ನೀವು ನಿದ್ದೆಯಲ್ಲಿರುವ ಬುದ್ಧರು. ನಿದ್ದೆಯಲ್ಲಿರುವ ಬುದ್ಧನನ್ನು ಬೋಧಿಸತ್ವ ಎನ್ನುತ್ತಾರೆ. ಅವನು ಬುದ್ಧನ ತಿರುಳಿನಂತೆ, ಬೀಜದ ಸ್ಥಿತಿಯಲ್ಲಿರುವ ಬುದ್ಧನಂತೆ… | ಓಶೋ ರಜನೀಶ್; ಕನ್ನಡಕ್ಕೆ : ಚಿದಂಬರ ನರೇಂದ್ರ
ಒಂದು ಸಂಜೆ ಮಾಸ್ಟರ್ ರೋಶಿ ತಮ್ಮ ಉಪನ್ಯಾಸದಲ್ಲಿ
“ ನೀವು ಬೌದ್ಧರಾಗಿರದಿದ್ದರೆ, ಬೌದ್ಧರು ಮತ್ತು ಬೌದ್ಧರಲ್ಲದವರು ಎಂಬ ಎರಡು ಗುಂಪುಗಳ ಬಗ್ಗೆ ನೀವು ವಿಚಾರ ಮಾಡುತ್ತೀರಿ ಆದರೆ ಅಕಸ್ಮಾತ್ ನೀವು ಬೌದ್ಧರಾಗಿದ್ದರೆ ನಿಮಗೆ ಎಲ್ಲರೂ ಬೌದ್ಧರೇ ತಿಗಣೆಗಳು ಕೂಡ”
ಎಲ್ಲರೂ ಬುದ್ಧರೇ, ಕೆಲವರು ನಿದ್ದೆಯಲ್ಲಿರುವ ಬುದ್ಧರಾದರೆ, ಕೆಲವರು ಜಾಗೃತ ಬುದ್ಧರು. ನಿದ್ರೆ ಮತ್ತು ಎಚ್ಚರಿಕೆಯ ನಡುವೆ ಯಾವ ದಾರಿಯೂ ಇಲ್ಲ. ಪ್ರತಿ ದಿನ ಮುಂಜಾನೆ ನೀವು ನಿದ್ದೆಯಿಂದ ಎದ್ದಾಗ ಯಾವತ್ತಾದರೂ ವಿಚಾರ ಮಾಡಿದ್ದೀರಾ, ನಿದ್ದೆ ಎಲ್ಲಿ ಮುಗಿಯಿತು ಮತ್ತು ಎಚ್ಚರಿಕೆ ಎಲ್ಲಿಂದ ಶುರುವಾಯಿತು? ನಿದ್ದೆ ಮತ್ತು ಎಚ್ಚರಿಕೆಯ ನಡುವಿನ ಅಂತರ, ಇಲ್ಲವೇ ಇಲ್ಲದಷ್ಟು ಸೂಕ್ಷ್ಮ. ಯಾವುದು ಸಾಮಾನ್ಯ ಜಗತ್ತಿನಲ್ಲಿ ಸತ್ಯವೋ ಆತ್ಯಂತಿಕ ಅನುಭವದಲ್ಲಿಯೂ ಅದು ಸತ್ಯ.
ನೀವು ನಿದ್ದೆಯಲ್ಲಿರುವ ಬುದ್ಧರು. ನಿದ್ದೆಯಲ್ಲಿರುವ ಬುದ್ಧನನ್ನು ಬೋಧಿಸತ್ವ ಎನ್ನುತ್ತಾರೆ. ಅವನು ಬುದ್ಧನ ತಿರುಳಿನಂತೆ, ಬೀಜದ ಸ್ಥಿತಿಯಲ್ಲಿರುವ ಬುದ್ಧನಂತೆ. ಈ ಬೀಜ ಮಣ್ಣಿನಲ್ಲಿ ಮಾಯವಾಗಲಿ, ಅದರ ಮೇಲೆ ಮಳೆ ಸುರಿಯಲಿ, ಬೀಜ ಮೊಳಕೆಯೊಡೆದು ಸಸಿಯಾಗಿ, ಗಿಡವಾಗಿ, ಆ ಗಿಡದಲ್ಲಿ ಹೂವು ಅರಳಲಿ. ಬೋಧಿಸತ್ವ ಹೀಗೆ ಬುದ್ಧನಾಗುವಂತೆ, ನೀವು ನಿದ್ದೆಯಲ್ಲಿರುವ ಬುದ್ಧರು, ಎಚ್ಚರದ ಬುದ್ಧರಾಗಲಿದ್ದೀರಿ. ಯಾವ ವ್ಯತ್ಯಾಸವೂ ಇಲ್ಲ, ಎಲ್ಲರೂ ಬುದ್ಧರೇ, ಕೆಲವರು ನಿದ್ದೆಯಲ್ಲಿದ್ದಾರೆ ಕೆಲವರು ಎಚ್ಚರವಾಗಿದ್ದಾರಷ್ಟೇ.
ಆದ್ದರಿಂದಲೇ ನಾನು ನಿಮ್ಮನ್ನೆಲ್ಲ ಬುದ್ಧರು ಎಂದೇ ಸಂಬೋಧಿಸುತ್ತೇನೆ. ಕೆಲವರಿಗೆ ನಿನ್ನೆ ಎಚ್ಚರವಾಗಿದೆ, ಕೆಲವರಿಗೆ ಇವತ್ತು ಎಚ್ಚರವಾಗಲಿದೆ, ಇನ್ನೂ ಕೆಲವರು ಎಚ್ಚರವಾಗಲು ನಾಳೆಗಾಗಿ ಕಾಯಬೇಕು. ಬುದ್ಧತ್ವ ಎಲ್ಲರಲ್ಲೂ ಇದೆ, ಕೆಲವರು ನಿದ್ದೆಯಲ್ಲಿದ್ದಾರೆ, ಕೆಲವರು ಎಚ್ಚರವಾಗಿದ್ದಾರಷ್ಟೇ.