ಗೌರವ ಮತ್ತು ಪ್ರೀತಿ ಒಂದಕ್ಕೊಂದು ಎದುರಾಗಿ ನಿಂತಾಗ… : ಓಶೋ ವ್ಯಾಖ್ಯಾನ

ಒಬ್ಬರು ಇನ್ನೊಬ್ಬರನ್ನು ಪ್ರೀತಿಸುತ್ತಾರೆಂದರೆ ಅದಕ್ಕಿಂತ ದೊಡ್ಡದಾದ ಗೌರವ ಬೇರೆ ಯಾವುದಿದೆ…!? | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಮಾರುಕಟ್ಚೆಯಲ್ಲಿ
ಅಪರಿಚಿತನ ಕಾಲು ತುಳಿದರೆ
ಕ್ಷಮೆ ಕೇಳುತ್ತೇವೆ
“ತುಂಬ ಗದ್ದಲದ ಜಾಗ”
ಸಮಜಾಯಿಷಿ ಹೇಳುತ್ತೇವೆ.

ಮನೆಯಲ್ಲಿ ಹಿರಿಯರ ಕಾಲು ತುಳಿದರೆ
ಕಾಲು ಮುಟ್ಟಿ ಕಣ್ಣಿಗೊತ್ತಿಕೊಳ್ಳುತ್ತೇವೆ.

ಅಕಸ್ಮಾತ್ ಅಮ್ಮ
ಮಗುವಿನ ಕಾಲು ತುಳಿದಾಗ
ಆಕೆ ಏನೂ ಹೇಳುವುದಿಲ್ಲ.

ಶುದ್ಧ ಸೌಜನ್ಯದಲ್ಲಿ ಶಿಷ್ಟಾಚಾರವಿಲ್ಲ,
ಅತ್ಯುತ್ತಮ ನಡತೆಯಲ್ಲಿ ಕಳವಳವಿಲ್ಲ,
ಶ್ರೇಷ್ಠ ಜ್ಞಾನ ಮಿಂಚಿನಂತೆ,
ಹದಗೊಂಡ ಪ್ರೇಮಕ್ಕೆ ಪ್ರದರ್ಶನದ ಅವಶ್ಯಕತೆಯಿಲ್ಲ,
ಪರಿಪೂರ್ಣ ವಿಶ್ವಾಸದ ಬಾಯಿಯಲ್ಲಿ
ಭರವಸೆಯ ಮಾತಿಲ್ಲ.

~ ಜುವಾಂಗ್-ತ್ಸೆ

A.S. ನೀಲ್ ಪಾಠ ಹೇಳುವುದರಲ್ಲಿ ಸಿದ್ಧಹಸ್ತರು, ಅವರು ಪಾಠ ಹೇಳುವ ರೀತಿ ಎಷ್ಟು ಅನನ್ಯವಾಗಿತ್ತೆಂದರೆ, ಯಾವ ವಿದ್ಯಾರ್ಥಿಗಳೂ ಅವರ ಕ್ಲಾಸ್ ತಪ್ಪಿಸಿಕೊಳ್ಳುತ್ತಿರಲಿಲ್ಲ. ಒಮ್ಮೆ ಅವರು ಕ್ಲಾಸ್ ನಲ್ಲಿ ಪಾಠ ಮಾಡುತ್ತಿರುವಾಗ ಒಬ್ಬ ಭಾರತೀಯ ಶಿಕ್ಷಕ ಅವರ ಕ್ಲಾಸಿಗೆ ಬರುತ್ತಾನೆ. ಕ್ಲಾಸಿನೊಳಗೆ ತಾನು ಕಂಡ ದೃಶ್ಯ ಕಾರಣವಾಗಿ ಬೆಚ್ಚಿಬೀಳುತ್ತಾನೆ. ಪ್ರೊ. ನೀಲ್, ತನ್ಮಯರಾಗಿ ಪಾಠ ಮಾಡುತ್ತಿದ್ದಾರೆ ಆದರೆ ಅವರ ವಿದ್ಯಾರ್ಥಿಗಳೆಲ್ಲ ಹೇಗೆಂದರೆ ಹಾಗೆ ಬೆಂಚ್ ಮೇಲೆ ಕೂತುಕೊಂಡಿದ್ದಾರೆ, ಒರಗಿಕೊಂಡಿದ್ದಾರೆ, ಕಾಲು ಬೆಂಚ್ ಮೇಲೆ ಇಟ್ಟುಕೊಂಡಿದ್ದಾರೆ, ಸಿಗರೇಟು ಸೇದುತ್ತಿದ್ದಾರೆ, ಒಬ್ಬನಂತೂ ಕಣ್ಣು ಮುಚ್ಚಿಕೊಂಡು ಬೆಂಚ್ ಮೇಲೆ ಮಲಗಿಬಿಟ್ಟಿದ್ದಾನೆ. ಇದನ್ನು ಕಂಡು ಭಾರತೀಯ ಶಿಕ್ಷಕನಿಗೆ ಆಘಾತವಾಯಿತು.

“ ಪ್ರೊ. ನೀಲ್, ಇಂಥ ಅಶಿಸ್ತನ್ನು ನಾನು ಎಲ್ಲೂ ನೋಡಿಲ್ಲ. ಮೊದಲು ಪಾಠ ಮಾಡುವುದನ್ನ ನಿಲ್ಲಿಸಿ, ಎಲ್ಲ ವಿದ್ಯಾರ್ಥಿಗಳಿಗೂ ಶಿಸ್ತಿನ ಪಾಠ ಹೇಳಿಕೊಡಿ. ಶಿಸ್ತು ಇಲ್ಲದೆ ಯಾವ ಕಲಿಕೆಯೂ ಸಾಧ್ಯವಿಲ್ಲ. ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ಕೊಡುವುದನ್ನ ಮೊದಲು ಕಲಿಯಬೇಕು.” ಭಾರತೀಯ ಶಿಕ್ಷಕ, ಪ್ರೊ. ನೀಲ್ ಅವರನ್ನು ತಡೆದು ಮಾತನಾಡಿಸಿದ.

ಪ್ರೊ. ನೀಲ್ ಮಾತನಾಡಿದರು,

“ ಬಹುಶಃ ಇಲ್ಲಿ ಏನು ನಡೆಯುತ್ತಿದೆ ಎನ್ನುವುದು ನಿಮಗೆ ಗೊತ್ತಾಗಲಿಲ್ಲ ಅಂತ ನನ್ನ ಭಾವನೆ. ಈ ವಿದ್ಯಾರ್ಥಿಗಳು ನನ್ನ ಎಷ್ಟು ತೀವ್ರವಾಗಿ ಹಚ್ಚಿಕೊಂಡಿದ್ದಾರೆಂದರೆ ಅವರಿಗೆ ನನ್ನ ಕುರಿತಾಗಿ ಅತೀವ ಅಕ್ಕರೆ, ಈ ಅಕ್ಕರೆ ಕಾರಣವಾಗಿ ಅವರು ನನ್ನ ಜೊತೆ ಯಾವ ಬಿಗುಮಾನ ಇಲ್ಲದೇ ವ್ಯವಹರಿಸುತ್ತಾರೆ. ಗೌರವ ಮತ್ತು ಪ್ರೀತಿ ಒಂದಕ್ಕೊಂದು ಎದುರಾಗಿ ನಿಲ್ಲುವ ಪ್ರಸಂಗ ಎದುರಾದರೆ ನಾನು ಪ್ರೀತಿಯನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಒಬ್ಬರು ಇನ್ನೊಬ್ಬರನ್ನು ಪ್ರೀತಿಸುತ್ತಾರೆಂದರೆ ಅದಕ್ಕಿಂತ ದೊಡ್ಡದಾದ ಗೌರವ ಬೇರೆ ಯಾವುದಿದೆ? ಅವರು ನನ್ನನ್ನ ತಮ್ಮ ಮನೆಯ ಸದಸ್ಯ ಎಂದುಕೊಂಡಿದ್ದಾರೆ, ಮನೆಯ ಸದಸ್ಯರ ಜೊತೆ ಇರುವಾಗ ಪ್ರೀತಿಯ ಪಾಲು ಜಾಸ್ತಿ ಅಲ್ಲವೇ? ಅವರು ತಮಗೆ ಬೇಕಾದ ಹಾಗೆ ಕೂತು, ಮಲಗಿ, ಕಲಿಯಲು ಇಷ್ಟಪಡುತ್ತಿದ್ದರೆ ಹಾಗೇ ಮಾಡಲಿ ಬಿಡಿ. ಅವರಿಗೆ ಒತ್ತಾಯಪೂರ್ವಕವಾಗಿ ಕ್ಲಾಸಿನೊಳಗೆ ಸರಿಯಾಗಿ ಕೂರವುದನ್ನ ಕಲಿಸುವುದಕ್ಕಿಂತ, ಅವರು ನಾನು ಹೇಳುತ್ತಿರುವ ಪಾಠ ಕಲಿಯುವುದು ನನಗೆ ಹೆಚ್ಚು ಮುಖ್ಯ. ಗೌರವದಲ್ಲಿ ಪ್ರೀತಿ ಇಲ್ಲದೇ ಇರುವ ಸಾಧ್ಯತೆ ಇದೆ ಆದರೆ ಗೌರವ ಇಲ್ಲದ ಪ್ರೀತಿ ಸಾಧ್ಯವೇ ಇಲ್ಲ. ಹಾಗಾಗಿ ನಾನು ಗೌರವಿಸಲ್ಪಡುವುದಕ್ಕಿಂತ ಹೆಚ್ಚಾಗಿ ಪ್ರೀತಿಸಲ್ಪಡಲು ಹೆಚ್ಚು ಇಷ್ಟಪಡುತ್ತೇನೆ.“

ಒಮ್ಮೆ ಮಾಸ್ಟರ್ ಹೈಕೂಯಿನ್ ತನ್ನ ಬಹು ದಿನಗಳ ಪ್ರಯಾಣದ ನಂತರ ಆಶ್ರಮಕ್ಕೆ ಹಿಂತಿರುಗಿದ. ಅವನು ಆಶ್ರಮ ಪ್ರವೇಶಿಸಿದಾಗ ಅದು ಸಂಜೆಯ ಧ್ಯಾನದ ಸಮಯವಾಗಿತ್ತು. ಆಶ್ರಮದ ಎಲ್ಲ ಮಾಸ್ಟರ್ ಗಳು, ಸನ್ಯಾಸಿಗಳೂ ತೀವ್ರ ಝಾಝೆನ್ ಧ್ಯಾನದಲ್ಲಿ ಮಗ್ನರಾಗಿದ್ದರು. ಯಾರಿಗೂ ಹೈಕೂಯಿನ್ ಬಂದಿರುವ ವಿಷಯ ಗೊತ್ತೇ ಆಗಲಿಲ್ಲ.

ಆದರೆ ಆಶ್ರಮದೊಳಗೆ ಹೈಕೂಯಿನ್ ಕಾಲಿಡುತ್ತಿದ್ದಂತೆಯೇ ಆಶ್ರಮದ ನಾಯಿಗಳು ಬೊಗಳುತ್ತ ಮಾಸ್ಟರ್ ಸುತ್ತ ಓಡಾಡುತ್ತ ಗದ್ದಲ ಹಾಕತೊಡಗಿದವು, ಬೆಕ್ಕುಗಳು ಮಾಸ್ಟರ್ ನ ಕಾಲು ನೆಕ್ಕುತ್ತ ಚೀರತೊಡಗಿದವು, ಕೋಳಿಗಳು ಸದ್ದು ಮಾಡುತ್ತ ಓಡಾಡತೊಡಗಿದವು, ಮೊಲಗಳು ಆ ಕಡೆಯಿಂದ ಈ ಕಡೆ ಸುಮ್ಮನೇ ಜಿಗಿದಾಡತೊಡಗಿದವು. ಎಲ್ಲ ಪ್ರಾಣಿ ಪಕ್ಷಿಗಳಲ್ಲಿ ಉತ್ಸಾಹ ತುಂಬಿ ತುಳುಕುತ್ತಿತ್ತು.

ಮಾಸ್ಟರ್ ಹೈಕೂಯಿನ್, ಧ್ಯಾನಸ್ಥರಾಗಿದ್ದ ತನ್ನ ಶಿಷ್ಯರನ್ನೂ, ಗದ್ದಲ ಹಾಕುತ್ತಿದ್ದ ಈ ಪ್ರಾಣಿಗಳನ್ನು ಒಮ್ಮೆ ಗಮನಿಸಿ ಮಾತನಾಡಿದ,

“ ಪ್ರೀತಿಯ ಒಂದೇ ಒಂದು ಆಕ್ರಂದನ ಸಾವಿರ ವರ್ಷ ಕುಳಿತು ಧ್ಯಾನ ಮಾಡುವುದಕ್ಕಿಂತ ಮಹತ್ತರವಾದದ್ದು.


Source: Osho / The Ultimate Alchemy

Leave a Reply