ಹುಚ್ಚರ ವಿವೇಕ: ಓಶೋ ವ್ಯಾಖ್ಯಾನ

ಸಣ್ಣ ಸಣ್ಣ ಸಂಗತಿಗಳು ಮನುಷ್ಯನ ಬುದ್ಧಿ – ಮನಸ್ಸನ್ನು ಯಾವುದೋ ಅನವಶ್ಯಕ ವಿಷಯದಲ್ಲಿ ತೊಡಗಿಸಿ ನಿಜ ಸಮಸ್ಯೆಗಳಿಂದ ಅವನನ್ನು ದೂರ ಮಾಡಿಬಿಡುತ್ತವೆ… : ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ

ಒಂದು ಸುಂದರ ಕಥೆ ನೆನಪಾಗುತ್ತಿದೆ. ಇಂಡಿಯಾ ಇಬ್ಭಾಗವಾಗಿ ಇಂಡಿಯಾ ಮತ್ತು ಪಾಕಿಸ್ತಾನ ಎನ್ನುವ ಎರಡು ದೇಶಗಳು ಹುಟ್ಟಿಕೊಂಡಾಗ ಎರಡೂ ಭಾಗಗಳ ಬಹಳಷ್ಟು ಜನ ತಮ್ಮ ತಮ್ಮ ಜಾಗ ಬಿಟ್ಟು ತಮ್ಮ ಇಷ್ಟದ ದೇಶಕ್ಕೆ ವಲಸೆ ಬಂದರು. ಕೆಲವರು ತಮ್ಮ ಸ್ವಂತ ಇಚ್ಛೆಯಿಂದ ಹೀಗೆ ಮಾಡಿದರೆ ಇನ್ನೂ ಕೆಲವರನ್ನು ಬಲವಂತವಾಗಿ ದೇಶ ಬಿಡಿಸಿ ಓಡಿಸಲಾಯಿತು.

ಇದೇ ಸಮಯದಲ್ಲಿ ಇಂಡಿಯಾ ಮತ್ತು ಪಾಕಿಸ್ತಾನಗಳ ಗಡಿಯಲ್ಲಿದ್ದ ಒಂದು ಹುಚ್ಚರ ಆಸ್ಪತ್ರೆಯನ್ನ ಮತ್ತು ಆಸ್ಪತ್ರೆಯಲ್ಲಿದ್ದ ಹುಚ್ಚರನ್ನ ಯಾವ ದೇಶಕ್ಕೆ ಸೇರಿಸಬೇಕು ಎನ್ನುವ ಪ್ರಶ್ನೆ ಹುಟ್ಟಿಕೊಂಡಿತು. ಆದರೆ ಆಸ್ಪತ್ರೆಯಲ್ಲಿದ್ದ ನೂರಾರು ಹುಚ್ಚರಿಗೆ ಈ ಯಾವುದರ ಚಿಂತೆಯೂ ಇರಲಿಲ್ಲ. ಆದರೆ ಆಸ್ಪತ್ರೆಯ ಆಡಳಿತ ವರ್ಗ ಯಾವುದೋ ಒಂದು ನಿರ್ಧಾರ ತೆಗೆದುಕೊಳ್ಳಲೇಬೇಕಾಗಿತ್ತು. ಆಸ್ಪತ್ರೆಯ ಸುಪರಿಟೆಂಡೆಂಟ್ ಎಲ್ಲ ಹುಚ್ಚರನ್ನು ಒಂದು ಕಡೆ ಸೇರಿಸಿ ಪ್ರಶ್ನೆ ಮಾಡಿದರು. “ ಇಂಡಿಯಾಕ್ಕೆ ಹೋಗಬೇಕೆನ್ನುವವರು ಕೈ ಎತ್ತಿ “ ಆದರೆ ಯಾರೂ ಕೈ ಎತ್ತಲಿಲ್ಲ, “ ಪಾಕಿಸ್ತಾನಕ್ಕೆ ಹೋಗಬೇಕೆನ್ನುವವರು ಕೈ ಎತ್ತಿ “ ಮತ್ತೇ ಸುಪರಿಟೆಂಡೆಂಟ್ ಪ್ರಶ್ನೆ ಮಾಡಿದರು. ಆದರೆ ಈ ಬಾರಿಯೂ ಯಾರೂ ಕೈ ಎತ್ತಲಿಲ್ಲ. “ ನಾವು ಇಲ್ಲಿಯೇ ಇರುತ್ತೇವೆ, ಎಲ್ಲಿಯೂ ಹೋಗುವುದಿಲ್ಲ “ ಹುಚ್ಚರೆಲ್ಲ ಒಕ್ಕೊರಲಿನಿಂದ ತಮ್ಮ ನಿರ್ಧಾರ ಹೇಳಿದರು.

ಸುಪರಿಟೆಂಡೆಂಟ್ ಹುಚ್ಚರಿಗೆ ಮತ್ತೆ ತಿಳಿಸಿ ಹೇಳುವ ಪ್ರಯತ್ನ ಮಾಡಿದರು, “ ನೀವು ಎಲ್ಲಿಯೂ ಹೋಗಬೇಕಿಲ್ಲ, ನೀವು ಇಲ್ಲಿಯೇ ಇರುತ್ತೀರಾ. ಆದರೆ ನೀವು ಯಾವುದಾದರೂ ಒಂದು ದೇಶವನ್ನು ಆಯ್ಕೆ ಮಾಡಿಕೊಳ್ಳಲೇಬೇಕು. “

“ ನಾವು ಇಲ್ಲಿಯೇ ಇರುತ್ತೇವೆಂದ ಮೇಲೆ ನಿಮ್ಮ ಸಮಸ್ಯೆ ಏನು ? ಇಂಡಿಯಾ, ಪಾಕಿಸ್ತಾನ ಇದೆಲ್ಲ ಏನು? ನಾವು ಗೆಳೆಯರು ಇಲ್ಲಿಯೇ ಇರುತ್ತೇವೆ, ಎಲ್ಲಿಯೂ ಹೋಗುವುದಿಲ್ಲ “ ಹುಚ್ಚರು ತಮ್ಮ ಪಟ್ಟು ಸಡಿಲಿಸಲಿಲ್ಲ.

ಪರಿಸ್ಥಿತಿಯನ್ನು ಹುಚ್ಚರಿಗೆ ತಿಳಿಸಿ ಹೇಳಲು ಸುಪರಿಟೆಂಡೆಂಟ್ ತುಂಬ ಪ್ರಯತ್ನ ಪಟ್ಟರು. “ ಈ ಜಾಗ ಒಂದು ದೇಶಕ್ಕೆ ಸೇರಲೇಬೇಕು. ಹಾಗಾಗಿ ನೀವೇಲ್ಲ ಸೇರಿ ಒಂದು ನಿರ್ಧಾರಕ್ಕೆ ಬಂದರೆ ನಾವು ಈ ಜಾಗವನ್ನ ಇಂಡಿಯಾ ಅಥವಾ ಪಾಕಿಸ್ತಾನಕ್ಕೆ ಸೇರಿಸಲು ಶಿಫಾರಸ್ಸು ಮಾಡುತ್ತೇವೆ. “

“ ನಾವು ಇಲ್ಲಿಂದ ಎಲ್ಲೂ ಹೋಗುವುದಿಲ್ಲ ಎಂದ ಮೇಲೆ ಯಾವ ದೇಶವಾದರೇನು? ನಿಮ್ಮ ಸಮಸ್ಯೆಯೇ ನಮಗೆ ಅರ್ಥ ಆಗುತ್ತಿಲ್ಲ.“ ಹುಚ್ಚರು ಯಾವ ನಿರ್ಧಾರಕ್ಕೂ ಬರಲು ನಿರಾಕರಿಸಿದರು.

ಕೊನೆಗೆ ಇನ್ನು ಹುಚ್ಚರ ಜೊತೆ ವಾದಮಾಡಿ ಪ್ರಯೋಜನವಿಲ್ಲವೆಂದು ನಿರ್ಧರಿಸಿ, ಆಸ್ಪತ್ರೆಯ ಆಡಳಿತವರ್ಗ, ಆಸ್ಪತ್ರೆಯನ್ನ ಎರಡು ಭಾಗ ಮಾಡಲು ನಿರ್ಧರಿಸಿ ನಡುವೆ ಗೋಡೆಯೊಂದನ್ನು ಕಟ್ಟಲು ತೀರ್ಮಾನ ತೆಗೆದುಕೊಂಡಿತು. ಆಸ್ಪತ್ರೆಯ ಒಂದು ಭಾಗ ಇಂಡಿಯಾ ಮತ್ತು , ಇನ್ನೊಂದು ಭಾಗ ಪಾಕಿಸ್ತಾನ ಎಂದು ಎಲ್ಲ ಹುಚ್ಚರಿಗೂ ಹೇಳಲಾಯಿತು.

ಈಗಲೂ ಎರಡೂ ಬದಿಯ ಹುಚ್ಚರು ಗೋಡೆಯನ್ನು ಹತ್ತಿಕುಳಿತು ತಮಾಶೆ ಮಾಡುತ್ತ ಮಾತನಾಡುತ್ತಾರಂತೆ, “ ನಾವು ಈಗಲೂ ಎಲ್ಲಿ ಇರಬೇಕಿತ್ತೋ ಅಲ್ಲಿಯೇ ಇದ್ದೀವಿ. ಇಂಡಿಯಾಕ್ಕೆ ಹೋದುವುದು, ಪಾಕಿಸ್ತಾನಕ್ಕೆ ಹೋಗುವುದು ಎಲ್ಲ ಏನಾಯಿತು? ಯಾರೂ ಎಲ್ಲೂ ಹೋಗಲಿಲ್ಲ, ಎಲ್ಲ ಮೊದಲಿನ ಹಾಗೇ ಇದೆ. ಅನಾವಶ್ಯಕವಾಗಿ ಈ ಗೋಡೆಯನ್ನ ಕಟ್ಟಿದರು. “

ಸಣ್ಣ ಸಣ್ಣ ಸಂಗತಿಗಳು ಮನುಷ್ಯನ ಬುದ್ಧಿ – ಮನಸ್ಸನ್ನು ಯಾವುದೋ ಅನವಶ್ಯಕ ವಿಷಯದಲ್ಲಿ ತೊಡಗಿಸಿ ನಿಜ ಸಮಸ್ಯೆಗಳಿಂದ ಅವನನ್ನು ದೂರ ಮಾಡಿಬಿಡುತ್ತವೆ.

(Source: Osho – The Razor’s Edge)


1 Comment

Leave a Reply