ಸಾವು ಮತ್ತು ಬದುಕು… : ಓಶೋ ವ್ಯಾಖ್ಯಾನ

ಪ್ರೀತಿ ಹುಟ್ಟಿಕೊಂಡಾಗ ಅದು ಎಷ್ಟು ಅಪಾರವಾಗಿರುತ್ತದೆಯೆಂದರೆ ಅದನ್ನು ಸಹಿಸಿಕೊಳ್ಳುವುದು ಅಸಾಧ್ಯವಾಗುತ್ತದೆ, ಪ್ರೀತಿ ಬಹುತೇಕ ನೋವಿನಂತೆ ಭಾಸವಾಗುತ್ತದೆ. ಮಳೆಯನ್ನ ತುಂಬಿಕೊಂಡ ಮೋಡದಂತೆ ಭಾರ ಅನಿಸುತ್ತದೆ, ಆಗ ಸುರಿಯದೇ, ಹರಿಯದೇ ಬೇರೆ ದಾರಿಯೇ ಇಲ್ಲದಂತಾಗುತ್ತದೆ. ಮೋಡ ತನ್ನ ಭಾರವನ್ನು ಇಳಿಸಿಕೊಳ್ಳಲೇ ಬೇಕು. ಪ್ರಶಾಂತ ಹೃದಯದಲ್ಲಿ ಪ್ರೀತಿಯ ಅವತಾರವಾದಾಗ, ನೀವು ಅದನ್ನ ಹಂಚಿಕೊಳ್ಳಲೇ ಬೇಕು, ಕೊಡಲೇ ಬೇಕು, ಇದರ ಹೊರತಾಗಿ ಇನ್ನೊಂದು ದಾರಿಯೇ ಇಲ್ಲ! ~ ಓಶೋ; ಕನ್ನಡಕ್ಕೆ: ಚಿದಂಬರ ನರೇಂದ್ರ

ಒಬ್ಬ ಮನುಷ್ಯ ಪ್ರೀತಿಯೇ ತಾನಾಗುತ್ತಾನೆ ಅವನ ಇರುವಿಕೆ, ಮೌನದಲ್ಲಿ ತನ್ನ ಗುರುತು ಕಂಡುಕೊಂಡಾಗ; ಪ್ರೀತಿಯೆಂದರೆ ಬೇರೆನೂ ಅಲ್ಲ ಮೌನ ದೇಶದ ರಾಷ್ಟ್ರಗೀತೆ. ಬುದ್ಧನೂ ಪ್ರೀತಿ, ಜೀಸಸ್ ಕೂಡ ; ಪ್ರೀತಿ ಇನ್ನೊಬ್ಬ ನಿರ್ದಿಷ್ಟ ವ್ಯಕ್ತಿಯೊಂದಿಗಿನ ವ್ಯವಹಾರವಲ್ಲ, ಅವರು ಸ್ವತಃ ಪ್ರೀತಿಯೇ ತಾವಾಗಿರುವುದು. ಅವರ ಪ್ರಕೃತಿ, ವಾತಾವರಣದಲ್ಲಿ ತುಂಬಿಕೊಂಡಿರುವುದು. ಪ್ರೀತಿಯೊಂದೇ ; ಇದು ಯಾರೋ ಒಬ್ಬರಿಗೆ, ಒಂದು ನಿರ್ದಿಷ್ಟ ಸಮುದಾಯಕ್ಕೇ ಮೀಸಲಾದ ಪ್ರೀತಿಯಲ್ಲ, ತನ್ನ ಸುತ್ತಲೂ ಗಂಧದ ಹಾಗೆ ಹರಡಿಕೊಳ್ಳುತ್ತಲೇ ಇರುವಂಥದು. ಬುದ್ಧನ ಹತ್ತಿರ ಬಂದ ಯಾರಿಗಾದರೂ ಇದರ ಅನುಭವವಾಗುತ್ತದೆ, ಅವರು ಪ್ರೀತಿಯ ಮಳೆಯಲ್ಲಿ ಒದ್ದೆಯಾಗುತ್ತಾರೆ. ಪ್ರೀತಿಯಲ್ಲಿ “ಆದರೆ” ಎನ್ನುವ ಮಾತೇ ಇಲ್ಲ, ಕಾರಣಗಳ ತಕರಾರುಗಳೇ ಇಲ್ಲ, ಪ್ರೀತಿಯನ್ನ ಅನುಭವಿಸುವುದನ್ನು ಬಿಟ್ಟರೆ ಬೇರೆ ಯಾವ ಮಾರ್ಗವೂ ಇಲ್ಲ. ನನ್ನ ನಿಯಮಗಳಿಗೆ ಬದ್ಧನಾಗುವೆಯಾದರೆ ಮಾತ್ರ ನಿನ್ನ ಪ್ರೀತಿಸುತ್ತೇನೆ ಎನ್ನುವ ಒತ್ತಾಯಗಳ ಸರಣಿಯಿಂದ ನಿಜದ ಪ್ರೀತಿ ಸದಾ ಮುಕ್ತ. ಪ್ರೀತಿ ಉಸಿರಾಟದಂತೆ ಬದುಕಿನ ಜೀವನಾಡಿ, ಸಹಜ, ಸ್ವಾಭಾವಿಕ; ಹತ್ತಿರ ಯಾರೇ ಬರಲಿ, ಅವನು ಪಾಪಿಯಾಗಿರಲಿ ಸಂತನಾಗಿರಲಿ ಪ್ರೀತಿಗೆ ತಕರಾರುಗಳೇ ಇಲ್ಲ. ಯಾರೇ ಹತ್ತಿರ ಬರಲಿ ಅವರು ನಿಮ್ಮ ಸುತ್ತಲಿನ ಪ್ರೀತಿಯ ವಾತಾವರಣವನ್ನು ಅನುಭವಿಸತೊಡಗುತ್ತಾರೆ. ಆದರೆ ಮನುಷ್ಯನ ವಿಚಿತ್ರ ಸಮಸ್ಯೆಯೆಂದರೆ, ಅವನು ತನ್ನಲ್ಲಿ ಇಲ್ಲದಿರುವುದನ್ನ ಕೊಡುವ ಪ್ರಯತ್ನ ಮಾಡುತ್ತಾನೆ, ಮತ್ತು ಯಾರಲ್ಲಿ ಇಲ್ಲವೋ ಅವರಿಂದ ನಿರೀಕ್ಷೆ ಮಾಡುತ್ತಾನೆ. ಭಿಕ್ಷುಕ ಭಿಕ್ಷುಕನಿಂದ ಭಿಕ್ಷೆ ಬೇಡುವಂತೆ.

ಮೊದಲು ಪ್ರೀತಿ ಅವತರಿಸಬೇಕಾದದ್ದು ನಿಮ್ಮ ಅಸ್ತಿತ್ವದ ಮೂಲ ತಿರುಳಿನಲ್ಲಿ. ಪ್ರೀತಿ ಎನ್ನುವುದು ನೀವು ಏಕಾಂತದಲ್ಲಿರಲು ಬೇಕಾದ ಸ್ವಭಾವ, ಖುಶಿಯಾಗಿ ಏಕಾಂತದಲ್ಲಿರಲು, ಆನಂದಿಂದ ಏಕಾಂತದಲ್ಲಿರಲು. ಜಗತ್ತಿನ ಶ್ರೇಷ್ಠ ಮನಶಾಸ್ತ್ರಜ್ಞ ಮತ್ತು ಮಾನವತಾವಾದಿ ಎರಿಕ್ ಫ್ರಾಂ ಗುರುತಿಸುವಂತೆ, “ ದ್ವಂದ್ವ ಅನಿಸಿದರೂ,
ಒಂಟಿಯಾಗಿರಲು ಬೇಕಾಗುವ ತಿಳುವಳಿಕೆಯೇ ಪ್ರೀತಿಸಲು ಬೇಕಾಗುವ ತಿಳುವಳಿಕೆಯ ಸ್ಥಿತಿಯೂ ಹೌದು.” ಪ್ರೀತಿ ಎನ್ನುವುದು no mind ನ ಗುಣ ಲಕ್ಷಣ, ಮೌನದ, ಪ್ರಶಾಂತತೆಯ ಗುಣಲಕ್ಷಣ.

ವಿಷಯಾಧಾರಿತವಲ್ಲದ ಪ್ರಜ್ಞೆಯ ಜಾಗದಲ್ಲಿ, ಸಂದರ್ಭದಲ್ಲಿ ಪ್ರೀತಿ ಹುಟ್ಟಿಕೊಳ್ಳುತ್ತದೆ. ಮತ್ತು ಪ್ರೀತಿ ಹುಟ್ಟಿಕೊಂಡಾಗ ಅದು ಎಷ್ಟು ಅಪಾರವಾಗಿರುತ್ತದೆಯೆಂದರೆ ಅದನ್ನು ಸಹಿಸಿಕೊಳ್ಳುವುದು ಅಸಾಧ್ಯವಾಗುತ್ತದೆ, ಪ್ರೀತಿ ಬಹುತೇಕ ನೋವಿನಂತೆ ಭಾಸವಾಗುತ್ತದೆ. ಮಳೆಯನ್ನ ತುಂಬಿಕೊಂಡ ಮೋಡದಂತೆ ಭಾರ ಅನಿಸುತ್ತದೆ, ಆಗ ಸುರಿಯದೇ, ಹರಿಯದೇ ಬೇರೆ ದಾರಿಯೇ ಇಲ್ಲದಂತಾಗುತ್ತದೆ. ಮೋಡ ತನ್ನ ಭಾರವನ್ನು ಇಳಿಸಿಕೊಳ್ಳಲೇ ಬೇಕು. ಪ್ರಶಾಂತ ಹೃದಯದಲ್ಲಿ ಪ್ರೀತಿಯ ಅವತಾರವಾದಾಗ, ನೀವು ಅದನ್ನ ಹಂಚಿಕೊಳ್ಳಲೇ ಬೇಕು, ಕೊಡಲೇ ಬೇಕು, ಇದರ ಹೊರತಾಗಿ ಇನ್ನೊಂದು ದಾರಿಯೇ ಇಲ್ಲ. ಪ್ರೀತಿಯ ಈ ಅಪ್ರತಿಮ ಸಾಮರ್ಥ್ಯದ ಎದುರು ನೀವು ಅಸಹಾಯಕರು. ಪ್ರೀತಿಯ ಇನ್ನೊಂದು ಅದ್ಭುತ ಗುಣ ಲಕ್ಷಣವೆಂದರೆ ನಿಮ್ಮಿಂದ ಪ್ರೀತಿಯನ್ನ ಪಡೆದವನು ನಿಮಗೆ ಯಾವ ರೀತಿಯಲ್ಲೂ ಕೃತಜ್ಞನಾಗಿರಬೇಕಿಲ್ಲ. ಬದಲಾಗಿ ನೀವು ಆ ಮನುಷ್ಯನಿಗೆ ಕೃತಜ್ಞರಾಗಿರಬೇಕು ನೀವು ಧರಿಸಿರುವ ಪ್ರೀತಿಯ ಭಾರವನ್ನು ಇಳಿಸಿಕೊಳ್ಳಲು ಅವನು ನಿಮಗೆ ಸಹಾಯ ಮಾಡಿದ್ದಕ್ಕೆ, ನಿಮ್ಮ ಹೊರೆಯನ್ನ ಅವನು ತಾನೂ ಸ್ವಲ್ಪ ಹಂಚಿಕೊಂಡಿದ್ದಕ್ಕೆ.

ಪ್ರೀತಿಯ ಕುರಿತಾದ ಇನ್ನೊಂದು ವಿಲಕ್ಷಣ ಸಂಗತಿಯೆಂದರೆ ಅದು ರಚಿಸಿಕೊಂಡಿರುವ ಅಪರೂಪದ ಅರ್ಥಶಾಸ್ತ್ರ. ನೀವು ಪ್ರೀತಿಯನ್ನ ಹಂಚಿದಷ್ಟೂ ಹೆಚ್ಚು ಹೆಚ್ಚು ಪ್ರೀತಿ ನಿಮ್ಮನ್ನ ಸೇರಿಕೊಳ್ಳುತ್ತದೆ, ಏಕೆಂದರೆ ನಿಮ್ಮೊಳಗಿನ ಪ್ರೀತಿಯ ಉಗಮ ಸ್ಥಾನವಾದ ಪ್ರಶಾಂತ ಹೃದಯ ಕನೆಕ್ಟ್ ಆಗಿರುವುದು ಎಲ್ಲಕ್ಕೂ ಮೂಲವಾದ ಸಾಗರ ಸದೃಶ್ಯ ದಿವ್ಯಕ್ಕೆ. ಈ ಕಾರಣವಾಗಿಯೇ ಈಗ ನಮಗೆ ಉಳಿದಿರುವ ಏಕೈಕ ಭರವಸೆ ಪ್ರೀತಿ.

ಹೌದು ಪ್ರೀತಿ ಈ ಜಗತ್ತಿನ ಏಕೈಕ ಭರವಸೆ. ನಾವು ಈಗ ಆ ಟರ್ನಿಂಗ್ ಪಾಯಿಂಟನ್ನ ತಲುಪುತ್ತಿದ್ದೇವೆ, ಸಂಪೂರ್ಣ ಯುದ್ಧ ಅಥವಾ ಸಂಪೂರ್ಣ ಪ್ರೀತಿ. ಇದು ಅಥವಾ ಅದು, ನಮಗೆ ಮೂರನೇಯ ಪರ್ಯಾಯವೇ ಇಲ್ಲ. ಈ ಎರಡರ ನಡುವೆ ರಾಜಿ ಸಾಧ್ಯವೇ ಇಲ್ಲ, ಈ ಎರಡರ ನಡುವೆ ಮಧ್ಯದ ದಾರಿಯೇ ಇಲ್ಲ. ಮನುಷ್ಯ ಈಗ ತನ್ನ ಬದುಕಿನ ನಿರ್ಣಾಯಕ ಆಯ್ಕೆಯನ್ನ ಮಾಡಿಕೊಳ್ಳಲೇ ಬೇಕಾಗಿದೆ, ಇದು ಸಾವು ಬದುಕಿನ ಪ್ರಶ್ನೆ. ಯುದ್ಧ ಸಾವಾದರೆ, ಪ್ರೀತಿ ಬದುಕು.

ಜೀಸಸ್ ಒಂದು ದ್ವಂದ್ವಾತ್ಮಕ ಅನಿಸಬಲ್ಲ
ಮಾತು ಹೇಳುತ್ತಾನೆ.

“ ನೀವು ಸಾಕಷ್ಟು ಹೊಂದಿರುವಿರಾದರೆ,
ನಿಮಗೆ ಇನ್ನಷ್ಟು ಹೆಚ್ಚು ಕೊಡಲಾಗುವುದು,
ಮತ್ತು ನಿಮ್ಮ ಬಳಿ ಸಾಕಷ್ಟು ಇಲ್ಲವಾದರೆ
ನಿಮ್ಮ ಹತ್ತಿರ ಇರುವ ಎಲ್ಲವನ್ನೂ ವಾಪಸ್ ಪಡೆಯಲಾಗುವುದು “

ಇದು ಅಸಂಗತ, ಆ್ಯಂಟಿ ಕಮ್ಯುನಿಸ್ಟ್ ,
ಪ್ರತಿಗಾಮಿ ಅನಿಸಬಹುದು.

ಇದು ಸಾಮಾನ್ಯ ಅರ್ಥಶಾಸ್ತ್ರ ಅಲ್ಲ

ಕೇವಲ ಅವರು,
ಯಾರ ಬಳಿ ಸಾಕಷ್ಟಿದೆಯೋ
ಅವರಿಗೆ ಮಾತ್ರ ಇನ್ನಷ್ಟು ಒದಗಿಸಲಾಗುವುದು.
ಹಾಗೆಂದರೆ ಅವರು,
ಯಾರು ಹೆಚ್ಚು ಹೆಚ್ಚು ಆನಂದ ಹೊಂದುವರೋ,
ಆನಂದ ಇನ್ನಷ್ಟು ಇನ್ನಷ್ಟು ಅವರ ಪಾಲಾಗುವುದು.

ಬದುಕಿನ ಆನಂದವನ್ನು ಯಾರು
ಅನುಭವಿಸಲಾರರೋ
ಅವರಿಂದ ಇರುವ ಆನಂದವನ್ನೂ ಕಸಿದುಕೊಳ್ಳಲಾಗುವುದು.

ನೀವು ಹೆಚ್ಚು ಪ್ರೇಮಮಯಿ ಆದಂತೆಲ್ಲ
ಹೆಚ್ಚು ಹೆಚ್ಚು ಪ್ರೇಮ ನಿಮ್ಮದಾಗುವುದು.
ನೀವು ಹೆಚ್ಚು ಸಮಾಧಾನಿ ಆದಂತೆಲ್ಲ
ಹೆಚ್ಚು ಹೆಚ್ಚು ಸಮಾಧಾನ ನಿಮ್ಮದಾಗುವುದು.
ನೀವು ಹೆಚ್ಚು ಹಂಚಿದಂತೆಲ್ಲ
ಹಂಚಲು ಹೆಚ್ಚು ಹೆಚ್ಚು ನಿಮ್ಮನ್ನು ಸೇರುವುದು.

ಆದರೆ ನೀವು ಹಂಚದೇ ಇರುವಿರಾದರೆ,
ಪ್ರೇಮಿಸದೇ ಹೋದರೆ,
ನಿಮ್ಮಲ್ಲಿ ಈಗಾಗಲೇ ಇರುವುದರ
ಮಾಹಿತಿ ಕೂಡ ನಿಮಗೆ ಇಲ್ಲವಾಗುವುದು,
ಆಗ ನಿಮ್ಮ ಬಳಿ ಇರುವುದು ಕೂಡ
ನಿರುಪಯುಕ್ತವಾಗುವುದು.

ಇದು ಬದುಕಿನ ಅತ್ಯಂತ ಶ್ರೇಷ್ಠ ಅರ್ಥಶಾಸ್ತ್ರ.

ಈ ಬದುಕು ಈಗಾಗಲೇ ಅಪಾರ.
ಅಪರಿಮಿತ ಬದುಕಿನ ಬಗ್ಗೆ,
ಬದುಕಿನ ಚಿಕ್ಕ ಪುಟ್ಚ ಸಂಗತಿಗಳ ಬಗ್ಗೆ ಕೂಡ
ಉನ್ಮತ್ತರಾಗಿರಿ.
ಆಹಾರವೂ ದಿವ್ಯ ಸಂಸ್ಕಾರವಾಗಲಿ,
ಇನ್ನೊಬ್ಬರ ಕೈ ಕುಲುಕುವುದೂ ಪ್ರಾರ್ಥನೆಯಾಗಲಿ,
ಸುತ್ತಲಿನ ಜನರೊಡನೆಯ ಸಹವಾಸ
ಪರಮ ಆನಂದ ನೀಡಲಿ,
ಏಕೆಂದರೆ, ನಿಮಗೆ ಲಭ್ಯವಾಗಿರುವುದು
ಎಲ್ಲಿಯೂ, ಇನ್ನಾರಿಗೂ ಸಾಧ್ಯವಾಗಿಲ್ಲ.

Leave a Reply