ಓಶೋ ಹೇಳಿದ ಜೈನ ಕಥೆ

ಸತ್ಯ ಯಾವಾಗಲೂ ನಮ್ಮ ಅನುಭವಕ್ಕೆ ಬರುವುದು ಥಟ್ಟನೇ. ನೀವು ಎಷ್ಟೋ ವರ್ಷಗಳಿಂದ ಸತ್ಯದ ಹುಡುಕಾಟದಲ್ಲಿರಬಹುದು ಆದರೆ ಸತ್ಯ ನಿಮ್ಮ ಅನುಭವಕ್ಕೆ ಬರುವುದು ಧಿಡೀರ್ ನೇ, ಮಿಂಚಿನಂತೆ. ಆಮೇಲೆ ಆ ಕುರಿತಾಗಿ ಮರುವಿಚಾರ ಮಾಡುವ ಪ್ರಶ್ನೆಯೇ ಇಲ್ಲ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಇಡೀ ದಿನದ ಕೆಲಸ ಮುಗಿಸಿ ಒಬ್ಬ ವ್ಯಕ್ತಿ ಸಂಜೆ ತನ್ನ ಮನೆಗೆ ಬಂದ. ತುಂಬ ದಣಿದಿದ್ದ ಅವನು ನೇರವಾಗಿ ಸ್ನಾನದ ಮನೆಗೆ ಹೋಗಿ ಸ್ನಾನಕ್ಕೆ ನೆರವಾಗಲು ಹೆಂಡತಿಯನ್ನ ಕೂಗಿದ. ದಣಿದ ಪತಿಗೆ ಸ್ನಾನ ಮಾಡಿಸುವಾಗ ಹೆಂಡತಿ, ಅವನಿಗೆ ತನ್ನ ತಮ್ಮನ ವಿಷಯ ಹೇಳಿದಳು, “ ನನ್ನ ತಮ್ಮ ಮಹಾವೀರನ ಹಿಂಬಾಲಕನಾಗಿದ್ದಾನೆ, ಈ ಲೌಕಿಕ ಜಗತ್ತಿನ ಸುಖ ಭೋಗಗಳನ್ನು ತ್ಯಜಿಸಿ ಅವನು ಮಹಾವೀರನ ಶಿಷ್ಯನಾಗುವ ಬಗ್ಗೆ ಆಲೋಚನೆ ಮಾಡುತ್ತಿದ್ದಾನೆ.”

“ ಇನ್ನೂ ಆಲೋಚನೆ ಮಾಡುತ್ತಿದ್ದಾನೆ! ಹಾಗಾದರೆ ಅವನಿಗೆ ಈ ಲೌಕಿಕ ಜಗತ್ತನ್ನು ತ್ಯಾಗ ಮಾಡುವುದು ಸಾಧ್ಯವೇ ಇಲ್ಲ.” ಗಂಡ, ಹೆಂಡತಿಯ ಮಾತು ಕೇಳಿ ಜೋರಾಗಿ ನಕ್ಕುಬಿಟ್ಟ. ಅದು ಅವಳ ತಮ್ಮನ ವಿಷಯವಾಗಿದ್ದರಿಂದ ಹೆಂಡತಿಗೆ ಗಂಡನ ಮಾತು ಕೇಳಿ ಬಹಳ ನೋವಾಯಿತು.

“ ಏನು ಹಾಗೆಂದರೆ? ನೀನು ಬುದ್ಧ-ಮಹಾವೀರರ ವಿಷಯ ಮಾತನಾಡಿದ್ದು ನಾನು ಯಾವತ್ತೂ ಕೇಳಿಲ್ಲ. ನಿನಗೇನು ಗೊತ್ತಾಗುತ್ತದೆ ಅಧ್ಯಾತ್ಮದ ವಿಷಯ? ನನ್ನ ತಮ್ಮ ಜ್ಞಾನಿ, ಅವನಿಗೆ ಮಹಾವೀರನ ಮಾತುಗಳು ಅರ್ಥ ಆಗುತ್ತವೆ. ಅವನು ಧ್ಯಾನ ಮಾಡುತ್ತಾನೆ, ಪೂಜೆ ಮಾಡುತ್ತಾನೆ, ಧಾರ್ಮಿಕ ಮನುಷ್ಯ ಅವನು. ನೀನು ಧ್ಯಾನ, ಪೂಜೆ ಮಾಡಿದ್ದನ್ನ ನಾನು ಯಾವತ್ತೂ ನೋಡಿಲ್ಲ, ನನ್ನ ತಮ್ಮನನ್ನು ಹಾಸ್ಯ ಮಾಡುತ್ತಿದ್ದೀಯಲ್ಲ, ಎಂಥ ಧೈರ್ಯ ನಿನಗೆ?” ಹೆಂಡತಿ ಗಂಡನನ್ನು ತರಾಟೆಗೆ ತೆಗೆದುಕೊಂಡಳು.

ಹೆಂಡತಿಯ ಮಾತು ಮುಗಿಯುತ್ತಿದ್ದಂತೆಯೇ, ಆ ಮನುಷ್ಯ ಎದ್ದು ನಿಂತ, ಆತ ಪೂರ್ತಿ ಬೆತ್ತಲಾಗಿದ್ದ. ಸರಸರನೇ ಅವನು ಸ್ನಾನದ ಮನೆಯಿಂದ ಹೊರಬಿದ್ದು, ಮನೆಯ ಮುಂಬಾಗಿಲು ದಾಟಿ ರಸ್ತೆಗೆ ಇಳಿದು ಬಿಟ್ಟ. ಗಂಡ ಹೀಗೆ ಬೆತ್ತಲೆಯಾಗಿ ರಸ್ತೆಯಲ್ಲಿ ನಡೆಯುತ್ತಿರುವುದನ್ನು ಕಂಡು ಹೆಂಡತಿ ಚೀರಿಕೊಂಡಳು, “ ಹುಚ್ಚು ಹಿಡಿದಿದೆಯಾ ನಿನಗೆ, ಬೆತ್ತಲೆಯಾಗಿ ಎಲ್ಲಿಗೆ ಹೊರಟೆ?”

“ ನಾನು ಲೌಕಿಕ ಜಗತ್ತಿನ ಎಲ್ಲವನ್ನೂ ಬಿಟ್ಟು ಹೊರಟಿದ್ದೇನೆ, ನನ್ನನ್ನು ತಡೆಯಬೇಡ.” ಗಂಡ, ಬೆತ್ತಲೆ ಫಕೀರನಂತೆ ರಸ್ತೆಯಲ್ಲಿ ಲಗುಬಗೆಯಿಂದ ಹೆಜ್ಜೆ ಹಾಕುತ್ತ ಜನ ಜಂಗುಳಿಯಲ್ಲಿ ಕಾಣೆಯಾಗಿ ಮಹಾವೀರನ ಆಶ್ರಮ ಸೇರಿಕೊಂಡುಬಿಟ್ಟ.

ಹೆಂಡತಿ ಅಳುತ್ತ ಗಂಡನನ್ನು ಹುಡುಕಿಕೊಂಡು ಮಹಾವೀರನ ಆಶ್ರಮಕ್ಕೆ ಬಂದಳು. ಅವಳ ಜೊತೆ ಅವಳ ತಮ್ಮನೂ ಬಂದಿದ್ದ, ಆತ ತನ್ನ ಭಾವನನ್ನು ಒಪ್ಪಿಸುವ ಪ್ರಯತ್ನ ಮಾಡಿದ, “ ಅವಸರ ಮಾಡಬೇಡ, ನನ್ನ ನೋಡು, ನಾನು ಇಪ್ಪತ್ತು ವರ್ಷಗಳಿಂದ ಈ ಜಗತ್ತಿನ ಎಲ್ಲ ಸುಖ ಭೋಗಗಳನ್ನು ತ್ಯಾಗ ಮಾಡುವ ಬಗ್ಗೆ ವಿಚಾರ ಮಾಡುತ್ತಿದ್ದೇನೆ. ನೀನೇನು ಹುಚ್ಚನಾಗಿದ್ದೀಯ? ಹೀಗೆ ಥಟ್ಟನೇ ಯಾರಾದರೂ ಇಂಥ ಮಹತ್ವದ ನಿರ್ಧಾರಕ್ಕೆ ಬರುತ್ತಾರೆಯೇ? ”

“ ಚಿಂತೆ ಇಲ್ಲ, ಇದಕ್ಕೆ ಹೊರತಾದ ಬೇರೆ ದಾರಿ ನನಗೆ ಕಾಣಲಿಲ್ಲ. ನೀನು ಇಪ್ಪತ್ತು ವರ್ಷಗಳಿಂದ ಈ ಬಗ್ಗೆ ವಿಚಾರ ಮಾಡುತ್ತಿದ್ದೀಯ, ಇನ್ನೂ ಇಪ್ಪತ್ತು ವರ್ಷ ಈ ಕುರಿತು ವಿಚಾರ ಮಾಡುತ್ತಲೇ ಇರುತ್ತೀಯ. ಆದರೆ ಒಂದು ವಿಷಯ ತಿಳಿದುಕೋ, ನೀನು ಎಲ್ಲವನ್ನೂ ಯಾವಾಗ ತ್ಯಾಗ ಮಾಡುತ್ತೀಯೋ ಗೊತ್ತಿಲ್ಲ, ಆದರೆ ನೀನು ತ್ಯಾಗ ಮಾಡುವುದು ಮಾತ್ರ ನನ್ನ ಹಾಗೆಯೇ, ಥಟ್ಟನೇ. ಇದನ್ನು ಹೊರತುಪಡಿಸಿದ ಬೇರೆ ದಾರಿ ಇಲ್ಲವೇ ಇಲ್ಲ.” ಆ ಮನುಷ್ಯ ತನ್ನ ಹೆಂಡತಿಯ ತಮ್ಮನಿಗೆ ತಿಳಿಸಿ ಹೇಳಿದ.

ಸತ್ಯ ಯಾವಾಗಲೂ ನಮ್ಮ ಅನುಭವಕ್ಕೆ ಬರುವುದು ಥಟ್ಟನೇ. ನೀವು ಎಷ್ಟೋ ವರ್ಷಗಳಿಂದ ಸತ್ಯದ ಹುಡುಕಾಟದಲ್ಲಿರಬಹುದು ಆದರೆ ಸತ್ಯ ನಿಮ್ಮ ಅನುಭವಕ್ಕೆ ಬರುವುದು ಧಿಡೀರ್ ನೇ, ಮಿಂಚಿನಂತೆ. ಆಮೇಲೆ ಆ ಕುರಿತಾಗಿ ಮರುವಿಚಾರ ಮಾಡುವ ಪ್ರಶ್ನೆಯೇ ಇಲ್ಲ. ಸತ್ಯ ಗೊತ್ತಾದ ಮೇಲೆ, ಆ ಕ್ಷಣದಲ್ಲಿಯೇ ಎಲ್ಲವೂ ಬದಲಾಗುವುದು. ಬದಲಾವಣೆಗಾಗಿ ಭವಿಷ್ಯದಲ್ಲಿ ಸಮಯ ನಿಗದಿ ಮಾಡುವ ಪ್ರಶ್ನೆಯೇ ಇಲ್ಲ. ಬದಲಾವಣೆಯಾಗೋದು ಈ ತಕ್ಷಣದ ಕ್ಷಣದಲ್ಲಿ ಮಾತ್ರ. ಸತ್ಯಕ್ಕೆ ಬೇರೆ ಇನ್ನೊಂದು ಕ್ಷಣವೆಂಬುದು ಇಲ್ಲವೇ ಇಲ್ಲ.


Source : Hsin Hsin Ming – The book of Nothing / Osho

Leave a Reply