ಓಶೋ ‘ಬೋಧಿಧರ್ಮ’ನ ಬಗ್ಗೆ ಹೇಳಿದ ದೃಷ್ಟಾಂತ

“ಇನ್ನೊಬ್ಬರು ನಿಮ್ಮ ಬಗ್ಗೆ ಹೇಳುವ ಮಾತುಗಳಿಗೆ ಅನವಶ್ಯಕ ಮಹತ್ವ ಕೊಡಬೇಡಿ. ಅವರ ಮಾತುಗಳಿಂದ ಘಾಸಿಯಾಗುವುದು, ನೊಂದುಕೊಳ್ಳುವುದು ಒಂದು ಬಗೆಯ ಕಾಯಿಲೆ. ಅವರು ನಿಮಗೆ ಹುಚ್ಚು ಹಿಡಿಸುತ್ತಾರೆ. ನೀವು ನಿಮ್ಮ ಅನುಭವಗಳಿಗೆ ಮಹತ್ವ ಕೊಡಿ ಮತ್ತು ನಿಮ್ಮ ಅನುಭವಗಳಿಗೆ ಬದ್ಧರಾಗಿರಿ” ಅನ್ನುತ್ತಾನೆ ಬೋಧಿಧರ್ಮ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಬೋಧಿಧರ್ಮ ಚೈನಾದೊಳಗೆ ಪ್ರವೇಶ ಮಾಡಿದ್ದು ಹದಿನಾಲ್ಕು ನೂರು ವರ್ಷಗಳ ಹಿಂದೆ. ಅವನು ಚೈನಾಕ್ಕೆ ಬಂದಾಗ ಒಂದು ಚಪ್ಪಲಿಯನ್ನ ಕಾಲೊಳಗೆ ಹಾಕಿಕೊಂಡಿದ್ದ ಮತ್ತು ಇನ್ನೊಂದನ್ನ ತಲೆಯ ನೇಲೆ ಇಟ್ಟುಕೊಂಡಿದ್ದ. ಬೋಧಿಧರ್ಮ ನನ್ನು ಸ್ವಾಗತಿಸಲು ಸ್ವತಃ ಚೈನಾದ ಚಕ್ರವರ್ತಿಯೇ ಆಗಮಿಸಿದ್ದ. ಬೋಧಿಧರ್ಮ ನ ಈ ವಿಚಿತ್ರ ವರ್ತನೆಯನ್ನು ಗಮನಿಸಿ ಚಕ್ರವರ್ತಿ ‘ವೂ’ ಗಲಿಬಿಲಿಗೆ ಒಳಗಾದ. ಬೋಧಿಧರ್ಮ ನ ಬಗ್ಗೆ ಚೈನಾದಲ್ಲಿ ಆಗಲೆ ಹಬ್ಬಿದ್ದ ಹಲವಾರು ವದಂತಿಗಳನ್ನ ಕೇಳಿ ತಿಳಿದಿದ್ದ ಚಕ್ರವರ್ತಿ ವೂ , ಬೋಧಿಧರ್ಮ ವಿಲಕ್ಷಣ ಸ್ವಭಾವದವನೆಂದು ಗೊತ್ತಿದ್ದರೂ ಅವನು ಜ್ಞಾನೋದಯವನ್ನು ಹೊಂದಿದ್ದವನಾಗಿದ್ದರಿಂದ ಅವನನ್ನು ಎದುರುಗೊಳ್ಳಲು ಸ್ವತಃ ತಾನೇ ಬಂದಿದ್ದ. ಚಕ್ರವರ್ತಿ ಮತ್ತು ಅವನ ಪರಿವಾರ ಚಪ್ಪಲಿ ತಲೆ ಮೇಲೆ ಹೊತ್ತು ನಗುತ್ತ ನಿಂತಿದ್ದ ಬೋಧಿಧರ್ಮ ನನ್ನು ಕಂಡು ಆಘಾತಕ್ಕೊಳಗಾದರು.

ಎಲ್ಲ ಜನರ ಮುಂದೆಯೇ ಬೋಧಿಧರ್ಮನನ್ನು ಪ್ರಶ್ನೆ ಮಾಡುವುದು ಅತಿಥಿ ಧರ್ಮವಲ್ಲವೆಂಬುದನ್ನ ತಿಳಿದುಕೊಂಡಿದ್ದ ಚಕ್ರವರ್ತಿ, ಎಲ್ಲ ಜನ ಹೊರಟುಹೋದ ಮೇಲೆ ಅರಮವೆಯ ಕೋಣೆಯಲ್ಲಿ ತಾವಿಬ್ಬರೇ ಇರುವಾಗ ಬೋಧಿಧರ್ಮನನ್ನು ಪ್ರಶ್ನೆ ಮಾಡಿದ. “ಯಾಕೆ ನೀನು ಹುಚ್ಚನಂತೆ ವರ್ತಿಸುತ್ತಿದ್ದೀ ? ತಲೆ ಮೇಲೆ ಚಪ್ಪಲಿ ಇಟ್ಟುಕೊಂಡಿದ್ದು ಯಾಕೆ?”

ರಾಜನ ಪ್ರಶ್ನೆಗೆ ಬೋಧಿಧರ್ಮ ಗಹಗಹಿಸಿ ನಗುತ್ತ ಉತ್ತರಿಸಿದ, “ನನ್ನನ್ನೇ ನಾನು ತಮಾಷೆ ಮಾಡಿಕೊಳ್ಳಬಲ್ಲೆ, ಮತ್ತು ನನ್ನ ಬಗ್ಗೆ ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ನಿಮಗೆ ನನ್ನ ನಿಜ ರೂಪವನ್ನು ನಾನು ತೋರಿಸಬೇಕಿತ್ತು. ನಾನು ಎಂಥ ಮನುಷ್ಯನೆಂದರೆ, ನನ್ನ ಕಾಲಿಗೆ ಕೊಡುವುದಕ್ಕಿಂತ ಹೆಚ್ಚು ಮಹತ್ವವನ್ನ ನಾನು ನನ್ನ ತಲೆಗೆ ಕೊಡುವುದಿಲ್ಲ. ನನಗೆ ಕಾಲು, ತಲೆ ಎರಡರ ನಡುವೆ ಗೌರವದ ವಿಷಯದಲ್ಲಿ ಯಾವ ವ್ಯತ್ಯಾಸವೂ ಇಲ್ಲ. ನಾನು ಯಾವುದನ್ನೂ ಮೇಲು ಕೀಳು ಎಂದುಕೊಳ್ಳುವುದಿಲ್ಲ. ಮತ್ತು ನಾನು ನಿನಗೆ ಹೇಳಬೇಕಾಗಿದ್ದ ಇನ್ನೊಂದು ವಿಷಯವೆಂದರೆ, ನಾನು ನನ್ನ ಬಗ್ಗೆ ಇನ್ನೊಬ್ಬರು ಹೇಳುವ ಯಾವುದಕ್ಕೂ ಮಹತ್ವ ಕೊಡುವುದಿಲ್ಲ. ನೀನು ಪ್ರಶ್ನೆ ಕೇಳಿದ್ದು ಒಳ್ಳೆಯದಾಯ್ತು, ನಾನು ಎಂಥವನು ಎನ್ನುವುದು ನಿಮಗೆ ತಿಳಿಯಬೇಕಿತ್ತು.

ಇನ್ನೊಬ್ಬರು ನಿಮ್ಮ ಬಗ್ಗೆ ಹೇಳುವ ಮಾತುಗಳಿಗೆ ಅನವಶ್ಯಕ ಮಹತ್ವ ಕೊಡಬೇಡಿ. ಅವರ ಮಾತುಗಳಿಂದ ಘಾಸಿಯಾಗುವುದು, ನೊಂದುಕೊಳ್ಳುವುದು ಒಂದು ಬಗೆಯ ಕಾಯಿಲೆ. ಅವರು ನಿಮಗೆ ಹುಚ್ಚು ಹಿಡಿಸುತ್ತಾರೆ. ಈ ಜನ ಯಾರು? ಮತ್ತು ನಿಮಗೆ ಯಾಕೆ ಅವರ ಮಾತುಗಳಲ್ಲಿ ಆಸಕ್ತಿ? ಯಾಕೆ ಇನ್ನೊಬ್ಬರ ಅಭಿಪ್ರಾಯಗಳಿಗೆ ಅನವಶ್ಯಕ ಮಹತ್ವ ಕೊಡಬೇಕು? ನಿಮ್ಮ ಅನುಭವಗಳಿಗೆ ಮಹತ್ವ ಕೊಡಿ ಮತ್ತು ನಿಮ್ಮ ಅನುಭವಗಳಿಗೆ ಬದ್ಧರಾಗಿರಿ. ಗಂಭೀರವಾಗಿರುವುದು ನಿಮಗೆ ಇಷ್ಟವಾದರೆ ಹಾಗೇ ಇರಿ, ನಿಮ್ಮ ಅನುಭವ ನಿಮ್ಮನ್ನು ಶಾಂತ , ಮೌನಿಯನ್ನಾಗಿಸಿದ್ದರೆ ಹಾಗೇ ಇರಿ. ಇನ್ನೊಬ್ಬರು ನಿಮ್ಮ ಅನುಭವಗಳಿಗೆ ಅತೀತರು ನಿಮ್ಮ ಇರುವಿಕೆಯ ಬಗ್ಗೆ ಅವರಿಗೆ ಗೊತ್ತಿಲ್ಲ, ಅವರು ತಮ್ಮ ಅನುಭವವನ್ನ ನಿಮ್ಮ ಮೇಲೆ ಹೇರಲು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಕಾಳಜಿಗೆ, ನೊಂದುಕೊಳ್ಳುವುದಕ್ಕೆ ಯಾವ ಆಸ್ಪದವನ್ನೂ ಕೊಡಬೇಡಿ.

ಈ ಬೋಧಿಧರ್ಮ ಒಂದು ಅಪರೂಪದ ರತ್ನ ; ಅವನಿಗೆ ಹೋಲಿಸಬಹುದಾದವರು ಕೆಲವೇ ಕೆಲವರು. ಬೋಧಿಧರ್ಮ ಏನು ಹೇಳುತ್ತಿದ್ದಾನೆ ? ನಿಮ್ಮ ಅಧ್ಯಾತ್ಮದ ದಾರಿಯಲ್ಲಿ ನೀವು ಒಂಟಿ ಪ್ರಯಾಣಿಕರು, ಸಮಾಜ, ಸಂಸ್ಕೃತಿಗಳ ಒತ್ತಡಕ್ಕೆ ನೀವು ವಿತಲಿತರಾಗಬೇಕಿಲ್ಲ.

Leave a Reply