ಒಳ್ಳೆಯ ಮನುಷ್ಯ, ಕೆಟ್ಟ ಮನುಷ್ಯ : ಓಶೋ ವ್ಯಾಖ್ಯಾನ

ಬುದ್ದ ಹೇಳುವುದು ಇದನ್ನೇ. “ಕೆಟ್ಟ ಮನುಷ್ಯ ಇತರರನ್ನು ಪರಿಗಣಿಸದೇ ಇರುವವನು, ತನ್ನನ್ನೇ ಕೇಂದ್ರ ಎಂದುಕೊಂಡವನು, ಇಡೀ ಅಸ್ತಿತ್ವವನ್ನು ಬಳಸಿಕೊಳ್ಳಲು ಬಯಸುವವನು, ಎಲ್ಲರನ್ನೂ ಎಲ್ಲವನ್ನೂ ಬಲಿ ಕೊಡಲು ತನ್ನನ್ನು ತಾನೇ ಅಥೊರೈಸ್ ಮಾಡಿಕೊಂಡವನು…” | ಓಶೋ ರಜನೀಶ್; ಕನ್ನಡಕ್ಕೆ ಚಿದಂಬರ ನರೇಂದ್ರ

ಒಳ್ಳೆ ಮನುಷ್ಯ ಯಾರು? ಕೆಟ್ಟ ಮನುಷ್ಯನ ಶಿಕ್ಷಕ.
ಕೆಟ್ಟ ಮನುಷ್ಯ ಯಾರು ? ಒಳ್ಳೆ ಮನುಷ್ಯನ ಜವಾಬ್ದಾರಿ.
ನೀವು ಎಂಥ ಜಾಣರಾದರೂ ಸರಿ
ಈ ಸೂಕ್ಷ್ಮ ಗೊತ್ತಿರದೇ ಹೋದರೆ
ಕಳೆದು ಹೋಗಿ ಬಿಡುತ್ತೀರಿ.
ಇದು ಪರಮ ರಹಸ್ಯ.

~ ಲಾವೋತ್ಸು

ಒಳ್ಳೆಯ ಮನುಷ್ಯ ಯಾರು? ಯಾರು ಕೆಟ್ಟ ಮನುಷ್ಯ? ಹೇಗೆ ನಿರ್ಧರಿಸುವುದು ? ಹೇಗೆ ಮನುಷ್ಯರನ್ನು ಹೀಗೆಂದು ವಿಭಾಗಿಸುವುದು? ಕೆಟ್ಟ ಮನುಷ್ಯ ಯಾರೆಂದರೆ ಇನ್ನೊಬ್ಬರ ಅಸ್ತಿತ್ವವನ್ನು ಗಣನೆಗೆ ತೆಗೆದುಕೊಳ್ಳದವನು, ಅವನು ಇನ್ನೊಬ್ಬರನ್ನು ಬಳಸುತ್ತಾನಾದರೂ ಅವನು ಅವರನ್ನು ಗೌರವಿಸುವುದಿಲ್ಲ. ಕೆಟ್ಟ ಮನುಷ್ಯ ಯಾರೆಂದರೆ ತನ್ನನ್ನು ಮಾತ್ರ ಜಗತ್ತಿನ ಕೇಂದ್ರ ಎಂದುಕೊಳ್ಳುವವನು, ಬಾಕಿ ಇರುವ ಎಲ್ಲರೂ, ಎಲ್ಲವೂ ತನ್ನ ಬಳಕೆಗಾಗಿ ಎಂದು ತಿಳಿದುಕೊಂಡವನು. ಅವನಿಗಾಗಿಯೇ ಎಲ್ಲ ಇರುವುದು ಎಂದುಕೊಂಡವನು.

ಕೆಟ್ಟ ಮನುಷ್ಯನನ್ನು ಕುರಿತಾದ ಈ ವ್ಯಾಖ್ಯಾನವನ್ನು ನೆನಪಿನಲ್ಲಿಟ್ಟುಕೊಳ್ಳಿ ಏಕೆಂದರೆ ನಿಮ್ಮ ಪ್ರಕಾರ ಅವನೊಬ್ಬ ಕ್ರಿಮಿನಲ್. ಕೆಟ್ಟ ಮನುಷ್ಯ ಕ್ರಿಮಿನಲ್ ಅಲ್ಲದೆಯೂ ಇರಬಹುದು. ಎಲ್ಲ ಕ್ರಿಮಿನಲ್ ಗಳೂ ಕೆಟ್ಟ ಮನುಷ್ಯರು, ಆದರೆ ಎಲ್ಲ ಕೆಟ್ಟ ಮನುಷ್ಯರೂ ಕ್ರಿಮಿನಲ್ ಗಳಲ್ಲ ; ಅವರಲ್ಲಿ ಕೆಲವರು ಜಡ್ಜ್ ಗಳಾಗಿರಬಹುದು, ಕೆಲವರು ಇನ್ನಿತರ ಗೌರವಾನ್ವಿತ ಕೆಲಸಗಳನ್ನು ಮಾಡುತ್ತಿರಬಹುದು. ಅವರಲ್ಲಿ ಕೆಲವರು ರಾಜಕಾರಣಿಗಳು, ಮಂತ್ರಿಗಳು, ಪ್ರಧಾನ ಮಂತ್ರಿಗಳು, ಕೆಲವರಂತೂ ಸಂತರ ವೇಷದಲ್ಲಿ ಪರೇಡ್ ಮಾಡುತ್ತಿರುವವರು.

ಈ ಸೂತ್ರದಲ್ಲಿ ಬುದ್ಧ ಹೇಳುತ್ತಿರುವುದು ಇದನ್ನೇ; ಕೆಟ್ಟ ಮನುಷ್ಯ ಇತರರನ್ನು ಪರಿಗಣಿಸದೇ ಇರುವವನು, ತನ್ನನ್ನೇ ಕೇಂದ್ರ ಎಂದುಕೊಂಡವನು, ಇಡೀ ಅಸ್ತಿತ್ವವನ್ನು ಬಳಸಿಕೊಳ್ಳಲು ಬಯಸುವವನು, ಎಲ್ಲರನ್ನೂ ಎಲ್ಲವನ್ನೂ ಬಲಿ ಕೊಡಲು ತನ್ನನ್ನು ತಾನೇ ಅಥೊರೈಸ್ ಮಾಡಿಕೊಂಡವನು.

ಹಾಗಾದರೆ ಒಳ್ಳೆಯ ಮನುಷ್ಯ ಯಾರು ? ಮೇಲೆ ಹೇಳಿದ ಕೆಟ್ಟ ಮನುಷ್ಯನ ವ್ಯಾಖ್ಯಾನಗಳಿಗೆ ತದ್ವಿರುದ್ಧವಾಗಿ ಇರುವವನು ; ಇತರರನ್ನೂ ತನ್ನಂತೆಯೇ ನೋಡುವವನು, ಅವನಿಗೆ ತನ್ನ ಬಗ್ಗೆ ಎಷ್ಟು ಗೌರವವೋ ಎಲ್ಲರ ಬಗ್ಗೆಯೂ ಅಷ್ಟೇ ಗೌರವ. ತನ್ನಂತೆಯೇ ಎಲ್ಲರನ್ನೂ ಜಗತ್ತಿನ ಕೇಂದ್ರ ಎಂದು ಕೊಂಡವನು. ಜಗತ್ತು ಒಂದೇ ಆದರೂ ಅದಕ್ಕೆ ಲಕ್ಷಾಂತರ ಕೇಂದ್ರಗಳು ಎಂದು ನಂಬಿಕೊಂಡವನು. ಅವನು ಇನ್ನೊಬ್ಬರನ್ನು ತನಗಾಗಿ ಎಂದು ತಿಳಿಯುವುದಿಲ್ಲ, ತಾನೇ ಎಂದು ತಿಳಿಯುತ್ತಾನೆ. ಇತರರ ಬಗ್ಗೆಯ ಅವನ ಪೂಜ್ಯ ಭಾವನೆ ಟ್ರೆಮೆಂಡಸ್ ಆದದ್ದು.

ಒಮ್ಮೆ ಹೀಗಾಯಿತು,
ಒಬ್ಬ ರೈತ ತಾನು ಹುಟ್ಟಿದ ಹಳ್ಳಿ ಬಿಟ್ಟು ಹತ್ತಿರದ ಇನ್ನೊಂದು ಊರಿಗೆ ಗಂಟು ಮೂಟೆ ಕಟ್ಟಿಕೊಂಡು ವಲಸೆ ಹೋದ. ಹೊಸ ಊರು ಹೇಗೋ ಏನೋ ಎಂದು ಚಿಂತೆಗೊಳಗಾದ ಆ ಮನುಷ್ಯ, ಈ ಬಗ್ಗೆ ವಿಚಾರಿಸಲು ಅಲ್ಲೇ ವಾಸವಾಗಿದ್ದ ಝೆನ್ ಮಾಸ್ಟರ್ ಬಳಿ ಹೋದ.

ರೈತ : ಮಾಸ್ಟರ್ ಈ ಊರಿನ ಜನ ಹೇಗೆ? ಈ ಊರು ನನಗೆ ಇಷ್ಟ ಆಗಬಹುದಾ?

ಮಾಸ್ಟರ್ : ನೀನು ಮೊದಲು ಇದ್ದ ಊರಿನಲ್ಲಿ ಜನ ಹೇಗಿದ್ದರು?

ರೈತ : ತುಂಬ ಕೆಟ್ಚ ಜನ ಮಾಸ್ಟರ್, ಹೊಟ್ಟೆ ಕಿಚ್ಚಿನವರು, ಮೋಸಗಾರರು, ಕಳ್ಳರು.

ಮಾಸ್ಟರ್ : ಓಹ್ ಹಾಗಾ? ಇಲ್ಲಿಯೂ ಎಲ್ಲ ಅಂಥವರೆ.

ಕೆಲ ದಿನಗಳ ನಂತರ ಇನ್ನೊಬ್ಬ ರೈತ, ಇನ್ನೊಂದು ಊರಿನಿಂದ ಅದೇ ಊರಿಗೆ ಬಂದು, ಝೆನ್ ಮಾಸ್ಟರ್ ಗೆ ಅದೇ ಪ್ರಶ್ನೆ ಕೇಳಿದ.

ರೈತ : ಮಾಸ್ಟರ್ ಈ ಊರಿನ ಜನ ಹೇಗೆ? ಈ ಊರು ನನಗೆ ಇಷ್ಟ ಆಗಬಹುದಾ?

ಮಾಸ್ಟರ್ : ನೀನು ಮೊದಲು ಇದ್ದ ಊರಿನಲ್ಲಿ ಜನ ಹೇಗಿದ್ದರು?

ರೈತ : ತುಂಬ ಒಳ್ಳೆ ಜನ ಮಾಸ್ಟರ್, ಒಬ್ಬರಿಗೊಬ್ಬರು ಬಹಳ ಸಹಾಯ ಮಾಡುತ್ತಾರೆ, ಸದಾ ತಮ್ಮ ತಮ್ಮ ಕೆಲಸ ಮಾಡುತ್ತ, ಹಾಡುತ್ತ, ಕುಣಿಯುತ್ತ ಖುಷಿಯಾಗಿರ್ತಾರೆ.

ಮಾಸ್ಟರ್ : ಓಹ್ ಹಾಗಾ? ಇಲ್ಲಿಯೂ ಎಲ್ಲ ಅಂಥವರೆ.


(Source ~ Osho : The Buddha Said…: Meeting the Challenge of Life’s Difficulties)

*****************************

Leave a Reply