ಮುಗ್ಧತೆಗಳ ನಡುವಣ ವ್ಯತ್ಯಾಸ : ಓಶೋ ವ್ಯಾಖ್ಯಾನ

ಅಜ್ಞಾನದಿಂದ ಕೂಡಿದ ಮುಗ್ಧತೆ ಮತ್ತು ಅರಿವು ಸಾಧ್ಯ ಮಾಡಿದ ಮುಗ್ಧತೆ ಇದೆ ವ್ಯತ್ಯಾಸ ಒಂದು ಸಾಮಾನ್ಯ ಮಗುವಿನ ಮತ್ತು ಬುದ್ಧನ ಮುಗ್ಧತೆಯಲ್ಲಿ… | ಓಶೋ, ಕನ್ನಡಕ್ಕೆ: ಚಿದಂಬರ ನರೇಂದ್ರ

ಅಹಂ ಹುಟ್ಟುವುದಕ್ಕಿಂತ ಮುಂಚೆಯ ಮಗುವಿನೊಳಗಿನ ಖಾಲೀತನ ಮತ್ತು ಬುದ್ಧನಂಥ ಜಾಗೃತ ಮಗುವಿನೊಳಗಿನ ಖಾಲೀತನದ ನಡುವಿನ ವ್ಯತ್ಯಾಸವೇನು?

ಈ ಎರಡೂ ರೀತಿಯ ಮಕ್ಕಳ ಖಾಲೀತನದಲ್ಲಿ ಸಮಾನ ಹೋಲಿಕೆಯೂ ಇದೆ ಮತ್ತು ವ್ಯತ್ಯಾಸವೂ ಇದೆ. ಪ್ರತಿ ಮಗುವೂ ಬುದ್ಧನೇ, ಆದರೆ ಅದರ ಬುದ್ಧತ್ವ, ಅದರ ಮುಗ್ಧತೆ, ಅದರೊಳಗಿನ ಖಾಲೀತನ ಎಲ್ಲವೂ ಸಹಜ ಮತ್ತು ಸ್ವಾಭಾವಿಕ, ಅದು ಮಗು ಗಳಿಸಿಕೊಂಡದ್ದಲ್ಲ, ಹುಟ್ಟಿನಿಂದಲೇ ಇವೆಲ್ಲ ಮಗುವಿನಲ್ಲಿ ಇರುವಂಥವು. ಈ ಮಗುವಿನ ಮುಗ್ಧತೆ ಒಂದು ಬಗೆಯ ಅಜ್ಞಾನ, ಅರಿವಿನಿಂದ ಕೂಡಿರುವಂಥದಲ್ಲ. ಈ ಮಗುವಿನ ಮುಗ್ಧತೆ ಅಪ್ರಜ್ಞಾಪೂರ್ವಕ, ಮಗುವಿಗೆ ಈ ಕುರಿತಾಗಿ ಯಾವ ಪ್ರಜ್ಞೆಯೂ ಇಲ್ಲ, ಈ ಬಗ್ಗೆ ಮಗು ಧ್ಯಾನಿಸಿಯೂ ಇಲ್ಲ, ಮಗುವಿಗೆ ಈ ಬಗ್ಗೆ ಗೊತ್ತೇ ಇಲ್ಲ. ಮುಗ್ಧತೆ ಮಗುವಿನಲ್ಲಿ ಇದೆ ಅಷ್ಟೇ ಅದರ ಬಗ್ಗೆ ಮಗುವಿಗೆ ಯಾವ ಸ್ಪಷ್ಟತೆಯೂ ಇಲ್ಲ. ಇಂಥದೊಂದು ಮುಗ್ಧತೆಯನ್ನ ಮಗು ಮುಂದೆ ಕಳೆದುಕೊಳ್ಳುತ್ತದೆ, ಕಳೆದುಕೊಳ್ಳಲೇ ಬೇಕು. ಮಗು ತಾನು ಈಗ ಇರುವ ಸ್ವರ್ಗವನ್ನ ಇಂದಿಲ್ಲ ನಾಳೆಯಾದರೂ ಕಳೆದುಕೊಳ್ಳಲೇ ಬೇಕು ; ಮಗು ಈಗಾಗಲೇ ಆ ಕಳೆದುಕೊಳ್ಳುವ ಹಾದಿಯಲ್ಲಿ ದಾಪುಗಾಲು ಇಡುತ್ತಿದೆ.

ಎಲ್ಲ ಮಕ್ಕಳೂ ಜಗತ್ತಿನೊಳಗಿನ ಭ್ರಷ್ಟಾಚಾರವನ್ನ, ಕಲ್ಮಷವನ್ನ ದಾಟಿ ಹೋಗಲೇಬೇಕು. ಮಗುವಿನೊಳಗಿನ ಮುಗ್ಧತೆ, ಗಾರ್ಡನ್ ಆಫ್ ಈಡನ್ ನಿಂದ ಹೊರಹಾಕಲ್ಪಡುವುದಕ್ಕಿಂತ ಮುಂಚಿನ ಆ್ಯಡಂನೊಳಗಿದ್ದ ಮುಗ್ಧತೆ, ಅವನು ಫ್ರುಟ್ ಆಫ್ ನಾಲೇಜ್ ನ ರುಚಿ ನೋಡುವುದಕ್ಕಿಂತ ಮುಂಚಿನ ಮುಗ್ಧತೆ, ಅವನು ಪ್ರಜ್ಞಾವಂತನಾಗುವುದಕ್ಕಿಂತ ಮುಂಚಿನ ಮುಗ್ಧತೆ. ಇದು ಪ್ರಾಣಿಗಳ ಒಳಗೆ ನೀವು ಗಮನಿಸಬಹುದಾದ ಮುಗ್ಧತೆ. ನಾಯಿ, ಆಕಳು ನೀವು ಯಾವ ಪ್ರಾಣಿಯ ಕಣ್ಣುಗಳನ್ನ ನೋಡಿದರೂ ಅಲ್ಲೊಂದು ನಿಷ್ಕಲ್ಮತೆ ಇದೆ, ಬುದ್ಧನ ಕಣ್ಣುಗಳಲ್ಲೂ ಇದೇ ರೀತಿಯ ನಿಷ್ಕಲ್ಮತೆ ಇದೆ ಆದರೆ ಒಂದೇ ವ್ಯತ್ಯಾಸ………

ಆದರೆ ಈ ವ್ಯತ್ಯಾಸ ಅಗಾಧವಾದದ್ದು ; ಬುದ್ಧ ಮರಳಿ ಮನೆಗೆ ಬಂದವನು, ಆದರೆ ಪ್ರಾಣಿಗಳು ಇನ್ನೂ ಮನೆ ಬಿಟ್ಟು ಹೊರಗೇ ಬಂದಿಲ್ಲ. ಮಗು ಇನ್ನೂ ಗಾರ್ಡನ್ ಆಫ್ ಈಡನ್ ನಲ್ಲಿಯೇ ಇದೆ, ಇನ್ನೂ ಅದು ತನ್ನ ಸ್ವರ್ಗದಲ್ಲಿಯೇ ಇದೆ. ಮಗು ಒಮ್ಮಿಲ್ಲ ಒಮ್ಮೆ ಈ ಸ್ವರ್ಗವನ್ನು ಕಳೆದುಕೊಳ್ಳಲೇ ಬೇಕು. ಏನಾದರೂ ಗಳಿಸಬೇಕಾದರೆ ಇರುವುದನ್ನ ಕಳೆದುಕೊಳ್ಳಲೇ ಬೇಕು. ಬುದ್ಧ ಮರಳಿ ಮನೆಗೆ ಬಂದವನು, ಬದುಕಿನ ವೃತ್ತವನ್ನು ಪೂರ್ತಿ ಪ್ರಯಾಣ ಮಾಡಿ. ಬುದ್ಧ ಮನೆ ಬಿಟ್ಟು ಹೊರಟ, ದಾರಿ ಕಳೆದುಕೊಂಡ, ಗೊತ್ತು ಗುರಿಯಿಲ್ಲದೇ ಅಲೆದಾಡಿದ, ಪಾಪ, ಸಂಕಟ ಮತ್ತು ನರಕಗಳ ಗಾಢ ಅಂಧಕಾರವನ್ನು ದಾಟಿದ ಮುನ್ನಡೆದ. ಈ ಎಲ್ಲ ಅನುಭವಗಳು ಬುದ್ಧನ ಪ್ರಬುದ್ಧತೆಯ, ಬೆಳವಣಿಗೆಯ ಭಾಗಗಳು. ಈ ಅನುಭವಗಳು ಇಲ್ಲದೇ ಹೋದರೆ ನಿಮ್ಮದು ಬೆನ್ನೆಲಬು ಇಲ್ಲದ ಶರೀರ. ಈ ಅನುಭವಗಳಿಲ್ಲದ ನಿಮ್ಮ ಮುಗ್ಧತೆ ತುಂಬ ದುರ್ಬಲ ; ಅದಕ್ಕೆ ಬಿರುಗಾಳಿಯನ್ನು ಎದುರಿಸುವುದು ಕಷ್ಟ, ಪ್ರವಾಹವನ್ನು ಸಹಿಸುವುದು ಕಷ್ಟ. ಅದು ಬದುಕಿನ ಬೆಂಕಿಯಲ್ಲಿ ಕಾದು ಗಟ್ಟಿಯಾಗಲೇ ಬೇಕು. ಸಾವಿರ ಬಾರಿ ತಪ್ಪು ಮಾಡಿ ಸೋತು ಕೆಳಗುರುಳಿದರೂ, ಸಾವಿರ ಬಾರಿಯೂ ಮತ್ತೆ ಎದ್ದು ನಿಲ್ಲಬೇಕು. ಈ ಎಲ್ಲ ಅನುಭವಗಳು ನಿಮ್ಮನ್ನು ಪಕ್ವಗೊಳಿಸುತ್ತವೆ, ಪ್ರಬುದ್ಧಗೊಳಿಸುತ್ತವೆ ನಿಮ್ಮನ್ನೂ ನಿಜವಾಗಿಯೂ ದೊಡ್ಡವರನ್ನಾಗಿಸುತ್ತವೆ.

ಅಜ್ಞಾನದಿಂದ ಕೂಡಿದ ಮುಗ್ಧತೆ ಮತ್ತು ಅರಿವು ಸಾಧ್ಯ ಮಾಡಿದ ಮುಗ್ಧತೆ ಇದೆ ವ್ಯತ್ಯಾಸ ಒಂದು ಸಾಮಾನ್ಯ ಮಗುವಿನ ಮತ್ತು ಬುದ್ಧನ ಮುಗ್ಧತೆಯಲ್ಲಿ.

ಒಮ್ಮೆ ಒಬ್ಬ ಝೆನ್ ಮಾಸ್ಟರ್ ತನ್ನ ಶಿಷ್ಯನೊಂದಿಗೆ ಕಾಡಿನ ಮೂಲಕ ಹಾಯ್ದು ಬೇರೆ ಊರಿಗೆ ಹೋಗುತ್ತಿದ್ದ. ಹೀಗೆ ಪ್ರಯಾಣ ಮಾಡುವಾಗ ಮಾಸ್ಟರ್ ತನ್ನ ಬದುಕಿನ ಅನುಭವಗಳನ್ನು , ಅವುಗಳ ನಡುವಿನ ಪರಸ್ಪರ ಸಂಬಂಧಗಳನ್ನೂ, ಮತ್ತು ಹೇಗೆ ಎಲ್ಲ ಬದುಕುಗಳೂ ಒಂದೇ ಎನ್ನುವುದನ್ನ ತನ್ನ ಶಿಷ್ಯನಿಗೆ ತಿಳಿ ಹೇಳುತ್ತಿದ್ದ. ಶಿಷ್ಯ ಅತ್ಯಂತ ಶಿಸ್ತಿನಿಂದ ಮಾಸ್ಟರ್ ನ ಮಾತುಗಳನ್ನು ಆಲಿಸುತ್ತಿದ್ದ.

“ ಮಾಸ್ಟರ್ ನಿಮ್ಮ ಮಾತಿನ ಅರ್ಥ ಈ ಬದುಕಿನಲ್ಲಿ ಎಲ್ಲವೂ ಒಂದೇ “ ಎಂದು ಅಲ್ಲವೇ? ಶಿಷ್ಯ ಕೇಳಿದ.

“ ಹೌದು, ನೀನು ನನ್ನ ಮಾತುಗಳನ್ನ ಸರಿಯಾಗಿ ಅರ್ಥೈಸಿಕೊಂಡಿರುವಿ” ಸನ್ಯಾಸಿ ಮುಗುಳ್ನಗುತ್ತ ಪ್ರಯಾಣ ಮುಂದುವರೆಸಿದ.

ಅವರು ಸ್ವಲ್ಪ ಮುಂದೆ ಹೋಗುತ್ತಿದ್ದಂತೆಯೇ, ಒಂದು ಭಯಂಕರ ಹುಲಿ ಅವರ ದಾರಿಗೆದುರಾಯಿತು.

ಶಿಷ್ಯ, ಶಾಂತ ಚಿತ್ತದಿಂದ ಹುಲಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಿದ. “ ಮಾಸ್ಟರ್, ನೋಡಿ ನೀವು ಹೇಳಿದ್ದು ನಿಜ, ಆ ಹುಲಿ ಬೇರೆ ಅಲ್ಲ ನಾನು ಬೇರೆ ಅಲ್ಲ “
ಹೀಗೆ ಹೇಳುತ್ತ ಶಿಷ್ಯ ತಿರುಗಿ ನೋಡಿದರೆ, ಮಾಸ್ಟರ್ ನಾಪತ್ತೆ. ತಲೆ ಎತ್ತಿ ನೋಡಿದರೆ ಮಾಸ್ಟರ್ ಮರದ ಟೊಂಗೆಯೊಂದರ ಮೇಲೆ ಆಗಲೇ ಹತ್ತಿ ಕುಳಿತಿದ್ದಾನೆ.

“ ಯಾಕೆ ಮಾಸ್ಟರ್? ಯಾಕೆ ಭಯ? ನಾವು ಬೇರೆ ಅಲ್ಲ ಈ ಹುಲಿ ಬೇರೆಯಲ್ಲ. ಹಾಗಿದ್ದ ಮೇಲೆ ನಮಗೆ ನಾವೇ ಹೆದರುವುದಾದರೂ ಹೇಗೆ?
ಶಿಷ್ಯ, ಮಾಸ್ಟರ್ ನನ್ನು ಪ್ರಶ್ನೆ ಮಾಡಿದ.

“ ಹೌದು, ನೀನು ಹೇಳೋದು ನಿಜ. ಈ ಸತ್ಯ ನನಗೆ ಗೊತ್ತು, ನಿನಗೆ ಗೊತ್ತು ಆದರೆ ಆ ಹುಲಿಗೆ ಗೊತ್ತಿಲ್ಲ. ಬೇಗ ಬೇಗ ಮರ ಹತ್ತು “ ಮಾಸ್ಟರ್ ಕೂಗಿಕೊಂಡ.


Source: Empty Child / Awakened Child; The Heart Sutra ~ Osho

Leave a Reply