ಉಸಿರಾಟ ಧ್ಯಾನದ 16 ಆಧಾರಗಳು

ಉಸಿರಾಟ ಧ್ಯಾನದ 16 ಆಧಾರಗಳನ್ನು ವಿವರಿಸಿದ್ದಾರೆ, ಬೌದ್ಧ ಸಾಧಕರೂ ಬರಹಗಾರರೂ ಆದ ಅನೀಶ್ ಬೋಧ್…


1. ಮೊದಮೊದಲು ಉಸಿರಾಟವು ದೀರ್ಘವಾಗಿರುತ್ತದೆ. ಆಗ ಆತನು ಜಾಗರೂಕತೆಯ ಅರಿವಿನಿಂದ ನಾನು ಉದ್ಧವಾದ ಉಶ್ವಾಸವನ್ನು ಮಾಡುತ್ತಿದ್ದೇನೆ ಅಥವಾ ನಾನು ಉದ್ದವಾದ (ದೀರ್ಘ) ನಿಶ್ವಾಸವನ್ನು ಮಾಡುತ್ತಿದ್ದೇನೆ ಎಂದು ಬಾವಿಸುತ್ತಾನೆ.

2. ಹಾಗೆಯೇ ಆತನ ಉಸಿರಾಟವು ಕಿರಿದಾಗಿರುವಾಗ ಆತನು ಜಾಗರೂಕತೆಯ ಅರಿವಿನಿಂದ ನಾನು ಕಿರಿದಾಗಿ ಉಶ್ವಾಸ ಮಾಡುತ್ತಿದ್ದೇನೆ ಅಥವಾ ನಾನು ಕಿರಿದಾಗಿ ನಿಶ್ವಾಸವನ್ನು ಮಾಡುತ್ತಿದ್ದೇನೆ ಎಂದು ಭಾವಿಸುತ್ತಾನೆ. ಆತನು ಅತ್ಯಂತ ಜಾಗರೂಕತೆಯಿಂದ ಕೂಡಿರುತ್ತಾನೆ. ಆತನಿಂದ ಯಾವ ಉಸಿರು ಸಹಾ ಗಮನಿಸಲ್ಪಡದೆ ಒಳಗೆ ಹೋಗುವಂತಿಲ್ಲ. ಹಾಗೆಯೇ ಹೊರಗೆ ಬರುವಂತಿಲ್ಲ. ಹೆಬ್ಬಾಗಿಲಿನ ಕಾವಲುಗಾರನ ರೀತಿ ಪ್ರತಿಯೊಂದು ಜಾಗರೂಕತೆಯಿಂದ, ಅರಿವಿನಂದ ಕೂಡಿರುತ್ತಾನೆ. ಹಾಗೆಯೇ ಸಾಧನೆ ಮುಂದುವರೆಯು ತ್ತಿದ್ದಂತೆ ಆತನಗೆ ಉಸಿರು ಸೂಕ್ಷ್ಮವಾಗಿ, ಅತಿಕಿರಿದಾಗಿ, ಸಭ್ಯವಾಗಿ ಕಾಣಿಸುತ್ತದೆ.

3. ಇಡೀ ಉಸಿರಿನ ಕಾಯವನ್ನು ಅನುಭವಿಸಿದವನಾಗಿ ನಾನು ಉಸಿರಾಡುತ್ತಿದ್ದೇನೆ ಎಂಬ ಜಾಗರೂಕತೆಯ ಅರಿವನ್ನು ಸ್ಥಾಪಿಸುತ್ತಾನೆ. ಇಲ್ಲಿ ಆತನು ಅತ್ಯಂತ ವಿಶ್ಲೇಷಣೆಯುತವಾಗಿ ಜಾಗರೂಕವಾಗುತ್ತಾನೆ. ಆತನು ತನ್ನ ಏಕಾಗ್ರತೆಯೆಲ್ಲಾ ಉಸಿರಲ್ಲೆ ನೆಲಸಿರುತ್ತಾನೆ. ಆಗ ಈ ರೀತಿ ಅರಿಯುತ್ತಾನೆ. ಉಸಿರು ಮೂಗಿನ ತುದಿಯಿಂದ ಪ್ರಾರಂಭವಾಗುತ್ತದೆ ಹೃದಯದ ಹತ್ತಿರ ಮಧ್ಯವಸ್ಥೆಯಲ್ಲಿರುತ್ತದೆ ಹಾಗು ಅದರ ಅಂತ್ಯವು ಕಿಬ್ಬೊಟ್ಟೆ ಬಳಿ ಆಗುತ್ತದೆ. ಹಾಗೆಯೇ ನಿಶ್ವಾಸವು ಕಿಬ್ಬೊಟ್ಟೆಯಿಂದ ಪ್ರಾರಂಭವಾಗಿ, ಹೃದಯದಲ್ಲಿ ಮಧ್ಯವಾಗಿ, ಮೂಗಿನಿಂದ ಅಂತ್ಯವಾಗುತ್ತದೆ. ಈ ರೀತಿಯಲ್ಲಿ ಆತ ಇಡೀ ಉಸಿರಾಟದ ಆದಿ, ಮಧ್ಯಮ ಮತ್ತು ಅಂತ್ಯಗಳ ಮೂರು ಅವಸ್ಥೆಯಲ್ಲೂ ಜಾಗರೂಕನಾಗಿರುತ್ತಾನೆ. ಆದಿಯ ಪ್ರತಿಕ್ಷಣ ಜಾಗರೂಕನಾಗಿ ಮಧ್ಯದ ಪ್ರತಿಕ್ಷಣ ಜಾಗರೂಕನಾಗಿ, ಅಂತ್ಯದ ಪ್ರತಿಕ್ಷಣ ಜಾಗರೂಕನಾಗಿರುತ್ತಾನೆ.

4. ಉಸಿರು ಕಾಯದ ಸಂಖಾರಗಳನ್ನು (ಚಟುವಟಿಕೆ) ಶಾಂತಗೊಳಿಸಿ ಉಸಿರಾಡುತ್ತಿದ್ದೇನೆ ಎಂಬ ಜಾಗರೂಕತೆಯ ಅರಿವನ್ನು ಹೊಂದುತ್ತಾನೆ. ಅಂದರೆ ಇಲ್ಲಿ ಶರೀರವು ಯಾವ ರೀತಿಯಲ್ಲಿಯೂ ಚಲಿಸದೆ, ಅಲ್ಲಾಡದೆ, ಬಾಗದೆ ಇರಬೇಕಾಗುತ್ತದೆ. ಹಾಗು ನಾವು ಯಾವುದೇರೀತಿ ಯೋಚಿಸುವಾಗ ಉಸಿರು ಕಸಿವಿಸಿಯಾಗುತ್ತದೆ. ನಮ್ಮ ಯೋಚನೆಗಳೆಲ್ಲಾ ನಿಂತಾಗ, ಕಸಿವಿಸಿ ನಿಲ್ಲುತ್ತದೆ. ಕಸಿವಿಸಿ ನಿಂತಾಗ ಶಾರೀರಿಕ ಅಸಮತೋಲನ, ಶಾರೀರಿಕ ಕ್ಷೊಭೆ ನಿಲ್ಲುತ್ತದೆ. ಶಾರೀರಿಕ ಕ್ಷೊಭೆ ನಿಂತಾಗ ಶರೀರ ಶಾಂತವಾಗುತ್ತದೆ. ಈ ರೀತಿಯಲ್ಲಿ ಆತನು ಸಂಖಾರಗಳನ್ನು ಶಾಂತಗೊಳಿಸಿ ಉಶ್ವಾಸ, ನಿಶ್ವಾಸ ಮಾಡುತ್ತಾನೆ

5. ಆನಂದವನ್ನು (ಪೀತಿ) ಅನುಭವಿಸಿದವನಾಗಿ ನಾನು ಉಸಿರಾಡುತ್ತಿದ್ದೇನೆ ಎಂಬ ಜಾಗರೂಕತೆ ಅರಿವನ್ನು ಹೊಂದುತ್ತಾನೆ. ಆತನು ಆನಂದ ಅನುಭವಿಸಿ ಉಶ್ವಾಸ ಹಾಗು ನಿಶ್ವಾಸ ಮಾಡುತ್ತಿರುತ್ತಾನೆ. ಇಲ್ಲಿ ಸಾಧಕನು ಧ್ಯಾನಮಗ್ನನಾಗಿರುವಾಗಿ ಆತನು ಧ್ವಂದ್ವತೆ, ಸಂಶಯಗಳನ್ನು ಮೀರುತ್ತಾನೆ. ಆಗ ಆತನಲ್ಲಿ ಆನಂದ ಉಂಟಾಗುತ್ತದೆ. ಹಾಗೆಯೇ ಆತನಿಗೆ ಧ್ಯಾನ ವಿಷಯದಿಂದಲೂ ಆನಂದ ಉಂಟಾಗುತ್ತದೆ. ಹೇಗೆಂದರೆ ಯಾವಾಗ ಕಾಯದ ಚಟುವಟಿಕೆಗಳು (ಸಂಖಾರ) ಶಾಂತವಾದವು ಆಗ ಆತನಲ್ಲಿ ಆನಂದವು ಉಂಟಾಗುತ್ತದೆ. ಆನಂದವು 5 ವಿಧದ್ದಾಗಿರುತ್ತದೆ. ರೋಮಾಂಚನ ಆನಂದ, ಕ್ಷಣಿಕ ಆನಂದ, ಪ್ರಸರಿಸುವ ಆನಂದ, ವೇಗದ ಆನಂದ, ಉದ್ವೇಗದ ಆನಂದ ಇವುಗಳನ್ನು ಅನುಭವಿಸುತ್ತಾ ಆತನು ಉಸಿರಾಡುತ್ತಾನೆ.

6. ಸುಖವನ್ನು (ಶಾಂತತೆ) ಅನುಭವಿಸಿದವನಾಗಿ ನಾನು ಉಸಿರಾಡುತ್ತಿದ್ದೇನೆ ಎಂಬ ಜಾಗರೂಕತೆ, ಅರಿವನ್ನು ಹೊಂದುತ್ತಾನೆ, ಅದರಂತೆ ಅಭ್ಯಸಿಸುತ್ತಾ ಆತನು ಉಶ್ವಾಸ ಮತ್ತು ನಿಶ್ವಾಸ ಮಾಡುತ್ತಿರುತ್ತಾನೆ. ಇಲ್ಲಿ ಸಾಧಕನಿಗೆ ಆನಂದ ಉಂಟಾದಾಗ ಅದರ ಹಿಂದೆ ಸುಖವು ಉಂಟಾಗುತ್ತದೆ. ಆನಂದವು ಸ್ಥೂಲವಾದರೆ ಸುಖ(ಶಾಂತತೆ)ವು ಸೂಕ್ಷ್ಮತೆಯುಳ್ಳದ್ದಾಗಿದೆ. ಈ ರೀತಿಯ ಸುಖವನ್ನು ಆತ ನಿವರಣಗಳ ನಾಶ ಹೊಂದುತ್ತಿರುವುದರಿಂದ ಅನುಭವಿಸುತ್ತಿರುತ್ತಾನೆ.
ಇಲ್ಲಿ ಸಾಧಕನಿಗೆ ತನ್ನ ಉಸಿರು ಅತ್ಯಂತ ಶಾಂತವಾದ ರೀತಿ ಸಾಗುತ್ತಿದೆ ಎಂಬ ಅರಿವು ಬರುತ್ತದೆ. ಆತನ ಉಸಿರಾಟವು ಸೂಕ್ಷ್ಮವು ಹಾಗು ಅತ್ಯಂತ ಶಾಂತವಾಗಿರುತ್ತದೆ. ಇದೇರೀತಿಯಲ್ಲಿ ಸಾಗುತ್ತಿರುವಾಗ ಆತನು ಉಸಿರು ಕಾಯದ ಚಟುವಟಿಕೆ ಶಾಂತಗೊಂಡಾಗ, ಆನಂದವು ಉಕ್ಕಿದಾಗ, ಆತನ ದೇಹವು ಹಗುರವಾಗುತ್ತದೆ. ಕೆಲವರ ದೇಹವು ತೇಲಾಡುತ್ತದೆ ಮತ್ತು ಹಾಗೆಯೇ ಮೇಲಕ್ಕೇರುತ್ತದೆ. ಹಾಗೆಯೇ ಕೆಳಕ್ಕೂ ಸಹಾ ಇಳಿಯುತ್ತದೆ. ಇದು ಅನುಭವಿಗಳ ಮಾತಾಗಿದೆ.

ಸಾಧಕನು ಉಸಿರಾಡುತ್ತಿರುವಾಗ ಆತನ ಮೂಗಿನ ತುದಿಯಲ್ಲಿ ಅಥವಾ ಮೇಲಿನ ತುಟಿಯ ಮೇಲ್ಭಾಗದಲ್ಲಿ ಹತ್ತಿಯಂತಹ ಸ್ಪರ್ಶವಾಗುತ್ತದೆ. ಇದು ವಶೀಕೃತ ಚಿಹ್ನೆಯಾಗಿದೆ (ಉಗ್ಗಹನಿಮಿತ್ತ). ಆಗ ಸಾಧಕ ತನ್ನ ಗಮನವನ್ನೆಲ್ಲಾ ಅಲ್ಲೇ ಕೇಂದ್ರೀಕೃತ ಮಾಡಿದಾಗ ಆತನಲ್ಲಿ ನಿವರಣಗಳು ನಾಶವಾಗುತ್ತದೆ. ಅಂದರೆ ಇಂದ್ರೀಯ ಭೋಗಲಾಲಸೆ, ವಿರೋಧತೆ, ಜಡತೆ, ಚಿಂತೆ, ಸಂದೇಹಗಳೆಲ್ಲಾ ನಾಶವಾಗಿ ಆತನ ಮನಸ್ಸು ಶುದ್ಧವಾಗುತ್ತೆ. ಉಸಿರಾಟವು ಇನ್ನೂ ಪ್ರಕಾಶಮಾನವಾಗಿ ಕಂಡುಬರುತ್ತದೆ. ಆತನಿಗೆ ನಕ್ಷತ್ರಗಳ ಗುಂಪು ಕಾಣಿಸಬಹುದು ಅಥವಾ ನಕ್ಷತ್ರ ಕಾಣಿಸಬಹುದು ಅಥವಾ ರತ್ನದಂತೆ ಕಾಣಿಸಬಹುದು ಅಥವಾ ರತ್ನಗಳ ಗುಂಪು ಕಾಣಿಸಬಹುದು. ಅಥವಾ ಮುತ್ತುಗಳ ಗುಂಪು ಕಾಣಿಸಬಹುದು. ಸುಂದರವಾದ ಹೊಗೆ ಕಾಣಿಸಬಹುದು. ಜೇಡರ ಬಲೆಯಂತೆ ಕಾಣಿಸಬಹುದು. ಮೋಡಗಳಂತೆ ಕಾಣಿಸಬಹುದು, ಕಮಲದ ಹೂ ಅಥವ ರಥದ ಚಕ್ರ, ಸೂರ್ಯನಂತೆ, ಚಂದಿರನಂತೆ ಅಥವಾ ಇನ್ಯಾವುದೇ ಹೊಳೆವ ವಿಷಯ ಕಾಣಿಸಬಹುದು. ಇದು ಪ್ರತಿಭಾಗ ನಿಮಿತ್ತವಾಗಿದೆ (ಪ್ರತಿಫಲಿತ ಚಿಹ್ನೆ). ಇದು ಕಾಣಿಸಿಕೊಂಡಾಗ ಮರೆಯಾಗಲು ಬಿಡಬಾರದು. ಇದು ಮರೆಯಾಗಬಾರದೆಂದರೆ ಆತನು ಅತ್ಯಂತ ಕುಶಲಿಯಾಗಿರಬೇಕು. ಶೀಲ, ಸಂಯಮ, ನಿವರಣರಹಿತ ಧ್ಯಾನ, ಧ್ಯಾನ ಕೌಶಲ್ಯ, ಸೂಕ್ಷ್ಮತೆಗೆ ವಾಲುವಿಕೆ, ದೃಢತೆ ಮತ್ತು ಪಂಚಬಲಗಳು ಸಮತೋಲನ ಸಹಾಯಕಾರಿಯಾಗುತ್ತದೆ.
ನಂತರ ಸಾಧಕನು ಪ್ರತಿಭಾಗ ನಿಮಿತ್ತವನ್ನು ವಿಕಸಿಸಬೇಕಾಗುತ್ತದೆ. ಮೊದಲು ರಕ್ಷಿಸಲು ಸಾಪಲ್ಯ ಪಡೆದ ಮೇಲೆ ಅದನ್ನು ಇಂಚು ಇಂಚಾಗಿ ವಿಕಸಿಸಲು ಪ್ರಯತ್ನಿಸಬೇಕು. ನಂತರ ಒಂದು ಅಡಿ ಅಗಲ, ಎರಡು ಅಡಿ ಅಗಲ ಕೊಡೆಯಷ್ಟು ರಥದ ಚಕ್ರದಷ್ಟು ಮನೆಯಷ್ಟು, ಊರಿನಷ್ಟು ನಂತರ ಅನಂತವಾಗಿ ವಿಕಸಿಸಬೇಕು. ಎಲ್ಲೆಲ್ಲೂ ಬೆಳಕನ್ನೇ ಕಾಣುವ ಈ ರೀತಿಯ ಆನಂತ ಬೆಳಕನ್ನು ಪಡೆಯುವುದರಿಂದಾಗಿ ಆತನಲ್ಲಿ ವಿತರ್ಕ ವಿಚಾರ, ಪ್ರೀತಿ, ಸುಖ, ಏಕಾಗ್ರತೆ ಧ್ಯಾನಾಂಗಗಳು ಕೂಡಿ ಬಲಿಷ್ಠವಾಗಿ ಪ್ರಥಮ ಸಮಾಧಿ ಪಡೆಯುತ್ತಾನೆ.
ನಂತರ ಆತನು ಈ ಸಮಾಧಿಯಲ್ಲಿ ಬೇಕೆನಿಸಿದಾಗ, ಕ್ಷಿಪ್ರವಾಗಿ ಲಕ್ಷ ಕೊಡುತ್ತಾನೆ. ಬೇಗ ಪ್ರವೇಶಿಸುತ್ತಾನೆ. ತನಗೆ ಇಷ್ಟಬಂದಷ್ಟು ಕಾಲ ಅದರಲ್ಲೆ ನೆಲೆಸುತ್ತಾನೆ, ವಿಹರಿಸುತ್ತಾನೆ. ಹಾಗೆಯೇ ಕ್ಷಿಪ್ರವಾಗಿ ಹೊರಬರುತ್ತಾನೆ. (ಅಥವಾ ಮುಂದಿನ ಸಮಾಧಿಗೆ ಪ್ರವೇಶಿಸುತ್ತಾನೆ) ಮತ್ತು ಅದನ್ನು ಪುನರ್ ಅವಲೋಕಿಸುತ್ತಾನೆ.

ಧ್ಯಾನ ಪ್ರಾವೀಣ್ಯತೆ : ಈ ರೀತಿ, ಲಕ್ಷ, ನೀಡುವಿಕೆ, ಪ್ರವೇಶ, ನೆಲೆಸುವಿಕೆ, ಹೊರಬರುವಿಕೆ ಮತ್ತು ಪುನರ್ ಅವಲೋಕನಗಳಲ್ಲಿ ಆತನು ಸಾವಿರ ಬಾರಿ ಹೋಗಿ ಪ್ರವೀಣನಾಗುತ್ತಾನೆ. ಇದರಿಂದಾಗಿ ಆತನು ಮುಂದಿನ ಧ್ಯಾನಗಳಲ್ಲಿ ಹಂತಕ್ಕೇರುವುದು ಸುಲಭವಾಗುತ್ತದೆ.

ದ್ವಿತಿಯ ಸಮಾಧಿ : ನಂತರ ಆತನಿಗೆ ವಿತಕ್ಕ ವಿಚಾರ ಸ್ಥೂಲವಾಗಿ ಕಂಡು ಅದರಿಂದ ವಿಮುಖವಾಗಿ ಪೀತಿ, ಸುಖ, ಏಕಾಗ್ರತೆಯಿಂದ ಕೂಡಿದ ದ್ವಿತೀಯ ಸಮಾಧಿಯಲ್ಲಿ ನೆಲೆಸುತ್ತಾನೆ. ಐದು ರೀತಿಯಲ್ಲಿ ಧ್ಯಾನ ಪ್ರಾವೀಣ್ಯತೆ ಗಳಿಸುತ್ತಾನೆ.

ತೃತೀಯ ಸಮಾಧಿ : ನಂತರ ಆತನಿಗೆ ಪೀತಿಯು ಸ್ಥೂಲವಾಗಿ ಕಂಡುಬಂದು ಅದರಿಂದ ವಿಮುಖವಾಗಿ ಸುಖ ಮತ್ತು ಏಕಾಗ್ರತೆಯಿಂದ ಕೂಡಿದ ತೃತೀಯ ಧ್ಯಾನದಲ್ಲಿ ಪ್ರವೇಶಿಸಿ ನೆಲೆಸುತ್ತಾನೆ. ಅದರಲ್ಲಿ ಐದು ರೀತಿಯ ಧ್ಯಾನ ಪ್ರಾವಿಣ್ಯತೆ ಗಳಿಸಿದಾಗ ಆತನಿಗೆ ಸುಖವು ಸ್ಥೂಲವಾಗಿ ಕಂಡುಬರುತ್ತದೆ.

7. ಚಿತ್ತದ ಚಟುವಟಿಕೆಗಳೆಲ್ಲವನ್ನು ಅನುಭವಿಸಿದವನಾಗಿ ನಾನು ಉಸಿರಾಡುತ್ತಿದ್ದೇನೆ ಎಂಬ ಜಾಗರೂಕ ಅರಿವನ್ನು ಹೊಂದುತ್ತಾನೆ. ಅದರಂತೆ ಉಶ್ವಾಸ ಮತ್ತು ನಿಶ್ವಾಸ ಮಾಡುತ್ತಾನೆ. ನಂತರ ಸಾಧಕ ಚಿತ್ತದ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಅರಿಯುತ್ತಾ, ಉಸಿರಾಟದಲ್ಲಿ ಏಕಾಗ್ರವಹಿಸುತ್ತಾನೆ. ಹೇಗೆಂದರೆ ಚಿತ್ತದ ಸಂಖಾರಗಳಾದ ಸಂವೇದನೆ ಮತ್ತು ಗ್ರಹಿಕೆಯನ್ನು ಅರಿಯುತ್ತಾನೆ. ಈ ಹಿಂದೆ ಅನುಭವಿಸಿದ ಆನಂದ ಮತ್ತು ಸುಖಗಳ ಉದಯ ಮತ್ತು ಬೆಳವಣಿಗೆ ಗಮನನಿಸುತ್ತಾ ಉಸಿರಾಡುತ್ತಾನೆ.

8. ಚಿತ್ತದ ಸಂಖಾರಗಳನ್ನು ಶಾಂತಗೊಳಿಸಿದವನಾಗಿ ಉಸಿರಾಡುತ್ತಿದ್ದೇನೆ ಎಂಬ ಜಾಗರೂಕ ಅರಿವನ್ನು ಹೊಂದಿ ಏಕಾಗ್ರತೆ ಹೊಂದುತ್ತಾನೆ. ಆತನು ಸಂವೇದನೆಗಳನ್ನು ಮತ್ತು ಗ್ರಹಿಕೆಗಳನ್ನು ಶಾಂತಗೊಳಿಸುತ್ತಾನೆ. ಸುಖವು ಸ್ಥೂಲವಾಗಿ ಕಂಡು ಆತನು ಅದನ್ನು ದಾಟಿ ಸುಖವು ಅಲ್ಪದ ದುಃಖವು ಇಲ್ಲದ ಸಮಚಿತ್ತತೆ ಮತ್ತು ಏಕಾಗ್ರತೆಯುಳ್ಳ ಸಮಾಧಿಯಲ್ಲಿ ನೆಲಸುತ್ತಾನೆ.

9. ನಂತರ ಆತನು ಚಿತ್ತವನ್ನು ಅನುಭವಿಸಿದವನಾಗಿ ಉಸಿರಾಡುತ್ತಾನೆ. ಅಂತಹ ಜಾಗರೂಕ ಅರಿವಿನಲ್ಲಿ ಏಕಾಗ್ರತೆ ಹೊಂದುತ್ತಾನೆ. ಹೇಗೆಂದರೆ ಉಸಿರಾಟದ ಧ್ಯಾನದಲ್ಲೇ ಆತನು ನಾಲ್ಕು ಸಮಾಧಿಗಳನ್ನು ಅನುಭವಿಸಿದವನಾಗಿ ಉಸಿರಾಡುತ್ತಾನೆ.

10. ಚಿತ್ತವನ್ನು ಸಂತೋಷಪಡಿಸುತ್ತಾ ಉಸಿರಾಡುತ್ತಿದ್ದೇನೆ ಎಂಬ ಜಾಗರೂಕ ಅರಿವನ್ನು ಹೊಂದಿ ಏಕಾಗ್ರತೆ ಸಾಧಿಸುತ್ತಾನೆ. ಹೇಗೆಂದರೆ ಸಮಥದಿಂದ ಮತ್ತು ವಿಪಶ್ಶನದಿಂದ. ಹೇಗೆಂದರೆ ಪ್ರಥಮ ಮತ್ತು ದ್ವಿತೀಯ ಧ್ಯಾನವನ್ನು ಮತ್ತೆ ಪಡೆದು ಅವುಗಳಲ್ಲಿ ಅನಿತ್ಯತೆ ಕಂಡು ವಿಪಶ್ಶನದ ಅರಿವು ತೀಷ್ಣಗೊಳಿಸುವುದರಿಂದಾಗಿ ಅತನು ಚಿತ್ತವನ್ನು ಸಂತೋಷಪಡಿಸುತ್ತಾನೆ.

11. ಚಿತ್ತವನ್ನು ಏಕಾಗ್ರಗೊಳಿಸುತ್ತಾ ಉಸಿರಾಡುತ್ತಿದ್ದೇನೆ ಎಂಬ ಜಾಗರೂಕ ಅರಿವನ್ನು ಹೊಂದುತ್ತಾ ಏಕಾಗ್ರತೆ ಸಾಧಿಸುತ್ತಾನೆ. ಅದರಂತೆ ಉಶ್ವಾಸ ಮತ್ತು ನಿಶ್ವಾಸ ಮಾಡುತ್ತಾನೆ. ಹೇಗೆಂದರೆ ಮನಸ್ಸನ್ನು ಸಮವಾಗಿ, ಪೂರ್ಣವಾಗಿ, ಯೋಗ್ಯವಾಗಿ ಏಕಾಗ್ರತೆಯಿಂದ ಧ್ಯಾನ ವಿಷಯದಲ್ಲಿಟ್ಟು ಪ್ರಥಮ ಧ್ಯಾನ ಹಾಗೆಯೇ ಮುಂದಿನ ಹಂತಗಳನ್ನು ಪಡೆಯುತ್ತಾನೆ. ನಂತರ ಅವುಗಳ ಪುನರ್ ಅವಲೋಕನ ಮಾಡುತ್ತಾನೆ. ಸಮಾಧಿ ಸ್ಥಿತಿಗಳ ಬೀಳುವಿಕೆ ಮತ್ತು ಅನಿತ್ಯ ಗಮನಿಸುತ್ತಾನೆ. ಅಂತಹ ಪ್ರಜ್ಞಾಸ್ಥಿತಿಯ ಕ್ಷಣಿಕ ಸಮಾಧಿ ಪಡೆಯುತ್ತಾನೆ.

12. ಚಿತ್ತವನ್ನು ವಿಮೋಚನೆಗೊಳಿಸುತ್ತ ಉಸಿರಾಡುತ್ತಿದ್ದೇನೆ ಎಂಬ ಜಾಗರೂಕ ಅರಿವಿನ ಏಕಾಗ್ರತೆ ಸಾಧಿಸುತ್ತಾನೆ. ಹೇಗೆಂದರ ಮೊದಲು ಪಂಚ ನಿವರಣಗಳಿಂದ ಮನಸ್ಸು ವಿಮುಖವಾಯಿತು, ನಂತರ ವಿತರ್ಕ, ವಿಚಾರಗಳಿಂದ ಮನವು ವಿಮುಖವಾಯಿತು. ನಂತರ ಪೀತಿ, ಸುಖಗಳಿಂದ ಮನಸ್ಸು ವಿಮುಖವಾಯಿತು. ಈ ಧ್ಯಾನ ಸ್ಥಿತಿಯಲ್ಲಿಯೂ ಅನಿತ್ಯತೆ ಕಾಣಿಸಿತು. ಆಗ ನಿತ್ಯ ಭಾವನೆಯಿಂದ ಮನಸ್ಸು ವಿಮುಖವಾಯಿತು. ಹಾಗೆಯೇ ಜೀವನದಲ್ಲಿ ದುಃಖದ ಅರಿವು ಉಂಟಾಗಿ ಸುಖ ಎಂಬ ಭಾವನೆಯಿಂದ ಮುಕ್ತವಾಯಿತು ಹಾಗು ಇಡೀ ಅಸ್ತಿತ್ವದಲ್ಲಿ ಎಲ್ಲವೂ ಒಂದನ್ನು ಒಂದು ಪರಸ್ಪರ ಅವಲಂಬಿಸಿ ಕಾರ್ಯ ನಿರ್ವಹಿಸುತ್ತದೆ, ಯಾವುದು ನಾಯಕವಲ್ಲ. ಯಾವುದು ನಿತ್ಯವಲ್ಲ ಯಾವುದು ಆತ್ಮವಲ್ಲ ಎಂಬ ಅನಾತ್ಮ ಭಾವನೆಯಿಂದ ಆತ್ಮಭಾವನೆ ವಿಮುಖವಾಯಿತು. ಈ ರೀತಿಯಾಗಿ ಚಿತ್ತವು ವಿಮೋಚನೆಯನ್ನು ಅನುಭವಿಸುತ್ತಾ ಉಸಿರಾಡುತ್ತಿರುತ್ತದೆ.

13. ಅನಿತ್ಯತೆಯನ್ನು ಗಮನಿಸುತ್ತಾ ಉಸಿರಾಟ ಮಾಡುತ್ತಿದ್ದೇನೆ ಎಂದು ಜಾಗರೂಕತೆಯ ಅರಿವಿನ ಧ್ಯಾನವನ್ನು ಅಭ್ಯಸಿಸುತ್ತಾನೆ. ಹೇಗೆಂದರೆ ಆತನು ಅನಿತ್ಯವನ್ನು ಧ್ಯಾನಿಸುತ್ತಾನೆ. ಯಾವರೀತಿ ಎಂದರೆ ಐದು ಖಂಧಗಳು (ದೇಹ ಮತ್ತು ಮನಸ್ಸುಗಳು) ಅನಿತ್ಯ ಏಕೆಂದರೆ ಪ್ರತಿಯೊಂದು ಉದಯಿಸುತ್ತದೆ. ಹಾಗೆಯೇ ಲಯವಾಗುತ್ತದೆ. ಅವು ಒಂದೇರೀತಿಯಲ್ಲಿ ಇರುವುದಿಲ್ಲ. ಪ್ರತಿಕ್ಷಣ ಬದಲಾಯಿಸುತ್ತಿರುತ್ತದೆ. ಹಾಗೆಯೇ ಉಸಿರಾಟವು ಸಹಾ ಒಂದೇರೀತಿ ಇಲ್ಲ, ನಿರಂತರ ಬದಲಾಯಿಸುತ್ತವೆ. ದೇಹವಾಗಲೀ, ವೇದನೆ (ಸಂವೇದನೆಗಳಾಗಲಿ) ಯಾಗಲಿ, ಗ್ರಹಿಕೆಯಾಗಲೀ, ಸಂಖಾರಗಳಾಗಲೀ (ಚಟುವಟಿಕೆ) ಅರಿವಾಗಲಿ ನಿತ್ಯವಲ್ಲ. ಪ್ರತಿಕ್ಷಣ ಬದಲಾಯಿಸುತ್ತಿರುತ್ತದೆ. ಉಸಿರಾಟದಲ್ಲೂ ನಿರಂತರ ಬದಲಾವಣೆ ನಾವು ಕಾಣುತ್ತೇವೆ. ಉಶ್ವಾಸ, ನಿಶ್ವಾಸಗಳ ವ್ಯತ್ಯಾಸ, ದೀರ್ಘ, ಕಿರಿಯ ಉಸಿರಾಟ, ನೋವು, ನಲಿವಿನ ಉಸಿರಾಟ, ಆನಂದ ಉಸಿರಾಟ, ಸುಖದ ಉಸಿರಾಟ, ಹೀಗೆಯೆ ನಿರಂತರ ಬದಲಾವಣೆ ಆತ ಕಾಣುತ್ತಾನೆ.

14. ವಿರಾಗವನ್ನು ಗಮನಿಸಿ ಉಸಿರಾಡುತ್ತೇನೆ ಎಂಬ ಜಾಗರೂಕತೆಯ ಅರಿವಿನ ಧ್ಯಾನವನ್ನು ಅಭ್ಯಸಿಸುತ್ತಾನೆ. ಇದು ಅನಿತ್ಯವಾಗಿದೆ. ಯಾವುದೆಲ್ಲ ಅನಿತ್ಯವಾಗಿದೆಯೋ ಅವೆಲ್ಲ ದುಃಖಕರ. ಆದ್ದರಿಂದ ಆತ ಅದರಲ್ಲಿ ರಾಗವನ್ನು ತೊಡೆದುಹಾಕುತ್ತಾನೆ. ಜಗತ್ತಿನ ಯಾವುದಕ್ಕೂ ಅಂಟುವುದಿಲ್ಲ. ದೇಹಕ್ಕಾಗಲಿ, ಮನಸ್ಸಿಗಾಗಲೀ, ಸಮಾಧಿಗಾಗಲಿ, ಸಮಾಧಿ ಸ್ಥಿತಿಗಳಾಗಲಿ, ಅಂಟುವುದಿಲ್ಲ ವಿರಾಗದಿಂದಲೆ ಆರಿಹೋಗುವಿಕೆ ಅದೇ ನಿಬ್ಬಾಣ ಎಂದು ಧ್ಯಾನಿಸುತ್ತಾ ಉಸಿರಾಡುತ್ತಾನೆ.

15. ನಿರೋಧವನ್ನು ಗಮನಿಸಿ ಉಸಿರಾಡುತ್ತಿದ್ದೇನೆ ಎಂಬ ಜಾಗರೂಕ ಅರಿವಿನ ಧ್ಯಾನವನ್ನು ಅಭ್ಯಸಿಸಿ ವಿಶ್ವಾಸ ಮತ್ತು ನಿಶ್ವಾಸ ಮಾಡುತ್ತಿರುತ್ತಾನೆ. ಹೇಗೆಂದರೆ : ಯಾವುದೆಲ್ಲ ಅನಿತ್ಯವೋ ಅದರಲ್ಲಿ ವಿರಾಗ ಉಂಟುಮಾಡಿ ಯಾವುದಕ್ಕೂ ಅಂಟದೆ ಅವೆಲ್ಲ ಸ್ಥಿತಿಗಳನ್ನು ನಿಲ್ಲಿಸುತ್ತಾನೆ (ನಿರೋಧಿಸುತ್ತಾನೆ) ಸ್ತಬ್ಧಗೊಳಿಸುತ್ತಾನೆ (ಪೂರ್ಣವಾಗಿ ಆರಿಹೋಗುವಂತೆ ಶಾಂತಗೊಳಿಸುತ್ತಾನೆ).

16. ತ್ಯಜಿಸುವಿಕೆ (ಪಟಿನಿಸ್ಸ) ಗಮನಿಸುತ್ತಾ ಉಸಿರಾಡುತ್ತಿದ್ದೇನೆ ಎಂಬ ಜಾಗರೂಕ ಅರಿವಿನ ಧ್ಯಾನವನ್ನು ಅಭ್ಯಸಿಸಿ ಉಶ್ವಾಸ ಮತ್ತು ನಿಶ್ವಾಸ ಮಾಡುತ್ತಿರುತ್ತಾನೆ. ಹೇಗೆಂದರೆ ಇವೆಲ್ಲಾ ಅನಿತ್ಯಕಾರಕಗಳು, ಕ್ಷಣಿಕವಾದುದು, ಸದಾ ಪರಿವರ್ತನಾಶೀಲವುಳ್ಳದ್ದು ಎಂದು ಅರಿವನ್ನು ಪಡೆದು ಅವೆಲ್ಲವನ್ನು ತ್ಯಜಿಸುತ್ತಾನೆ. ಯಾವುದನ್ನು ಇಟ್ಟುಕೊಳ್ಳುವುದಿಲ್ಲ, ಅಂಟುವುದಿಲ್ಲ. ಪೂರ್ಣವಾಗಿ ತ್ಯಜಿಸುತ್ತಾನೆ, ಆಗ ಎಲ್ಲಾ ಕ್ರಿಯೆಗಳು ವಿಶ್ರಾಂತಿ ಪಡೆಯುತ್ತದೆ. ಸ್ತಬ್ದವಾಗುತ್ತದೆ. ಎಲ್ಲಾ ಕ್ಲೇಶಗಳು ತ್ಯಜಿಸಲ್ಪಡುತ್ತವೆ. ತೃಷ್ಣೆಯ ತ್ಯಜಿಸಲ್ಪಡುತ್ತದೆ. ರಾಗವು ಇನ್ನಿಲ್ಲವಾಗುತ್ತದೆ. ಇದೇ ಆರಿಹೋಗುವಿಕೆಯ ಶಾಂತತೆ (ನಿಬ್ಬಾಣ) ಯಾಗಿದೆ.

Leave a Reply