ಸರಳ ಅರಿವು : ‘ಜಿಡ್ಡು’ ಚಿಂತನೆ

ನಮ್ಮ ಪರಿಶೀಲನೆ, ಹುಡುಕಾಟ ನಮ್ಮ ತಕ್ಷಣದ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವುದ್ದಾಗಿರದೇ, ನಮ್ಮ ಮನಸ್ಸು ತನ್ನ ಜಾಗ್ರತ ಪ್ರಜ್ಞೆಯಲ್ಲಿ ಅಥವಾ ಆಳ ಸುಪ್ತ ಪ್ರಜ್ಞೆಯಲ್ಲಿ ಕೂಡಿಟ್ಟುಕೊಂಡಿರುವ ಎಲ್ಲ ಸಂಪ್ರದಾಯ, ಆಚರಣೆ, ನೆನಪುಗಳು, ಪಿತ್ರಾರ್ಜಿತ ಜನಾಂಗೀಯ ತಿಳುವಳಿಕೆ, ಈ ಎಲ್ಲವನ್ನೂ ಬದಿಗೆ ಸರಿಸಬಹುದಾ ಎನ್ನುವುದಾಗಿರಬೇಕು… ~ ಜಿಡ್ಡು ಕೃಷ್ಣಮೂರ್ತಿ| ಕನ್ನಡಕ್ಕೆ: ಚಿದಂಬರ ನರೇಂದ್ರ

ಖಂಡಿತ ಯಾವುದೇ ಬಗೆಯ ಕ್ರೂಢೀಕರಣ, ಅದು ಜ್ಞಾನದ್ದಾಗಿರಬಹುದು, ಅನುಭವಗಳದ್ದಾಗಿರಬಹುದು, ಯಾವುದೇ ಬಗೆಯ ಆದರ್ಶ-ಸಿದ್ಧಾಂತಗಳದ್ದಾಗಿರಬಹುದು, ಬುದ್ಧಿ-ಮನಸ್ಸಿನ ಯಾವುದೇ ಮುಂಗಾಣುವಿಕೆ (projection) ಯಾಗಿರಬಹುದು, ಹೀಗಿರಬೇಕು, ಹೀಗಿರಬಾರದು ಎಂದು ಮನಸ್ಸನ್ನು ರೂಪಿಸುವ ಯಾವುದೇ ಸಿದ್ಧ ಮಾದರಿಯ ಕಲಿಕೆಯಾಗಿರಬಹುದು, ಈ ಎಲ್ಲವೂ ಪರಿಶೀಲನೆ ಮತ್ತು ಅನ್ವೇಷಣೆಯ ಪ್ರಕ್ರಿಯೆಗೆ ಅಡ್ಡಿ ಮಾಡುವಂಥವು.

ಹಾಗಾಗಿ ನಮ್ಮ ಪರಿಶೀಲನೆ, ಹುಡುಕಾಟ ನಮ್ಮ ತಕ್ಷಣದ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವುದ್ದಾಗಿರದೇ, ನಮ್ಮ ಮನಸ್ಸು ತನ್ನ ಜಾಗ್ರತ ಪ್ರಜ್ಞೆಯಲ್ಲಿ ಅಥವಾ ಆಳ ಸುಪ್ತ ಪ್ರಜ್ಞೆಯಲ್ಲಿ ಕೂಡಿಟ್ಟುಕೊಂಡಿರುವ ಎಲ್ಲ ಸಂಪ್ರದಾಯ, ಆಚರಣೆ, ನೆನಪುಗಳು, ಪಿತ್ರಾರ್ಜಿತ ಜನಾಂಗೀಯ ತಿಳುವಳಿಕೆ, ಈ ಎಲ್ಲವನ್ನೂ ಬದಿಗೆ ಸರಿಸಬಹುದಾ ಎನ್ನುವುದಾಗಿರಬೇಕು. ನನ್ನ ಪ್ರಕಾರ ಇದು ಸಾಧ್ಯ ಒಂದು ವೇಳೆ ನಮ್ಮ ಮೈಂಡ್ ಯಾವುದೇ ಬೇಡಿಕೆಗಳಿಲ್ಲದೆ, ಯಾವುದೇ ಒತ್ತಡವಿಲ್ಲದೇ ಎಲ್ಲದರ ಕುರಿತಾಗಿ ಕೇವಲ ಅರಿವನ್ನ ಹೊಂದಬಲ್ಲದಾದರೆ, ಕೇವಲ ಅರಿವನ್ನ.

ನನ್ನ ಪ್ರಕಾರ ಹೀಗೆ ಯಾವ ಭಾವನೆಗಳಿಲ್ಲದೇ ಕೇವಲ ಅರಿವನ್ನು ಹೊಂದುವುದು ತುಂಬ ಕಷ್ಟಕರ. ನಾವು ನಮ್ಮ ತಕ್ಷಣದ ಸಮಸ್ಯೆಗಳಿಗೆ ತಕ್ಷಣದ ಪರಿಹಾರಗಳನ್ನು ಹುಡುಕುವಲ್ಲಿ ನಿರತರಾಗಿರುವುದರಿಂದ ನಮ್ಮ ಬದುಕುಗಳು ಕೇವಲ ತೋರಿಕೆಯ ಬದುಕುಗಳಾಗಿವೆ. ನಾವು ಪರಿಶೀಲನಾ ತಜ್ಞರ ಬಳಿ ಹೋಗಬಹುದು, ಎಲ್ಲ ಪುಸ್ತಕಗಳ ಅಧ್ಯಯನ ಮಾಡಬಹುದು, ಎಲ್ಲ ಜ್ಞಾನವನ್ನ ಸಂಗ್ರಹಿಸಬಹುದು, ಚರ್ಚು ಮಂದಿರ ಮಸಿದಿಗಳಿಗೆ ಭೇಟಿ ನೀಡಬಹುದು, ಧ್ಯಾನ – ಪ್ರಾರ್ಥನೆ ಮಾಡಬಹುದು, ಹಲವಾರು ಬಗೆಯ ಧಾರ್ಮಿಕ ಅಧ್ಯಾತ್ಮಿಕ ಆಚರಣೆಗಳನ್ನು ಆಚರಿಸಬಹುದು, ಆದರೂ ನಮಗೆ ಬದುಕಿನ ಆಳಕ್ಕೆ ಇಳಿಯುವುದು ಗೊತ್ತಿರದ ಕಾರಣ ನಮ್ಮ ಬದುಕು ತೋರಿಕೆಯದಾಗಿಯೇ ಉಳಿಯುತ್ತದೆ.

ನನಗೆ ತಿಳಿದ ಹಾಗೆ ಬದುಕಿನ ಆಳವನ್ನು ಪ್ರವೇಶಿಸುವ ತಿಳುವಳಿಕೆ, ನಮ್ಮ ಅರಿವಿನಲ್ಲಿದೆ – ನಮ್ಮ ಆಲೋಚನೆಗಳನ್ನ ಭಾವನೆಗಳನ್ನ ಯಾವ ಹೋಲಿಕೆ, ಸ್ವೀಕಾರ ತಿರಸ್ಕಾರಗಳಿಲ್ಲದೆ ಕೇವಲ ಸಾಕ್ಷಿಯಂತೆ ಗಮನಿಸುವುದರಲ್ಲಿದೆ. ಹೀಗೆ ಇರುವ ಪ್ರಯೋಗವನ್ನೇನಾದರೂ ನೀವು ಮಾಡಿದರೆ ನಿಮಗೆ ಗೊತ್ತಾಗುತ್ತದೆ ಇದು ಎಷ್ಟು ಕಷ್ಟದ ಸಂಗತಿಯೆಂದು, ಏಕೆಂದರೆ ನಮ್ಮ ಪೂರ್ಣ ತರಬೇತಿ ಸ್ವೀಕಾರ, ತಿರಸ್ಕಾರ ಮತ್ತು ಹೋಲಿಕೆಯನ್ನು ಕುರಿತದ್ದಾಗಿದೆ.

Leave a Reply