ಗೊತ್ತಿರುವ, ಗೊತ್ತಿಲ್ಲದಿರುವ ಸಂಗತಿಗಳು… : ಓಶೋ ಹೇಳಿದ ದೃಷ್ಟಾಂತ

ಗುರ್ಜೇಫ್ ನ ಮಾತಿನಂತೆ ಉಸ್ಪೆನ್ಸ್ಕೀ ಆ ಕಾಗದವನ್ನು ತೆಗೆದುಕೊಂಡು ಕೋಣೆಯ ಮೂಲೆಗೆ ಹೋಗಿ ಕುಳಿತ. ಅವನು ತನಗೆ ಗೊತ್ತಿರುವ ಸಂಗತಿಗಳ ಬಗ್ಗೆ ಬರೆಯಲು ಶುರು ಮಾಡುತ್ತಿದ್ದಂತೆಯೇ ಒಂದು ವಿಚಿತ್ರ ತಳಮಳ ಅವನನ್ನು ಕಾಡತೊಡಗಿತು… | ಓಶೋ ರನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಉಸ್ಪೆನ್ಸ್ಕೀ (Ouspensky ) ರಷ್ಯಾದ ಒಬ್ಬ ಅದ್ಭುತ ಚಿಂತಕ. ಜಗತ್ತಿನಲ್ಲಿ ಸತ್ಯದ ಕುರಿತಾಗಿ ಚರ್ಚೆಗೆ ಗುರಿಯಾಗಿರುವ ಮೂರು ಮಹತ್ವದ ಪುಸ್ತಕಗಳಲ್ಲಿ ಉಸ್ಪೆನ್ಸ್ಕೀ ಬರೆದಿರುವ ಪುಸ್ತಕ Tertium Organum ಕೂಡ ಒಂದು. ಇಂಥ ಒಬ್ಬ ಮಹತ್ವದ ಚಿಂತಕ ಒಮ್ಮೆ ಅನುಭಾವಿ ಗುರ್ಜೇಫ್ ನ ಭೇಟಿ ಮಾಡಲು ಹೋದ. ಅದಾಗಲೇ ಉಸ್ಪೆನ್ಸ್ಕೀ ತುಂಬ ಪ್ರಸಿದ್ಧ ವ್ಯಕ್ತಿಯಾಗಿದ್ದ ಮತ್ತು ಗುರ್ಜೇಫ್ ಒಬ್ಬ ಸಾಧಾರಣ ಫಕೀರ.

“ ನಾನು ನಿಮಗೆ ಕೆಲ ಪ್ರಶ್ನೆಗಳನ್ನು ಕೇಳಬೇಕು”
ಉಸ್ಪೆನ್ಸ್ಕೀ ವಿನಂತಿಸಿಕೊಂಡ.

ಗುರ್ಜೇಫ್ ಒಂದು ಖಾಲೀ ಕಾಗದವನ್ನು ಉಸ್ಪೆನ್ಸ್ಕೀ ಯ ಕೈಯಲ್ಲಿಟ್ಟು ಹೇಳಿದ,
“ನಮ್ಮ ಮಾತುಕತೆಗೆ ಮೊದಲು, ನಿಮಗೆ ಗೊತ್ತಿರುವ ಹಾಗು ಗೊತ್ತಿಲ್ಲದಿರುವ ಎಲ್ಲ ವಿಷಯಗಳನ್ನೂ ಪಟ್ಟಿ ಮಾಡಿ. ಆಮೇಲೆ ನಾವು, ನಿಮಗೆ ಯಾವ ಸಂಗತಿ ಗೊತ್ತಿಲ್ಲವೋ ಆ ವಿಷಯದ ಬಗ್ಗೆ ಮಾತನಾಡೋಣ. ನಿಮಗೆ ಈಗಾಗಲೇ ಗೊತ್ತಿರುವ ಸಂಗತಿಗಳ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ, ಸುಮ್ಮನೇ ಸಮಯ ವ್ಯರ್ಥ. ನಿಮಗೆ ಗೊತ್ತಿಲ್ಲದ ಸಂಗತಿಗಳ ಮಾತನಾಡಿದರೇ ನಿಮಗೇ ಲಾಭ”

ಅದು ಒಬ್ಬ ಪ್ರಸಿದ್ಧ ವ್ಯಕ್ತಿಯನ್ನು ಎದುರುಗೊಳ್ಳುವ ವಿಚಿತ್ರ ಬಗೆಯಾಗಿತ್ತು. ಆದರೂ ಗುರ್ಜೇಫ್ ನ ಮಾತಿನಂತೆ ಉಸ್ಪೆನ್ಸ್ಕೀ ಆ ಕಾಗದವನ್ನು ತೆಗೆದುಕೊಂಡು ಕೋಣೆಯ ಮೂಲೆಗೆ ಹೋಗಿ ಕುಳಿತ. ಅವನು ತನಗೆ ಗೊತ್ತಿರುವ ಸಂಗತಿಗಳ ಬಗ್ಗೆ ಬರೆಯಲು ಶುರು ಮಾಡುತ್ತಿದ್ದಂತೆಯೇ ಒಂದು ವಿಚಿತ್ರ ತಳಮಳ ಅವನನ್ನು ಕಾಡತೊಡಗಿತು. ಉಸ್ಪೆನ್ಸ್ಕೀ ತನಗೆ ತಾನೇ ಪ್ರಶ್ನೆ ಮಾಡಿಕೊಂಡ,
“ ನನಗೆ ದೇವರ ಬಗ್ಗೆ ಗೊತ್ತಾ?”
ಅವನೊಳಗಿನಿಂದಲೇ ಉತ್ತರ ಬಂತು
“ ನನಗೆ ದೇವರ ಬಗ್ಗೆ ಗೊತ್ತು ಎನ್ನುವುದು ಮಾತ್ರ ಗೊತ್ತು ಆದರೆ ದೇವರ ಬಗ್ಗೆ ಗೊತ್ತಿಲ್ಲ”

“ ನನಗೆ ಆತ್ಮದ ಬಗ್ಗೆ ಗೊತ್ತಾ?”
“ ನನಗೆ ಆತ್ಮದ ಬಗ್ಗೆ ಗೊತ್ತು ಆದರೆ ಇದಕ್ಕಿಂತ ಹೆಚ್ಚು ಆತ್ಮದ ಬಗ್ಗೆ ಏನೂ ಗೊತ್ತಿಲ್ಲ.”

ಎರಡು ಮೂರು ಗಂಟೆ ಗುದ್ದಾಡಿದರೂ ಉಸ್ಪೆನ್ಸ್ಕೀ ಗೆ ಆ ಕಾಗದದ ಮೇಲೆ ಒಂದು ಪದವನ್ನೂ ಬರೆಯಲಾಗಲಿಲ್ಲ. ಉಸ್ಪೆನ್ಸ್ಕೀ ಖಾಲೀ ಕಾಗದವನ್ನ ಗುರ್ಜೇಫ್ ಗೆ ಕೊಟ್ಟು ಹೇಳಿದ,

“ ನನ್ನನ್ನು ಕ್ಷಮಿಸಿ. ಇಷ್ಟು ದಿನ ನಾನು ಭ್ರಮೆಯಲ್ಲಿದ್ದೆ. ನನಗೆ ಬಹಳಷ್ಚು ವಿಷಯಗಳು ಗೊತ್ತು ಎಂದುಕೊಂಡಿದ್ದೆ. ಆದರೆ ನೀವು ಪ್ರಶ್ನೆ ಕೇಳಿದ ರೀತಿ ಮತ್ತು ನೀವು ನನ್ನ ದಿಟ್ಟಿಸಿ ನೋಡಿದ ರೀತಿ ಕಾರಣವಾಗಿ, ಸಾಧಾರಣ ಎನಿಸುವ ಈ ಪ್ರಶ್ನೆ ನನಗೆ ಉತ್ತರಿಸಲು ಅಸಾಧ್ಯವಾಗಿಬಿಟ್ಟಿದೆ. ‘ನನಗೆ ಗೊತ್ತು’ ಎನ್ನುವ ಸೋಗಿನೊಂದಿಗೆ ನಿಮ್ಮ ಮನೆಯ ಬಾಗಿಲು ದಾಟಿ ಹೋಗುವ ಧೈರ್ಯ ನನಗಿಲ್ಲ.”

“ ಅಷ್ಟೆಲ್ಲಾ ಪ್ರಸಿದ್ಧ ಪುಸ್ತಕಗಳನ್ನ ಹೇಗೆ ಬರೆದೆ ನೀನು ಹಾಗಾದರೆ? ”
ಗುರ್ಜೇಫ್, ಉಸ್ಪೆನ್ಸ್ಕೀಯನ್ನ ಪ್ರಶ್ನೆ ಮಾಡಿದ.

“ ಅದೆಲ್ಲ ಈಗ ಚರ್ಚಿಸುವ ವಿಷಯವೇ ಅಲ್ಲ. ಇಷ್ಟು ದಿನ ನಾನು ನನ್ನ ಕಲಿಕೆಯ ಗುಂಗಿನಲ್ಲಿದ್ದೆ. ನೀವು ನನ್ನ ಜೊತೆ ಮಾತನಾಡಿದಾಗ ಮೊದಲ ಬಾರಿ ನನಗೆ ಪ್ರಶ್ನೆಯೊಂದು ಸ್ಪಷ್ಟವಾಗಿ ನನ್ನ ಅಜ್ಞಾನದ ದರ್ಶನ ಮಾಡಿಸಿತು ! ಈಗ ನನಗೆ ಏನೂ ಗೊತ್ತಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಇಷ್ಟು ದಿನ ನಾನು ಶಬ್ದಗಳ ಜೊತೆ ಆಟ ಆಡುತ್ತ ಅದನ್ನೇ ಜ್ಞಾನ ಎಂದುಕೊಂಡುಬಿಟ್ಟಿದ್ದೆ. ಇಷ್ಟು ದಿನದ ನನ್ನ ಸಾಧನೆ, ಕಲಿಕೆ ಶೂನ್ಯ. “
ಉಸ್ಪೆನ್ಸ್ಕೀ ನಿರಾಶನಾಗಿ ಉತ್ತರಿಸಿದ.

“ ಹಾಗಾದರೆ ಈಗ ನೀನು ಕಲಿಕೆಯ ಅತೀ ಪ್ರಾಥಮಿಕ ಮತ್ತು ಬಹಳ ಮುಖ್ಯವಾದ ಅಂಶ, ನಿನಗೆ ಏನೂ ಗೊತ್ತಿಲ್ಲ ಎನ್ನುವುದನ್ನ ತಿಳಿದುಕೊಂಡಿದ್ದೀಯ. ಈಗ ನೀನು ಮುಂದಿನ ಕಲಿಕೆಗೆ ಅರ್ಹ. “
ಗುರ್ಜೇಫ್, ಉಸ್ಪೆನ್ಸ್ಕೀ ಯನ್ನ ಸಮಾಧಾನ ಮಾಡಿದ.

ಕಲಿಕೆಯ ಮೊದಲ ಮೆಟ್ಟಿಲೆಂದರೆ, “ ನಿನಗೆ ಗೊತ್ತಿಲ್ಲ “ ಎನ್ನುವುದು ನಿಮಗೆ ಗೊತ್ತಿರುವುದು. ಹೀಗೆ ಒಪ್ಪಿಕೊಳ್ಳುವುದು ಮಹಾ ಧೈರ್ಯದ ವಿಷಯ ಅಷ್ಟೇ ಅಲ್ಲ ಮಹಾ ಸಾಧನೆಯ ಸಂಗತಿ ಕೂಡ.


(Source: Osho – The Beginning of the Beginning)

Leave a Reply