ಪ್ರಯತ್ನಿಸಲು ದಾರಿಗಳಿಲ್ಲ! : ಓಶೋ ಹೇಳಿದ ಕಥೆ

“ಯಾವತ್ತೂ ಪ್ರಯತ್ನ ಮಾಡಬೇಡ. ನೀನು ಮಾಡಬೇಕಿರುವ ಕೆಲಸವನ್ನ ಮಾಡು ಅಥವಾ ಮಾಡಲು ನಿರಾಕರಿಸು ಆದರೆ ಯಾವತ್ತೂ ಪ್ರಯತ್ನ ಮಾಡಬೇಡ” ಅನ್ನುತ್ತಾನೆ ಝೆನ್ ಗುರು… | ಓಶೋ, ಕನ್ನಡಕ್ಕೆ: ಚಿದಂಬರ ನರೇಂದ್ರ

ಝೆನ್ ಮಾಸ್ಟರ್ ತನ್ನ ಕರವಸ್ತ್ರವನ್ನ ಕೆಳಗೆ ಬೀಳಿಸಿ, ಅಲ್ಲೇ ಕುಳಿತಿದ್ದ ತಮ್ಮ ಶಿಷ್ಯನಿಗೆ ಆದೇಶ ನೀಡಿದರು, “ಆ ಕರವಸ್ತ್ರವನ್ನು ಎತ್ತಿಕೊಳ್ಳುವ ಪ್ರಯತ್ನ ಮಾಡು”
ಮಾಸ್ಟರ್ ಆದೇಶ ನೀಡುತ್ತಿದ್ದಂತೆಯೇ ಶಿಷ್ಯ ಕೂಡಲೇ ಕೆಳಗೆ ಬಗ್ಗಿ ಆ ಕರವಸ್ತ್ರವನ್ನು ಎತ್ತಿ ಮಾಸ್ಟರ್ ಕೈಗೆ ಕೊಟ್ಟ. ಆದರೆ ಮಾಸ್ಟರ್ ಗೆ ಶಿಷ್ಯನ ಕೆಲಸದಿಂದ ಖುಶಿ ಆಗಲಿಲ್ಲ. ಮಾಸ್ಟರ್ ಇನ್ನೊಮ್ಮೆ ತಮ್ಮ ಕರವಸ್ತ್ರವನ್ನ ನೆಲಕ್ಕೆ ಬೀಳಿಸಿದರು.

ಮತ್ತೊಮ್ಮೆ ತಮ್ಮ ಶಿಷ್ಯನಿಗೆ ಆದೇಶ ನೀಡಿದರು, “ ನನ್ನ ಮಾತನ್ನ ಲಕ್ಷಗೊಟ್ಟು ಕೇಳು, ಆ ಕರವಸ್ತ್ರವನ್ನ ಎತ್ತಿಕೊಳ್ಳುವ ಪ್ರಯತ್ನಮಾಡು.” ತಕ್ಷಣ ಶಿಷ್ಯ ಆ ಕರವಸ್ತ್ರವನ್ನ ಎತ್ತಿ ಮಾಸ್ಟರ್ ಕೈಗಿಟ್ಟ. ಮಾಸ್ಟರ್ ಗೆ ಮತ್ತೆ ಸಿಟ್ಟು ಬಂತು, ಮತ್ತೆ ಕರವಸ್ತ್ರವನ್ನು ಕೆಳಗೆ ಬೀಳಿಸಿ ತಮ್ಮ ಶಿಷ್ಯನಿಗೆ ಅದೇ ಆದೇಶ ನೀಡಿದರು. ಮತ್ತೆ ಶಿಷ್ಯ ಮೂದಲಿನ ಹಾಗೆಯೇ ವರ್ತಿಸಿದ. ಹೀಗೇ ಈ ಪ್ರಕ್ರಿಯೆ ಆರು ಬಾರಿ ಮರುಕಳಿಸಿತು. ಏಳನೇ ಬಾರಿ ಮಾಸ್ಟರ್ ಕರವಸ್ತ್ರ ಕೆಳಗೆ ಎಸೆದಾಗ, ಶಿಷ್ಯನಿಗೆ ಸಂಶಯ ಬಂತು, ಮಾಸ್ಟರ್ ಯಾವುದೋ ಅಸಂಗತವನ್ನ ಹೇಳುತ್ತಿದ್ದಾರೆ ತನಗೆ ಯಾವುದೋ ಕೋಆನ್ (koan) ದ ಅರ್ಥ ಕಲಿಸುತ್ತಿದ್ದಾರೆ ಎನ್ನುವುದು ಗೊತ್ತಾಯಿತು.

“ ಕರವಸ್ತ್ರ ಎತ್ತಿಕೊಳ್ಳುವ ಪ್ರಯತ್ನ ಮಾಡು” ಕರವಸ್ತ್ರವನ್ನ ಎತ್ತಿಕೊಳ್ಳುವ ಪ್ರಯತ್ನ ಮಾಡುವುದು ಹೇಗೆ ? ನೀವು ಆ ಕರವಸ್ತ್ರವನ್ನ ಎತ್ತಿಕೊಳ್ಳಬಹುದು ಅಥವಾ ಎತ್ತಿತೊಳ್ಳದೇ ಇರಬಹುದು ಆದರೆ ಎತ್ತಿಕೊಳ್ಳುವ ಪ್ರಯತ್ನ ಮಾಡುವುದೆಂದರೇನು? ಆಗ ಶಿಷ್ಯನಿಗೆ ಮಾಸ್ಟರ್ ತನಗೆ ಏನು ಕಲಿಸುತ್ತಿದ್ದಾರೆ ಎನ್ನುವುದು ಥಟ್ಟನೇ ಹೊಳೆಯಿತು. ಪ್ರಯತ್ನ ಮಾಡವುದು ಸಾಧ್ಯವಿಲ್ಲ. ಒಂದು ಕೆಲಸ ಮಾಡಬಹುದು ಅಥವಾ ಮಾಡದಿರಬಹುದು, ಆದರೆ ಪ್ರಯತ್ನ ಮಾಡುವುದು ಸಾಧ್ಯವಿಲ್ಲ. ಶಿಷ್ಯ ಖುಶಿಯಿಂದ ಜೋರಾಗಿ ನಗುತ್ತ ಕುಣಿದಾಡಿಬಿಟ್ಟ. “ ನನಗೆ ಗೊತ್ತಾಯ್ತು ಮಾಸ್ಟರ್ ನಿಮ್ಮ ಮಾತಿನ ಅರ್ಥ” ಎನ್ನುತ್ತ ಮಾಸ್ಟರ್ ಗೆ ಬಾಗಿ ನಮನಗಳನ್ನು ಸಲ್ಲಿಸಿದ.

“ ನೆನಪಿನಲ್ಲಿರಲಿ, ಯಾವತ್ತೂ ಪ್ರಯತ್ನ ಮಾಡಬೇಡ. ನೀನು ಮಾಡಬೇಕಿರುವ ಕೆಲಸವನ್ನ ಮಾಡು ಅಥವಾ ಮಾಡಲು ನಿರಾಕರಿಸು ಆದರೆ ಯಾವತ್ತೂ ಪ್ರಯತ್ನ ಮಾಡಬೇಡ. There is no way to try” ಮಾಸ್ಟರ್ ಶಿಷ್ಯನ ತಲೆಯ ಮೇಲೆ ಮೊಟಕಿದರು.

****************************

(Source: “Walk without feet”, Osho Rajaneesh)

Leave a Reply