ಪ್ರೀತಿ ಒಂದು ಮನೋಭಾವ, ಅದು ಕೇವಲ ಒಬ್ಬ ವ್ಯಕ್ತಿಯ ಜೊತೆಗಿನದು ಮಾತ್ರವಲ್ಲ ಸುತ್ತಲಿನ ಎಲ್ಲರಿಗೂ ಸಂಬಂದಿಸಿದ್ದು ಎಂದು ನಾನು ಹೇಳಿದ ಮಾತ್ರಕ್ಕೆ, ಬೇರೆ ಬೇರೆ ರೀತಿಯ ಪ್ರೀತಿಗಳ ನಡುವೆ ಯಾವ ವ್ಯತ್ಯಾಸವೂ ಇಲ್ಲ ಎಂದಲ್ಲ, ಪ್ರೀತಿಸಲ್ಪಡುವ ವ್ಯಕ್ತಿ ಅಥವಾ ವಸ್ತು ಗಳ ವಿಶೇಷವನ್ನು ಆಧರಿಸಿ ಖಂಡಿತವಾಗಿ ನಾವು ವ್ಯತ್ಯಾಸಗಳನ್ನು ಗುರುತಿಸಬಹುದು… ~ ಎರಿಕ್ ಫ್ರಾಮ್ । ಕನ್ನಡಕ್ಕೆ ಚಿದಂಬರ ನರೇಂದ್ರ
ಹಿಂದಿನ ಭಾಗ ಇಲ್ಲಿ ಓದಿ: https://aralimara.com/2022/05/08/love-34/
ಪ್ರಾಥಮಿಕವಾಗಿ ಪ್ರೀತಿ ಎನ್ನುವುದು ಒಬ್ಬ ನಿರ್ಧಿಷ್ಟ ವ್ಯಕ್ತಿಯ ಜೊತೆಗಿನ ಸಂಬಂಧ ಮಾತ್ರವಲ್ಲ; ಇದು ಒಂದು ಮನೋಭಾವ. ಪ್ರೀತಿ ಎನ್ನುವುದು ಒಬ್ಬ ವ್ಯಕ್ತಿಯು ತಾನು ಪ್ರೀತಿಸುತ್ತಿರುವ ವ್ಯಕ್ತಿ ಅಥವಾ ವಸ್ತುವಿನ ಕುರಿತಾಗಿ ಹೊಂದಿರುವ ಆಲೋಚನೆಗಳಲ್ಲ, ಭಾವನೆಗಳಲ್ಲ, ಬದಲಾಗಿ ಆ ವ್ಯಕ್ತಿ ಇಡೀ ಜಗತ್ತಿನೊಡನೆ ಹೊಂದಿರುವ ಸಂಬಂಧವನ್ನು ನಿರ್ಧರಿಸುವ ದೃಷ್ಟಿಕೋನ. ಒಬ್ಬ ವ್ಯಕ್ತಿ ಕೇವಲ ಇನ್ನೊಬ್ಬ ವ್ಯಕ್ತಿಯನ್ನು ಮಾತ್ರ ಪ್ರೀತಿಸುತ್ತಾನೆ ಮತ್ತು ತನ್ನ ಜೊತೆ ಇರುವ ಇತರರ ಬಗ್ಗೆ ಅನಾಸಕ್ತನಾಗಿದ್ದಾನೆಂದರೆ ಅದು ಪ್ರೀತಿಯಲ್ಲ, ಅದು ಕೇವಲ ಒಂದು ಸಹ ಜೀವನ, ಅಥವಾ ಆ ವ್ಯಕ್ತಿಯ ವಿಸ್ತಾರಗೊಂಡಿರುವ ಅಹಂ. ಆದರೂ ಬಹಳಷ್ಟು ಜನ ಪ್ರೀತಿ ಹುಟ್ಟುವುದಕ್ಕೆ, ಅವರು ಪ್ರೀತಿಸುತ್ತಿರುವ ವ್ಯಕ್ತಿ ಅಥವಾ ವಸ್ತು ಕಾರಣ ಎಂದು ನಂಬುತ್ತಾರೆಯೇ ಹೊರತು, ಪ್ರೀತಿಗೆ ತಮ್ಮೊಳಗಿನ ಪ್ರೀತಿಸುವ ಸಹಜ ಸಾಮರ್ಥ್ಯ ಕಾರಣ ಎಂದು ನಂಬುವುದಿಲ್ಲ. ಇನ್ನೂ ಮುಂದುವರೆದು ಅವರು, ತಾವು ಒಬ್ಬ ವ್ಯಕ್ತಿಯನ್ನು ಮಾತ್ರ ಪ್ರೀತಿಸುತ್ತಿರುವುದು, ಮತ್ತು ಇತರರ ಬಗ್ಗೆ ಅನಾಸಕ್ತರಾಗಿರುವುದು ತಮ್ಮ ಪ್ರೀತಿಯ ತೀವ್ರತೆಗೆ ಸಾಕ್ಷಿ ಎಂದು ತಿಳಿದುಕೊಂಡಿರುತ್ತಾರೆ. ಈ ತಪ್ಪು ತಿಳುವಳಿಕೆಯನ್ನೇ ನಾನು ಮೇಲೆ ಪ್ರಸ್ತಾಪ ಮಾಡಿರುವುದು. ಪ್ರೀತಿಯನ್ನ ನಾವು ಒಂದು ಕ್ರಿಯೆ ಎಂದೂ, ನಮ್ಮ ಚೇತನದ ಸಾಮರ್ಥ್ಯವೆಂದೂ ತಿಳಿಯುವದಿಲ್ಲವಾದ್ದರಿಂದ , ಪ್ರೀತಿಸಲು ಒಬ್ಬ ಸೂಕ್ತ ವ್ಯಕ್ತಿಯನ್ನ ಅಥವಾ ಸೂಕ್ತ ವಸ್ತುವನ್ನ ಹುಡುಕಿಕೊಂಡರೆ ಸಾಕು, ಮುಂದೆ ಎಲ್ಲವೂ ತನ್ನ ಪಾಡಿಗೆ ತಾನು ನಡೆದು ಹೋಗುತ್ತದೆ ಎಂದುಕೊಂಡಿರುತ್ತೇವೆ. ಈ ಮನೋಭಾವವನ್ನು, ಪೇಂಟ್ ಮಾಡಬಯಸುವ ಒಬ್ಬ ವ್ಯಕ್ತಿ, ತಾನು ಪೇಂಟ್ ಮಾಡುವ ಕಲೆಯನ್ನು ಕಲಿಯುವುದರ ಬದಲಾಗಿ ಪೇಂಟ್ ಮಾಡಲು ಸೂಕ್ತ ವಸ್ತು ಸಿಗುವವರೆಗೂ ಕಾಯಬೇಕು, ಅಂಥದೊಂದು ವಸ್ತು ಸಿಕ್ಕಾಗ ತಾನು ಸುಂದರವಾಗಿ ಪೇಂಟ್ ಮಾಡಬಹುದು ಎಂದು ತಿಳಿದುಕೊಂಡಿರುವ ಮನೋಭಾವಕ್ಕೆ ಹೋಲಿಸಬಹುದು. ನಾನು ನಿಜವಾಗಿಯೂ ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತೇದೆನೆಂದರೆ, ನಾನು ಸುತ್ತಲಿನ ಎಲ್ಲರನ್ನೂ ಪ್ರೀತಿಸುತ್ತೇನೆ, ನಾನು ಇಡೀ ಜಗತ್ತನ್ನು ಪ್ರೀತಿಸುತ್ತೇನೆ, ನಾನು ಬದುಕನ್ನು ಪ್ರೀತಿಸುತ್ತೇನೆ. ನಾನು ನಿಜವಾಗಿ ಯಾರಿಗಾದರೂ “ ನಾನು ನಿನ್ನ ಪ್ರೀತಿಸುತ್ತೇನೆ “ ಎಂದು ಹೇಳಬಲ್ಲೆನಾದರೆ, ನನಗೆ “ ನಿನ್ನ ಮೂಲಕ ನಾನು ಎಲ್ಲರನ್ನೂ ಪ್ರೀತಿಸುತ್ತೇನೆ, ಇಡೀ ಜಗತ್ತನ್ನು ಪ್ರೀತಿಸುತ್ತೇನೆ, ನಿನ್ನೊಳಗೆ ನಾನು ನನ್ನನ್ನೂ ಪ್ರೀತಿಸುತ್ತೇನೆ “ ಎಂದು ಹೇಳುವುದೂ ಸಾಧ್ಯವಾಗಬೇಕು.
ಪ್ರೀತಿ ಒಂದು ಮನೋಭಾವ, ಅದು ಕೇವಲ ಒಬ್ಬ ವ್ಯಕ್ತಿಯ ಜೊತೆಗಿನದು ಮಾತ್ರವಲ್ಲ ಸುತ್ತಲಿನ ಎಲ್ಲರಿಗೂ ಸಂಬಂದಿಸಿದ್ದು ಎಂದು ನಾನು ಹೇಳಿದ ಮಾತ್ರಕ್ಕೆ, ಬೇರೆ ಬೇರೆ ರೀತಿಯ ಪ್ರೀತಿಗಳ ನಡುವೆ ಯಾವ ವ್ಯತ್ಯಾಸವೂ ಇಲ್ಲ ಎಂದಲ್ಲ, ಪ್ರೀತಿಸಲ್ಪಡುವ ವ್ಯಕ್ತಿ ಅಥವಾ ವಸ್ತು ಗಳ ವಿಶೇಷವನ್ನು ಆಧರಿಸಿ ಖಂಡಿತವಾಗಿ ನಾವು ವ್ಯತ್ಯಾಸಗಳನ್ನು ಗುರುತಿಸಬಹುದು.
ಸೋದರ ಪ್ರೀತಿ
ಸೋದರ ಪ್ರೀತಿ, ಅತ್ಯಂತ ಮೂಲಭೂತ ರೀತಿಯ ಪ್ರೀತಿ, ಎಲ್ಲ ಬಗೆಯ ಪ್ರೀತಿಗಳಲ್ಲೂ ಹಾಸುಹೊಕ್ಕಾಗಿರುವಂಥದು. ಹೀಗೆ ಹೇಳುವಾಗ ನನ್ನ ಮನಸ್ಸಿನಲ್ಲಿರುವುದು, ಪ್ರೀತಿಯ ಮೂಲಭೂತ ಅಂಶಗಳಾದ, ಜವಾಬ್ದಾರಿ, ಕಾಳಜಿ, ಗೌರವ, ಬೇರೆ ಯಾವುದೇ ಮನುಷ್ಯನ ಕುರಿತಾದ ತಿಳುವಳಿಕೆ, ಅವನ ಭವಿಷ್ಯದ ಬದುಕಿನ ಕುರಿತಾದ ಹಾರೈಕೆ. “ ನಿಮ್ಮ ನೆರೆಹೊರೆಯವರನ್ನು ನಿಮ್ಮ ಸೋದರರಂತೆ ಪ್ರೀತಿಸಿ” ಎಂದು ಬೈಬಲ್ ಹೇಳುವಾಗ, ಅದು ಈ ಬಗೆಯ ಪ್ರೀತಿಯನ್ನೇ ಹೇಳುತ್ತಿದೆ.
ಸೋದರ ಪ್ರೀತಿ ಎಲ್ಲ ಮನುಷ್ಯರನ್ನೂ ಒಳಗೊಂಡಿರುವ ಪ್ರೀತಿ; ಹೊರತುಪಡಿಸುವಿಕೆಯ (exclusiveness) ಅನುಪಸ್ಥಿತಿಯೇ ಇದರ ಮುಖ್ಯ ಗುಣಲಕ್ಷಣ. ನಾನು ಪ್ರೀತಿಸುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದೇನಾದರೆ, ನನ್ನ ಸೋದರ, ಸೋದರಿಯರನ್ನ ಪ್ರೀತಿಸುವುದರ ಹೊರತಾಗಿ ನನಗೆ ಬೇರೆ ದಾರಿಯಿಲ್ಲ. ಸೋದರ ಪ್ರೀತಿಯಲ್ಲಿ, ಎಲ್ಲ ಮನುಷ್ಯರೊಡನೆ ಒಂದಾಗುವ, ಮನುಷ್ಯರ ಒಗ್ಗಟ್ಟಿನ, ಮನುಷ್ಯರೆಲ್ಲ ಒಂದು, ಎನ್ನುವ ಅನುಭವವಿದೆ. ‘ ನಾವೆಲ್ಲ ಒಂದು’ ಎನ್ನುವ ಅನುಭವದ ಆಧಾರದ ಮೇಲೆ ಸೋದರ ಪ್ರೀತಿಯ ನಿರ್ಮಿತಿ. ಸೋದರ ಪ್ರೀತಿಯಲ್ಲಿ ಕೌಶಲ್ಯ, ಜಾಣತನ, ತಿಳುವಳಿಕೆಯಲ್ಲಿನ ವ್ಯತ್ಯಾಸಗಳು, ಎಲ್ಲ ಮನುಷ್ಯರಿಗೂ ಕಾಮನ್ ಆಗಿರುವ ಮನುಷ್ಯನ ಮೂಲ ತಿರುಳಿನ ಐಡೆಂಟಿಟಿಗೆ ಹೋಲಿಸಿದರೆ ನಿರ್ಲಕ್ಷಿಸಬಹುದಾಂಥವು. ಇಂಥದೊಂದು ಐಡೆಂಟಿಯ ಅನುಭವಕ್ಕಾಗಿ ಸಂಬಂಧದ ಪರಿಧಿಯಿಂದ ಪ್ರವೇಶ ಮಾಡಿ ತಿರುಳಿನವರೆಗೆ ಪ್ರಯಾಣ ಮಾಡಬೇಕಾಗುವುದು. ಇನ್ನೊಬ್ಬರನ್ನು ನಾನು ಕೇವಲ ಹೊರ ಮೇಲ್ಮೈಯಲ್ಲಿ ಮಾತ್ರ ಗ್ರಹಿಸಿದರೆ, ನಾನು ಕೇವಲ ನಮ್ಮನ್ನು ಪ್ರತ್ಯೇಕಿಸುವ ವ್ಯತ್ಯಾಸಗಳನ್ನು ಗ್ರಹಿಸಿದಂತಾಗುತ್ತದೆ. ಆದರೆ ನಾನು ಮೇಲ್ಮೈಯನ್ನು ಛೇದಿಸಿ ಒಳತಿರುಳನ್ನು ಮುಟ್ಟಿದೆನಾದರೆ, ಸಹೋದರತ್ವದ ಸತ್ಯವಾದ ನಮ್ಮ ಐಡೆಂಟಿಟಿಯನ್ನ ಗ್ರಹಿಸುತ್ತೇನೆ. ಇಬ್ಬರು ವ್ಯಕ್ತಿಗಳ ನಡುವಿನ ಮೇಲು ಮೇಲಿನ ಸಂಬಂಧಕ್ಕೆ ಬದಲಾಗಿ, ಅವರ ಒಳ ತಿರುಳುಗಳ ಸಂಬಂಧವೇ ನಿಜವಾದ ‘ ಕೇಂದ್ರ ಸಂಬಂಧ ‘. ಅಥವಾ ಸಿಮೋನ್ ವೇಲ್ ಸುಂದರವಾಗಿ ಹೇಳುವಂತೆ :
ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಹೇಳಿದ ಅದೇ ಮಾತುಗಳು ( ಉದಾಹರಣೆಗೆ, ಆಯ್ ಲವ್ ಯೂ ) ಆ ಮಾತುಗಳನ್ನು ಹೇಳಿದ ರೀತಿಯನ್ನು ಅವಲಂಬಿಸಿ ಅತಿ ಸಾಮಾನ್ಯವೂ ಅಥವಾ ಅತೀ ವಿಶೇಷವೂ ಅನ್ನಿಸಬಹುದು. ಮತ್ತು ಈ ಅಭಿವ್ಯಕ್ತಿಯ ರೀತಿ ಅವಲಂಬಿತವಾಗಿರುವುದು, ವ್ಯಕ್ತಿಯ ವ್ಯಕ್ತಿತ್ವದ ಯಾವ ಆಳದಿಂದ ಈ ಭಾವ ಒಡಮೂಡುತ್ತಿದೆ ಎನ್ನುವುದರ ಮೇಲೆ, ಮತ್ತು ಈ ಭಾವ ವ್ಯಕ್ತವಾಗುವುದು ಯಾವುದೇ ಇಚ್ಛಾಶಕ್ತಿಯ ನಿಯಂತ್ರಣವಿಲ್ಲದಂತೆ. ಅದ್ಭುತ ಸಂಗತಿಯೆಂದರೆ , ಒಬ್ಬ ವ್ಯಕ್ತಿ ತನ್ನ ವ್ಯಕ್ತಿತ್ವದ ಯಾವ ಆಳದಿಂದ ತನ್ನ ಭಾವನೆಗಳನ್ನು ವ್ಯಕ್ತಪಡಿಸಿರುತ್ತಾನೋ, ಆ ಭಾವನೆಗಳು ( ಆ ಅಭಿವ್ಯಕ್ತಿಗೆ ಗುರಿಯಾಗಿರುವ) ಇನ್ನೊಬ್ಬ ವ್ಯಕ್ತಿಯ ಅದೇ ಆಳಕ್ಕೆ ಹೋಗಿ ಮುಟ್ಟುತ್ತವೆ, ಮತ್ತು ಆ ಇನ್ನೊಬ್ಬ ವ್ಯಕ್ತಿಗೆ ವಿವೇಚನಾ ಶಕ್ತಿಯಿದ್ದಾಗ ಅವನು ಆ ಭಾವನೆಗಳ ಮೌಲ್ಯವನ್ನು ಅರ್ಥ ಮಾಡಿಕೊಳ್ಳುತ್ತಾನೆ. (11)*
ಸೋದರ ಪ್ರೇಮ, ಇಬ್ಬರು ಸಮಾನರ ನಡುವಿನ ಪ್ರೇಮ : ಆದರೆ ಸಮಾನರಾಗಿರುವಾಗಲೂ ನಾವು ‘ಯಾವಾಗಲೂ’ ಸಮಾನರಾಗಿರುವುದಿಲ್ಲ ; ಎಲ್ಲಿಯವರೆಗೆ ನಾವು ಮನುಷ್ಯರಾಗಿರುತ್ತೇವೆಯೋ ಅಲ್ಲಿಯವರೆಗೆ ನಮ್ಮೆಲ್ಲರಿಗೂ ಸಹಾಯದ ಅವಶ್ಯಕತೆಯಿದೆ, ಇವತ್ತು ನನಗೆ, ನಾಳೆ ನಿಮಗೆ. ಆದರೆ ಸಹಾಯದ ಅವಶ್ಯಕತೆ ಇದೆ ಎಂದ ಮಾತ್ರಕ್ಕೆ ಒಬ್ಬರು ಅಸಹಾಯಕರು ಮತ್ತು ಇನ್ನೊಬ್ಬರು ಸಾಮರ್ಥ್ಯಶಾಲಿಗಳು ಎಂದಲ್ಲ. ಅಸಹಾಯಕತೆ ಎನ್ನುವುದು ಒಂದು ಕ್ಷಣಿಕ ಸ್ಥಿತಿ; ತಮ್ಮ ಕಾಲ ಮೇಲೆ ತಾವು ನಿಲ್ಲುವುದು ಮತ್ತು ಓಡಾಡುವುದು ಮಾತ್ರ ಕಾಯಂ ಆದದ್ದು ಮತ್ತು ಸಾಮಾನ್ಯವಾದದ್ದು.
ಆದರೂ ಅಸಹಾಯಕರನ್ನು, ಬಡವರನ್ನು, ಅಪರಿಚಿತರನ್ನು ಪ್ರೀತಿಸುವುದರಲ್ಲಿ ಇದೆ ಸೋದರ ಪ್ರೇಮದ ಶುರುವಾತು. ಒಬ್ಬರನ್ನು ರಕ್ತದ ಕಾರಣವಾಗಿ, ದೇಹದ ಕಾರಣವಾಗಿ ಪ್ರೀತಿಸುವುದು ಅಂಥ ಸಾಧನೆಯೇನಲ್ಲ. ಪ್ರಾಣಿಗಳು ತಮ್ಮ ಮರಿಗಳನ್ನ ಪ್ರೀತಿಸುತ್ತವೆ ಮತ್ತು ಅವುಗಳ ಬಗ್ಗೆ ಕಾಳಜಿ ಮಾಡುತ್ತವೆ. ಅಸಹಾಯಕರು, ತಮ್ಮ ಬದುಕು ತಮ್ಮ ಒಡೆಯರ ಮೇಲೆ ಅವಲಂಬಿತವಾಗಿರುವುದರಿಂದ ಅವರನ್ನು ಪ್ರೀತಿಸುತ್ತಾರೆ; ಮಕ್ಕಳು, ತಮಗೆ ಅವಶ್ಯಕತೆ ಇರುವುದರಿಂದ ತಮ್ಮ ತಂದೆ ತಾಯಿಯರನ್ನು ಪ್ರೀತಿಸುತ್ತವೆ. ಯಾರ ಪ್ರೀತಿಯಲ್ಲಿ ಯಾವ ಉದ್ದೇಶವೂ ಇರುವದಿಲ್ಲವೋ ಅವರ ಪ್ರೀತಿಯಲ್ಲಿ ಮಾತ್ರ ಪ್ರೀತಿ ಅನಾವರಣಗೊಳ್ಳಲು ಶುರು ಮಾಡುತ್ತದೆ. ಬಹುಮುಖ್ಯವಾಗಿ, ಹಳೆಯ ಒಡಂಬಡಿಕೆಯಲ್ಲಿ (Old Testament ), ಮನುಷ್ಯ ಪ್ರೀತಿಯ ಕೇಂದ್ರ ವಸ್ತು , ಬಡವರು, ಅಪರಿಚಿತರು, ವಿಧವೆಯರು ಮತ್ತು ತಬ್ಬಲಿಗಳು; ಹಾಗು ಕೊನೆಗೆ ರಾಷ್ಟ್ರದ ವೈರಿಗಳಾದ ಈಜಿಪ್ತಿಯನ್ನರು ಮತ್ತು ಇಡೋಮೈಟರ್ ಗಳು ಕೂಡ. ಅಸಹಾಯಕರನ್ನು ಕುರಿತು ಅಂತಃಕರಣ ಹೊಂದುವುದರಿಂದ, ಮನುಷ್ಯ ತನ್ನ ಸೋದರ, ಸೋದರಿಯರ ಕುರಿತಾಗಿ ಪ್ರೀತಿಯನ್ನ ಬೆಳೆಸಿಕೊಳ್ಳುತ್ತಾನೆ. ಮತ್ತು ಅವನು ತನ್ನನ್ನೇ ಪ್ರೀತಿಸಿಕೊಳ್ಳುವಾಗಲೂ ಪ್ರೀತಿಯ ಅವಶ್ಯಕತೆ ಇರುವ ದುರ್ಬಲರನ್ನೂ, ಅಸುರಕ್ಷತೆಯ ಭಾವ ಹೊಂದಿರುವವರನ್ನು ಪ್ರೀತಿಸುತ್ತಾನೆ. ಅಂತಃಕರಣ ಎಂದಾಗ ಅದರಲ್ಲಿ ಇನ್ನೊಬ್ಬರ ಕುರಿತಾದ ತಿಳುವಳಿಕೆಯೂ, ಇತರರನ್ನು ತನ್ನಂತೆಯೇ ಎಂದು ತಿಳಿಯುವ ಅಂಶಗಳೂ ಅಡಕವಾಗಿವೆ.
“ ಈಜಿಪ್ತನ ನೆಲದಲ್ಲಿ ನೀವು ಅಪರಿಚಿತರಾಗಿರುವುದರಿಂದ, ನೀವು ಅಪರಿಚಿತರ ಹೃದಯವನ್ನು ಅರ್ಥ ಮಾಡಿಕೊಳ್ಳಬಲ್ಲಿರಿ…… ಆದ್ದರಿಂದ ಅಪರಿಚಿತರನ್ನು ಪ್ರೀತಿಸಿ “ ಎನ್ನುತ್ತದೆ ಹಳೆಯ ಒಡಂಬಡಿಕೆ. (12)*
(11)* Gravity & Grace, Simone Weil, London, Routledge, 1955.
(12)* The same idea has been expressed by Hermann Cohen in his Religion der Vernunft aus Quellen des Judentums, 2nd edition, J. Kaufmann Verlag, Frankfurt am Main, 1929, page 168 ff.
(ಮುಂದುವರಿಯುವುದು…)