‘ನಿಜಗುರು’ವಿನ ಬಯಕೆ : ಓಶೋ ವ್ಯಾಖ್ಯಾನ

ಎಲ್ಲ ಧರ್ಮಗಳೂ ಈ ಎರಡು ರೀತಿಯ ಜನರನ್ನ ಗುರುತಿಸುತ್ತವೆ. ಒಂದು ಬಗೆಯ ಜನ ಸ್ವಂತದ ಅರಿವು ಸಾಧಿಸಿದ ಮೇಲೆ ಶೂನ್ಯದಲ್ಲಿ ಒಂದಾಗಿಬಿಡುತ್ತಾರೆ. ಇನ್ನೊಂದು ಬಗೆಯ ಜನ ತಮ್ಮ ಸ್ವಂತದ ಅರಿವು ಸಾಧಿಸಿದ ಮೇಲೂ ಅಸ್ತಿತ್ವದ ಭಾಗವಾಗಿದ್ದುಕೊಂಡು ಇನ್ನಿತರ ಜನರಿಗೆ ಸಹಾಯ ಮಾಡಬಯಸುತ್ತಾರೆ… | Osho – The Great Path; ಕನ್ನಡಕ್ಕೆ : ಚಿದಂಬರ ನರೇಂದ್ರ

ಯಾವಾಗ ಮನುಷ್ಯನಿಗೆ ತನ್ನ ಬಗ್ಗೆ ಅರಿಯುವ ಸಾಮರ್ಥ್ಯ ಒದಗಿ ಬರುತ್ತದೆಯೋ, ಆಗ ಅನನ್ಯ ಶಕ್ತಿ , ಜಗತ್ತಿನ ಅತ್ಯಂತ ಶ್ರೇಷ್ಠ ಶಕ್ತಿ , ಮತ್ತು ಅದ್ಬುತ ಪವಾಡ ಅವನದಾಗುತ್ತದೆ. ಪವಾಡ ಏನೆಂದರೆ, ಅವನು ತಾನು ಬಯಸಿದಂತೆ ಇರಬಲ್ಲ, ಇರಲು ನಿರಾಕರಿಸುವುದು ಕೂಡ ಅವನ ಬಯಕೆಯಂತೆಯೇ. ಇಚ್ಛಿಸಿದಾಗ ಅಸ್ತಿತ್ವ ಧರಿಸಿಬಲ್ಲ ಮತ್ತು ತನ್ನ ಇಚ್ಛೆಯಂತೆಯೇ ಅಸ್ತಿತ್ವ ಕಳೆದುಕೊಂಡು ಶೂನ್ಯದಲ್ಲಿ ಒಂದಾಗಿಬಿಡಬಲ್ಲ. ನೀವು ಈಗ ನಿದ್ದೆ ಮಾಡುತ್ತೀರಿ, ನಿದ್ದೆಯಿಂದ ಏಳುತ್ತೀರಿ ಆದರೆ ಸ್ವಯಂಪ್ರೇರಿತವಾಗಿ ಅಲ್ಲ. ಒಮ್ಮೆ ನಿದ್ದೆ ಮುಗಿಸಿ ಎದ್ದ ಮೇಲೆ ಮತ್ತೆ ನಿದ್ದೆ ಮಾಡುವುದು ನಿಮಗೆ ಸಾಧ್ಯವಿಲ್ಲ. ಥೇಟ್ ಹೀಗೆಯೇ ನೀವು ನಿದ್ದೆ ಹೋಗುವಂತೆ ಮತ್ತೇ ನಿದ್ದೆಯಿಂದ ಏಳುವಂತೆ, ತನ್ನನ್ನು ತಾನು ಅರಿತುಕೊಂಡಿರುವ ಮನುಷ್ಯ ಶೂನ್ಯದಲ್ಲಿ ಮಾಯವಾಗಬಲ್ಲ ಹಾಗು ಮತ್ತೆ ಅಸ್ತಿತ್ವಕ್ಕೆ ಬರಬಲ್ಲ ಆದರೆ ತನ್ನ ಅನುಮತಿಯಂತೆ, ಇಚ್ಛೆಯಂತೆ.

ಬುದ್ಧನ ಜೀವನದ ಕತೆಯೊಂದು ಹೀಗಿದೆ. ಬುದ್ಧ ಇಹಲೋಕವನ್ನು ತ್ಯಜಿಸಿದಾಗ ಅವನಿಗಾಗಿ ಸ್ವರ್ಗದ ಬಾಗಿಲನ್ನ ತೆರೆಯಲಾಯಿತು, ಆದರೆ ಬುದ್ಧ ಸ್ವರ್ಗವನ್ನು ಪ್ರವೇಶಿಸಲು ನಿರಾಕರಿಸಿದ. “ ಜಗತ್ತಿನ ಜನರೆಲ್ಲರಿಗೂ ಮುಕ್ತಿ, ಬಿಡುಗಡೆ ಸಾಧ್ಯವಾದಾಗ, ಜಗತ್ತಿನ ಕಟ್ಟಕಡೆಯ ಮನುಷ್ಯ ಸ್ವರ್ಗವನ್ನ ಪ್ರವೇಶಿಸಿದ ಮೇಲೆ ನಾನು ಅವನ ಹಿಂದೆ ಸ್ವರ್ಗದ ಒಳಗೆ ಕಾಲಿಡುತ್ತೇನೆ “ ಎಂದು ಬುದ್ಧ ಖಡಾ ಖಂಡಿತನಾಗಿ ಘೋಷಿಸಿದ.

ಇದು ಅತ್ಯಂತ ಸುಂದರ ಕತೆ. ಜಗತ್ತಿನಲ್ಲಿ ಎರಡು ಬಗೆಯ ಸ್ವಂತದ ಅರಿವನ್ನ ( Self realisation ) ಸಾಧಿಸಿದ ಜನರಿದ್ದಾರೆ. ಎಲ್ಲ ಧರ್ಮಗಳೂ ಈ ಎರಡು ರೀತಿಯ ಜನರನ್ನ ಗುರುತಿಸುತ್ತವೆ. ಒಂದು ಬಗೆಯ ಜನ ಸ್ವಂತದ ಅರಿವು ಸಾಧಿಸಿದ ಮೇಲೆ ಶೂನ್ಯದಲ್ಲಿ ಒಂದಾಗಿಬಿಡುತ್ತಾರೆ. ಇನ್ನೊಂದು ಬಗೆಯ ಜನ ತಮ್ಮ ಸ್ವಂತದ ಅರಿವು ಸಾಧಿಸಿದ ಮೇಲೂ ಅಸ್ತಿತ್ವದ ಭಾಗವಾಗಿದ್ದುಕೊಂಡು ಇನ್ನಿತರ ಜನರಿಗೆ ಸಹಾಯ ಮಾಡಬಯಸುತ್ತಾರೆ. ಮೊದಲ ರೀತಿಯ ಜ್ಞಾನೋದಯ ಸಾಧಿಸಿದ ಜನರನ್ನ ಜೈನರು ‘ಕೈವಲ್ಯರು’ ಎಂದು ಕರೆಯುತ್ತಾರೆ, ಆತ್ಯಂತಿಕದ ಜೊತೆ ಏಕಾಂತವನ್ನು ಸಾಧಿಸಿದವರು ಎಂದು. ಜ್ಞಾನೋದಯವನ್ನ ಸಾಧಿಸಿಕೊಂಡ ಎಷ್ಟೋ ಕೈವಲ್ಯರಿದ್ದಾರೆ, ಇವರು ಶೂನ್ಯದಲ್ಲಿ ಒಂದಾದವರು, ತಮ್ಮ ಆತ್ಯಂತಿಕ ಗುರಿಯನ್ನ ಸಾಧಿಸಿದವರು. ಇವರು ಸ್ವರ್ಗದ ಬಾಗಿಲಲ್ಲಿ ಯಾರಿಗೂ ಕಾಯುವುದಿಲ್ಲ, ಒಳಗೆ ಪ್ರವೇಶ ಮಾಡಿಬಿಡುತ್ತಾರೆ. ಜೈನರಲ್ಲಿ ಜ್ಞಾನೋದಯ ಸಾಧಿಸಿದ ಇನ್ನೊಂದು ಬಗೆಯ ಸಾಧಕರೂ ಇದ್ದಾರೆ. ಇಂಥ 24 ಜನ ಸಾಧಕರನ್ನು ಜೈನರು ‘ತೀರ್ಥಂಕರರು’ ಎಂದು ಗುರುತಿಸುತ್ತಾರೆ. ಈ 24 ತೀರ್ಥಂಕರರು ಸ್ವರ್ಗದ ಬಾಗಿಲಲ್ಲಿ ಎಲ್ಲರಿಗಾಗಿ ಕಾಯ್ದು ನಿಂತವರು, ಇನ್ನೊಬ್ಬರ ಸಹಾಯಕ್ಕಾಗಿ ಧಾವಿಸಿ ಬಂದವರು.

ಬೌದ್ಧರೂ ಈ ಎರಡು ಬಗೆಯ ಸಾಧಕರನ್ನು ಗುರುತಿಸುತ್ತಾರೆ. ಸ್ವ-ಅರಿವನ್ನು ಸಾಧಿಸಿಕೊಂಡಮೇಲೆ ಖಾಲಿಯಲ್ಲಿ ಒಂದಾದವರನ್ನ, ಸ್ವರ್ಗದ ಬಾಗಿಲಲ್ಲಿ ಯಾರಿಗೂ ಕಾಯದವರನ್ನ ಬೌದ್ಧರು ‘ ಅರ್ಹತ’ ಎನ್ನುತ್ತಾರೆ ಮತ್ತು ಜ್ಞಾನೋದಯದ ನಂತರವೂ ತಮ್ಮ ಅಸ್ತಿತ್ವ ಉಳಿಸಿಕೊಂಡು, ಇತರರಿಗೆ ಸಹಾಯ ಮಾಡುತ್ತ ಅವರ ಬಿಡುಗಡೆಗೆ ಕಾರಣವಾಗುವವರನ್ನ, ಸ್ವರ್ಗದ ಬಾಗಿಲಲ್ಲಿ ಇತರರಿಗಾಗಿ ಕಾಯ್ದು ನಿಂತವರನ್ನ ‘ಬೋಧಿಸತ್ವ’ ಎನ್ನುತ್ತಾರೆ.

ಹಾಗಾದರೆ ಎರಡು ರೀತಿಯ ಜ್ಞಾನೋದಯ ಸಾಧಿಸಿದ ಜನ ಇರುವುದು ನಿಶ್ಚಿತ. ನೀವು ಆತ್ಯಂತಿಕವನ್ನು ತಲುಪಿದ ಮೇಲೂ ನಿಮ್ಮಲ್ಲಿ ಇತತರಿಗೆ ಮಾರ್ಗದರ್ಶನ ಮಾಡುವ ಬಯಕೆ ಉಳಿದಿದ್ದರೆ ನೀವು ಕಾಯುತ್ತೀರಿ. ಹೀಗೊಮ್ಮೆ ಇಂಥ ಬಯಕೆ ನಿಮ್ಮಲ್ಲಿ ಉಳಿದುಕೊಂಡಿಲ್ಲವಾದರೆ ನೀವು ಅಸ್ತಿತ್ವವನ್ನು ಕಳಚಿಟ್ಟು ಶೂನ್ಯದಲ್ಲಿ ದಾಖಲಾಗುತ್ತೀರಿ. ಒಬ್ಬ ನಿಜವಾದ ಗುರುವಿನ ಏಕೈಕ ಬಯಕೆಯೆಂದರೆ ತನ್ನ ಶಿಷ್ಯರು ಜ್ಞಾನೋದಯದ ನಂತರವೂ ಅಂತಃಕರಣವನ್ನು ಉಳಿಸಿಕೊಂಡು ತೀರ್ಥಂಕರರಾಗಬೇಕು, ಬೋಧಿಸತ್ವರಾಗಬೇಕು ಎನ್ನುವುದು.

Leave a Reply