ್ಳುತ್ತಾನೆ.