ಸರಳವೂ ಸಂಕೀರ್ಣವಾಗಿ ತೋರಲು ಅಜ್ಞಾನವೇ ಕಾರಣ : ಓಶೋ ವ್ಯಾಖ್ಯಾನ

ಜಗತ್ತಿನಲ್ಲಿ ಎಲ್ಲವೂ ಬಹಳ ಸರಳವಾಗಿವೆ. ಸತ್ಯವು ಸಹ ಬಹಳ ಸರಳ ಆದರೆ ನಮ್ಮ ಅಜ್ಞಾನ ಕಾರಣವಾಗಿ ಎಲ್ಲವೂ ಸಂಕೀರ್ಣ ಎನಿಸಿಕೊಂಡಿವೆ… ~ ಓಶೋ| ಕನ್ನಡಕ್ಕೆ: ಚಿದಂಬರ ನರೇಂದ್ರ

ಮೊದಲ ಬಾರಿ ಸ್ಟೀಮ್ ಎಂಜಿನ್ ನ ಕಂಡುಹಿಡಿಯಲಾದಾಗ ಯಾರಿಗೂ ಅದರ ಮೇಲೆ ನಂಬಿಕೆ ಹುಟ್ಟಲಿಲ್ಲ. ನಮ್ಮ ಅಡುಗೆ ಮನೆಯಲ್ಲಿ, ಸ್ನಾನದ ಮನೆಯಲ್ಲಿ ಕಂಡುಬರುವ ಸ್ಟೀಮ್, ಒಂದು ಎಂಜಿನ್ ಗೆ ಶಕ್ತಿ ತುಂಬಿ ನೂರಾರು ಜನರನ್ನ, ಸರಕು ಸಾಮಾನುಗಳನ್ನ ಸಾಗಿಸಬಲ್ಲದು ಎನ್ನುವುದನ್ನ ಯಾರೂ ನಂಬಲಿಲ್ಲ.

ಮೊದಲ ಬಾರಿ ಇಂಗ್ಲೆಂಡಿನಲ್ಲಿ ಸ್ಟೀಮ್ ಎಂಜಿನ್ ನ ಪರೀಕ್ಷೆ ಮಾಡಬೇಕಾದಾಗ ಆ ರೈಲಿನಲ್ಲಿ ಕುಳಿತುಕೊಳ್ಳಲು ಯಾರೂ ಸಿದ್ಧರಾಗಲಿಲ್ಲ. ಬಹಳಷ್ಟು ಜನರಿಗೆ ಹಣ ಕೊಟ್ಟು ರೈಲಿನಲ್ಲಿ ಪ್ರಯಾಣ ಮಾಡಲು ಕರೆತರಲಾಯಿತಾದರೂ, ಕೊನೆಯ ಗಳಿಗೆಯಲ್ಲಿ ಅವರೆಲ್ಲ ಅಲ್ಲಿಂದ ಓಡಿಹೋದರು. ಸ್ಟೀಮ್ ನಂಥ ಸಾಧಾರಣ ಸಂಗತಿಯಿಂದ ಇಂಥ ದೊಡ್ಡ ರೈಲನ್ನು ಎಳೆಯುವುದು ಸಾಧ್ಯವಿಲ್ಲ, ಇದು ಯಾವುದೋ ಡೆವಿಲ್ ನ ಕೆಲಸ ಆಗಿರಬಹುದು, ರೈಲು ಓಡಲು ಆರಂಭ ಮಾಡಬಹುದು ಆದರೆ ಅದು ಖಂಡಿತವಾಗಿ ನಿಗದಿತ ಜಾಗದಲ್ಲಿ ನಿಲ್ಲುತ್ತದೆ ಎನ್ನುವುದು ಯಾವ ಆಧಾರದ ಮೇಲೆ ಎಂದು ಜನ ಸಂಶಯಪಟ್ಟರು.

ಇದು ಎಂಜಿನ್ ನ ಮೊದಲ ಟೆಸ್ಟ್ ಆದ್ದರಿಂದ ವಿಜ್ಞಾನಿಗಳಿಗೂ ಜನರನ್ನು ಹೇಗೆ ಒಪ್ಪಿಸುವುದೆಂದು ಗೊತ್ತಾಗಲಿಲ್ಲ. ವಿಜ್ಞಾನಿಗಳು ಥಿಯಾರೆಟಿಕಲೀ ವಿವರಿಸುವ ಪ್ರಯತ್ನ ಮಾಡಿದರೂ ಜನರಿಗೆ ಅವರ ಥಿಯರಿಯಲ್ಲಿ ನಂಬಿಕೆ ಹುಟ್ಟಲಿಲ್ಲ, ಪ್ರ್ಯಾಕ್ಟಿಕಲೀ ಒಮ್ಮೆ ಕಣ್ಣಿಂದ ನೋಡುವ ತನಕ ತಾವು ಇಂಥದನ್ನೆಲ್ಲ ನಂಬುವುದಿಲ್ಲ ಎಂದು ಜನ ಹಟ ಹಿಡಿದರು.

ಕೊನೆಗೆ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಹನ್ನೆರಡು ಕೈದಿಗಳನ್ನು ರೈಲಿನಲ್ಲಿ ಪ್ರಯಾಣ ಮಾಡಲು ಕರೆತರಲಾಯಿತು. ಸ್ಟೀಮ್ ಎಂಜಿನ್ ಕಂಡುಹಿಡಿದ ವಿಜ್ಞಾನಿ, ಅದನ್ನು ರೂಪಿಸಿದ ಇಂಜಿನಿಯರ್ ಮತ್ತು ಈ ತಂತ್ರಜ್ಞಾನವನ್ನು ಬಲವಾಗಿ ನಂಬಿದ್ದ ಒಬ್ಬ ಡ್ರೈವರ್ ಜೊತೆ ಈ ಹನ್ನೆರಡು ಜನ ಕೈದಿಗಳು ಮೊದಲ ಪರೀಕ್ಷೆಯಲ್ಲಿ ಭಾಗವಹಿಸಿ ಯಶಸ್ವಿಯಾಗಿ ಮೊದಲ ಪ್ರಯಾಣವನ್ನು ಪೂರೈಸಿದರು. ಸ್ಟೀಮ್ ನಂಥ ಸರಳ ಸಂಗತಿಯಿಂದ ಇಂಥದೊಂದು ಚಮತ್ಕಾರ ಸಾಧ್ಯವೆಂದು ನಂಬದ ಜನರಿಗೆ ಈಗ ಇದು ಅತೀ ಸಾಮಾನ್ಯದ ಸಂಗತಿ. ಈಗ ಪ್ರತಿದಿನ ಲಕ್ಷಾಂತರ ಜನ ನಿರಾಂತಕವಾಗಿ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ.

ಜಗತ್ತಿನಲ್ಲಿ ಎಲ್ಲವೂ ಬಹಳ ಸರಳವಾಗಿವೆ. ಸತ್ಯವು ಸಹ ಬಹಳ ಸರಳ ಆದರೆ ನಮ್ಮ ಅಜ್ಞಾನ ಕಾರಣವಾಗಿ ಎಲ್ಲವೂ ಸಂಕೀರ್ಣ ಎನಿಸಿಕೊಂಡಿವೆ. ಒಮ್ಮೆ ನಮಗೆ ನಿಜ ಗೊತ್ತಾಗಿಬಿಟ್ಟರೆ ಎಲ್ಲವೂ ಎಷ್ಟು ಸರಳ ಎಷ್ಟು ಸಾಧಾರಣ ಎಂದು ಆಶ್ಚರ್ಯವಾಗುತ್ತದೆ. ಆದರೆ ಈ ಗೊತ್ತುಮಾಡಿಕೊಳ್ಳುವುದನ್ನ ಸಂಕೀರ್ಣ ಮಾಡುತ್ತಿರುವುದು ಆ ಸತ್ಯವಲ್ಲ ಬದಲಾಗಿ ಈ ಗೊತ್ತುಮಾಡಿಕೊಳ್ಳುವ ದಾರಿಯಲ್ಲಿ ನಮಗೆ ಕಷ್ಟ ನೀಡುತ್ತಿರುವುದು ನಮ್ಮ ಬುದ್ಧಿ ಮತ್ತು ಮನಸ್ಸು. ಈ ಮೈಂಡ್ ಗೆ ತನ್ನ ಪ್ರಾಬಲ್ಯವನ್ನು ನಿರೂಪಿಸುವ ಹಟ ಆದ್ದರಿಂದ ಮೈಂಡ್ ಪ್ರತಿಯೊಂದನ್ನೂ ಸಂಕೀರ್ಣ ದೃಷ್ಟಿಕೋನದಿಂದ ನೋಡಬಯಸುತ್ತದೆ. ಆದರೆ ಸತ್ಯ ಹಾಗಿಲ್ಲ, ಅದು ಬಹಳ ಸರಳ, ಬಹಳ ಸಾಧಾರಣ, ಮೈಂಡ್ ನ ಕಪಿಮುಷ್ಟಿಯಿಂದ ಹೊರಬಂದ ಎಲ್ಲರೂ ಇದನ್ನು ಬಹು ಸುಲಭವಾಗಿ ಗೊತ್ತು ಮಾಡಿಕೊಂಡಿದ್ದಾರೆ.

Leave a Reply