‘ಕರ್ಮ’ ಅಂದರೇನು?

ಒಂದು ಹುಟ್ಟಿನಿಂದ ಮತ್ತೊಂದು ಹುಟ್ಟಿಗೆ ಸಾಗಿಬರುವ, ಒಂದು ಹುಟ್ಟಿನಲ್ಲಿ ಸಂಚಯವಾಗಿ ನಮ್ಮ ಮತ್ತೊಂದು ಹುಟ್ಟನ್ನು ನಿರ್ದೇಶಿಸುವ ಇಡುಗಂಟೇ ನಮ್ಮ ನಮ್ಮ ‘ಕರ್ಮ’… । ಸಾ. ಹಿರಣ್ಮಯಿ

ಕರ್ಮ ಎಂದರೆ ಅಕ್ಷರಶಃ ಕ್ರಿಯೆ, ಕೆಲಸ, ಅಥವಾ ಕಾರ್ಯ. ತಾತ್ವಿಕವಾಗಿ ಇದನ್ನು “ಕಾರಣ ಮತ್ತು ಫಲದ ನೈತಿಕ ನಿಯಮ”ವೆಂದು ವಿವರಿಸಲಾಗುತ್ತದೆ.

ಉಪನಿಷತ್ತುಗಳ ಪ್ರಕಾರ, ಜೀವಾತ್ಮವು ಉತ್ತಮ ಚಿಂತನೆ ಮತ್ತು ಕೆಲಸಗಳಿಂದ ಸಂಸ್ಕಾರಗಳನ್ನು ವಿಕಸಿಸಿಕೊಳ್ಳುತ್ತದೆ. ಅಥವಾ ಕೆಟ್ಟ ಚಿಂತನೆ ಮತ್ತು ಕೆಲಸಗಳಿಂದ ಭ್ರಷ್ಟಗೊಳ್ಳುತ್ತದೆ. ಒಂದು ಜನ್ಮದಲ್ಲಿ ಯಾವುದೇ ಜೀವಾತ್ಮವು ತನಗೆ ದೊರೆತ ದೇಹ ಮತ್ತು ಅದರಲ್ಲಿ ತದಾತ್ಮ್ಯಗೊಂಡು ತಾನು ತೋರಿದ ವರ್ತನೆ, ಮಾಡಿದ ಕೆಲಸಗಳ ಫಲಿತಾಂಶ ಅದರ ಮುಂದಿನ ಜನ್ಮಗಳಲ್ಲಿ ತೋರುತ್ತಾ ಹೋಗುತ್ತದೆ. ಹೀಗೆ ಒಂದು ಹುಟ್ಟಿನಿಂದ ಮತ್ತೊಂದು ಹುಟ್ಟಿಗೆ ಸಾಗಿಬರುವ, ಒಂದು ಹುಟ್ಟಿನಲ್ಲಿ ಸಂಚಯವಾಗಿ ನಮ್ಮ ಮತ್ತೊಂದು ಹುಟ್ಟನ್ನು ನಿರ್ದೇಶಿಸುವ ಇಡುಗಂಟೇ ನಮ್ಮ ನಮ್ಮ ‘ಕರ್ಮ’.

ಆಧುನಿಕರ ಮಾತುಕಥೆಯಲ್ಲಿ ” Karma is a bitch” “Karma is a mad dog” ಅನ್ನುವ ಹೇಳಿಕೆಗಳನ್ನು ಕೇಳಿರಬಹುದು. ಮಾಡಿದ ಕೆಲಸದ ಪರಿಣಾಮ ನಮ್ಮನ್ನು ಅಟ್ಟಿಸಿಕೊಂಡು ಬರದೆ ಬಿಡುವುದಿಲ್ಲ ಅನ್ನುವುದು ಇದರ ಸರಳಾರ್ಥ! ಇಷ್ಟಕ್ಕೂ ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಡಲು ಆಸ್ತಿಕರೇ ಆಗಬೇಕೆಂದಿಲ್ಲ. ಕರ್ಮ ಒಂದು ಧಾರ್ಮಿಕ ಸಂಗತಿಗೆ ಸೀಮಿತವಾಗಿರದೆ, ಇದೊಂದು ಸಿದ್ಧಾಂತವೂ ಆಗಿದೆ. “ತಲೆಗೆ ಬಿದ್ದ ನೀರು ಕಾಲಿಗೆ ಬಿದ್ದೇ ಬೀಳುವುದು” “ಬಿತ್ತಿದಂತೆ ಬೆಳೆ” “ಮಾಡಿದ್ದುಣ್ಣೋ ಮಹಾರಾಯ” – ಇತ್ಯಾದಿ ಗಾದೆ ಮಾತುಗಳೂ ಕರ್ಮಕ್ಕೆ ತಕ್ಕ ಫಲ ಅನ್ನುವುದನ್ನೇ ಸಾರುತ್ತವೆ.

ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋSಪರಾಣಿ । ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀ ॥೨೨॥ – “ಮನುಷ್ಯ ಹಳೆಯ ಬಟ್ಟೆಬರೆಗಳನ್ನು ಬಿಸುಟು ಬೇರೆ ಹೊಸತಾದುದ್ದನ್ನು ಉಡುತ್ತಾನೆ ಹೇಗೆಯೋ ಹಾಗೇ-ಜೀವ ಒಂದು ದೇಹವನ್ನು ಬಿಟ್ಟು ಬೇರೆ ಹೊಸ ದೇಹವನ್ನು ಪಡೆಯುತ್ತಾನೆ” ಎಂದು ಭಗವದ್ಗೀತೆಯು ಹೇಳುತ್ತದೆ.

ಸಂಸಾರವು ಕ್ಷಣಿಕ ಸಂತೋಷಗಳನ್ನು ಒದಗಿಸುತ್ತದೆ. ಆದ್ದರಿಂದ ಜೀವಾತ್ಮವು ತೃಪ್ತಗೊಳ್ಳದೆ ಈ ಸಂಸಾರ ಸುಖವನ್ನು ಮತ್ತೆ ಮತ್ತೆ ಅನುಭವಿಸುವ ಅಪೇಕ್ಷೆಯಿಂದ ಪುನರ್ಜನ್ಮ ಬಯಸುತ್ತದೆ. ಆದರೆ ಈ ಬಯಕೆಯಲ್ಲಿ ಅದು ತನ್ನ ಕರ್ಮಗಳನ್ನು ಕಡೆಗಣಿಸಿದರೆ, ಅದಕ್ಕೆ ದೊರೆಯುವ ಪುನರ್ಜನ್ಮ ಒಂದು ಶಿಕ್ಷೆಯಾಗುತ್ತದೆಯೇ ವಿನಃ ಮತ್ತೇನಲ್ಲ. ಜೀವಾತ್ಮವು ಒಂದು ಬಟ್ಟೆಯನ್ನು ಬಿಸುಟು ಮತ್ತೊಂದನ್ನು ತೊಟ್ಟುಕೊಳ್ಳುವಾಗ ಜೀವಾತ್ಮಕ್ಕೆ ಆಯ್ಕೆಯ ಸ್ವಾತಂತ್ರ ಇರುವುದಿಲ್ಲ. ಅದು ಹಿಂದಿನ ಪೋಷಾಕು ತೊಟ್ಟಾಗ ಯಾವುದೆಲ್ಲ ಸತ್ಕರ್ಮ / ದುಷ್ಕರ್ಮಗಳನ್ನು ಮಾಡಿರುತ್ತದೆಯೋ ಅದರ ಪ್ರತಿಫಲ ಅನುಭವಿಸಲು ಅನುಕೂಲವಾಗುವಂಥ ಜನ್ಮ ಅವರಿಗೆ ದೊರೆಯುತ್ತದೆ ಎಂದು ಜ್ಞಾನಿಗಳು ಹೇಳುತ್ತಾರೆ. ಆದ್ದರಿಂದಲೇ ಗುರು-ಹಿರಿಯರು ‘ಸತ್ಕರ್ಮ’ಗಳನ್ನೇ ಹೆಚ್ಚು ಹೆಚ್ಚು ನಡೆಸುವಂತೆ ಬೋಧಿಸುವುದು, ಆ ನಿಟ್ಟಿನಲ್ಲಿ ಪ್ರೇರೇಪಿಸುವುದು.

ಅಷ್ಟಾದರೂ, ಅಕಸ್ಮಾತ್ ಸತ್ಕರ್ಮಗಳಿಂದ ಉತ್ತಮ ಜನ್ಮವೇ ದೊರೆತರೂ ಜೀವಾತ್ಮವು ತಾನು ದೇಹದಲ್ಲಿರುವಷ್ಟೂ ದಿನ ದುಃಖ ಯಾತನೆಗಳನ್ನು, ಆಪ್ತೇಷ್ಟರ ಸಾವುನೋವುಗಳನ್ನು ಅನುಭವಿಸಲೇಬೇಕಾಗುತ್ತದೆ. ಆದರೆ, ಸತ್ಕರ್ಮಗಳ ಆ ಯಾತನೆಗಳ ಮಟ್ಟವನ್ನು, ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಜೀವಾತ್ಮವು ಯಾತನೆಗಳಿಂದ ಸಂಪೂರ್ಣ ಮುಕ್ತವಾಗಬೇಕೆಂದರೆ ಸತ್ಕರ್ಮವನ್ನೂ ಮೀರಿದ ಒಂದು ಸಂಗತಿಯಿದೆ. ಅದುವೇ ‘ನಿಷ್ಕಾಮ ಕರ್ಮ’. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ತಾನು ಮಾಡುವ ಕರ್ಮದೊಡನೆ ತನ್ನನ್ನು ಗುರುತಿಸಿಕೊಳ್ಳದೆ, ತಾನು ಕೇವಲ ಜೀವಾತ್ಮವೆಂಬ ಜ್ಞಾನ ಗಳಿಸಿಕೊಂಡು, ತಾನು ಅವಿನಾಶಿ ಆತ್ಮ, ತನ್ನನ್ನು ಯಾವ ಯಾತನೆಯೂ ಬಾಧಿಸಲಾರದು ಅನ್ನುವ ನೆನಪು ತಂದುಕೊಂಡು ಬಾಳಿದರೆ, ಜೀವಾತ್ಮವು ಕರ್ಮದಿಂದ ಪ್ರೇರಿತವಾದ ಜನನ – ಮರಣ ಚಕ್ರದಿಂದ ಶಾಶ್ವತ ಬಿಡುಗಡೆ ಹೊಂದುತ್ತದೆ.

Leave a Reply