ಒಂದು ಸೂಫಿ ದೃಷ್ಟಾಂತ ಕಥೆ……

“ನಮಗೆ ನಮ್ಮ ಸಂಕಟಗಳು ಪರಿಚಿತ, ಅವುಗಳ ಜೊತೆ ಹೊಂದಾಣಿಕೆಯಾಗಿಬಿಟ್ಟಿದೆ, ಅವುಗಳ ಜೊತೆ ಬದುಕುವುದನ್ನ ರೂಢಿ ಮಾಡಿಕೊಂಡಿದ್ದೇವೆ. ಹೊಸ ಸಂಕಟಗಳಿಂದ ದೂರ ಇರುವುದೇ ಒಳಿತು” ಅನ್ನುತ್ತಾರೆ ಓಶೋ. | ಕನ್ನಡಕ್ಕೆ : ಚಿದಂಬರ ನರೇಂದ್ರ

ಒಬ್ಬ ಮನುಷ್ಯ ಪ್ರತಿದಿನ ದೇವರನ್ನು ಪ್ರಾರ್ಥಿಸುತ್ತಿದ್ದ ಮತ್ತು ತನ್ನ ಒಂದೇ ಬೇಡಿಕೆಯನ್ನ ಪ್ರತಿದಿನವೂ ದೇವರ ಮುಂದಿಡುತ್ತಿದ್ದ. “ ನನ್ನ ಒಂದೇ ಒಂದು ಬೇಡಿಕೆಯನ್ನ ಪೂರೈಸು ದೇವರೆ! ಇಷ್ಟು ದಿನದಿಂದ ನಾನು ನಿನ್ನ ಪ್ರಾರ್ಥನೆ ಮಾಡುತ್ತಿದ್ದೆನೆ, ನನ್ನ ಮೇಲೆ ನಿನಗೆ ಯಾಕೆ ಕರುಣೆ ಇಲ್ಲ ? ಈ ಜಗತ್ತಿನಲ್ಲಿ ನನ್ನಷ್ಟು ಸಂಕಟದ ಮನುಷ್ಯ ಯಾರೂ ಇಲ್ಲ. ಯಾಕೆ ನೀನು ಇಷ್ಟು ಸಂಕಟಗಳನ್ನು ನನಗೊಬ್ಬನಿಗೇ ಕೊಟ್ಟಿರುವೆ? ನಾನೇನು ಸುಖ ಸಂತೋಷಗಳನ್ನು ಬೇಡುತ್ತಿಲ್ಲ. ನನ್ನ ಸಂಕಟವನ್ನ ಇನ್ನೊಬ್ಬರ ಜೊತೆ ವಿನಿಮಯ ಮಾಡಿಕೊಳ್ಳುವ ಅವಕಾಶ ಮಾಡಿಕೊಡು, ಯಾರೊಂದಿಗಾದರೂ. ಇಷ್ಟು ಮಾತ್ರದ ನನ್ನ ಬೇಡಿಕೆಯನ್ನ ನೀನು ಪೂರೈಸಲಾರೆಯಾ? ಈ ಒಂದು ಉಪಕಾರವನ್ನು ಮಾತ್ರ ನಾನು ನಿನ್ನಿಂದ ನಿರೀಕ್ಷಿಸುತ್ತಿದ್ದೆನೆ. ನನ್ನ ಸಂಕಟವನ್ನ ಬೇರೆ ಯಾರೊಂದಿಗಾದರೂ ಬದಲಾಯಿಸಿಕೊಳ್ಳುವ ಅವಕಾಶ ಮಾಡಿಕೊಡಲಾರೆಯಾ? “ ಆ ಮನುಷ್ಯ ದೇವರನ್ನು ಅತ್ಯಂತ ದೀನನಾಗಿ ಬೇಡಿಕೊಳ್ಳುತ್ತಿದ್ದ.

ಒಂದು ದಿನ ಆ ಊರಿನಲ್ಲಿ ಆಕಾಶವಾಣಿಯಾಯಿತು. ದೇವರು ತಾನೇ ಸ್ವತಃ ಆ ಊರಿನ ಜನರನ್ನು ಉದ್ದೇಶಿಸಿ ಮಾತನಾಡಿದ, “ ಇವತ್ತು ಸಂಜೆ ಎಲ್ಲರೂ ನಿಮ್ಮ ನಿಮ್ಮ ಸಂಕಟಗಳನ್ನು ಒಟ್ಟು ಮಾಡಿ ಒಂದು ಚೀಲದಲ್ಲಿ ಹಾಕಿಕೊಂಡು ಊರ ಹೊರಗಿನ ದೇವಸ್ಥಾನಕ್ಕೆ ಬನ್ನಿ. “ ಈ ದೇವವಾಣಿಯನ್ನು ಕೇಳಿ ಆ ಮನುಷ್ಯನಿಗೆ ಬಹಳ ಸಂತೋಷವಾಯಿತು. ಅವನು ಕೂಡಲೇ ತನ್ನ ಸಂಕಟಗಳನ್ನೆಲ್ಲ ಒಟ್ಟುಮಾಡಿ ಒಂದು ಚೀಲದಲ್ಲಿ ಹಾಕಿಕೊಂಡು ದೇವಸ್ಥಾನಕ್ಕೆ ಹೊರಟ. ದಾರಿಯಲ್ಲಿ ಅವನಿಗೆ ಎಲ್ಲ ಜನರೂ ತಮ್ಮ ಚೀಲಗಳೊಂದಿಗೆ, ಕೆಲವರು ಮೂಟೆಗಳೊಂದಿಗೆ ದೇವಸ್ಥಾನಕ್ಕೆ ಹೊರಟಿರುವುದು ಕಾಣಿಸಿತು. ಅವರಲ್ಲಿ ಆ ಊರಿನ ಶ್ರೀಮಂತರೂ ಇರುವುದನ್ನ ಆ ಮನುಷ್ಯ ಗಮನಿಸಿದ. ಸುಂದರವಾದ ದಿರಿಸುಗಳನ್ನು ಪುರುಷರು, ಸ್ತ್ರೀಯರೂ, ಮಕ್ಕಳು, ಪಂಡಿತರೂ, ಪುರೋಹಿತರೂ, ವ್ಯಾಪಾರಿಗಳೂ ಎಲ್ಲರೂ ತಮ್ಮ ತಮ್ಮ ಚೀಲ, ಮೂಟೆಗಳೊಂದಿಗೆ ದೇವಸ್ಥಾನದ ದಾರಿ ಯಲ್ಲಿ ಲಗುಬಗೆಯಿಂದ ಹೆಜ್ಜೆ ಹಾಕುತ್ತಿದ್ದರು. ಇವರನ್ನೆಲ್ಲ ನೋಡಿದ ಮೇಲೆ ಆ ಮನುಷ್ಯನಿಗೆ ಒಳಗೊಳಗೇ ಕಸಿವಿಸಿ ಶುರುವಾಯಿತು. ಅವನು ತಾನು ದೇವಸ್ಥಾನಕ್ಕೆ ಹೋಗುವುದೋ ಬೇಡವೋ ಎಂದು ಯೋಚಿಸತೊಡಗಿದ. ಕೊನೆಗೆ ಏನಾದರೂ ಆಗಲಿ, ಇಷ್ಟುದಿನಗಳ ತನ್ನ ಬೇಡಿಕೆಯ ಬಗ್ಗೆ ದೇವರು ಏನೋ ಮಾಡುತ್ತಿದ್ದಾನೆ, ಒಮ್ಮೆ ನೋಡಿದರಾಯ್ತು ಎಂದು ಅವನೂ ದೇವಸ್ಥಾನವನ್ನು ತಲುಪಿದ.

ಊರಿನ ಸಮಸ್ತರೂ ದೇವಸ್ಥಾನ ತಲುಪಿದ ಮೇಲೆ, ದೇವ ವಾಣಿ ನುಡಿಯಿತು, “ ಎಲ್ಲರೂ ನಿಮ್ಮ ನಿಮ್ಮ ಸಂಕಟದ ಚೀಲಗಳನ್ನ ದೇವಸ್ಥಾನದ ಆವರಣದೊಳಗೆ ಇಡಿ. “ ಎಲ್ಲರೂ ತಮ್ಮ ಚೀಲಗಳನ್ನ ದೇವಸ್ಥಾನದ ಆವರಣದೊಳಗಿಟ್ಟು, ದೇವರ ಮುಂದಿನ ಆದೇಶಕ್ಕೆ ಕಾಯತೊಡಗಿದರು. “ ಈಗ ಎಲ್ಲರೂ ನಿಮಗೆ ಬೇಕಾದ , ನಿಮ್ಮ ಇಷ್ಟದ ಚೀಲವನ್ನ ತೆಗೆದುಕೊಳ್ಳಿ “ ಮತ್ತೊಮ್ಮೆ ದೇವವಾಣಿ ನುಡಿಯಿತು. ಆಗಲೇ ಒಂದು ಪವಾಡ ನಡೆದುಹೋಯಿತು, ಆಶ್ಚರ್ಯಕರವೆಂಬಂತೆ ಎಲ್ಲರೂ ತಮ್ಮ ತಮ್ಮ ಚೀಲ, ಮೂಟೆಗಳನ್ನೇ ತೆಗೆದುಕೊಳ್ಳಲು ಶುರುಮಾಡಿದರು.ನೂಕು ನುಗ್ಗಲು ಶುರುವಾಯ್ತು. ಈ ಮನುಷ್ಯನೂ ತನ್ನ ಚೀಲವನ್ನೇ ತೆಗೆದುಕೊಳ್ಳಲು ಧಾವಿಸಿಹೋದ. ತನ್ನ ಚೀಲವನ್ನು ಬೇರೆ ಯಾರಾದರೂ ತೆಗೆದುಕೊಂಡರೆ, ತಾನು ಬೇರೆ ಇನ್ನಾರದಾದರೂ ಚೀಲ ತೆಗೆದುಕೊಳ್ಳಬೇಕಾಗಿಬಂದರೆ ತಾನು ಯಾವ ಹೊಸ ಸಂಕಷ್ಟಗಳನ್ನು ಎದುರಿಸಬೇಕಾಗಬಹುದು ಎಂದು ಯೋಚಿಸಿ ಗಾಬರಿಯಾದ. ಕೊನೆಗೆ ತನ್ನ ಚೀಲವೇ ತನ್ನ ಕೈಗೆ ಸಿಕ್ಕಾಗ ಅವನಿಗೆ ಬಹಳ ಸಂತೋಷವಾಯಿತು!

ನಮಗೆ ನಮ್ಮ ಸಂಕಟಗಳು ಪರಿಚಿತ, ಅವುಗಳ ಜೊತೆ ಹೊಂದಾಣಿಕೆಯಾಗಿಬಿಟ್ಟಿದೆ, ಅವುಗಳ ಜೊತೆ ಬದುಕುವುದನ್ನ ರೂಢಿ ಮಾಡಿಕೊಂಡಿದ್ದೇವೆ. ಹೊಸ ಸಂಕಟಗಳಿಂದ ದೂರ ಇರುವುದೇ ಒಳಿತು.


As told by Osho in “The Dhammapada: The way of the Buddha”

******************************

Leave a Reply