ಚಕ್ರವರ್ತಿ ಪಟ್ಟು ಹಿಡಿದು ಲಾವೋತ್ಸೇಯನ್ನು ಒಂದು ದಿನದ ಮಟ್ಟಿಗೆ ನ್ಯಾಯಾಧೀಶನಾಗಲು ಒಪ್ಪಿಸಿದ. ಆಮೇಲೆ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಕಂಠ ಮಟ್ಟ ಕುಡಿದಿದ್ದನ್ನ
ಕಾರಲೇಬೇಕಾಗುತ್ತದೆ.
ಆಗ ನೀನು ಕುಡಿದದ್ದೂ ವ್ಯರ್ಥ.
ನಾಲಿಗೆ ಹರಿತವಾಗಿಸಿಕೊಂಡರೆ
ಬೇಗ ಮೊಂಡಾಗುತ್ತದೆ.
ಆಗ ನೀನೇ ಮೂಕ.
ಐಶ್ವರ್ಯ ತುಂಬಿ ತುಳುಕೋ ಮನೆಗೆ
ಕನ್ನ ಬಿದ್ದೇ ಬೀಳುತ್ತದೆ.
ಆಗ ನೀನೇ ದರಿದ್ರ.
ಸಂಪತ್ತು, ಅಂತಸ್ತು, ಸೊಕ್ಕು ಎಲ್ಲವೂ
ತಮಗೆ ತಾವೇ ಶತ್ರುಗಳು.
ಎಲ್ಲವನ್ನೂ ಚಿವುಟಿ ಹಾಕುತ್ತವೆ.
ಮಾಡೊದನ್ನೆಲ್ಲ, ಹಿಂದೆ ನಿಂತು ಮಾಡು
ಆಗ ನೀನು
ದಾವ್ ನ ಹಾರೈಕೆಗೆ ಪಾತ್ರನಾಗುತ್ತೀಯ.
~ ಲಾವೋತ್ಸೆ
ತನ್ನ ಜೀವಿತ ಕಾಲದಲ್ಲಿ ಲಾವೋತ್ಸೇ ತುಂಬ ಜಾಣ ಮನುಷ್ಯನೆಂದು ಚೈನಾದಲ್ಲಿ ಹೆಸರುವಾಸಿಯಾಗಿದ್ದ, ಯಾವ ಸಂಶಯಕ್ಕೂ ಕಾರಣವಿಲ್ಲದಂತೆ ಜನ ಲಾವೋತ್ಸೇ ಯನ್ನ ಆ ಕಾಲದ ಅತ್ಯಂತ ದೊಡ್ಡ ಜ್ಞಾನಿಯೆಂದು ಒಪ್ಪಿಕೊಂಡಿದ್ದರು. ಒಮ್ಮೆ ಚೈನಾದ ಚಕ್ರವರ್ತಿ ಅತ್ಯಂತ ವಿನಯದಿಂದ ಲಾವೋತ್ಸೇಯನ್ನು ಚೈನಾದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶನಾಗುವಂತೆ ಬೇಡಿಕೊಂಡ. ಚೈನಾದ ನ್ಯಾಯ ಪದ್ಧತಿಯನ್ನ ಲಾವೋತ್ಸೇಗಿಂತ ಚೆನ್ನಾಗಿ ಯಾರೂ ಮುಂದುವರೆಸಿಕೊಂಡು ಹೋಗಲಾರರು ಎನ್ನುವುದು ಚಕ್ರವರ್ತಿಯ ಅಭಿಮತವಾಗಿತ್ತು. “ನನ್ನ ತಿಳುವಳಿಕೆಯೇ ಬೇರೆ, ಇಲ್ಲಿನ ನ್ಯಾಯಪದ್ಧತಿಯೇ ಬೇರೆ, ನಾನು ಇಲ್ಲಿನ ನ್ಯಾಯ ಪದ್ಧತಿಯನ್ನ ಗೈಡ್ ಮಾಡಲು ಸೂಕ್ತ ವ್ಯಕ್ತಿಯಲ್ಲ” ಲಾವೋತ್ಸೇ ಚಕ್ರವರ್ತಿಯ ಬೇಡಿಕೆಯನ್ನ ವಿನಯದಿಂದ ನಿರಾಕರಿಸಿದ. ಆದರೆ ಚಕ್ರವರ್ತಿ ತನ್ನ ಹಟ ಬಿಡಲಿಲ್ಲ, ಲಾವೋತ್ಸೇ ನ್ಯಾಯಾಧೀಶನಾಗಲೇಬೇಕು ಎಂದು ಪಟ್ಟು ಹಿಡಿದ.
“ ಒಂದು ದಿನದ ಮಟ್ಟಿಗೆ ನ್ಯಾಯಾಧೀಶನಾಗಲು ನನಗೆ ಒಪ್ಪಿಗೆ ಇದೆ. ನ್ಯಾಯಾಲಯದಲ್ಲಿ ನನ್ನ ನಿರ್ಣಯಗಳನ್ನು ಕೇಳಿದಾಗ ನೀನೇ ನನ್ನನ್ನು ನ್ಯಾಯಾಧೀಶನ ಪದವಿಯಿಂದ ಕಿತ್ತು ಹಾಕುತ್ತೀಯ. ಒಂದು, ನನ್ನ ನ್ಯಾಯ ನಡೆಯಬೇಕು ಅಥವಾ ಸಧ್ಯದ ಕಾನೂನು ವ್ಯವಸ್ಥೆ ಇರಬೇಕು. ಎರಡೂ ಒಟ್ಟಿಗೆ ಇರುವುದು ಸಾಧ್ಯವಿಲ್ಲ. ಬೇಕಾದರೆ ಒಮ್ಮೆ ಪ್ರಯತ್ನ ಮಾಡಿ ನೋಡು.” ಲಾವೋತ್ಸೇ, ಚಕ್ರವರ್ತಿಯನ್ನ ಒಪ್ಪಿಸುವ ಪ್ರಯತ್ನ ಮಾಡಿದ. ಕೊನೆಗೆ ಚಕ್ರವರ್ತಿ, ಲಾವೋತ್ಸೇಯ ಸಲಹೆ ಒಪ್ಪಿಕೊಂಡು ಅವನನ್ನು ಒಂದು ದಿನದ ಮಟ್ಟಿಗೆ ನ್ಯಾಯಾಧೀಶನನ್ನಾಗಿ ನಿಯುಕ್ತಿಗೊಳಿಸಿದ.
ಮೊದಲ ದಿನ ನ್ಯಾಯಾಲಯದಲ್ಲಿ ರಾಜ್ಯದ ಅತ್ಯಂತ ಶ್ರೀಮಂತ ವ್ಯಾಪಾರಿಯ ಅರ್ಧ ಖಜಾನೆಯನ್ನ ದೋಚಿದ ಕಳ್ಳನನ್ನು, ಲಾವೋತ್ಸೇಯ ಎದುರು ಕರೆತರಲಾಗಿತ್ತು. ಲಾವೋತ್ಸೇ ಪ್ರಕರಣದ ಪೂರ್ವಾಪರಗಳನ್ನು ಅತ್ಯಂತ ಸಾವಧಾನವಾಗಿ ಕೇಳಿಸಿಕೊಂಡು, ಆ ಶ್ರೀಮಂತ ವ್ಯಾಪಾರಿ ಮತ್ತು ಕಳ್ಳ ಇಬ್ಬರಿಗೂ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದ.
“ ಇದೇನು ಅನ್ಯಾಯ, ಕಳ್ಳತನಕ್ಕೆ ಗುರಿಯಾದವನು ನಾನು, ಸಂಪತ್ತನ್ನು ಕಳೆದುಕೊಂಡವನು ನಾನು, ಆದರೂ ನನಗೆ ಶಿಕ್ಷೆ ವಿಧಿಸಲಾಗಿದೆ “ ಶ್ರೀಮಂತ ವ್ಯಾಪಾರಿ, ಲಾವೋತ್ಸೇಯ ನ್ಯಾಯ ನಿರ್ಣಯಕ್ಕೆ ತನ್ನ ಅಸಮ್ಮತಿ ವ್ಯಕ್ತಪಡಿಸಿದ. ಚಕ್ರವರ್ತಿಗೂ ಲಾವೋತ್ಸೇಯ ನ್ಯಾಯ ಅರ್ಥವಾಗಲಿಲ್ಲ.
“ ನನ್ನ ತೀರ್ಮಾನ ನ್ಯಾಯಯುತವಾಗಿಲ್ಲ ನಿಜ, ನಾನು ನಿನಗೆ ಕಳ್ಳನಿಗಿಂತ ಜಾಸ್ತಿ ಶಿಕ್ಷೆ ಕೊಡಬೇಕಿತ್ತು. ಈ ಪ್ರಕರಣದಲ್ಲಿ ನೀನು ದೊಡ್ಡ ಅಪರಾಧಿ, ಜನರ ಬಳಿ ಇರಬೇಕಾಗಿದ್ದ ಸಂಪತ್ತನ್ನ ನೀನು, ಸ್ವಂತದ ಸಲುವಾಗಿ ಕೂಡಿಸಿಟ್ಟುಕೊಂಡಿರುವೆ. ಸಾವಿರಾರು ಜನ ಬಡತನದಲ್ಲಿ ಬದುಕುತ್ತಿರುವಾಗ ನೀನು ಅವರ ಶ್ರಮದ ಸಂಪತ್ತನ್ನ ನ್ಯಾಯ ಪದ್ಧತಿಯನ್ನ ದುರುಪಯೋಗಪಡಿಸಿಕೊಂಡು ಸಂಗ್ರಹಿಸಿಟ್ಟುಕೊಂಡಿರುವೆ. ನಿನ್ನ ಈ ಲೋಭವೇ ಕಳ್ಳರನ್ನು ಸೃಷ್ಟಿಸುತ್ತಿದೆ. ಈ ಕಳ್ಳತನಕ್ಕೆ ನೀನೇ ಹೆಚ್ಚು ಜವಾಬ್ದಾರ.” ಲಾವೋತ್ಸೇ, ಶ್ರೀಮಂತ ವ್ಯಾಪಾರಿಗೆ ತಾನು ಶಿಕ್ಷೆ ವಿಧಿಸಿದ ಕ್ರಮವನ್ನು ಸಮರ್ಥಿಸಿಕೊಂಡ.
Source: Osho – The courage to be yourself.