ಬುದ್ಧನನ್ನು ಕೊಲ್ಲುವುದು! : ಝೆನ್ ‘ತಿಳಿ’ಗೊಳ

ಬುದ್ಧನನ್ನು ಕೊಲ್ಲುವುದೆಂದರೆ, ಬುದ್ಧನ ಕುರಿತಾದ ಭ್ರಮೆಗಳಿಂದ ಹೊರಬರುವುದು. ನೆನಪಿಡಬೇಕಾದದ್ದು ಏನೆಂದರೆ ಬುದ್ಧ, ನಿರ್ಗುಣ, ನಿರಾಕಾರ ಮತ್ತು ಯಾವುದನ್ನಾದರೂ ಕೊಲ್ಲಬಹುದಾದರೆ ಅದು ಬುದ್ಧ ಅಲ್ಲ… ~ Boo Ahm | ಕನ್ನಡಕ್ಕೆ: ಚಿದಂಬರ ನರೇಂದ್ರ

ಪ್ರಶ್ನೆ : ಝೆನ್ ಧ್ಯಾನ ಬುದ್ಧನನ್ನು ಕೊಲ್ಲಲು ಪ್ರೋತ್ಸಾಹ ನೀಡುತ್ತದೆ. ಬುದ್ಧನನ್ನು ಕೊಲ್ಲುವುದೇ ಝೆನ್ ಧ್ಯಾನವಾದರೆ ನಾವು ಬೌದ್ಧರು, ಏನನ್ನು ಆರಾಧಿಸಬೇಕು ?

ಉತ್ತರ : ಬೌದ್ಧದ ಧರ್ಮದ ತಿರುಳು, ಬುದ್ಧನನ್ನು ಆರಾಧಿಸುವುದಲ್ಲ, ನಮ್ಮ ಸುತ್ತ ಇರುವ ಸಮಸ್ತವನ್ನೂ, ನಮ್ಮನ್ನೂ ಸೇರಿಸಿ ಎಲ್ಲವನ್ನೂ, ಬುದ್ಧ ಎಂದು ಮನದಟ್ಟು ಮಾಡಿಕೊಳ್ಳುವುದು. ಇನ್ನೂ ವಿವರಿಸಿ ಹೇಳುವುದೆಂದರೆ, ಕ್ಷಮೆಗಾಗಿ, ಸಂತೋಷಕ್ಕಾಗಿ ನಮ್ಮ ದೃಷ್ಟಿಯಿಂದ ಮರೆಯಾಗಿರುವ ಕಾಲ್ಪನಿಕ ಅಸ್ತಿತ್ವವೊಂದರ ಪ್ರಾರ್ಥನೆ, ಆರಾಧನೆಯಲ್ಲ ಬೌದ್ಧ ಧರ್ಮ. ಬದಲಾಗಿ ನಮ್ಮ ಸುತ್ತ ಇರುವ ಸಮಸ್ತವನ್ನೂ, ಅವುಗಳ ಬಗ್ಗೆ ಯಾವ ತೀರ್ಮಾನಗಳನ್ನೂ ಹೊಂದದೆ, ಇರುವುದನ್ನು ಇದ್ದ ಹಾಗೆ ಗಮನಿಸುವುದೇ ಬೌದ್ಧ ಧರ್ಮ. ಬೌದ್ಧ ಸಾಧಕರ ಪ್ರಕಾರ, “ನೀವು ಬೌದ್ಧರಾಗಿರದಿದ್ದರೆ, ಬೌದ್ಧರು ಮತ್ತು ಬೌದ್ಧರಲ್ಲದವರು ಎಂಬ ಎರಡು ಗುಂಪುಗಳ ಬಗ್ಗೆ ನೀವು ವಿಚಾರ ಮಾಡುತ್ತೀರಿ ಆದರೆ ಅಕಸ್ಮಾತ್ ನೀವು ಬೌದ್ಧರಾಗಿದ್ದರೆ ನಿಮಗೆ ಎಲ್ಲರೂ ಬೌದ್ಧರೇ, ತಿಗಣೆಗಳು ಕೂಡ “

ನಮ್ಮ ಸುತ್ತ ಇರುವ ಸಂಗತಿಗಳನ್ನು ಅವು ಇರುವ ಹಾಗೆ ನೋಡುವುದೆಂದರೆ ಆ ಸಂಗತಿಯ ಸುತ್ತ ಸೃಷ್ಟಿಯಾಗಿರುವ ಭ್ರಮೆಗಳಿಂದ ಮೋಸ ಹೋಗದ ಹಾಗೆ ಪ್ರಜ್ಞೆಯನ್ನ ಹರಿತ ಮಾಡಿಕೊಳ್ಳುವುದು. ಬಹುತೇಕ ಬೌದ್ಧರು ಅಂಟಿಕೊಂಡಿರುವುದು ಬುದ್ಧನ ಸುತ್ತ ಸೃಷ್ಟಿಯಾಗಿರುವ ಅತ್ಯಂತ ಶಕ್ತಿಶಾಲಿ, ಪ್ರಭಾವಶಾಲಿ ಭ್ರಮಾಶೀಲ ಮಿಥ್ಯಾ ರೂಪಕ್ಕೆ (virtual image). ಬುದ್ಧನ ಈ ಭ್ರಮಾ ರೂಪ, ಬೌದ್ಧರಿಗೆ ಬುದ್ಧನನ್ನು ಅರ್ಥಮಾಡಿಕೊಳ್ಳುವ ದಾರಿಯಲ್ಲಿನ ದೊಡ್ಡ ಅಡತಡೆಯಾಗಿದೆ. ಆದ್ದರಿಂದ ಝೆನ್ ಮಾಸ್ಟರ್ ಲಿಂಚಿಯಂಥ ಅನೇಕ ಬೌದ್ಧ ಸಾಧಕರು, ತಮ್ಮ ಶಿಷ್ಯರಿಗೆ ಬುದ್ಧ ಕಾಣಿಸಿದರೆ ಅವನನ್ನು ಮೊದಲು ಕೊಂದುಬಿಡಿ ಎಂದು ಸಲಹೆ ನೀಡಿದರು. ಹಾಗಾಗಿ ಬುದ್ಧನನ್ನು ಕೊಲ್ಲುವುದೆಂದರೆ, ಬುದ್ಧನ ಕುರಿತಾದ ಭ್ರಮೆಗಳಿಂದ ಹೊರಬರುವುದು. ನೆನಪಿಡಬೇಕಾದದ್ದು ಏನೆಂದರೆ ಬುದ್ಧ, ನಿರ್ಗುಣ, ನಿರಾಕಾರ ಮತ್ತು ಯಾವುದನ್ನಾದರೂ ಕೊಲ್ಲಬಹುದಾದರೆ ಅದು ಬುದ್ಧ ಅಲ್ಲ.

ಒಮ್ಮೆ, ಸನ್ಯಾಸಿಯೊಬ್ಬ ವಿದಾಯ ಹೇಳಲು ಮಾಸ್ಟರ್ ಜೋಶೋ ಹತ್ತಿರ ಬಂದ.

ಮುಂದೆ ಎಲ್ಲಿ ಹೋಗಬೇಕು ಅಂತ ನಿರ್ಧರಿಸಿದ್ದೀಯ?

ಜೋಶೋ ಪ್ರಶ್ನೆ ಮಾಡಿದ.

ಬೌದ್ಧ ಧರ್ಮ ಕಲಿಯಲು ಜಗತ್ತಿನ ಮೂಲೆ ಮೂಲೆಗೂ ಹೋಗುತ್ತಿದ್ದೇನೆ ಮಾಸ್ಟರ್.

ಜೋಶೋ, ಸನ್ಯಾಸಿಯ ಕುತ್ತಿಗೆ ಪಟ್ಟಿ ಹಿಡಿದ.

ಬುದ್ಧ ಇರುವಲ್ಲಿ ಒಂದು ಕ್ಷಣವೂ ಇರಬೇಡ,

ಬುದ್ಧ ಇರದ ಜಾಗವನ್ನು ಮಿಂಚಿನಂತೆ ದಾಟಿ ಹೋಗು.

ಸುತ್ತಲಿನ ಮೂರು ಸಾವಿರ ಮೈಲಿ ಜಾಗದಲ್ಲಿ
ಬೌದ್ದ ಧರ್ಮ ದ ಬಗ್ಗೆ ಯಾರೊಡನೆಯೂ ಮಾತಾಡುವ ತಪ್ಪು ಮಾಡಬೇಡ.

Leave a Reply