ತಾಯಿಯ ಪ್ರೀತಿ : Art of love #21

ಮಗುವಿನ ಬೇರ್ಪಡುವಿಕೆಯನ್ನು ತಾಯಿ ಸಹಿಸುವುದಷ್ಟೇ ಅಲ್ಲ, ಬೆಂಬಲಿಸಬೇಕು ಕೂಡ. ಈ ಹಂತದಲ್ಲಿಯೇ ತಾಯಿ ಪ್ರೀತಿ ತುಂಬ ಕಠಿಣ ಸಂಗತಿಯಾಗುವುದು. ಮತ್ತು ಈ ಹಂತದಲ್ಲಿಯೇ ತಾಯಿ ಪ್ರೀತಿಗೆ ನಿಸ್ವಾರ್ಥದ, ಮಗುವಿಗೆ ಎಲ್ಲವನ್ನೂ ಕೊಡುವ ಮತ್ತು ಮಗುವಿನ ಸಂತೋಷವನ್ನು ಹೊರತುಪಡಿಸಿ ಯಾವುದನ್ನೂ ಪ್ರತಿಯಾಗಿ ನಿರೀಕ್ಷಿಸದ ಸಾಮರ್ಥ್ಯದ ಅವಶ್ಯಕತೆಯಿರುವುದು. ಈ ಹಂತದಲ್ಲಿಯೇ ಬಹಳಷ್ಟು ತಾಯಂದಿರು ತಮ್ಮ ತಾಯಿ ಪ್ರೀತಿಯ ಸಮರ್ಥ ಅಭಿವ್ಯಕ್ತಿಯಲ್ಲಿ ಸೋಲನಪ್ಪಿಕೊಳ್ಳುವುದು… | ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ

ನಾವು ಈಗಾಗಲೇ ತಾಯಿ ಪ್ರೀತಿ ಮತ್ತು ತಂದೆ ಪ್ರೀತಿಯ ನಡುವಿನ ವ್ಯತ್ಯಾಸಗಳನ್ನು ಚರ್ಚಿಸಿದ
ಹಿಂದಿನ ಅಧ್ಯಾಯದಲ್ಲಿ ತಾಯಿ ಪ್ರೀತಿಯ ಸ್ವಭಾವದ ಬಗ್ಗೆ ಚರ್ಚಿಸಿದ್ದೇವೆ. ಅಲ್ಲಿ ನಾನು ಹೇಳಿದಂತೆ ತಾಯಿ ಪ್ರೀತಿ, ಯಾವುದೇ ಷರತ್ತಿಲ್ಲದೇ ಮಗುವಿನ ಬದುಕು ಮತ್ತು ಅವಶ್ಯಕತೆಗಳನ್ನು ನಿಭಾಯಿಸುವುದು. ಆದರೆ ಈ ವಿವರಣೆಗೆ, ಇಲ್ಲಿ ಒಂದು ಬಹು ಮುಖ್ಯವಾದ ಅಂಶವನ್ನು ಸೇರಿಸಬೇಕಾಗಿದೆ. ಮಗುವಿನ ಪೋಷಣೆಗೆ ಎರಡು ನೆಲೆಗಳಿವೆ ; ಮೊದಲನೇಯದು, ಮಗುವಿನ ಬದುಕು ಮತ್ತು ಬೆಳವಣಿಗೆಗೆ ಅತ್ಯವಶ್ಯಕವಾಗಿ ಬೇಕಾಗಿರುವ ಕಾಳಜಿ ಮತ್ತು ಜವಾಬ್ದಾರಿ. ಮತ್ತು ಎರಡನೇಯದು ಕೇವಲ ಪೋಷಣೆಗಿಂತಲೂ ಇನ್ನೂ ಹೆಚ್ಚು ಆಳವಾದದ್ದು, ಮಗುವಿನಲ್ಲಿ ಬದುಕಿನ ಕುರಿತಾದ ಪ್ರೀತಿಯನ್ನು ಸ್ಥಾಪಿಸುವಂಥದು ಮತ್ತು ಈ ಮೂಲಕ ಬದುಕಿನಲ್ಲಿ ಜೀವಂತಿಕೆಯನ್ನು ಹೊಂದುವುದು ಒಳ್ಳೆಯದು, ಯಾವುದೇ ಲಿಂಗತ್ವದ ಪುಟ್ಟ ಮಗುವಾಗಿರುವುದು ಒಳ್ಳೆಯದು, ಈ ಭೂಮಿಯ ಮೇಲೆ ಬದುಕುವುದು ಒಳ್ಳೆಯದು ಎನ್ನುವ ಭಾವನೆಗಳನ್ನು ಮಗುವಿನಲ್ಲಿ ಹುಟ್ಟು ಹಾಕುವುದು. ತಾಯಿ ಪ್ರೀತಿಯ ಈ ಎರಡು ನೆಲೆಗಳನ್ನು ಬೈಬಲ್ ನ ಸೃಷ್ಟಿಯ ಕುರಿತಾದ ಕಥೆ ಹೀಗೆ ಸಂಗ್ರಹವಾಗಿ ಹೇಳುತ್ತದೆ : ದೇವರು ಜಗತ್ತು ಮತ್ತು ಮನುಷ್ಯನನ್ನು ಸೃಷ್ಟಿಸುತ್ತಾನೆ. ಇದು ತಾಯಿ ಪ್ರೀತಿಯ ಒಂದು ನೆಲೆಯಾದ, ಮಗುವಿನ ಕಾಳಜಿ ಮತ್ತು ಪೋಷಣೆಗೆ ಸಂಬಂಧಿಸಿದ್ದು. ಆದರೆ ದೇವರು ಈ ಕನಿಷ್ಟ ಅವಶ್ಯಕತೆಯನ್ನು ಮೀರಿ ಮುಂದುವರೆಯುತ್ತಾನೆ. ಪ್ರಕೃತಿ ಮತ್ತು ಮನುಷ್ಯನನ್ನು ಸೃಷ್ಟಿಸಿ ಆದಮೇಲೆ ಪ್ರತಿದಿನ ದೇವರು “ ಎಷ್ಟು ಚೆನ್ನಾಗಿದೆ ಇದು “ ಎಂದು ಉದ್ಗಾರ ಮಾಡುತ್ತಾನೆ. ಇದು ತಾಯಿ ಪ್ರೀತಿಯ ಇನ್ನೊಂದು ನೆಲೆ ; ಮಗುವಿನಲ್ಲಿ ಕೇವಲ ಜೀವಿಸಬೇಕೆಂಬ ಬಯಕೆಯನ್ನಷ್ಟೇ ಅಲ್ಲ, ಬದುಕಿನ ಕುರಿತು ಪ್ರೀತಿಯನ್ನೂ ಹುಟ್ಟಿಸುವುದು, ನಾನು ಹುಟ್ಟಿರುವುದು ಒಳ್ಳೆಯದಾಯಿತು ಎನ್ನುವ ಭರವಸೆಯನ್ನು ಮಗುವಿನಲ್ಲಿ ಮೂಡಿಸುವುದು. ಬೈಬಲ್ ನ ಇನ್ನೊಂದು ಸಾಂಕೇತಿಕತೆಯಲ್ಲೂ ಇದೇ ಐಡಿಯಾ, ಫಲವತ್ತಾದ ಭೂಮಿ ( ಭೂಮಿ ಯಾವಾಗಲೂ ತಾಯಿಯ ಸಂಕೇತ )ಯನ್ನು ಹಾಲು ಮತ್ತು ಜೇನಿನಿಂದ ತುಂಬಿ ಹರಿಯುತ್ತಿರುವುದಾಗಿ ವರ್ಣಿಸುವ ಮೂಲಕ ವ್ಯಕ್ತಪಡಿಸಲಾಗಿದೆ. ಹಾಲು, ತಾಯಿ ಪ್ರೀತಿಯ ಮೊದಲ ನೆಲೆಯ ಸಂಕೇತ, ಕಾಳಜಿ ಮತ್ತು ಪೋಷಣೆಗೆ ಸಂಬಂಧಿಸಿದ್ದು. ಜೇನು, ಬದುಕಿನ ಸಿಹಿಗೆ ಸಂಕೇತ, ಬದುಕಿನ ಕುರಿತಾದ ಪ್ರೀತಿ ಮತ್ತು ಖುಶಿಗೆ ಸಂಬಂಧಿಸಿದ್ದು. ಬಹುತೇಕ ತಾಯಂದಿರು ತಮ್ಮ ಮಗುವಿಗೆ ಹಾಲು ದೊರಕುವಂತೆ ಮಾಡುವಲ್ಲಿ ಸಮರ್ಥರು ಆದರೆ ಕೆಲವೇ ಕೆಲವು ತಾಯಂದಿರಿಗೆ ಮಾತ್ರ ಮಗುವಿಗೆ ಹಾಲಿನ ಜೊತೆ ಜೇನು ಉಣಿಸುವುದು ಸಾಧ್ಯ. ಮಗುವಿಗೆ ಜೇನು ದೊರಕುವಂತೆ ಮಾಡಬೇಕಾದರೆ, ತಾಯಿ ಒಳ್ಳೆಯವಳಾಗಿದ್ದರಷ್ಟೇ ಸಾಲದು, ಖುಶಿಯನ್ನು ಹೊಂದಿರುವವಳೂ ಆಗಿರಬೇಕು, ಮತ್ತು ಈ ಗುರಿಯನ್ನು ತಲುಪುವುದು ಬಹಳಷ್ಟು ತಾಯಂದಿರಿಗೆ ಸಾಧ್ಯವಾಗಿರುವುದಿಲ್ಲ. ಈ ಕಾರಣ ಮಗುವಿನ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎನ್ನುವುದನ್ನು ವಿಶದವಾಗಿ ಹೇಳುವುದು ಕಷ್ಟ. ತಾಯಿಯ ಜೀವನ ಪ್ರೀತಿ ಅವಳ ಆತಂಕದಂತೆಯೇ ಸಾಂಕ್ರಾಮಿಕವಾದದ್ದು. ಎರಡೂ ದೃಷ್ಟಿಕೋನಗಳು ಮಗುವಿನ ಪೂರ್ಣ ವ್ಯಕ್ತಿತ್ವದ ಮೇಲೆ ಆಳವಾದ ಪರಿಣಾಮ ಬೀರುವಂಥವು ; ಮಕ್ಕಳು ಮತ್ತು ವಯಸ್ಕರಲ್ಲಿ ಯಾರಿಗೆ ‘ಹಾಲು’ ಮಾತ್ರ ಸಿಕ್ಕಿದೆ, ಮತ್ತು ಯಾರಿಗೆ ‘ ಹಾಲು ಮತ್ತು ಜೇನು ‘ ಎರಡು ಸಿಕ್ಕಿದೆ ಎನ್ನುವುದನ್ನ ಬೇರ್ಪಡಿಸಿ ನೋಡಬಹುದಾಗಿದೆ.

ಸಮಾನರ ನಡುವಿನ ಪ್ರೀತಿಗಳಾದ, ಸೋದರ ಪ್ರೀತಿ (Brotherly Love ) ಮತ್ತು ಕಾಮ ಕೇಂದ್ರಿತ ಪ್ರೀತಿಗೆ (Erotic Love) ವ್ಯತಿರಿಕ್ತವಾಗಿ, ತಾಯಿ ಮತ್ತು ಮಗುವಿನ ನಡುವಿನ ಸಂಬಂಧ ತನ್ನ ಸ್ವರೂಪದಲ್ಲಿಯೇ ಇಬ್ಬರು ಅಸಮಾನರ ನಡುವಿನ ಬಾಂಧವ್ಯ, ಈ ಸಂಬಂಧದಲ್ಲಿ ಒಬ್ಬರಿಗೆ ಎಲ್ಲ ಸಹಾಯದ ಅವಶ್ಯಕತೆ ಇದ್ದರೆ, ಇನ್ನೊಬ್ಬರಿಗೆ ಆ ಅವಶ್ಯಕತೆಯನ್ನ ಪೂರೈಸುವ ಹೊಣೆಗಾರಿಕೆ ಇದೆ. ಇಂಥ ನಿಸ್ವಾರ್ಥ, ಪರೋಪಕಾರಿ ಗುಣಗಳಿಗಾಗಿಯೇ ತಾಯಿ ಪ್ರೀತಿಯನ್ನು ಅತ್ಯಂತ ಶ್ರೇಷ್ಠ ಪ್ರೀತಿಯೆಂದೂ, ಮತ್ತು ಎಲ್ಲ ಭಾವನಾತ್ಮಕ ಸಂಬಂಧಗಳಲ್ಲಿ ಅತ್ಯಂತ ಪವಿತ್ರ ಎಂದೂ ಪರಿಗಣಿಸಲಾಗಿದೆ. ತಾಯಿ ಪ್ರೀತಿಯ ನಿಜವಾದ ಸಾಧನೆಯಿರುವುದು ಬೆಳೆಯುತ್ತಿರುವ ಮಗುವಿನ ಜೊತೆಗಿನ ಅವಳ ಪ್ರೀತಿಯಲ್ಲಿಯೇ ಹೊರತು ಪುಟ್ಟ ಶಿಶುವಿನ ಜೊತೆಗಿನ ಅವಳ ಪ್ರೀತಿಯಲ್ಲಿಲ್ಲ.

ವಾಸ್ತವದಲ್ಲಿ ಬಹುತೇಕ ತಾಯಂದಿರು, ಶಿಶು ಇನ್ನೂ ಬಹಳ ಚಿಕ್ಕದಿರುವಾಗ, ಮತ್ತು ಎಲ್ಲಕ್ಕೂ ತನ್ನ ಮೇಲೆ ಅವಲಂಬಿತವಾಗಿರುವಾಗ ಮಾತ್ರ ಪ್ರೀತಿಯ ತಾಯಂದಿರಾಗಿರುತ್ತಾರೆ. ಬಹಳಷ್ಟು ಹೆಂಗಸರಿಗೆ ಮಕ್ಕಳು ಬೇಕು, ಹೊಸದಾಗಿ ಹುಟ್ಟಿರುವ ಮಗುವಿನ ಬಗ್ಗೆ ಅವರಲ್ಲಿ ಖುಶಿ ಇದೆ, ಮತ್ತು ಅಂಥ ಮಗುವಿನ ಆರೈಕೆಯ ಬಗ್ಗೆ ಅವರಲ್ಲಿ ಕಾತುರತೆ ಇದೆ. ಈ ಪ್ರೀತಿ, ಈ ಕಾಳಜಿಯ ಬದಲಿಗೆ ಮಗುವಿನಿಂದ ಒಂದು ನಗು, ಒಂದು ಸಂತೃಪ್ತ ಭಾವದ ಹೊರತಾಗಿ ಬೇರೆ ಏನೂ ಸಿಗುವುದಿಲ್ಲ ಎನ್ನುವುದು ಗೊತ್ತಿದ್ದರೂ ತಾಯಿ ತನ್ನ ಪ್ರೀತಿಯಿಂದ ಹಿಂದೆ ಸರಿಯುವುದಿಲ್ಲ. ಪ್ರೀತಿಯ ಈ ಮನೋಭಾವ ಹೆಂಗಸರಲ್ಲಿ ಮತ್ತು ಪ್ರಾಣಿಗಳಲ್ಲಿ ಕಂಡುಬರುವ ಸ್ವಭಾವಜನ್ಯ ಅಂಶದಲ್ಲಿ (Instinctive equipment ) ಆಂಶಿಕವಾಗಿ ತನ್ನ ಮೂಲವನ್ನು ಹೊಂದಿದೆ ಎಂದನಿಸುತ್ತದೆ. ಆದರೆ ಈ ಸ್ವಭಾವಜನ್ಯ ಅಂಶದ ಪ್ರಭಾವ ಎಷ್ಟೇ ಇರಲಿ, ಕೆಲ ಮನುಷ್ಯ ಕೇಂದ್ರಿತ ಮನೋವೈಜ್ಞಾನಿಕ ಅಂಶಗಳೂ ಈ ಬಗೆಯ ತಾಯಿ ಪ್ರೀತಿಗೆ ಕಾರಣವಾಗಿವೆ. ಕೆಲವರಿಗೆ ತಾಯಿ ಪ್ರೀತಿಯಲ್ಲಿ ಸ್ವಮೋಹದ (narcissistic) ಅಂಶ ಕಂಡುಬರಬಹುದು. ಎಲ್ಲಿಯವರೆಗೆ ಮಗು ತಾಯಿಯ ಒಂದು ಭಾಗದಂತೆ ಇರುತ್ತದೆಯೋ ಅಲ್ಲಿಯವರೆಗೆ ಮಗುವಿನ ಕುರಿತಾದ ಅವಳ ಪ್ರೀತಿ ಮತ್ತು ಮೋಹ ಅವಳ ಸ್ವಮೋಹವನ್ನು ತೃಪ್ತಿಪಡಿಸುವ ಅಂಶವಾಗಿರಬಹುದು. ತಾಯಿ ಪ್ರೀತಿಗೆ ಇನ್ನೊಂದು ಪ್ರೇರಣೆ, ಅಧಿಕಾರ ಅಥವಾ ಸ್ವಾಮಿತ್ವವನ್ನು ಹೊಂದುವ ಅವಳ ಬಯಕೆಯಲ್ಲಿದೆ. ಮಗು ಅಸಹಾಯಕವಾಗಿರುವಾಗ, ಮತ್ತು ಪೂರ್ಣವಾಗಿ ಅವಳ ಹತೋಟಿಯಲ್ಲಿರುವಾಗ , ಅದು ತಾಯಿಯ ದರ್ಪದ ಸ್ವಭಾವವನ್ನು ಮತ್ತು ಒಡೆತನ ಸಾಧಿಸುವ ಬಯಕೆಯನ್ನು ತೃಪ್ತಿಪಡಿಸುವ ಸಹಜ ಸಂಗತಿಯಾಗಿ ಒದಗಿ ಬರುತ್ತದೆ.

ತಾಯಿ ಪ್ರೀತಿಗೆ ಇಂಥ ಪ್ರೇರಣೆಗಳು ಹೆಚ್ಚಾಗಿ ಕಂಡುಬಂದರೂ, ಮನುಷ್ಯನ ಮೀರುವಿಕೆಯ (transcendence) ಅವಶ್ಯಕತೆಯಂಥ ಪ್ರೇರಣೆಗೆ ಹೋಲಿಸಿದರೆ ಅವು ಅಂಥ ಮಹತ್ವದ್ದೂ ಅಲ್ಲ ಹಾಗು ಅಷ್ಟು ಸಾರ್ವತ್ರಿಕವೂ ಅಲ್ಲ. ಈ ಮೀರುವ ಅವಶ್ಯಕತೆ, ಮನುಷ್ಯನ ಅತ್ಯಂತ ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ಹಾಗು ಅದು ತನ್ನ ಬೇರುಗಳನ್ನ ಕಂಡುಕೊಂಡಿರುವುದು ಅವನ ಸ್ವಂತಿಕೆಯ ಅರಿವಿನಲ್ಲಿ ( Self awareness), ಪ್ರಾಣಿಗಳಂಥ ಬದುಕು ತನಗೆ ತೃಪ್ತಿದಾಯಕವಲ್ಲ ಎನ್ನುವ ಸಂಗತಿಯಲ್ಲಿ, ಮತ್ತು ತನ್ನನ್ನು ಕುಲುಕಿ ಎಸೆಯಲಾದ ದಾಳವೆಂದು ಒಪ್ಪಿಕೊಳ್ಳಲಾಗದ ಸ್ಥಿತಿಯಲ್ಲಿ. ತಾನು ಸೃಷ್ಟಿಕರ್ತ ಎನ್ನುವ ಭಾವವನ್ನು ಅವನು ಅನುಭವಿಸಬೇಕು, ತಾನು ಯಾರಿಂದಲೋ ಸೃಷ್ಟಿಸಲ್ಪಟ್ಟವನು ಎನ್ನುವ ನಿಷ್ಕ್ರೀಯ ಪಾತ್ರವನ್ನು ಅವನು ಮೀರಬೇಕು.

ಮನುಷ್ಯ ಸೃಷ್ಟಿಕರ್ತನೆನಸಿಕೊಳ್ಳುವ ಬಯಕೆಯನ್ನು ಪೂರೈಸಿಕೊಳ್ಳಲು ಬಹಳಷ್ಟು ದಾರಿಗಳಿವೆ ; ಈ ದಾರಿಗಳಲ್ಲಿ ಅತ್ಯಂತ ಸಹಜವಾದದ್ದು ಮತ್ತು ಸಾಧಿಸಲು ತುಂಬ ಸುಲಭವಾದದ್ದು ತನ್ನ ಸೃಷ್ಟಿಯ ಕುರಿತಾದ ತಾಯಿಯ ಪ್ರೀತಿ ಮತ್ತು ಕಾಳಜಿ. ಮಗುವಿನಲ್ಲಿ ಅವಳು ತನ್ನನ್ನು ತಾನು ಮೀರುತ್ತಾಳೆ, ಮಗುವಿಗಾಗಿ ಇರುವ ಅವಳ ಪ್ರೀತಿ, ಅವಳ ಬದುಕಿಗೆ ಅರ್ಥವನ್ನೂ, ಮಹತ್ವವನ್ನೂ ದೊರಕಿಸಿಕೊಡುತ್ತದೆ. ( ಗಂಡಸಿಗೆ ಮಗುವನ್ನು ಹೆತ್ತು ತನ್ನ ಮೀರುವಿಕೆಯನ್ನು ಸಾಧಿಸುವ ಅವಕಾಶವಿಲ್ಲದಿರುವುದರಿಂದ , ಅವನು ಮನುಷ್ಯ ನಿರ್ಮಿತ ವಸ್ತುಗಳ ಸೃಷ್ಟಿಯಲ್ಲಿ ಮತ್ತು ವಿಚಾರ ಸಿದ್ಧಾಂತಗಳ ಹುಟ್ಟು ಹಾಕುವಿಕೆಯ ಮೂಲಕ ತನ್ನ ಈ ಬಯಕೆಯನ್ನು ಪೂರೈಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. )

ಆದರೆ ಮಗು ಬೆಳೆಯಲೇ ಬೇಕು. ಅದು ತನ್ನ ತಾಯಿಯ ಗರ್ಭವನ್ನ, ತಾಯಿಯ ಮೊಲೆಗಳ ಸಂಬಂಧವನ್ನು ದಾಟಬೇಕು ; ಕೊನೆಗೆ ಅದು, ಸಂಪೂರ್ಣ ಮನುಷ್ಯ ಜೀವಿಯಾಗಿ ಪ್ರತ್ಯೇಕ ಅಸ್ತಿತ್ವವನ್ನು ಹೊಂದಬೇಕು. ತಾಯಿ ಪ್ರೀತಿಯ ಮೂಲ ತಿರುಳೇ, ಮಗುವಿನ ಬೆಳವಣಿಗೆಗಾಗಿ ಕಾಳಜಿ ಮಾಡುವುದು. ಹಾಗೆಂದರೆ, ತನ್ನಿಂದ ಮಗುವಿನ ಬೇರ್ಪಡುವಿಕೆಯನ್ನು ಬಯಸುವುದು. ಇಲ್ಲಿಯೇ ನಾವು ತಾಯಿ ಪ್ರೀತಿಗೂ, ಕಾಮ ಕೇಂದ್ರಿತ ಪ್ರೀತಿಗೂ ಮೂಲ ವ್ಯತ್ಯಾಸವನ್ನು ಗುರುತಿಸಬಹುದು.

ಕಾಮ ಕೇಂದ್ರೀತ ಪ್ರೀತಿಯಲ್ಲಿ ಇಬ್ಬರು ಬೇರೆ ಬೇರೆ ಮನುಷ್ಯರು ಒಂದಾದರೆ, ತಾಯಿ ಪ್ರೀತಿಯಲ್ಲಿ ಒಂದಾಗಿರುವ ಇಬ್ಬರು ಮನುಷ್ಯರು ಬೇರೆ ಬೇರೆಯಾಗುವರು. ಮಗುವಿನ ಬೇರ್ಪಡುವಿಕೆಯನ್ನು ತಾಯಿ ಸಹಿಸುವುದಷ್ಟೇ ಅಲ್ಲ, ಬೆಂಬಲಿಸಬೇಕು ಕೂಡ. ಈ ಹಂತದಲ್ಲಿಯೇ ತಾಯಿ ಪ್ರೀತಿ ತುಂಬ ಕಠಿಣ ಸಂಗತಿಯಾಗುವುದು. ಮತ್ತು ಈ ಹಂತದಲ್ಲಿಯೇ ತಾಯಿ ಪ್ರೀತಿಗೆ ನಿಸ್ವಾರ್ಥದ, ಮಗುವಿಗೆ ಎಲ್ಲವನ್ನೂ ಕೊಡುವ ಮತ್ತು ಮಗುವಿನ ಸಂತೋಷವನ್ನು ಹೊರತುಪಡಿಸಿ ಯಾವುದನ್ನೂ ಪ್ರತಿಯಾಗಿ ನಿರೀಕ್ಷಿಸದ ಸಾಮರ್ಥ್ಯದ ಅವಶ್ಯಕತೆಯಿರುವುದು. ಈ ಹಂತದಲ್ಲಿಯೇ ಬಹಳಷ್ಟು ತಾಯಂದಿರು ತಮ್ಮ ತಾಯಿ ಪ್ರೀತಿಯ ಸಮರ್ಥ ಅಭಿವ್ಯಕ್ತಿಯಲ್ಲಿ ಸೋಲನಪ್ಪಿಕೊಳ್ಳುವುದು. ಸ್ವ ಮೋಹದ, ದರ್ಪದ, ಅತಿ ವ್ಯಾಮೋಹಿ ಹೆಣ್ಣು, ಮಗು ತುಂಬ ಚಿಕ್ಕದಾಗಿರುವವರೆಗೆ ಮಾತ್ರ ‘ಪ್ರೀತಿಯ’ ತಾಯಿಯಾಗಿರಬಲ್ಲಳು. ಕೇವಲ ನಿಜವಾದ ಪ್ರೀತಿಯ ತಾಯಿ, ಪಡೆಯುವುದಕ್ಕಿಂತ ಕೊಡುವುದರಲ್ಲಿ ಖುಶಿ ಅನುಭವಿಸುವ ಹೆಣ್ಣು, ತನ್ನ ಸ್ವಂತ ಅಸ್ತಿತ್ವದಲ್ಲಿ ಗಟ್ಟಿಯಾಗಿ ಬೇರೂರಿರುವ ಹೆಣ್ಣು ಮಾತ್ರ, ಮಗು ಬೇರ್ಪಡುವ ಸಂದರ್ಭದಲ್ಲಿಯೂ ಪ್ರೀತಿಯ ತಾಯಿಯಾಗಿರಬಲ್ಲಳು.

ಬೆಳೆಯುತ್ತಿರುವ ಮಗುವಿಗಾಗಿನ ತಾಯಿಯ ಪ್ರೀತಿ, ತನಗಾಗಿ ಏನನ್ನೂ ಬಯಸದ ತಾಯಿಯ ಪ್ರೀತಿ, ಎಲ್ಲ ರೀತಿಯ ಪ್ರೀತಿಗಳಲ್ಲಿ ಬಹುಶಃ ಸಾಧಿಸಲು ಅತ್ಯಂತ ಕಷ್ಟಕರವಾದದ್ದು ಮತ್ತು ತಾಯಿ, ಮಗುವನ್ನು ಅತ್ಯಂತ ನಿರಾಯಾಸವಾಗಿ ಪ್ರೀತಿಸಬಲ್ಲಳಾದ್ದರಿಂದ ದಾರಿ ತಪ್ಪಿಸುವಂಥದ್ದು ಕೂಡ. ಆದರೆ ಕೇವಲ ಈ ಕಠಿಣತೆಯ ಕಾರಣವಾಗಿಯೇ ಹೆಣ್ಣು, ನಿಜವಾದ ಪ್ರೀತಿಯ ತಾಯಿಯಾಗುವುದು ಆಕೆಗೆ ಪ್ರೀತಿಸುವ ಸಾಮರ್ಥ್ಯ ಇದ್ದಾಗ ಮಾತ್ರ ; ಆಕೆ ತನ್ನ ಗಂಡನನ್ನ ಪ್ರೀತಿಸಬಲ್ಲಳಾದರೆ, ಆಕೆ ತನ್ನ ಇತರ ಮಕ್ಕಳನ್ನ, ಅಪರಿಚಿತರನ್ನ, ಎಲ್ಲ ಮನುಷ್ಯರನ್ನೂ ಪ್ರೀತಿಸಬಲ್ಲಳಾದರೆ ಮಾತ್ರ. ಈ ಅರ್ಥದಲ್ಲಿ ಪ್ರೀತಿಸಲು ಅಸಮರ್ಥಳಾದ ಹೆಣ್ಣು, ಮಗು ಚಿಕ್ಕದಾಗಿರುವವರೆಗೆ ಮಾತ್ರ ಮಮತೆಯ ತಾಯಿಯಾಗಬಲ್ಲಳು, ಆದರೆ ಆಕೆಗೆ ಮಗುವಿನ ಬೇರ್ಪಡಿಕೆಯನ್ನು ಸಹಿಸಲು ಅಸಾಧ್ಯವಾದಾಗ ಮತ್ತು ಬೇರ್ಪಡುವಿಕೆಯ ನಂತರವೂ ಮಗುವನ್ನು ಪ್ರೀತಿಸುವುದು ಸಾಧ್ಯವಾಗದ ಸ್ಥಿತಿಯಲ್ಲಿ ಆಕೆ ಪ್ರೀತಿಯ ತಾಯಿಯಾಗಲಾರಳು.

1 Comment

Leave a Reply