ಕತ್ತೆಯಿಂದ ಕಲಿಯಬೇಕಾದ ಗುಣಗಳು… । ಇಂದಿನ ಸುಭಾಷಿತ

ಇಂದಿನ ಸುಭಾಷಿತ, ಸೂಕ್ತಿ ಮಂಜರಿಯಿಂದ…

ಸೃಷ್ಟಿಯ ಪ್ರತಿಯೊಂದೂ ಮತ್ತೊಂದಕ್ಕೆ ಗುರು. ಹಾಗೆಯೇ ಮತ್ತೊಂದಕ್ಕೆ ಶಿಷ್ಯನೂ/ಳೂ. ಕುವೆಂಪು ಅವರ ಮಾತಿನಂತೆ ಇಲ್ಲಿ ಯಾವುದೂ ಅಮುಖ್ಯವಲ್ಲ.

ಕತ್ತೆ ಅಂದಾಕ್ಷಣ ನಾವು ಅದೊಂದು ಮೂರ್ಖ ಪ್ರಾಣಿ ಅಂದುಕೊಳ್ಳುತ್ತೇವೆ. ದಡ್ಡರನ್ನು ಕತ್ತೆ ಎಂದು ಬೈಯುತ್ತೇವೆ. ಆದರೆ ನಮಗಾಗಿ ದುಡಿದೂ ನಮ್ಮ ತಾತ್ಸಾರಕ್ಕೆ ಒಳಗಾಗಿರುವ ಈ ಪ್ರಾಣಿಯಿಂದಲೂ ಕಲಿಯಬೇಕಾದ್ದು ಇದೆ ಅನ್ನುವುದು ಈ ಸುಭಾಷಿತಕಾರನ ಅಭಿಪ್ರಾಯ.

ಅವಿಶ್ರಾಮಂ ವಹೇದ್ಭಾರಂ ಶೀತೋಷ್ಣಂ ಚ ನ ವಿನ್ದತಿ। ಸಸಂತೋಷಸ್ತಥಾ ನಿತ್ಯಂ ತ್ರೀಣಿ ಶಿಕ್ಷೇತ ಗಾರ್ದಭಾತ್॥

“ವಿಶ್ರಾಂತಿ ಬಯಸದೆ ಭಾರ ಹೊರುವುದು, ಶೀತೋಷ್ಣಗಳಿಗೆ ಹಿಂಜರಿಯದೆ ಇರುವುದು, ಸದಾ ಖುಷಿಯಾಗಿರುವುದು (ತನ್ನ ಪಾಡಿಗೆ ತಾನಿರುವುದು) – ಈ ಮೂರು ನಾವು ಕತ್ತೆಯಿಂದ ಕಲಿಯಬೇಕಾದ ಗುಣಗಳು” ಅನ್ನುವುದು ಈ ಸುಭಾಷಿತದ ಅರ್ಥ.

ನಮ್ಮ ಕರ್ತವ್ಯವ ಮಾಡುವಾಗ ದಣಿವಾಯ್ತೆಂದು ಗೊಣಗುವ ನಾವು; ನಮ್ಮ ಹೊಟ್ಟೆ ಹೊರೆದುಕೊಳ್ಳಲು, ಹಣ ಗಳಿಸಲು ದುಡಿಯುವ ನಾವು, ನಮಗೆ ವಿಶ್ರಾಂತಿ ಇಲ್ಲವೆಂದು ಗೊಣಗುತ್ತೇವೆ. ಈ ಗೊಣಗಾಟ ನಡೆಯಬಾರದು. ಕತ್ತೆಯಂತೆ ನಮ್ಮ ಕರ್ತವ್ಯ ಮಾಡುವುದಷ್ಟೆ ನಮ್ಮ ಗುರಿಯಾಗಿರಬೇಕು. ಹಾಗೆಯೇ ಬಿಸಿಲು, ಚಳಿ ಎಂದೆಲ್ಲ ನೆವ ಹೇಳುತ್ತಾ ಕೆಲಸ ತಪ್ಪಿಸಿಕೊಳ್ಳುವ ಮೈಗಳ್ಳತನ ತೋರಬಾರದು. ಮತ್ತು ಕತ್ತೆಯಂತೆ ನಮ್ಮ ಪಾಡಿಗೆ ನಾವಿರಬೇಕು, ಇದ್ದುದರಲ್ಲೇ ಸಂತೋಷವಾಗಿರಬೇಕು – ಇದು ಈ ಸುಭಾಷಿತದ ವಿಸ್ತೃತಾರ್ಥ.

ಆದ್ದರಿಂದ, ಇನ್ನು ಮುಂದೆ ‘ಕತ್ತೆ’ಯನ್ನು ಬೈಗುಳಕ್ಕೆ ಬಳಸಬೇಡಿ, ಹೊಗಳುವುದಕ್ಕೆ ಬಳಸಿ!!

Leave a Reply