ಅಧ್ಯಾತ್ಮ ಅಂದರೆ ಕಳೆದುಕೊಳ್ಳುವುದು! : ಓಶೋ

“ನಾನು ಈಗ ಗಳಿಸಿದ್ದು, ಮೊದಲಿನಿಂದಲೂ ನನ್ನೊಳಗೆ ಇತ್ತು, ನನ್ನ ಅಜ್ಞಾನ ಕಾರಣವಾಗಿ ನಾನು ಅದರಬಗ್ಗೆ ಗಮನ ಹರಿಸಿರಲಿಲ್ಲ ಅಷ್ಟೇ” ಅಂದ ಬುದ್ಧ. ~ ಓಶೋ; ಕನ್ನಡಕ್ಕೆ: ಚಿದಂಬರ ನರೇಂದ್ರ

“ ನೀನು ಗಳಿಸಿದ್ದೇನು?”

ಜ್ಞಾನೋದಯಯದ ನಂತರ ಜನ ಬುದ್ಧನನ್ನು ಕೇಳಿದಾಗ, ಅವನು ನಕ್ಕುಬಿಟ್ಟ,
“ ನಾನು ಏನನ್ನೂ ಗಳಿಸಿಲ್ಲ, ಬದಲಾಗಿ ನಾನು ಕಳೆದುಕೊಂಡದ್ದೇ ಹೆಚ್ಚು. ನಾನು ನನ್ನ ಅಜ್ಞಾನವನ್ನ ಕಳೆದುಕೊಂಡೆ, ಅಹಂನ ಕಳೆದುಕೊಂಡೆ, ನನ್ನ ಬುದ್ಧಿ-ಮನಸ್ಸು ಗಳನ್ನ ಕಳೆದುಕೊಂಡೆ. ನಾನು ಹೊಸದಾಗಿ ಏನನ್ನೂ ಗಳಿಸಿಲ್ಲ.”

ಬುದ್ಧನ ಮಾತುಗಳನ್ನ ಕೇಳಿ ಜನರಿಗೆ ಪರಮಾಶ್ಚರ್ಯವಾಯಿತು.
“ ಅಧ್ಯಾತ್ಮವೆಂದರೆ ಗಳಿಸುವುದು, ಸಾಧಿಸುವುದು ಎಂದು ಎಲ್ಲ ಹೇಳುತ್ತಾರೆ, ಆದರೆ ನೀನು, ಏನನ್ನೂ ಗಳಿಸಿಲ್ಲ ಬದಲಾಗಿ ಕಳೆದುಕೊಂಡಿದ್ದೇನೆ ಎನ್ನುತ್ತಿದ್ದೀಯ, ಇದು ಯಾವ ಬಗೆಯ ಜ್ಞಾನೋದಯ? ಯಾವ ಬಗೆಯ ನಿರ್ವಾಣ ? “
ಜನ ಬುದ್ಧನನ್ನು ಪ್ರಶ್ನೆ ಮಾಡಿದರು.

“ ನಾನು ಏನನ್ನಾದರೂ ಸಾಧಿಸಿದ್ದೇನಾದರೆ ಅದು ಯಾವುದೋ ಹೊಸದಾದದ್ದಲ್ಲ, ಅದು ನನ್ನಲ್ಲೇ ಇತ್ತು, ನಾನು ಈಗ ಅದನ್ನ ನೆನಪುಮಾಡಿಕೊಂಡೆ ಅಷ್ಟೇ. ಹಾಗಾಗಿ ನಾನು ಅದನ್ನ ಸಾಧನೆ ಎಂದು ಕರೆಯುವುದಿಲ್ಲ. ನಾನು ಈಗ ಗಳಿಸಿದ್ದು, ಮೊದಲಿನಿಂದಲೂ ನನ್ನೊಳಗೆ ಇತ್ತು, ನನ್ನ ಅಜ್ಞಾನ ಕಾರಣವಾಗಿ ನಾನು ಅದರಬಗ್ಗೆ ಗಮನ ಹರಿಸಿರಲಿಲ್ಲ ಅಷ್ಟೇ. ಹಾಗಾಗಿ ಇದು ಹೊಸ ಸಂಶೋಧನೆಯಲ್ಲ, ಮರು ಸಂಶೋಧನೆ. ಅದು ಮೊದಲೂ ನನ್ನೊಳಗೆ ಇತ್ತು, ಲಕ್ಷಾಂತರ ವರ್ಷಗಳಿಂದ ಅದು ನಮ್ಮೊಳಗೇ ಇದೆ, ಒಂದು ಗಳಿಗೆಯೂ ಅದು ನಮ್ಮಿಂದ ಹೊರತಾಗಿಲ್ಲ, ನಾವು ಅದು ನಮ್ಮ ಬಳಿ ಇರುವುದನ್ನ ಮರೆತಿದ್ದೆವು, ಹಾಗಾಗಿ ಈ ಜ್ಞಾನೋದಯ ಎಂದರೆ ಮತ್ತೆ ನೆನಪು ಮಾಡಿಕೊಳ್ಳುವುದು.

ಇದು ಹೇಗೆಂದರೆ, ನಿಮ್ಮ ಬಳಿ ಇರುವ ಹಣವನ್ನ ನೀವು ನಿಮ್ಮ ಅಂಗಿಯ ಜೇಬಿನಲ್ಲಿಟ್ಟು ಮರೆತುಬಿಟ್ಟಿದ್ದೀರ. ಬಡತನ ನಿಮ್ಮನ್ನ ಕಿತ್ತು ತಿನ್ನುತ್ತಿರುವಾಗಲೂ ನಿಮಗೆ ನಿಮ್ಮ ಜೇಬಿನಲ್ಲಿರುವ ಹಣದ ಬಗ್ಗೆ ನೆನಪಿಲ್ಲ. ಹಲವಾರು ವರ್ಷಗಳ ನಂತರ, ಬೇರೆ ಏನನ್ನೋ ಹುಡುಕುವಾಗ ನಿಮ್ಮ ಜೇಬಿನಲ್ಲಿರುವ ಹಣ ನಿಮಗೆ ಸಿಗುತ್ತದೆ. ಇಷ್ಟು ವರ್ಷಗಳಿಂದಲೂ ಆ ಹಣ ನಿಮ್ಮ ಜೇಬಿನಲ್ಲಿಯೇ ಇತ್ತು. ಆದರೆ ನಿಮಗೆ ಅದು ನೆನಪಿರಲಿಲ್ಲ. ಜ್ಞಾನೋದಯ ಎಂದರೆ ನಿಮ್ಮ ಬಳಿ ಇರುವ ನಿಧಿಯನ್ನ ಮತ್ತೆ ನೆನಪಿಸಿಕೊಳ್ಳುವುದು. ಹಾಗಾಗಿ ಇದು ಹೊಸಗಳಿಕೆಯೆನಲ್ಲ, ಕೇವಲ ಮರಳಿ ನೆನಪಿಸಿಕೊಂಡು ಪಡೆದುಕೊಂಡದ್ದು.

ದೇವರನ್ನು ನಾವು ಕಳೆದುಕೊಂಡಿಲ್ಲ ಕೇವಲ ಮರೆತಿದ್ದೇವೆ. ಹಾಗಾಗಿ ನಾವು ದೇವರನ್ನು ಹುಡುಕಬೇಕಿಲ್ಲ ಮರೆತುಹೋಗಿರುವ ದೇವರನ್ನು ನೆನಪಿಸಿಕೊಳ್ಳಬೇಕು ಮಾತ್ರ. ನಮ್ಮೊಳಗಿರುವ ಅನವಶ್ಯಕ ಸಂಗತಿಗಳಾದ ಅಹಂ, ಅಸೂಯೆ, ದ್ವೇಷ ಮುಂತಾದವನ್ನು ನಾವು ಕಳೆದುಕೊಂಡಾಗ, ನಮಗೆ ನಮ್ಮ ಪರಮ ಸಂಬಂಧ ನೆನಪಾಗುವುದು.

ಒಮ್ಮೆ ಹೀಗಾಯಿತು……..

“ ನಸ್ರುದ್ದೀನ್, ನಾನು ಈ ಊರು ಬಿಟ್ಟು ಬೇರೆ ಊರಿಗೆ ಹೋಗುತ್ತಿದ್ದೇನೆ. ನಿನ್ನ ಗುರುತಿಗಾಗಿ ನೀನು ಯಾಕೆ ನಿನ್ನ ಉಂಗುರ ನನಗೆ ಕೊಡಬಾರದು? ಆ ಉಂಗುರ ನೋಡಿದಾಗಲೆಲ್ಲ ನಾನು ನಿನ್ನ ನೆನಪಿಸಿಕೊಳ್ಳುತ್ತೇನೆ “

ಮುಲ್ಲಾ ನಸ್ರುದ್ದೀನ್ ನ ಗೆಳೆಯ ಕೇಳಿಕೊಂಡ.

“ ಉಂಗುರ ನೀನು ಕಳೆದುಕೊಂಡು ಬಿಡಬಹುದು ಆಗ ನೀನು ನನ್ನ ಮರತೇಬಿಡುತ್ತೀಯ, ಹೀಗೆ ಮಾಡಿದರೆ ಹೇಗೆ? ನಾನು ನಿನಗೆ ಉಂಗುರ ಕೊಡುವುದಿಲ್ಲ, ನೀನು ಉಂಗುರವಿಲ್ಲದ ಖಾಲಿ ಬೆರಳು ನೋಡಿಕೊಂಡಾಗಲೆಲ್ಲ ನಿನಗೆ ನನ್ನ ನೆನಪಾಗುತ್ತದೆ. ನನ್ನ ಮರೆಯುವ ಸಾಧ್ಯತೆಯೇ ಇರುವುದಿಲ್ಲ.“

ಮುಲ್ಲಾ ನಗುತ್ತ ಉತ್ತರಿಸಿದ.

Leave a Reply