ಧ್ಯಾನವನ್ನು ಆಧುನಿಕರ ಅಪವ್ಯಾಖ್ಯಾನದಂತೆ ಮನಸ್ಸನ್ನು ಒಂದೆಡೆ ನಿಲ್ಲಿಸುವ ಏಕಾಗ್ರತೆ’ ಅಂದುಕೊಂಡುಬಿಟ್ಟರೆ, ನಿಜಾರ್ಥದ ಧ್ಯಾನದ ಪ್ರಯೋಜನಗಳನ್ನು ಅಲ್ಲಗಳೆಯುವಂತಾಗಿ ಧ್ಯಾನ ಪ್ರಕ್ರಿಯೆಯನ್ನೇ ಕೆಡುಕಾಗಿ ಬಿಂಬಿಸುವ ಸಾಧ್ಯತೆ ಇರುತ್ತದೆ… । ಚಿತ್ಕಲಾ
ನಮ್ಮಲ್ಲಿ ಬಹುತೇಕರು ಧ್ಯಾನವನ್ನು ಬಹುತೇಕ ‘ಏಕಾಗ್ರತೆ’ಯ ಸಮಾನಾರ್ಥದಲ್ಲಿ ಅರ್ಥೈಸುತ್ತಾರೆ. ಏಕಾಗ್ರತೆಯ ಸಿದ್ಧಿ ಧ್ಯಾನದ ಒಂದು ಹೆಚ್ಚುವರಿ ಲಾಭವಷ್ಟೇ ಹೊರತು, ಧ್ಯಾನವೇ ಏಕಾಗ್ರತೆ ಅಲ್ಲ. ಧ್ಯಾನವೆಂದರೆ ಮನಸ್ಸನ್ನು ನಿಲ್ಲಿಸುವುದಲ್ಲ, ಮನಸ್ಸು ಒಂದು ನಿರ್ಧಿಷ್ಟ ವಸ್ತುವಿನತ್ತ ಚಲಿಸುವ ಪ್ರಕ್ರಿಯೆ.
‘ಧ್ಯಾನ’ ಪದದ ಉತ್ಪತ್ತಿಯನ್ನೇ ತೆಗೆದುಕೊಂಡರೆ, ಧೀಃ ಯಾನಮ್ = ಧ್ಯಾನಮ್. ಮನಸ್ಸಿನ ಯಾನವೇ ಧ್ಯಾನ. ಪತಂಜಲಿ ಧ್ಯಾನವನ್ನು ಸಮಾಧಿಯತ್ತ ಕೊಂಡೊಯ್ಯುವ ಕ್ರಿಯೆಯಾಗಿ ತನ್ನ ಸೂತ್ರದಲ್ಲಿ ಸೇರಿಸಿದ್ದಾನೆ. ಆದರೆ ಅದು ನಿರ್ದಿಷ್ಟ ವಸ್ತುವಿನ ಮೇಲೆ “ನಿಲ್ಲಿಸುವುದು” ಎಂದು ಅಪಾರ್ಥಕ್ಕೆ ಒಳಗಾಗಿದೆ. ಪತಂಜಲಿಯ ಯೋಗಸೂತ್ರವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡರೆ, ಅದು ಮನಸ್ಸು ಒಂದು ವಸ್ತುವನ್ನು ನಿರಂತರವಾಗಿ ತಲುಪುತ್ತಲೇ ಇರುವ ಕ್ರಿಯೆ ಅನ್ನುವುದು ಮನದಟ್ಟಾಗುತ್ತದೆ. ಧ್ಯಾನವನ್ನು ಆಧುನಿಕರ ಅಪವ್ಯಾಖ್ಯಾನದಂತೆ ಮನಸ್ಸನ್ನು ಒಂದೆಡೆ ನಿಲ್ಲಿಸುವ ಏಕಾಗ್ರತೆ’ ಅಂದುಕೊಂಡುಬಿಟ್ಟರೆ, ನಿಜಾರ್ಥದ ಧ್ಯಾನದ ಪ್ರಯೋಜನಗಳನ್ನು ಅಲ್ಲಗಳೆಯುವಂತಾಗಿ ಧ್ಯಾನ ಪ್ರಕ್ರಿಯೆಯನ್ನೇ ಕೆಡುಕಾಗಿ ಬಿಂಬಿಸುವ ಸಾಧ್ಯತೆ ಇರುತ್ತದೆ.
ಪತಂಜಲಿ ಧಾರಣ, ಧ್ಯಾನ ಸಮಾಧಿ ಅನ್ನುವಾಗ ವಿವಿಧ ಸ್ಥಾನಗಳಲ್ಲಿ ಮನಸ್ಸನ್ನು ಇಡುವುದು, ಒಂದರಲ್ಲೇ ನೆಡುವುದು ಮತ್ತು ಅವೆರಡರ ಮೂಲಕ ಆತ್ಯಂತಿಕವನ್ನು ತಲುಪುವುದು ಎಂದಾಗುತ್ತದೆ. ಧ್ಯಾನದ ಪದ ವ್ಯುತ್ಪತ್ತಿ ಮತ್ತು ಪತಂಜಲಿಯ ಧಾರಣ – ಧ್ಯಾನ – ಸಮಾಧಿ ವಿವರವನ್ನು ಜೊತೆಗಿಟ್ತು ನೋಡಿದಾಗ ಎರಡೂ ಒಂದಕ್ಕೊಂದು ತಾಳೆಯಾಗಿ ಧ್ಯಾನವೆಂದರೆ ನೆಲೆಸುವುದಲ್ಲ, ಚಲಿಸುವುದು ಅಂತ ಗೊತ್ತಾಗುತ್ತೆ. ಅಕಸ್ಮಾತ್ ಧ್ಯಾನ ಅಂದರೆ ‘ನೆಲೆಸುವುದು’ ಅಂತಾಗಿಬಿಟ್ಟರೆ, ಧ್ಯಾನದ ಉದ್ದೇಶವೇ ಮೋಕ್ಷ ಸಾಧನೆ ಆಗಿರುವಾಗ, (ಅಥವಾ ಗುರಿಯನ್ನು ತಲುಪುವುದು ಆಗಿರುವಾಗ) ಅದು ಸಾಧ್ಯವಾಗೋದು ಹೇಗೆ? ಆದ್ದರಿಂದ ಧ್ಯಾನದ ಉದ್ದೇಶವೇ ಧ್ಯಾನ ಅಂದರೆ ಮನೋಬುದ್ಧಿಯನ್ನು ನಿಲ್ಲಿಸುವುದು ಅನ್ನುವ ತರ್ಕವನ್ನು ಹೊಡೆದು ಹಾಕಿ ಚಲಿಸುವುದು ಅನ್ನುವುದನ್ನು ಎತ್ತಿಹಿಡಿಯುತ್ತದೆ. ಮತ್ತು ಏಕಾಗ್ರತೆ ಕೂಡಾ ಎಲ್ಲೋ ಒಂದೆಡೆ ‘ನೆಡುವುದಲ್ಲ’, ಒಂದೇ ದಾರಿಯಲ್ಲಿ ‘ನಡೆಯುವುದು’ ಎಂದಾಗುತ್ತದೆ.
ಇನ್ನೂ ವಿಸ್ತರಿಸಬಹುದಾದರೆ, “ಧ್ಯಾನ – ಧ್ಯಾತೃ – ಧ್ಯೇಯ ‘ ಅನ್ನುವ ಧೀ ಧಾತುವಿನ ಮೂರು ರೂಪಗಳನ್ನು ನೋಡಬಹುದು. ಧ್ಯಾನ ತನ್ನಿಂತಾನೆ ಸ್ವತಂತ್ರ ಕ್ರಿಯೆ ಅಲ್ಲ. ಅದನ್ನು ‘ನಡೆಸುವವರು’ (ಧ್ಯಾತೃ) ಮತ್ತು ಅದು ತಲುಪಬೇಕಾದ ಗುರಿ (ಧ್ಯೇಯ) ಸೇರಿ ಧ್ಯಾನ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಸರಳವಾಗಿ ಹೇಳುವುದಾದರೆ; ಧ್ಯಾನ, ‘ನಿಲ್ಲಿಸುವ’ ಸಂಗತಿಯಲ್ಲ. ಧ್ಯಾನ ‘ತಲುಪಿಸುವ’ ಸಂಗತಿ. ಅದು ಲೌಕಿಕದಲ್ಲಿ ನಮ್ಮನ್ನು ನಮ್ಮ ಉದ್ದೇಶದ ಕಡೆ ತಲುಪಿಸುತ್ತದೆ. ಅಧ್ಯಾತ್ಮದಲ್ಲಿ ‘ಮೋಕ್ಷ’ದ ಕಡೆ ತಲುಪಿಸುತ್ತದೆ.