ಮೌನವೇ ದಿವ್ಯ ಪ್ರಾರ್ಥನೆ: ಓಶೋ ವ್ಯಾಖ್ಯಾನ

ಮಾತುಗಳು ಹೊರಬಂದವೆಂದರೆ ಅವುಗಳ ಜೊತೆ ಬಯಕೆಗಳ ಪ್ರವಾಹವೂ ಹರಿದುಬರುತ್ತದೆ. ನಿಮಗೆ ನಿಜವಾದ ಮೌನ ಸಾಧ್ಯವಾಗುವುದಾದರೆ, ನಿಮಗೆ ಬಯಕೆಗಳನ್ನು ತಡೆಗಟ್ಟುವುದು ಸಾಧ್ಯವಾಗುತ್ತದೆ. ಮೌನದಲ್ಲಿ ಬಯಕೆಗಳ ಹುಟ್ಟು ಹೇಗೆ ಸಾಧ್ಯ? ~ ಓಶೋ ರಜನೀಶ್; ಕನ್ನಡಕ್ಕೆ : ಚಿದಂಬರ ನರೇಂದ್ರ

ಸೂಫಿ ಬಯಾಝಿದ್ ಯಾವಾಗಲೂ ಹೇಳುತ್ತಿದ್ದ : ನನ್ನ ಅವಶ್ಯಕತೆಗಳ ಬಗ್ಗೆ ದೇವರಿಗೆ ಎಲ್ಲ ಗೊತ್ತು, ಆದ್ದರಿಂದ ನಾನು ಯಾವತ್ತೂ ಪ್ರಾರ್ಥನೆ ಮಾಡುವುದಿಲ್ಲ. ಎಲ್ಲವೂ ದೇವರಿಗೆ ಗೊತ್ತು ಎಂದ ಮೇಲೆ ಅವನನ್ನು ಕುರಿತು ಪ್ರಾರ್ಥನೆ ಮಾಡುವುದು ಮೂರ್ಖತನ. ಏನು ಕೇಳುವುದು ಅವನನ್ನ? ಅವನಿಗೆ ಎಲ್ಲವೂ ಗೊತ್ತು. ಹಾಗಾಗಿ ನಾನು ಪ್ರಾರ್ಥನೆ ಮಾಡುವ ಗೋಜಿಗೇ ಹೋಗಿಲ್ಲ. ನನ್ನ ಅವಶ್ಯಕತೆಗಳು ಏನಿವೆಯೋ, ಎಲ್ಲವನ್ನೂ ಅವನು ನನಗೆ ಕೊಡುತ್ತ ಬಂದಿದ್ದಾನೆ.

ಬಯಾಝಿದ್ ಹೀಗೆ ಹೇಳುತ್ತಾನೆಂದ ಮಾತ್ರಕ್ಕೆ ಅವನು ಶ್ರೀಮಂತನೇನಲ್ಲ, ಬಹಳ ಬಡವ. ಒಮ್ಮೆ ಅವನು ಒಂದು ಊರಿಗೆ ಹೋದಾಗ ಅವನಿಗೆ ಆ ಊರಿನವರ್ಯಾರೂ ಆಶ್ರಯ ಕೊಡಲಿಲ್ಲ, ಬಯಾಝಿದ್ ತುಂಬ ಹಸಿದಿದ್ದ, ರಾತ್ರಿ ಮಲಗಲು ಜಾಗವಿಲ್ಲದೇ ಊರ ಹೊರಗೆ ಒಂದು ಮರದ ಕೆಳಗೆ ಕುಳಿತಿದ್ದ, ಅದು ತುಂಬ ಅಪಾಯಕಾರಿ ಜಾಗವಾಗಿತ್ತು. ಆಗ ಶಿಷ್ಯನೊಬ್ಬ ಬಯಾಝಿದ್ ನ ಪ್ರಶ್ನೆ ಮಾಡಿದ, “ ನಿನ್ನ ಈ ಸ್ಥಿತಿಯ ಬಗ್ಗೆ ದೇವರಿಗೆ ಗೊತ್ತಾಗುತ್ತಿಲ್ಲವೆ? ತನ್ನ ಪ್ರೇಮಿಯೊಬ್ಬ ಹೀಗೆ ಹಸಿದುಕೊಂಡು ಅಪಾಯಕಾರಿ ಜಾಗದಲ್ಲಿ ಕಾಲ ಕಳೆಯುತ್ತಿರುವುದು ನಿನ್ನ ಆ ದೇವರಿಗೆ ಯಾಕೆ ಗೊತ್ತಾಗುತ್ತಿಲ್ಲ? ದೇವರಿಗೆ ನಿನ್ನ ಅವಶ್ಯಕತೆಗಳ ಬಗ್ಗೆ ಎಲ್ಲ ಗೊತ್ತು ಎಂದು ಹೇಳುತ್ತೀಯ ನೀನು, ಆದರೆ ನಿನ್ನ ದೇವರು ಯಾಕೆ ಸುಮ್ಮನಿದ್ದಾನೆ?”

“ ದೇವರಿಗೆ ನನ್ನ ಅವಶ್ಯಕತೆಯ ಬಗ್ಗೆ ಗೊತ್ತು, ಇಂಥ ಒಂದು ದುಸ್ತರ ಅನುಭವ ನನಗಾಗಬೇಕು, ಅದು ನನ್ನ ಬೆಳವಣಿಗೆಗೆ ಅವಶ್ಯಕ ಎನ್ನುವುದನ್ನ ಅವನು ಬಲ್ಲ. ನಾನು ಯಾವಾಗ ಉಪವಾಸ ಮಾಡಬೇಕು, ಯಾವಾಗ ಭಕ್ಷಗಳ ಹಬ್ಬ ಮಾಡಬೇಕು ಎನ್ನುವುದು ದೇವರಿಗೆ ಗೊತ್ತು. ಬಹುಶಃ ನನ್ನ ಸಧ್ಯದ ಅವಶ್ಯಕತೆ ನಾನು ಉಪವಾಸ ಮಾಡಬೇಕು ಎನ್ನುವದಾಗಿರಬೇಕು.” ಶಿಷ್ಯನ ಮಾತಿಗೆ ಬಯಾಝಿದ್ ನಕ್ಕು ಬಿಟ್ಟ.

ನಾವು ಏನನ್ನೂ ಬೇಡುವ ಹಾಗಿಲ್ಲ. ನೀವು ಬೇಡುತ್ತಿರುವಿರಾದರೆ, ಅದನ್ನು ಪಡೆಯಲು ನೀವು ಅರ್ಹರಲ್ಲ ಎಂದೇ ಅರ್ಥ. ಪ್ರಾರ್ಥನೆ ಮೌನದಲ್ಲಿ ಸಾಧ್ಯವಾಗಬೇಕು. ಮೌನವೇ ಒಂದು ದಿವ್ಯ ಪ್ರಾರ್ಥನೆ. ಮಾತುಗಳು ಹೊರಬಂದವೆಂದರೆ ಅವುಗಳ ಜೊತೆ ಬಯಕೆಗಳ ಪ್ರವಾಹವೂ ಹರಿದುಬರುತ್ತದೆ. ನಿಮಗೆ ನಿಜವಾದ ಮೌನ ಸಾಧ್ಯವಾಗುವುದಾದರೆ, ನಿಮಗೆ ಬಯಕೆಗಳನ್ನು ತಡೆಗಟ್ಟುವುದು ಸಾಧ್ಯವಾಗುತ್ತದೆ. ಮೌನದಲ್ಲಿ ಬಯಕೆಗಳ ಹುಟ್ಟು ಹೇಗೆ ಸಾಧ್ಯ? ಬಯಕೆಗಳು ಬದುಕಲು ಭಾಷೆಯ ಸಹಾಯ ಅವಶ್ಯಕ. ಎಲ್ಲ ಭಾಷೆಗಳೂ ಬಯಕೆಯ ವ್ಯಾಪ್ತಿಯಲ್ಲಿಯೇ ಬದುಕುವಂಥವು. ಆದ್ದರಿಂದಲೇ ಅಧ್ಯಾತ್ಮದಲ್ಲಿ ಮೌನಕ್ಕೆ ಭಾರೀ ಮಹತ್ವ. ಮೌನ ಎಂದರೆ ಕೇವಲ ಮಾತನಾಡದಿರುವುದಲ್ಲ. ಮಾತನಾಡದಿರುವುದೂ ಒಂದು ಭಾಷೆ, ಮೌನದಲ್ಲಿ ಆ ಭಾಷೆ ಕೂಡ ಬಳಕೆಯಾಗಬಾರದು.

ಮೌನವಾಗಿರಿ ; ಕೇವಲ ಮೌನ ಮಾತ್ರ ಒಂದು ಪರಿಪೂರ್ಣ ಪ್ರಾರ್ಥನೆ.

ಹಾಗಾಗಿಯೇ ನೀವು ಮಾಡುವ ಎಲ್ಲ ಬಗೆಯ ಪ್ರಾರ್ಥನೆಗಳು ಸುಳ್ಳು. ನಿಮಗೆ ಕಲಿಸಲಾಗಿರುವ ಎಲ್ಲ ಪ್ರಾರ್ಥನೆಗಳು, ಪ್ರಾರ್ಥನೆಗಳೇ ಅಲ್ಲ, ಅವು ಕೇವಲ ಗೊಡ್ಡು ಸಂಪ್ರದಾಯಗಳು. ಇರುವುದು ಒಂದೇ ಪ್ರಾರ್ಥನೆ, ಅದು ಮೌನ. ಒಂದೇ ಒಂದು ಬಯಕೆ, ಒಂದೇ ಒಂದು ಥಾಟ್ ಹುಟ್ಟಿಕೊಳ್ಳದಂತೆ ನೋಡಿಕೊಳ್ಳುವುದು. ಯಾವುದೇ ಅಲೆಗಳು ಇಲ್ಲದಾದಾಗ, ಸರೋವರ ಸಂಪೂರ್ಣವಾಗಿ ಶಾಂತವಾಗುತ್ತದೆ, ಆಗ ಅದು ಕನ್ನಡಿಯಾಗುತ್ತದೆ, ಆಗ ಅದು ಅಸ್ತಿತ್ವವನ್ನು ಪ್ರತಿಬಿಂಬಿಸುತ್ತದೆ, ದೇವರನ್ನು ಪ್ರತಿಬಿಂಬಿಸುತ್ತದೆ. ಆ ಮೌನದ ಗಳಿಗೆಯಲ್ಲಿ ಎಲ್ಲವೂ ಸಾಧ್ಯವಾಗುತ್ತದೆ.

ಒಂದು ದಿನ ಪ್ರಾಂತದ ದೊರೆ ತನ್ನ ಯಾತ್ರಾ ಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದಾಗ, ಲಾವೋ ತ್ಸು ನ ಆಶ್ರಮಕ್ಕೆ ಬಂದ.

ಲಾವೋ ತ್ಸು ನನ್ನು ಭೇಟಿ ಮಾಡಿ ಅವನಿಗೆ ತನ್ನ ವಂದನೆ ಸಲ್ಲಿಸಿ ಅವನಿಂದ ಜ್ಞಾನಮಾರ್ಗದ ಬಗ್ಗೆ ತಿಳಿದುಕೊಳ್ಳುವ ಆಸೆ ರಾಜನಿಗೆ.

“ರಾಜ್ಯವನ್ನು ನೋಡಿಕೊಳ್ಳುವಲ್ಲಿ ನನ್ನ ಪೂರ್ತಿ ಸಮಯ ಹೋಗಿಬಿಡುತ್ತದೆ. ಸತ್ಸಂಗ ಮುಂತಾದವುಗಳಿಗೆ ಸಮಯವೇ ಸಿಕ್ಕುವುದಿಲ್ಲ.”

“ ನನ್ನಂಥ ಬಿಡುವಿಲ್ಲದ ಮನುಷ್ಯನಿಗೆ ಧರ್ಮದ ಸಾರವನ್ನು ಒಂದು ಅಥವಾ ಎರಡು ಶಬ್ದಗಳಲ್ಲಿ ಹೇಳಿ ಕೊಡುವುದು ಸಾಧ್ಯವೇ?

ರಾಜ, ಲಾವೋ ತ್ಸು ಹತ್ತಿರ ತನ್ನ ಸಮಸ್ಯೆ ಹೇಳಿಕೊಂಡ.

ಆಗಬಹುದು ರಾಜ. ಒಂದು ಶಬ್ದ ಸಾಕು.

ಹೌದಾ? ಯಾವುದು ಆ ಶಬ್ದ?

“ ಮೌನ “

ಮೌನ ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ?

“ ಧ್ಯಾನ “

ಮತ್ತೆ ಧ್ಯಾನ ನಮ್ಮನ್ನು ಎಲ್ಲಿ ಮುಟ್ಟಿಸುತ್ತದೆ?

“ ಮೌನ “

~ ಓಶೋ

Leave a Reply