‘ಒಂದಾಗುವಿಕೆ’ಯ ಅನುಭವ : Art of love #15

“ಪ್ರತಿ ಗಂಡು ಹೆಣ್ಣಿನಲ್ಲಿಯೂ ಗಂಡಸುತನ ಮತ್ತು ಹೆಣ್ತನದ ತತ್ವಗಳ ವೈರುಧ್ಯ ಅಸ್ತಿತ್ವದಲ್ಲಿರುತ್ತದೆ. ಶರೀರ ಶಾಸ್ತ್ರೀಯವಾಗಿ ಪ್ರತಿ ಗಂಡು ಹೆಣ್ಣಿನಲ್ಲಿ ವಿರುದ್ಧ ಲಿಂಗತ್ವದ ಹಾರ್ಮೋನುಗಳು ಇರುವಂತೆ , ಮಾನಸಿಕವಾಗಿ ಕೂಡ ಮನುಷ್ಯ ದ್ವಿಲಿಂಗಿ. ಅವರು ತಮ್ಮೊಳಗೆ ಗಂಡು ಮತ್ತು ಹೆಣ್ಣಿಗೆ ಸಂಬಂಧಿಸಿದ, ವಸ್ತು ಮತ್ತು ಚೈತನ್ಯಗಳನ್ನು ಕೊಡುವ ಮತ್ತು ಸ್ವೀಕರಿಸುವ ಎರಡೂ ತತ್ವಗಳನ್ನು ಹೊಂದಿರುತ್ತಾರೆ. ಗಂಡು ಅಥವಾ ಹೆಣ್ಣು , ಅವರೊಳಗಿರುವ ಗಂಡು ಮತ್ತು ಹೆಣ್ಣು ಧ್ರುವಗಳ ಮಿಲನದಿಂದಾಗಿ ಮಾತ್ರ ಅವರೊಳಗೆಯೇ ಒಂದಾಗುವಿಕೆಯನ್ನು ಅನುಭವಿಸುತ್ತಾರೆ. ಮನುಷ್ಯನೊಳಗೆಯೇ ಸಂಭವಿಸುವ ಈ ಗಂಡು ಮತ್ತು ಹೆಣ್ಣು ತತ್ವಗಳ ಒಂದಾಗುವಿಕೆ ಎಲ್ಲ ಸೃಜನಶೀಲತೆಯ ಅಡಿಪಾಯ” ಅನ್ನುತ್ತಾರೆ ಎರಿಕ್ ಫ್ರಾಮ್ । ಕನ್ನಡಕ್ಕೆ : ಚಿದಂಬರ ನರೇಂದ್ರ

ಹಿಂದಿನ ಭಾಗ ಇಲ್ಲಿ ಓದಿ: https://aralimara.com/2022/04/17/love-28/

ಒಂದಾಗುವಿಕೆಯ ಅನುಭವ, ಸಾಮಾಜಿಕ ಸಂದರ್ಭದಲ್ಲಿ ಮನುಷ್ಯನೊಂದಿಗೆ ಅಥವಾ ಧರ್ಮದ ಸಂದರ್ಭದಲ್ಲಿ ದೇವರೊಂದಿಗೆ ಯಾವ ರೀತಿಯಲ್ಲೂ ತರ್ಕರಹಿತವಲ್ಲ. ಬದಲಾಗಿ, ಇದು ಆಲ್ಬರ್ಟ್ ಷ್ವೆಟ್ಜರ್ ಸೂಚಿಸುವಂತೆ ತರ್ಕ ಕಾರಣವಾಗಿಯೇ ಸಾಧ್ಯವಾಗುವಂಥದು, ಇದು ತರ್ಕದ ಅತ್ಯಂತ ದಿಟ್ಟ ಮತ್ತು ಕ್ರಾಂತಿಕಾರಕ ಪರಿಣಾಮ. ಇದು ಸಾಧ್ಯವಾಗುವುದು ನಮ್ಮ ಮೂಲಭೂತ ತಿಳುವಳಿಕೆಯ ಕಾರಣವಾಗಿಯೇ ಹೊರತು, ನಮ್ಮ ತಿಳುವಳಿಕೆಯಲ್ಲಿನ ಆಕಸ್ಮಿಕ ಮಿತಿಗಳಿಂದಾಗಿ ಅಲ್ಲ. ಮನುಷ್ಯನ ಮತ್ತು ಬ್ರಹ್ಮಾಂಡದ ರಹಸ್ಯವನ್ನು ಗ್ರಹಿಸುವುದು ನಮಗೆ ಸಾಧ್ಯವಾಗದೇ ಹೋಗಬಹುದು ಆದರೆ, ಪ್ರೀತಿ ಕಾರಣವಾಗಿ ಇದರ ಬಗ್ಗೆ ನಮಗೆ ಅರಿವಾಗುತ್ತದೆ. ವಿಜ್ಞಾನವಾಗಿ, ಮನೋವಿಜ್ಞಾನಕ್ಕೆ ತನ್ನದೇ ಆದ ಮಿತಿಗಳಿವೆ, ಮತ್ತು ಹೇಗೆ ಧರ್ಮಶಾಸ್ತ್ರದ ತಾರ್ಕಿಕ ಪರಿಣಾಮ (logical consequence) ಅನುಭಾವವೋ ಹಾಗೆಯೇ ಮನೋವಿಜ್ಞಾನದ ಆತ್ಯಂತಿಕ ಪರಿಣಾಮ, ಪ್ರೀತಿ.

ಕಾಳಜಿ, ಜವಾಬ್ದಾರಿ, ಗೌರವ ಮತ್ತು ತಿಳುವಳಿಕೆಗಳ ನಡುವೆ ಪರಸ್ಪರ ಸಂಬಂಧವಿದೆ. ಇವು ಪ್ರಬುದ್ಧ ಮನುಷ್ಯನೊಬ್ಬನಲ್ಲಿ ಕಂಡುಬರುವ ಗುಣಗಳ ಲಕ್ಷಣಗಳು. ಇಲ್ಲಿ ಪ್ರಬುದ್ಧ ಮನುಷ್ಯನೆಂದರೆ, ತನ್ನ ಸ್ವಂತದ ಸೃಜನಶೀಲತೆಯ ಸಾಮರ್ಥ್ಯವನ್ನ ಹೆಚ್ಚಿಸಿಕೊಂಡವ, ಬೆಳೆಸಿಕೊಂಡವ, ತಾನು ದುಡಿದದ್ದಕ್ಕೆ ಮಾತ್ರ ಪ್ರತಿಫಲವನ್ನು ಬಯಸುವವ, ತಾನೇ ಸರ್ವಜ್ಞ, ತಾನೇ ಸರ್ವಶಕ್ತ ಎನ್ನುವ ಸ್ವಕೇಂದ್ರಿತ (narcissistic) ಕನಸುಗಳನ್ನ ದೂರಮಾಡಿದವ, ನಿಜವಾದ ಸೃಜನಶೀಲ ಕ್ರಿಯೆ ಮಾತ್ರ ಸಾಧ್ಯಮಾಡುವಂಥ ಅಂತರಂಗದ ಶಕ್ತಿಯ (inner strength) ಆಧಾರದ ಮೇಲೆ ತನ್ನ ವಿನಯ ಮತ್ತು ನಮ್ರತೆಯನ್ನ ರೂಢಿಸಿಕೊಂಡವ.

ಈವರೆಗೆ ನಾನು ಪ್ರೀತಿಯನ್ನ, ಮನುಷ್ಯನ ಪ್ರತ್ಯೇಕತೆಯನ್ನ ಮೀರುವ ಮತ್ತು ಅವನ ಒಂದಾಗುವಿಕೆಯ ತುಡಿತವನ್ನು ತುಂಬಿಕೊಂಡುವ ಸಂಗತಿಯಾಗಿ ವಿವರಿಸಿದ್ದೇನೆ. ಆದರೆ ಈ ಸಾರ್ವತ್ರಿಕ ಸಂಗತಿಯಾಚೆ ಅವನ ಅಸ್ತಿತ್ವಕ್ಕೆ ಸಂಬಂಧಿಸಿದ, ಹೆಚ್ಚು ನಿರ್ಧಿಷ್ಟವಾದ, ಹೆಚ್ಚು ಜೈವಿಕವಾದ ಅವನ ಬಯಕೆಯೊಂದಿದೆ ಅದು ಇಬ್ಬರು ಮನುಷ್ಯರ ದೈಹಿಕ ಮಿಲನದ ಕುರಿತಾದದ್ದು : ಗಂಡಸುತನ ಮತ್ತು ಹೆಣ್ತನಗಳ ನಡುವಿನ ಮಿಲನಕ್ಕೆ ಸಂಬಂಧಿಸಿದ್ದು. ಮೊದಲು ಒಂದೇ ಆಗಿದ್ದ ಗಂಡು ಮತ್ತು ಹೆಣ್ಣು, ಆಮೇಲೆ ಕತ್ತರಿಸಿಕೊಂಡು ಬೇರೆಬೇರೆಯಾದ ಮೇಲೆ, ತನ್ನ ಹೆಣ್ಣು ಭಾಗವನ್ನ ಕಳೆದುಕೊಂಡ ಗಂಡು, ಅವಳಿಗಾಗಿ ಹುಡುಕುತ್ತ, ಅವಳನ್ನು ಮತ್ತೆ ಸೇರಿ ಒಂದಾಗುವ ಬಯಕೆ ಹೊಂದುವ ಪುರಾಣದ ಕಥೆ ಈ ಧ್ರುವೀಕರಣದ ಕಲ್ಪನೆಯನ್ನ ಅತ್ಯಂತ ಸ್ಪಷ್ಟವಾಗಿ ಹೇಳುತ್ತದೆ. ಮೊದಲು ಒಂದೇ ಆಗಿದ್ದ ಎರಡು ಲಿಂಗತ್ವಗಳ (sexes) ಕಲ್ಪನೆ ಬೈಬಲ್ ನ ಕಥೆಯಲ್ಲೂ ಇದೆ, ಆ್ಯಡಂ ನ ಪಕ್ಕೆಲೆಬಿನಿಂದ ಈವ್ ಳನ್ನ ಹುಟ್ಟಿಸಿದ ಕಥೆ, ಇಲ್ಲಿ ಪಿತೃಪ್ರಧಾನ ವ್ಯವಸ್ಥೆಯನ್ನ ಸೂಚಿಸುತ್ತಿರುವಾಗಲೂ, ಹೆಣ್ಣನ್ನು ಗಂಡಿಗೆ ಸೆಕಂಡರಿಯಾಗಿ ಹೇಳುತ್ತಿರುವಾಗಲೂ ಈ ಕಥೆ ಮೊದಲು ಗಂಡು ಮತ್ತು ಹೆಣ್ಣು ಎರಡೂ ಒಂದೇ ಆಗಿದ್ದವು ಎನ್ನುವ ಕಲ್ಪನೆಯನ್ನ ಸೂಚಿಸುತ್ತದೆ. ಇದು ಏನೇ ಆಗಿದ್ದರೂ ಪುರಾಣದ ಕಥೆ ಹೇಳುವ ಅರ್ಥ ಮಾತ್ರ ಸ್ಪಷ್ಟ, ಲೈಂಗಿಕ ಧ್ರುವೀಕರಣದ ಕಾರಣವಾಗಿ ಮನುಷ್ಯ ಒಂದು ನಿರ್ಧಿಷ್ಟ ಬಗೆಯಲ್ಲಿ ಮಿಲನಕ್ಕಾಗಿ ಹಾತೊರೆಯುತ್ತಿದ್ದಾನೆ, ಅದು ಇನ್ನೊಂದು ಸೆಕ್ಸ್ ನ ಮನುಷ್ಯನ ಜೊತೆಯ ಮಿಲನ. ಪ್ರತಿ ಗಂಡು ಹೆಣ್ಣಿನಲ್ಲಿಯೂ ಗಂಡಸುತನ ಮತ್ತು ಹೆಣ್ತನದ ತತ್ವಗಳ ವೈರುಧ್ಯ ಅಸ್ತಿತ್ವದಲ್ಲಿರುತ್ತದೆ. ಶರೀರ ಶಾಸ್ತ್ರೀಯವಾಗಿ ಪ್ರತಿ ಗಂಡು ಹೆಣ್ಣಿನಲ್ಲಿ ವಿರುದ್ಧ ಲಿಂಗತ್ವದ ಹಾರ್ಮೋನುಗಳು ಇರುವಂತೆ , ಮಾನಸಿಕವಾಗಿ ಕೂಡ ಮನುಷ್ಯ ದ್ವಿಲಿಂಗಿ. ಅವರು ತಮ್ಮೊಳಗೆ ಗಂಡು ಮತ್ತು ಹೆಣ್ಣಿಗೆ ಸಂಬಂಧಿಸಿದ, ವಸ್ತು ಮತ್ತು ಚೈತನ್ಯಗಳನ್ನು ಕೊಡುವ ಮತ್ತು ಸ್ವೀಕರಿಸುವ ಎರಡೂ ತತ್ವಗಳನ್ನು ಹೊಂದಿರುತ್ತಾರೆ. ಗಂಡು ಅಥವಾ ಹೆಣ್ಣು , ಅವರೊಳಗಿರುವ ಗಂಡು ಮತ್ತು ಹೆಣ್ಣು ಧ್ರುವಗಳ ಮಿಲನದಿಂದಾಗಿ ಮಾತ್ರ ಅವರೊಳಗೆಯೇ ಒಂದಾಗುವಿಕೆಯನ್ನು ಅನುಭವಿಸುತ್ತಾರೆ. ಮನುಷ್ಯನೊಳಗೆಯೇ ಸಂಭವಿಸುವ ಈ ಗಂಡು ಮತ್ತು ಹೆಣ್ಣು ತತ್ವಗಳ ಒಂದಾಗುವಿಕೆ ಎಲ್ಲ ಸೃಜನಶೀಲತೆಯ ಅಡಿಪಾಯ.

ಗಂಡು-ಹೆಣ್ಣು ಧ್ರುವಗಳ ಒಂದಾಗುವಿಕೆ ಪರಸ್ಪರರ ಸೃಜನಶೀಲತೆಯ ತಳಹದಿ ಕೂಡ. ಜೀವಶಾಸ್ತ್ರೀಯವಾಗಿ ಇದು ಎದ್ದು ಕಾಣುವುದು, ವೀರ್ಯಾಣು ಮತ್ತು ಅಂಡಾಣುಗಳ ಒಂದಾಗುವಿಕೆ ಮಗುವಿನ ಸೃಷ್ಟಿಗೆ ಕಾರಣವಾಗುವ ಉದಾಹರಣೆಯಲ್ಲಿಯಾದರೂ, ಶುದ್ಧ ಮಾನಸಿಕ ಲೋಕದಲ್ಲಿಯೂ ಇದು ಬೇರೆ ಏನಲ್ಲ ; ಗಂಡು ಮತ್ತು ಹೆಣ್ಣಿನ ನಡುವಿನ ಪ್ರೀತಿಯಲ್ಲಿ , ಇಬ್ಬರೂ ಮತ್ತೆ ಮರು ಹುಟ್ಟು ಪಡೆಯುತ್ತಾರೆ.

ಗಂಡು-ಹೆಣ್ಣು ಧ್ರುವಗಳ ಒಂದಾಗುವಿಕೆಯ ತತ್ವ ಪ್ರಕೃತಿಯಲ್ಲೂ ಕಂಡುಬರುತ್ತದೆ ; ಇದು ಪ್ರಾಣಿ ಮತ್ತು ಸಸ್ಯ ಲೋಕದಲ್ಲಿಯಂತೆ ಸ್ಪಷ್ಟವಾಗಿ ಕಂಡುಬರದಿದ್ದರೂ, ಬದುಕಿನ ಎರಡು ಮೂಲಭೂತ ಕ್ರಿಯೆಗಳಾದ ಸ್ವೀಕರಿಸುವುದು (receiving ) ಮತ್ತು ತನ್ನನ್ನು ತಾನು ಕೊಡುವುದು (penetrating) ಇವುಗಳ ಗುಣ ಲಕ್ಷಣಗಳಲ್ಲಿ ತನ್ನ ಅಭಿವ್ಯಕ್ತಿಯನ್ನು ಪಡೆಯುತ್ತದೆ. ಮಳೆ ಮತ್ತು ಭೂಮಿಯ ನಡುವೆ, ನದಿ ಮತ್ತು ಸಾಗರದ ನಡುವೆ, ಹಗಲು ಮತ್ತು ರಾತ್ರಿಯ ನಡುವೆ, ಬೆಳಕು ಮತು ಕತ್ತಲೆಯ ನಡುವೆ, ವಸ್ತು ಮತ್ತು ಚೈತನ್ಯದ ನಡುವಿನ ಕೊಡು ಕೊಳ್ಳುವಿಕೆಯಲ್ಲಿ ಇಂಥ ಒಂದಾಗುವಿಕೆಯನ್ನ ಗುರುತಿಸಬಹುದು.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply