ನಾವು ಸಜ್ಜನರಾಗಲು ಗುರುವಿನ ಮಾರ್ಗದರ್ಶನ ಬೇಕಿಲ್ಲ! : ಜಿಡ್ಡು ಕೃಷ್ಣಮೂರ್ತಿ

ಈ ಅರಿವು ನಮ್ಮೊಳಗಿನಿಂದ ಬರಬೇಕಿರುವುದು. ಹೊಟ್ಟೆಕಿಚ್ಚು ಒಳ್ಳೆಯದಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ. ನಿಮಗೂ ಗೊತ್ತಿದೆ. ಆದರೆ ನಿಮಗೆ ನಿಮ್ಮಲ್ಲೂ ಹೊಟ್ಟೆಕಿಚ್ಚು ಇರುವುದು ಗೊತ್ತೇ ಇಲ್ಲ! ನಿಮ್ಮ ಅಶಾಂತಿಯ, ನಿಮ್ಮ ಚಡಪಡಿಕೆಯ ಮೂಲವನ್ನೊಮ್ಮೆ ಬಗೆದು ನೋಡಿ. ಅಲ್ಲಿ ನಿಮಗೆ ನೀವೂ ಮತ್ತೊಬ್ಬರಂತೆ ಆಗಬೇಕು ಅನ್ನುವ ಸುಪ್ತ ವಾಂಛೆ ಮುಖಕ್ಕೆ ರಾಚುವುದು! ~ ಜಿಡ್ಡು ಕೃಷ್ಣಮೂರ್ತಿ; ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ

ಸಂದರ್ಶಕ: ಯಾರ ಶಿಷ್ಯತ್ವವನ್ನೂ ಪಡೆಯದೆ, ಗುರುವಿನ ಮಾರ್ಗದರ್ಶನವೂ ಇಲ್ಲದೆ ಯಾರಾದರೂ ಸತ್ಯವಂತರೂ ಸಜ್ಜನರೂ ಪರಿಪೂರ್ಣರೂ ಆಗಲು ಸಾಧ್ಯವಿದೆಯೇ?

ಜಿಡ್ಡು ಕೃಷ್ಣಮೂರ್ತಿ: ಸಾಧ್ಯವಿಲ್ಲವೆ?

ಉದಾಹರಣೆಗೆ ಹೊಟ್ಟೆಕಿಚ್ಚು. ಮತ್ತೊಬ್ಬರ ಮಾರ್ಗದರ್ಶನದಿಂದ, ಮತ್ತೊಬ್ಬರಿಗೆ ಶಿಷ್ಯರಾಗುವುದರಿಂದ ನಾವು ಈ ಹೊಟ್ಟೆಕಿಚ್ಚನ್ನು ತೊಲಗಿಸಿಕೊಳ್ಳಬಹುದೆ? ಪ್ರಶ್ನೆಯನ್ನು ಸರಿಯಾಗಿ ಗಮನಿಸಿ. ಪ್ರಶ್ನೆಯಲ್ಲೇ ಉತ್ತರ ಅಡಗಿದೆ, ಅದಕ್ಕಾಗಿ ಮತ್ತೆಲ್ಲೋ ಹುಡುಕುವ ಅಗತ್ಯವಿಲ್ಲ.

ಹೊಟ್ಟೆ ಕಿಚ್ಚು ಅಂದರೇನು ಗೊತ್ತಿದೆ ತಾನೆ? ನೀವು ನೋಡಲು ಸುಂದರವಾಗಿದ್ದೀರಿ, ಒಳ್ಳೆಯ ಉಡುಪು ತೊಟ್ಟಿದ್ದೀರಿ; ನನಗೂ ನಿಮ್ಮ ಹಾಗೇ ಕಾಣಬೇಕೆಂಬ ಬಯಕೆ, ನಿಮ್ಮ ಹಾಗೇ ಬಟ್ಟೆ ತೊಡಬೇಕೆಂಬ ಬಯಕೆ. ನನಗೆ ನಾನು ಹೇಗೆ ಇದ್ದೀನೋ ಅದು ಬೇಕಿಲ್ಲ. ನನಗೆ ನಿಮ್ಮ ಹಾಗೆ ಇರುವ ಆಸೆ. ನನಗೆ ನಿಮ್ಮ ಬಳಿ ಇರುವಂಥದ್ದೇ ಮನೆ ಬೇಕು, ಬಂಗಲೆ ಬೇಕು, ಸುಖ ಸವಲತ್ತು ಬೇಕು, ಕೀರ್ತಿ ಬೇಕು. ಅದು ಯಾವುದೂ ನನ್ನ ಬಳಿ ಇಲ್ಲ, ನಿಮ್ಮ ಬಳಿ ಇದೆ. ಆದ್ದರಿಂದಲೇ ನನಗೆ ನಿಮ್ಮನ್ನು ಕಂಡರೆ ಹೊಟ್ಟೆಕಿಚ್ಚು.

ಯಾವ ಕ್ಷಣ ನಮಗೆ ನಾನು ನಿಮ್ಮ ಹಾಗೇ ಆಗಬೇಕು, ನಿಮ್ಮ ಬಳಿ ಇರುವುದೆಲ್ಲ ನನಗೂ ಬೇಕು ಅನ್ನುವ ಹಠ ಮೂಡುತ್ತದೆಯೋ ಆ ಕ್ಷಣವೇ ಹೊಟ್ತೆಕಿಚ್ಚು ಹೊತ್ತಿಕೊಳ್ಳುತ್ತದೆ. ಅದೇ ವೇಳೆ; ಯಾವ ಕ್ಷಣ ನಮಗೆ ನಿಮ್ಮ ಬಳಿ ಇರುವುದೆಲ್ಲವೂ ನೀವು ಏನಾಗಿದ್ದೀರೋ ಆ ಕಾರಣಕ್ಕೇ ಇರುವುದು; ನನ್ನ ಬಳಿ ಇರುವುದೆಲ್ಲವೂ ನಾನು ಏನಾಗಿದ್ದೀನೋ ಆ ಕಾರಣಕ್ಕೇ ಇರುವುದು. ನಾನು ನಾನಾಗಿರುವವರೆಗೂ ನನ್ನ ಬಳಿ ಇರುವುದೇ ನನಗೆ ಸಂತೃಪ್ತಿ ಕೊಡಬಲ್ಲದು. ಎಂದಿಗೂ ಸಾಧ್ಯವಾಗದ, ಮತ್ತೊಬ್ಬರಂತೆ ಆಗುವ ಹಪಾಹಪಿಗೆ ಬಿದ್ದ ಕ್ಷಣ ನೆಮ್ಮದಿ ಮಾಯವಾಗುವುದು – ಅನ್ನುವ ಅರಿವು ಮೂಡುವುದೋ ಆ ಕ್ಷಣ ನಮ್ಮ ಹೊಟ್ಟೆಕಿಚ್ಚೂ ಹೋಗುವುದು. ನಾವು ಸಂತೃಪ್ತಿ ಅನುಭವಿಸುವೆವು.

ಈ ಅರಿವು ನಮ್ಮೊಳಗಿನಿಂದ ಬರಬೇಕಿರುವುದು. ಹೊಟ್ಟೆಕಿಚ್ಚು ಒಳ್ಳೆಯದಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ. ನಿಮಗೂ ಗೊತ್ತಿದೆ. ಆದರೆ ನಿಮಗೆ ನಿಮ್ಮಲ್ಲೂ ಹೊಟ್ಟೆಕಿಚ್ಚು ಇರುವುದು ಗೊತ್ತೇ ಇಲ್ಲ! ನಿಮ್ಮ ಅಶಾಂತಿಯ, ನಿಮ್ಮ ಚಡಪಡಿಕೆಯ ಮೂಲವನ್ನೊಮ್ಮೆ ಬಗೆದು ನೋಡಿ. ಅಲ್ಲಿ ನಿಮಗೆ ನೀವೂ ಮತ್ತೊಬ್ಬರಂತೆ ಆಗಬೇಕು ಅನ್ನುವ ಸುಪ್ತ ವಾಂಛೆ ಮುಖಕ್ಕೆ ರಾಚುವುದು.

ಹಾಗೆ ನೋಡಿದರೆ ಇದು ನಿಮ್ಮ ತಪ್ಪಲ್ಲ. ನಮ್ಮ ಸಮಾಜ ಇರುವುದೇ ಹಾಗೆ. ನಾವು ಹುಟ್ಟಿದಾಗಿಂದ ಪ್ರತಿ ಹಂತದಲ್ಲೂ ‘ಮತ್ತೊಬ್ಬರನ್ನು ನೋಡಿ ಕಲಿಯುವ’, ‘ಮತ್ತೊಬ್ಬರಂತೆ ಆಗುವ’ ಮಾತುಗಳಿಗೇ ಹೆಚ್ಚು ಒತ್ತು ಕೊಡುತ್ತಾರೆ ಹೊರತು ‘ನಮ್ಮನ್ನು ಕಂಡುಕೊಳ್ಳುವ’, ‘ನಮ್ಮ ಸ್ವಭಾವಕ್ಕೆ ತಕ್ಕಂತೆ ರೂಪು ತಳೆಯುವ’ ಅಂಶದ ಬಗ್ಗೆ ಮಾತನಾಡುವುದೇ ಇಲ್ಲ. ನಮ್ಮ ಕುಟುಂಬದವರೂ ಹಾಗೇ, ಸುತ್ತಲಿನ ಸಮಾಜವೂ ಹಾಗೇ; ಕೊನೆಗೆ ನಾವು ನಮಗೆ ದಾರಿ ತೋರುತ್ತಾರೆ ಅಂದುಕೊಳ್ಳುವ ಗುರುಗಳೂ ಹಾಗೇ! ಅವರೂ ಒಂದು ಆದರ್ಶವನ್ನು ನಮ್ಮ ಮುಂದಿಟ್ಟು ಅದನ್ನು ತಲುಪುವ ದಾರಿ ಹಾಕಿಕೊಡುತ್ತಾರೆ. ಆ ಆದರ್ಶದ ಸ್ವಭಾವ ನಮ್ಮದಲ್ಲ. ನಾವು ನಮ್ಮ ಸ್ವಭಾವವನ್ನೇ ಉತ್ತಮಗೊಳಿಸಿಕೊಂಡರೆ ಸಾಕು. ಆದರೆ ಗುರುಗಳು ಈಗಾಗಲೇ ಸಾಧನೆ ಮಾಡಿದ ಮಾದರಿಯನ್ನು ನಮ್ಮ ಮುಂದಿಟ್ಟು ಬೋಧನೆ ಮಾಡುತ್ತಾರೆ. ನಾವು ಅವರಂತೆ ಆಗುವ ಪ್ರಯತ್ನದಲ್ಲಿ ಆಯುಷ್ಯ ಕಳೆಯುತ್ತೇವೆ!

ಆದ್ದರಿಂದ, ಸತ್ಯವಂತರೂ ಸಜ್ಜನರೂ ಪರಿಪೂರ್ಣರೂ ಆಗಬೇಕೆಂದರೆ ನಮ್ಮನ್ನು ನಾವು ಅರಿತುಕೊಳ್ಳಬೇಕು. ನಮ್ಮಂತೆ ನಾವು ಇರಬೇಕು, ನಮಗೆ ನಾವೇ ಗುರಿಯಾಗಿ, ನಮ್ಮ ದಾರಿ ನಾವೇ ಹುಡುಕಿಕೊಳ್ಳಬೇಕು.

Leave a Reply