ಓಶೋ ಹೇಳಿದ ಮಹಾವೀರನ ಕಥೆ

ಮಹಾವೀರ ಅಪಾರ ಜೀವಂತಿಕೆಯ ಮನುಷ್ಯನಾಗಿದ್ದ, ಅವನೊಳಗಿಂದ ಜೀವಂತಿಕೆ ಉಕ್ಕಿ ಹರಿಯುತ್ತಿತ್ತು. ಆ ಜೀವಂತಿಕೆಯಿಂದ ಸುತ್ತಲಿನ ಪ್ರಕೃತಿ ಪ್ರಭಾವಿತವಾಗುತ್ತಿತ್ತು. ಮಹಾವೀರ ಏನೂ ಮಾಡದಿದ್ದರೂ ಎಲ್ಲವೂ ಅವನ ಮೂಲಕ ಆಗುತ್ತಿತ್ತು… ~ ಓಶೋ

ಮಹಾವೀರನ ಬಗ್ಗೆ ಒಂದು ಸುಂದರ ಕತೆ ಇದೆ. ಮಹಾವೀರ ಎಲ್ಲೆಲ್ಲಿ ಹೋಗುತ್ತಿದ್ದನೋ, ಅವನ ಸುತ್ತಲೂ ಮೈಲುಗಟ್ಟಲೇ ಪ್ರಕೃತಿ ಜೀವಂತಿಕೆಯಿಂದ ನಳನಳಸುತ್ತಿತ್ತಂತೆ. ಮಹಾವೀರ ಕ್ರಿಯಾತ್ಮಕ ವ್ಯಕ್ತಿ ಅಲ್ಲ, ಎಲ್ಲಿ ಹೋದರೂ ಅವನು ಒಂದು ಜಾಗೆಯಲ್ಲಿ ಸುಮ್ಮನೇ ನಿಂತುಬಿಡುತ್ತಿದ್ದ ಅಥವಾ ಒಂದು ಮರದ ಕೆಳಗೆ ದಿನಗಟ್ಟಲೇ, ವಾರಗಟ್ಟಲೇ, ತಿಂಗಳುಗಟ್ಟಲೇ ಸುಮ್ಮನೇ ಕುಳಿತುಬಿಡುತ್ತಿದ್ದ. ಆದರೆ ಅವನ ಸುತ್ತಲಿನ ಪ್ರಕೃತಿ ಹೊಸ ಜೀವ ತುಂಬಿಕೊಂಡು ತನ್ನ ಎಲ್ಲ ಸೌಂದರ್ಯದೊಡನೆ, ಹೊಸದೊಂದು ತಾಳದಲ್ಲಿ ವಿಜೃಂಭಿಸುತ್ತಿತ್ತು. ಅದು ಅರಳುವ ಋತು ಅಲ್ಲದಿದ್ದರೂ ಹೂಗಳು ಅರಳುತ್ತಿದ್ದವಂತೆ, ಎಂದಿಗಿಂತ ವೇಗದಲ್ಲಿ ಮರಗಳು ಬೆಳೆಯಲು ಆರಂಭಿಸುತ್ತಿದ್ದವಂತೆ, ಒಣಗಿ ಹೋದ ಗಿಡಗಳು ಮತ್ತು ಚಿಗುರಲು ಶುರು ಮಾಡುತ್ತಿದ್ದವಂತೆ.

ಹೀಗೆ ಆಗುತ್ತಿತ್ತೋ ಇಲ್ಲವೋ ಅದು ಅಷ್ಟು ಮುಖ್ಯವಲ್ಲ. ಇದು ಕೇವಲ ಕಟ್ಟು ಕತೆಯೂ ಇರಬಹುದು. ಆದರೆ ಇದು ಏನನ್ನೋ ಸೂಚಿಸುವಂಥದು, ಸಾಂಕೇತಿಕವಾದದ್ದು. ಇಂಥ ಮಿಥ್ ಗಳು ಕೇವಲ ಸಾಂಕೇತಿಕವಷ್ಟೇ ಅಲ್ಲ ಬಹಳ ಅರ್ಥಪೂರ್ಣವಾದವುಗಳು.

ಹಾಗಾದರೆ ಮಹಾವೀರನ ಸುತ್ತ ಹುಟ್ಟಿಕೊಂಡಿರುವ ಈ ಮಿಥ್ ಏನು ಹೇಳುತ್ತದೆ? ನನಗನಿಸುವ ಪ್ರಕಾರ ಇಷ್ಟು ಮಾತ್ರ… ಮಹಾವೀರ ಅಪಾರ ಜೀವಂತಿಕೆಯ ಮನುಷ್ಯನಾಗಿದ್ದ, ಅವನೊಳಗಿಂದ ಜೀವಂತಿಕೆ ಉಕ್ಕಿ ಹರಿಯುತ್ತಿತ್ತು. ಆ ಜೀವಂತಿಕೆಯಿಂದ ಸುತ್ತಲಿನ ಪ್ರಕೃತಿ ಪ್ರಭಾವಿತವಾಗುತ್ತಿತ್ತು. ಮಹಾವೀರ ಏನೂ ಮಾಡದಿದ್ದರೂ ಎಲ್ಲವೂ ಅವನ ಮೂಲಕ ಆಗುತ್ತಿತ್ತು.

ಲಾವೋತ್ಸು ಹೇಳುತ್ತಾನೆ, ಮಹಾ ಧಾರ್ಮಿಕ ಮನುಷ್ಯ ಏನ್ನನೂ ಮಾಡುವುದಿಲ್ಲವಾದರೂ ಲಕ್ಷಾಂತರ ಸಂಗತಿಗಳು ಅವನ ಮೂಲಕ ಸಂಭವಿಸುತ್ತವೆ. ಅವನು ಕ್ರಿಯಾತ್ಮಕ ಮನುಷ್ಯ ಅಲ್ಲದಿದ್ದರೂ ಎಲ್ಲ ಕ್ರಿಯೆಗಳಿಗೂ ಅವನು ಮೂಲ ಸ್ರೋತ. ಅವನು ಸುಮ್ಮನೇ ಇರುತ್ತಾನಾದರೂ ಜಗತ್ತಿನ ವ್ಯವಹಾರಗಳ ಮೇಲೆ ಅವನ ಪ್ರಭಾವ ಅಪರಿಮಿತ. ಅವನು ನಿಮಗೆ ಹೊಸ ಶಕ್ತಿಯನ್ನ ದಾರೆ ಎರೆಯುತ್ತಾನೆ, ನಿಮ್ಮ ಬದುಕಿಗೆ ಉಸಿರು ತುಂಬುತ್ತಾನೆ. ನಿಮಗೆ ಅವನ ಬಗ್ಗೆ ಗೊತ್ತಾಗುವುದಿಲ್ಲವಾದರೂ ಅವನಿಂದ ನಿಮಗೆ ಲಾಭವಾಗುತ್ತಲೇ ಹೋಗುತ್ತದೆ.

ಅಧಿಕಾರ ಚಲಾಯಿಸುವ ಹುಕಿ ಇಲ್ಲದಿರುವುದರಿಂದ
ಸಂತ ಭಾರಿ ಶಕ್ತಿಶಾಲಿ.
ಸದಾ ಅಧಿಕಾರದ ಚಿಂತೆ ಮಾಡುತ್ತಾರಾದ್ದರಿಂದ
ಸಾಮಾನ್ಯರು ನಿರಂತರ ವಂಚಿತರು.

ಸಂತ ಏನೂ ಮಾಡುವುದಿಲ್ಲವಾದರೂ
ಮಾಡಲು ಏನೂ ಉಳಿದಿರುವುದಿಲ್ಲ.
ಸಾಮಾನ್ಯರು ಸದಾ ಕೆಲಸದಲ್ಲಿ ನಿರತರಾದರೂ
ಮಾಡುವುದು ಮುಗಿಯುವುದೇ ಇಲ್ಲ.

ಅಂತಃಕರುಣಿ ಏನೋ ಮಾಡುತ್ತಾನಾದರೂ
ಏನೋ ಮಾಡುವುದು ಉಳಿದುಹೋಗಿರುತ್ತದೆ.
ನ್ಯಾಯವಂತ ಎಷ್ಟೋ ಮಾಡುತ್ತಾನಾದರೂ
ಎಷ್ಟೋ ಹಾಗೆಯೇ ಉಳಿಸಿರುತ್ತಾನೆ.
ಆಚಾರವಂತರು ಅಷ್ಟಿಷ್ಟು ಮಾಡುತ್ತಾರಾದರೂ
ಜನ ತಲೆದೂಗದಿದ್ದಾಗ, ತೋಳು ಮೇಲೇರಿಸುತ್ತಾರೆ.

ತಾವೋ ಮರೆಯಾದಾಗ ನ್ಯಾಯ ಉಳಿದುಕೊಳ್ಳುತ್ತದೆ.
ನ್ಯಾಯ ಮರೆಯಾದಾಗ ನೈತಿಕತೆ ಹುಟ್ಟಿಕೊಳ್ಳುತ್ತದೆ.
ನೈತಿಕತೆ ಮರೆಯಾದಾಗ ಆಚರಣೆಯ ಮರವಣಿಗೆ.
ಆಚರಣೆ, ನಂಬಿಕೆಯ ಹೊಟ್ಟು
ಅರಾಜಕತೆಯ ಆರಂಭ.

ಅಂತೆಯೇ ಸಂತನಿಗೆ
ಮೇಲ್ನೋಟಕ್ಕಿಂತ ಒಳನೋಟದಲ್ಲಿ ಆಸಕ್ತಿ.
ಹೂವಿಗಿಂತ ಹಣ್ಣಿನ ಬಗ್ಗೆ ಆಸ್ಥೆ.
ಸ್ವಂತ ಅಭಿಪ್ರಾಯಗಳಿಗಿಂತ
ನಿಜ ಸ್ಥಿತಿಯ ಮೇಲೆ ಹೆಚ್ಚು ಗಮನ.

ಅಂತೆಯೇ ಸಂತ
ಎಲ್ಲ ಭ್ರಮೆಗಳಿಂದ ಮುಕ್ತ.

~ ಲಾವೋತ್ಸು

ಬೋಧಿವೃಕ್ಷದ ಕೆಳಗೆ ಬುದ್ಧ ಸುಮ್ಮನೇ ತುಳಿತಿದ್ದರೂ ಅವನ ಪ್ರಭಾವಲಯ ಸುತ್ತಲೂ ತನ್ನ ಕ್ರಿಯೆಯಲ್ಲಿ ತನ್ಮಯವಾಗಿರುವುದನ್ನ ನೀವು ಗಮನಿಸಬಹುದು.

ಒಮ್ಮೆ ಒಬ್ಬ ಸದ್ಗೃಹಸ್ಥ, ಝೆನ್ ಮಾಸ್ಟರ್ ನ ಆಶ್ರಮಕ್ಕೆ ಬಂದು ಅವನನ್ನು ತನ್ನ ಹೊಸ ಮನೆಯ ಕಾರ್ಯಕ್ರಮ ಒಂದಕ್ಕೆ ಆಹ್ವಾನಿಸಿದ.

ಮಾಸ್ಟರ್ : ನನಗೆ ಬಿಡುವಿಲ್ಲ, ಬರಲು ಆಗುವುದಿಲ್ಲ

ಗೃಹಸ್ಥ: ಏನು ಕೆಲಸ ಮಾಡುತ್ತಿದ್ದೀರಿ? ನನ್ನ ಸಹಾಯ ಏನಾದರೂ ಬೇಕೆ?

ಮಾಸ್ಟರ್ : ಏನೂ ಮಾಡುತ್ತಿಲ್ಲ. ಏನೂ ಮಾಡದಿರುವುದೇ ಝೆನ್ ಸನ್ಯಾಸಿಯ ಮುಖ್ಯ ಕೆಲಸ

ಸ್ವಲ್ಪ ದಿನಗಳ ನಂತರ ಮತ್ತೆ ಆ ಗ್ರಹಸ್ಥ, ಮಾಸ್ಟರ್ ನನ್ನು ಮತ್ತೆ ತನ್ನ ಮನೆಗೆ ಆಹ್ವಾನಿಸಿದ.

ಮಾಸ್ಟರ್ : ನನಗೆ ಬಿಡುವಿಲ್ಲ, ಬರಲು ಆಗುವುದಿಲ್ಲ

ಗೃಹಸ್ಥ : ಈಗ ಏನು ಮಾಡುತ್ತಿದ್ದೀರಿ?

ಮಾಸ್ಟರ್: ಏನೂ ಮಾಡುತ್ತಿಲ್ಲ .

ಗೃಹಸ್ಥ: ಆವತ್ತೂ ನೀವು ಅದನ್ನೇ ಮಾಡುತ್ತಿದ್ದಿರಿ, ಅಲ್ಲವೆ?

ಮಾಸ್ಟರ್ : ಹೌದು, ಅದು ಇನ್ನೂ ಮುಗಿದಿಲ್ಲ.

Leave a Reply