ನದಿ ದಾಟುವುದು ಹೇಗೆ? : ಓಶೋ ವ್ಯಾಖ್ಯಾನ

ನೀರಿನೊಳಗೆ ಇಳಿಯಬೇಕು, ನೀರಿನ ಆಳಕ್ಕೆ ಪ್ರವೇಶ ಮಾಡಬೇಕು. ನೀರಿನ ಆಳವನ್ನು ತಲುಪಿ ಕಮಲವಾಗಿಬಿಡಬೇಕು. ಎಲ್ಲ ಬಗೆಯ ನದಿಗಳನ್ನು ದಾಟಬೇಕು, ಎಲ್ಲ ಬಗೆಯ ಅನುಭವಗಳಿಗೆ ಖುಶಿಯಿಂದ ತೆರೆದುಕೊಳ್ಳಬೇಕು. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಎಲ್ಲ ದಿಕ್ಕುಗಳಲ್ಲಿ ಪ್ರಯಾಣ ಮಾಡಬೇಕು ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ 

ಒಮ್ಮೆ ಒಬ್ಬ ಝೆನ್ ಮಾಸ್ಟರ್ ತನ್ನ ಶಿಷ್ಯನೊಂದಿಗೆ ಕಾಡಿನಲ್ಲಿ ಪ್ರಯಾಣ ಮಾಡುತ್ತಿದ್ದ. ದಾರಿಯುದ್ದಕ್ಕೂ ಶಿಷ್ಯ ಕೇಳುತ್ತಿದ್ದ ಪ್ರಶ್ನೆಗಳಿಗೆ ಮಾಸ್ಟರ್ ಉತ್ತರ ಕೊಡುತ್ತ ಅವನ ಸಂಶಯಗಳನ್ನು ಪರಿಹಾರ ಮಾಡುತ್ತಿದ್ದ. ಅವರು ಕಾಡಿನಲ್ಲಿ ಮುಂದೆ ಸಾಗುತ್ತಿದ್ದಾಗ, ಅವರಿಗೆ ಒಂದು ಪುಟ್ಟ ನದಿ ಅಡ್ಡ ಬಂದಿತು. ಶಿಷ್ಯ, ಮಾಸ್ಟರ್ ನ ಪ್ರಶ್ನೆ ಮಾಡಿದ,

“ಮಾಸ್ಟರ್ ಈ ನದಿ ದಾಟುವುದು ಹೇಗೆ? “

ಮಾಸ್ಟರ್ ಶಿಷ್ಯನ ಪ್ರಶ್ನೆಗೆ ಉತ್ತರಿಸಿದ, “ ನಿನ್ನ ಪಾದಗಳಿಗೆ ನೀರು ತಾಕದಂತೆ ನದಿಯನ್ನು ದಾಟಬೇಕು. “ ಮಾಸ್ಟರ್ ಮಾತು ಕೇಳಿ ಶಿಷ್ಯನಿಗೆ ಆಶ್ಚರ್ಯವಾಯಿತು. ಶಿಷ್ಯ ನದಿ ದಾಟುತ್ತಿದ್ದ ಮಾಸ್ಟರ್ ಕಾಲುಗಳನ್ನ ನೋಡಿದ, ಅವು ನೀರಿನಿಂದ ಒಧ್ದೆಯಾಗಿದ್ದವು.

“ ಆದರೆ ಮಾಸ್ಚರ್ ನಿಮ್ಮ ಪಾದಗಳು ನೀರಿನಿಂದ ಒದ್ದೆಯಾಗಿವೆಯಲ್ಲ” ಶಿಷ್ಯ ಮಾಸ್ಟರ್ ಉತ್ತರದ ಬಗ್ಗೆ ತನ್ನ ಸಂಶಯ ವ್ಯಕ್ತಪಡಿಸಿದ.

“ ಒದ್ದೆಯಾಗಿರುವುದು ನನ್ನ ಪಾದದ ಹೊರ ಮೈ ಮಾತ್ರ, ಆದರೆ ಆ ಹಸಿ ನನ್ನ ಒಳಗನ್ನು ತಲುಪಿಲ್ಲ. ಈಗಲೂ ನನ್ನ ಒಳಗು ಒದ್ದೆಯಾಗಿಲ್ಲ “ ಮಾಸ್ಟರ್ ಉತ್ತರಿಸಿದ.

ಹಾಗಾದರೆ ನೀರನ್ನು ಮುಟ್ಟಿಸಿಕೊಳ್ಳದಿರುವ ಎರಡು ವಿಧಾನಗಳಿವೆ ಎಂದಾಯ್ತು. ಒಂದು ನೀರಿನೊಳಗೆ, ನದಿಯೊಳಗೆ ಪ್ರವೇಶವನ್ನೇ ಮಾಡದಿರುವುದು. ಇದು ಆತ್ಮಹತ್ಯಾತ್ಮಕ, ನದಿ ಎಂದರೆ ಬದುಕು. ಬದುಕನ್ನ ಪ್ರವೇಶ ಮಾಡದೇ ಜೀವಂತವಾಗಿರುವುದು ಸಾಧ್ಯವಿಲ್ಲ. ಆಗ ನೀನು ದಂಡೆಯ ಮೇಲೆ ನಿಂತುಕೊಂಡು ನದಿಯನ್ನು ವ್ಯಾಖ್ಯಾನ ಮಾಡುವ ದುಸ್ಥಿತಿಯನ್ನ ತಲುಪುತ್ತೀಯ. ನಿಮ್ಮ ಆಶ್ರಮಗಳಲ್ಲಿರುವ ಬಹುತೇಕ ಸಾಧಕರು ಈ ಬಗೆಯವರು. ನೀರಿನಿಂದ ತೊಯ್ಯಿಸುಕೊಳ್ಳುವ ಭಯದಲ್ಲಿ ನೀರಿಗೇ ಇಳಿಯದವರು. ಬದುಕಿನ ಅದ್ಭುತಗಳಿಗೆ ಕುರುಡಾದವರು. ಇದು ಬದುಕುವ ಸರಿಯಾದ ದಾರಿಯಲ್ಲ.

ನೀವು ನೀರಿನೊಳಗೆ ಇಳಿಯಬೇಕು, ನೀರಿನ ಆಳಕ್ಕೆ ಪ್ರವೇಶ ಮಾಡಬೇಕು. ನೀರಿನ ಆಳವನ್ನು ತಲುಪಿ ಕಮಲವಾಗಿಬಿಡಬೇಕು. ಎಲ್ಲ ಬಗೆಯ ನದಿಗಳನ್ನು ದಾಟಬೇಕು, ಎಲ್ಲ ಬಗೆಯ ಅನುಭವಗಳಿಗೆ ಖುಶಿಯಿಂದ ತೆರೆದುಕೊಳ್ಳಬೇಕು. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಎಲ್ಲ ದಿಕ್ಕುಗಳಲ್ಲಿ ಪ್ರಯಾಣ ಮಾಡಬೇಕು. ಎಲ್ಲ ಬಗೆಯ ಪ್ರೇಮಗಳಲ್ಲಿ, ಎಲ್ಲ ರೀತಿಯ ಹುಚ್ಚುಗಳಲ್ಲಿ ಮುಳುಗಿ ಏಳಬೇಕು. ಬದುಕು ನಮಗೆ ಕೊಡಮಾಡಿರುವ ಎಲ್ಲ ರುಚಿಗಳನ್ನು ಚಪ್ಪರಿಸಬೇಕು. ……. ಮತ್ತು ಈ ಎಲ್ಲವನ್ನು ಮೈದುಂಬಿ ಮಾಡುವಾಗಲೂ ಕಮಲದಂತೆ ಇದ್ದು ಬಿಡಬೇಕು.

ಬೆಟ್ಟದ ಮೇಲೆ ನಿಂತು ನೋಡುವಂತೆ, ಯಾವ ಅತಿಯೂ ನಿಮ್ಮನ್ನು ವಿಚಲಿತವಾಗಿಸದಂತೆ, ಎಲ್ಲವನ್ನೂ ಸಾಕ್ಷಿ ಎನ್ನುವಂತೆ ಅನುಭವಿಸಬೇಕು.

 

Leave a Reply