ಬುದ್ಧ ಮಾತು ಹೇಳಿದ, “ ಈ ವ್ಯಕ್ತಿಯನ್ನ ನೋಡು, ಇವನು ತನ್ನ ತಂದೆ ತಾಯಿ ಇಬ್ಬರನ್ನೂ ಕೊಂದು ಇಲ್ಲಿಗೆ ಬಂದಿದ್ದಾನೆ.” ಬುದ್ಧನ ಮಾತು ಕೇಳಿ ಮಹಾರಾಜ ಪ್ರಸೇನಜೀತ್ ತೀವ್ರ ಆತಂಕಿತನಾದ. ಮುಂದೆ … ~ ಓಶೋ| ಕನ್ನಡಕ್ಕೆ: ಚಿದಂಬರ ನರೇಂದ್ರ
ಜೀಸಸ್ ತನ್ನ ಶಿಷ್ಯರಿಗೆ ಹೇಳುತ್ತಾನೆ, “ಎಲ್ಲಿಯವರೆಗೆ ನೀವು ನಿಮ್ಮ ತಂದೆ ತಾಯಿಯರಿಂದ ಕಳಚಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನನ್ನನ್ನು ಹಿಂಬಾಲಿಸುವುದು ಅಸಾಧ್ಯ.”
ಒಮ್ಮೆ ಮಹಾರಾಜ ಪ್ರಸೇನಜೀತ್ ಬುದ್ಧನನ್ನು ನೋಡಲು ಬಂದ. ಉಭಯಕೋಶಲೋಪರಿಯಾದ ನಂತರ ಮಹಾರಾಜ ಪ್ರಸೇನಜೀತ್ ಬುದ್ಧನಿಗೆ ಒಂದು ಮಾತು ಹೇಳಿದ, “ ನನಗೂ ನಿನ್ನ ಸನ್ಯಾಸಿಯಾಗುವ, ನಿನ್ನ ಶಿಷ್ಯನಾಗುವ ಆಸೆ ಇತ್ತು, ಆದರೆ ನನ್ನ ತಾಯಿಗೆ ಈಗ ಬಹಳ ವಯಸ್ಸಾಗಿದೆ, ಅವಳಿಗೆಲ್ಲಿ ನೋವಾಗುವುದೋ ಎಂದು ಆ ನಿರ್ಧಾರ ಮಾಡಲಿಲ್ಲ.” ಅಷ್ಟರಲ್ಲಿಯೇ ಬುದ್ಧನನ್ನು ಕಾಣಲು ಅವನ ಶಿಷ್ಯನಾಗಿದ್ದ ಒಬ್ಬ ವೃದ್ಧ ಸನ್ಯಾಸಿ ಬಂದ, ಬಂದವನೇ ಬುದ್ಧನಿಗೆ ನಮಸ್ಕರಿಸಿ, “ ನಾನು ನಿನ್ನ ಆಶಯಗಳನ್ನ ಜನರಿಗೆ ಮುಟ್ಟಿಸಲು ಒಂದು ದೀರ್ಘ ಪ್ರವಾಸಕ್ಕೆ ಹೊರಡುತ್ತಿದ್ದೇನೆ, ಆಶೀರ್ವದಿಸು.” ಎಂದು ಬೇಡಿಕೊಂಡ.
ಬುದ್ಧ, ಮಹಾರಾಜ ಪ್ರಸೇನಜೀತ್ ನತ್ತ ತಿರುಗಿ ಹೇಳಿದ, “ ಈ ಮನುಷ್ಯ ನಿನ್ನ ತೊಳಲಾಟಕ್ಕೆ ಉತ್ತರವಾಗಬಲ್ಲ.”
ಮಹಾರಾಜನಿಗೆ ಬುದ್ಧನ ಮಾತು ಅರ್ಥವಾಗಲಿಲ್ಲ, “ ಈ ಸನ್ಯಾಸಿ ನನ್ನ ಸಂದಿಗ್ಧಕ್ಕೆ ಹೇಗೆ ಪರಿಹಾರವಾಗಬಲ್ಲ ಬುದ್ಧ? “ ಮಹಾರಾಜ, ಬುದ್ಧನನ್ನು ಮತ್ತೆ ಪ್ರಶ್ನಿಸಿದ.
ಬುದ್ಧ ಮಾತು ಮುಂದವರೆಸಿದ, “ ಈ ವ್ಯಕ್ತಿಯನ್ನ ನೋಡು, ಇವನು ತನ್ನ ತಂದೆ ತಾಯಿ ಇಬ್ಬರನ್ನೂ ಕೊಂದು ಇಲ್ಲಿಗೆ ಬಂದಿದ್ದಾನೆ.”
ಬುದ್ಧನ ಮಾತು ಕೇಳಿ ಮಹಾರಾಜ ಪ್ರಸೇನಜೀತ್ ತೀವ್ರ ಆತಂಕಿತನಾದ; ಈ ಸನ್ಯಾಸಿ ತನ್ನ ತಂದೆ ತಾಯಿಯರನ್ನು ಕೊಂದು ಬಂದಿದ್ದಾನೆ! ಆದರೂ ಅವನ ಬಗ್ಗೆ ಬುದ್ಧ ಅಭಿಮಾನದಿಂದ ಮಾತನಾಡುತ್ತಿದ್ದಾನೆ!! ಮಹಾರಾಜನಿಗೆ ಈ ಸಂಗತಿಯನ್ನ ಅರಗಿಸಿಕೊಳ್ಳುವುದು ಅಸಾಧ್ಯವಾಯಿತು. ಸನ್ಯಾಸಿ ಅಲ್ಲಿಂದ ಹೊರಡುತ್ತಲೇ ಮಹಾರಾಜ, ಬುದ್ಧನನ್ನು ಕೇಳಿದ, “ಬುದ್ಧ ನಿನ್ನ ಮಾತು ಸ್ವಲ್ಪ ಬಿಡಿಸಿ ಹೇಳಬಲ್ಲೆಯಾ?”
“ ಹೌದು, ಆ ಸನ್ಯಾಸಿ ತನ್ನ ತಂದೆ ತಾಯಿಯರನ್ನು ಕೊಂದಿರುವುದು ನಿಜ, ಆದರೆ ದೈಹಿಕವಾಗಿ ಅಲ್ಲ, ಕೊಂದದ್ದು ಮಾನಸಿಕವಾಗಿ. ಅವನು ತನ್ನ ಆಳದಲ್ಲಿ ತನ್ನ ತಂದೆ ತಾಯಿಯರ ಪ್ರಭಾವದಿಂದ ಕಳಚಿಕೊಂಡಿದ್ದಾನೆ.” ಬುದ್ಧ ವಿವರಿಸಿ ಹೇಳಿದ.
ತಂದೆ ತಾಯಿಯರನ್ನು ಕೊಲ್ಲುವುದೆಂದರೆ ಅವರಿಗೆ ಅಂಟಿಕೊಳ್ಳುವುದರಿಂದ ಬಿಡುಗಡೆ ಪಡೆಯುವುದು. ಮುಂದುವರೆದು ಹೇಳುವುದಾದರೆ, ನಿಮ್ಮನ್ನ ರೂಪಿಸಿದ್ದು ಕೇವಲ ನಿಮ್ಮ ತಂದೆ ತಾಯಿ ಮಾತ್ರ ಅಲ್ಲ , ನಿಮ್ಮ ಸುತ್ತಲಿನ ಸಂಸ್ಕೃತಿ ಕೂಡ. ಸತ್ಯವನ್ನು ಹುಡುಕಲು ಹೊರಡುವವ ಈ ಎಲ್ಲ ಕಲಿಕೆಗಳಿಂದ, ನಂಬಿಕೆಗಳಿಂದ, ಪೂರ್ವಾಗ್ರಹಗಳಿಂದ ಮುಕ್ತನಾಗದ ಹೊರತು ಸತ್ಯವನ್ನು ಗುರುತಿಯಲಾರ. ಕೇವಲ ಹಡೆದ ತಂದೆ ತಾಯಿ ಮಾತ್ರವಲ್ಲ, ನಿಮಗೆ ವಿದ್ಯೆ ಕಲಿಸಿದ ಗುರು, ನೀವು ಓದಿದ ಶಾಸ್ತ್ರ ಪವಿತ್ರ ಗ್ರಂಥಗಳು, ನೀವು ಅನುಸರಿಸುತ್ತಿರುವ ಅಧ್ಯಾತ್ಮಿಕ ಗುರು ಎಲ್ಲವನ್ನೂ ಬಿಟ್ಟು ನಿಂತಾಗಲಷ್ಟೆ ನಿಮಗೆ ಸತ್ಯದ ದಾರಿ ತೆರೆದುಕೊಳ್ಳುವುದು. ಕೊಲ್ಲುವುದೆಂದರೆ ದೈಹಿಕವಾಗಿ ಅಲ್ಲ, ಅವರನ್ನು ದ್ವೇಷ ಮಾಡುವುದಲ್ಲ, ಅವರ ಪ್ರಭಾವದಿಂದ ಮುಕ್ತರಾಗುವುದು.
ಇದನ್ನೇ ಜೀಸಸ್ ಹೇಳಿದ್ದು, “ ನಿಮ್ಮ ತಂದೆ ತಾಯಿಯರಿಂದ ಕಳಚಿಕೊಳ್ಳದ ಹೊರತು……” ಕಳಚಿಕೊಳ್ಳುವುದೆಂದರೆ ದ್ವೇಷಿಸುವುದಲ್ಲ, ನಿಮ್ಮಆಳದಲ್ಲಿ ನೆಲೆಗೊಂಡಿರುವ ಅವರ ಪ್ರಭಾವದಿಂದ ಹೊರಗೆ ಬರುವುದು, ಅವರಿಗೆ ಅಂಟಿಕೊಳ್ಳದಿರುವುದು. ಆಗ ಮಾತ್ರ ನೀವು ಪ್ರಬುದ್ಧರಾಗುವುದು ಸಾಧ್ಯ, ಎಲ್ಲ ನಂಬಿಕೆ, ಎಲ್ಲ ಪೂರ್ವಾಗ್ರಹಗಳನ್ನು ತ್ಯಜಿಸಿದಾಗ ಮಾತ್ರ ನೀವು ಸತ್ಯವನ್ನು ನಿಮ್ಮೊಳಗೆ ಆಹ್ವಾನಿಸಬಲ್ಲಿರಿ. ಆಗ ಮಾತ್ರ ನೀವು ಸ್ವತಃ ಕಂಡುಕೊಂಡ ಬೆಳಕಲ್ಲಿ ನೀವು ನಡೆಯುವುದು ಸಾಧ್ಯ. ಆದರೆ ಮನಸ್ಸು ಸೂಕ್ಷ್ಮ ತಂತ್ರಗಳನ್ನು ರಚಿಸುತ್ತ ನಿಮ್ಮನ್ನು ವಾಸ್ತವದಿಂದ ದೂರ ಇಡುವ ಪ್ರಯತ್ನ ಮಾಡುತ್ತಲೇ ಇರುತ್ತದೆ.
ಒಮ್ಮೆ ಮುಲ್ಲಾ ನಸರುದ್ದೀನ್ ಮೇಲಿಂದ ಮೇಲೆ ತನ್ನ ಕತ್ತೆಯನ್ನ ಕಳೆದುಕೊಳ್ಳುತ್ತಿದ್ದ. ಒಮ್ಮೆ ಹೀಗೆ ತನ್ನಕಳೆದುಕೊಂಡ ಕತ್ತೆಯನ್ನ ಹುಡುಕುತ್ತ ಮುಲ್ಲಾ ಹಾಡುತ್ತ, ಕುಣಿಯುತ್ತ ಭಗವಂತನಿಗೆ ಧನ್ಯವಾದ ಹೇಳುತ್ತ ಒಂದು ಊರಿನ ರಸ್ತೆಯ ಮೂಲಕ ಹಾಯ್ದು ಹೋಗುತ್ತಿದ್ದ.
ಮುಲ್ಲಾ ಇಷ್ಟು ಖುಶಿಯಾಗಿದ್ದನ್ನ ಕಂಡ ಒಬ್ಬ ದಾರಿಹೋಕ ಪ್ರಶ್ನೆ ಮಾಡಿದ.
“ ಯಾಕೆ ನಸರುದ್ದೀನ ಇಷ್ಟು ಖುಶಿಯಾಗಿದ್ದೀಯ ? ಯಾರೋ ಹೇಳಿದರು ನಿನ್ನ ನೆಚ್ಚಿನ ಕತ್ತೆ ಕಾಣೆಯಾಗಿದೆಯೆಂದು, ಆದರೂ ನೀನು ಖುಶಿಯಾಗಿದ್ದೀಯಲ್ಲ, ಕತ್ತೆ ಸಿಕ್ತಾ? “
“ ಇನ್ನೂ ಸಿಕ್ಕಿಲ್ಲ ಗೆಳೆಯ ಆದರೆ ಖುಶಿಯ ವಿಷಯ ಏನು ಗೊತ್ತಾ, ಆ ಕತ್ತೆ ಕಳೆದು ಹೋದಾಗ ಅದೃಷ್ಟವಶಾತ್ ನಾನು ಆ ಕತ್ತೆಯ ಮೇಲೆ ಕೂತಿರಲಿಲ್ಲ, ಹಾಗೇನಾದರೂ ಕೂತಿದ್ದರೆ ನಾನೂ ಕಳೆದು ಹೋಗಿ ಬಿಡುತ್ತಿದ್ದೆ “
ಮುಲ್ಲಾ ತನ್ನ ಖುಶಿಯ ಕಾರಣ ವಿವರಿಸಿದ.