ಅಬ್ದುಲ್ ರೆಹಮಾನ್ ಜಾಮಿ, 15ನೇ ಶತಮಾನದಲ್ಲಿ ಖೊರಾಸನ್ನಿನಲ್ಲಿ (ಟರ್ಕ್) ಜೀವಿಸಿದ್ದ ಒಬ್ಬ ಸೂಫಿ ಸಂತ. ಇಲ್ಲಿರುವುದು ಜಾಮಿ ಹೇಳಿದ ದೃಷ್ಟಾಂತ ಕಥೆ!
ಒಮ್ಮೆ ಮೂರ್ಖಶಿಖಾಮಣಿಯೊಬ್ಬ ಒಂದು ದೊಡ್ಡ ನಗರಕ್ಕೆ ಬಂದ. ನಗರದ ಯಾವ ಬೀದಿಯಲ್ಲಿ ನೋಡಿದರೂ ಜನ ತುಂಬಿ ತುಳುಕಾಡುತ್ತಿತ್ತು. ಜನಸಾಗರವೋ ಅನ್ನುವಂತೆ ಇದ್ದ ಆ ನಗರವನ್ನು ಕಂಡು ಅವನು ಗಾಬರಿಯಾದ. ಈ ನಗರದಲ್ಲಿ ನಿದ್ದೆ ಮಾಡುವುದಾದರೂ ಹೇಗಪ್ಪಾ ಎಂದು ಅವನಿಗೆ ಚಿಂತೆಯಾಯಿತು. ಬೆಳಗ್ಗೆ ಎದ್ದಾಗ ತನ್ನ ಗುರುತೇ ನನಗೆ ಸಿಗದಂತಾಗಿಬಿಟ್ಟರೆ ಹೇಗೆ ಅನ್ನುವ ಭಯ ಅವನನ್ನು ಕಾಡತೊಡಗಿತು. ಆದ್ದರಿಂದ ಅವನು ತನ್ನ ಗುರುತು ಕಳೆದುಹೋಗದಿರಲಿ ಎಂದುಕೊಂಡು ಕಾಲಿಗೆ ಒಂದು ಸೋರೆಕಾಯಿ ಕಟ್ಟುಕೊಂಡು ಮಲಗಿದ. ಸ್ವಲ್ಪ ಹೊತ್ತಿಗೆಲ್ಲ ನಿದ್ರೆ ಬಂದುಬಿಟ್ಟಿತು.
ಮೂರ್ಖ ಮಲಗಿದ ಚೌಕದಲ್ಲೇ ಕುಳಿತಿದ್ದ ವ್ಯಕ್ತಿಯು ಅವನನ್ನು ಗಮನಿಸುತ್ತಲೇ ಇದ್ದ. ಅವನಿಗೊಂದು ತಮಾಷೆ ಮಾಡೋಣ ಅನ್ನಿಸಿತು. ಮೂರ್ಖ ಮಲಗಿ ನಿದ್ದೆಹೋದ ಕೂಡಲೇ ಅವನ ಕಾಲಿಗೆ ಕಟ್ಟಿದ್ದ ಸೋರೆಕಾಯಿಯನ್ನು ಬಿಚ್ಚಿ ತನ್ನ ಕಾಲಿಗೆ ಕಟ್ಟಿಕೊಂಡ. ಬೆಳಗ್ಗೆ ಏಳುತ್ತಲೇ ಮೂರ್ಖನು ತನ್ನ ಕಾಲನ್ನು ನೋಡಿಕೊಂಡ. “ಅರೆ! ಸೋರೆಕಾಯಿ ಹೋಯಿತೆಲ್ಲಿ!?” ಅವನಿಗೆ ಗಾಬರಿಯಾಯಿತು. ರಾತ್ರಿ ಕಾಲಿಗೆ ಕಟ್ಟಿಕೊಂಡಿದ್ದ ಸೋರೆಕಾಯಿ ಅಲ್ಲಿರದೆ ಸ್ವಲ್ಪ ದೂರದಲ್ಲಿ ಮಲಗಿದ್ದ ಮತ್ತೊಬ್ಬನ ಕಾಲಿನಲ್ಲಿತ್ತು. ಆ ಮತ್ತೊಬ್ಬನೇ ತಾನಾಗಿರಬೇಕೆಂದು ಆ ಮೂರ್ಖ ಯೋಚಿಸತೊಡಗಿದ. ಹಾಗೆ ಯೋಚಿಸುತ್ತಾ ಯೋಚಿಸುತ್ತಾ ಗಲಿಬಿಲಿಗೆ ಒಳಗಾದ. ಕೊನೆಗೆ ತಡೆಯಲಾಗದೆ ಆ ತಮಾಷೆಯವನ ಬಳಿ ಹೋಗಿ, “ನೀನು ನಾನಾಗಿದ್ದು ಹೇಗೆ? ನೀನು ಯಾರು? ಅಥವಾ ನಾನು ಯಾರು? ಹೇಳು, ಅಲ್ಲಾನ ಮೇಲಾಣೆ” ಎಂದು ಕೂಗಾಡತೊಡಗಿದ
(ಸಂಗ್ರಹ ಮತ್ತು ಅನುವಾದ: ಅಲಾವಿಕಾ)