ಅತ್ಯಗತ್ಯ ಧರ್ಮ ಯಾವುದು? : ಓಶೋ ವ್ಯಾಖ್ಯಾನ

“ ಅತ್ಯಗತ್ಯ ಧರ್ಮ ಯಾವುದು?” ಎನ್ನುವ ಶಿಷ್ಯನ ಪ್ರಶ್ನೆಗೆ, “ ಅಂಗಳದಲ್ಲಿರುವ ಸೈಪ್ರಸ್ ಮರವನ್ನೊಮ್ಮೆ ನೋಡು” ಎನ್ನುವುದು ಮಾಸ್ಟರ್ ಚಾಉ ಚಾಉ ನ ಉತ್ತರವಾಗಿತ್ತು. ಯಾಕೆಂದರೆ.. ~ ಓಶೋ| ಕನ್ನಡಕ್ಕೆ: ಚಿದಂಬರ ನರೇಂದ್ರ

ಒಮ್ಮೆ ಝೆನ್ ಮಾಸ್ಟರ್ ಚಾಉ ಚಾಉ ನ ಪ್ರಶ್ನೆ ಮಾಡಲಾಯಿತು, “ ಅತ್ಯಗತ್ಯ ಧರ್ಮ ಯಾವುದು?”
ಪ್ರಶ್ನೆಗೆ ಉತ್ತರಿಸುವ ಬದಲಾಗಿ ಮಾಸ್ಟರ್, ತಾನು ಪ್ರಶ್ನೆಯನ್ನೇ ಕೇಳಿಸಿಕೊಂಡಿಲ್ಲವೆಂಬಂತೆ ಮೌನ ಧರಿಸಿಬಿಟ್ಟ.

ಶಿಷ್ಯ ಇನ್ನೊಮ್ಮೆ ಮಾಸ್ಟರ್ ಚಾಉ ಚಾಉ ನ ಪ್ರಶ್ನೆ ಮಾಡಿದ, “ ಅತ್ಯಗತ್ಯ ಧರ್ಮ ಯಾವುದು?” ಮಾಸ್ಟರ್, ತನ್ನ ಶಿಷ್ಯನತ್ತ ತಿರುಗಿ ಸಹ ನೋಡಲಿಲ್ಲ, ತನ್ನ ಮೌನವನ್ನ ಮುಂದುವರೆಸಿದ.

“ ನನ್ನ ಪ್ರಶ್ನೆ ನಿನಗೆ ಕೇಳಿಸಿತು ತಾನೆ? ಯಾವ ಲೋಕದಲ್ಲಿರುವೆ ನೀನು?” ಶಿಷ್ಯ ಮಗದೊಮ್ಮೆ ತನ್ನ ಪ್ರಶ್ನೆ ಕೇಳಿದ.

“ ಅಂಗಳದಲ್ಲಿರುವ ಸೈಪ್ರಸ್ ಮರವನ್ನೊಮ್ಮೆ ನೋಡು” ಮಾಸ್ಟರ್ ಉತ್ತರಿಸಿದ.

ಆಮೇಲೆ ಮಾಸ್ಟರ್ ಮತ್ತೆ ಮೌನಕ್ಕೆ ಶರಣಾಗಿಬಿಟ್ಟ. “ ಅತ್ಯಗತ್ಯ ಧರ್ಮ ಯಾವುದು?” ಎನ್ನುವ ಶಿಷ್ಯನ ಪ್ರಶ್ನೆಗೆ, “ ಅಂಗಳದಲ್ಲಿರುವ ಸೈಪ್ರಸ್ ಮರವನ್ನೊಮ್ಮೆ ನೋಡು” ಎನ್ನುವುದು ಮಾಸ್ಟರ್ ಚಾಉ ಚಾಉ ನ ಉತ್ತರವಾಗಿತ್ತು.

ಇಂಥದೇ ಒಂದು ಘಟನೆ ಬುದ್ಧ, ಝೆನ್ ಜಗತ್ತನ್ನ ಒಂದು ಹೂವಿನಿಂದ ಉದ್ಘಾಟಿಸುವಾಗ ನಡೆದಿತ್ತು. ಆ ಮಹಾ ಸಭೆಯಲ್ಲಿ ಬುದ್ಧನ ಮಾತು ಕೇಳಲು ಸಾವಿರಾರು ಜನ ಸೇರಿದ್ದರು, ಆದರೆ ಬುದ್ಧ ಒಂದು ಹೂವನ್ನು ನೋಡುತ್ತ ಕುಳಿತುಬಿಟ್ಟ. ಜನರಿಗೆ ಅಲ್ಲಿ ಏನು ನಡೆಯುತ್ತಿದೆ ಎನ್ನುವುದೇ ಅರ್ಥವಾಗಲಿಲ್ಲ. ಜನ ಹೀಗೆ ವಿಚಲಿತರಾಗಿ ಕುಳಿತಿರುವುದನ್ನ ಕಂಡು ಬುದ್ಧನ ಒಬ್ಬ ಶಿಷ್ಯ ಮಹಾ ಕಶ್ಯಪನಿಗೆ ನಗು ತಡೆದುಕೊಳ್ಳಲಾಗಲಿಲ್ಲ, ಮಹಾ ಕಶ್ಯಪ ಜೋರಾಗಿ ನಕ್ಕುಬಿಟ್ಟ. ಬುದ್ಧ, ಮಹಾ ಕಶ್ಯಪನನ್ನು ಮುಂದೆ ಕರೆದು ಅವನಿಗೆ ತನ್ನ ಕೈಯಲ್ಲಿದ್ದ ಹೂವು ಕೊಟ್ಟು, ಅಲ್ಲಿ ನೆರೆದಿದ್ದ ಸಭಿಕರನ್ನುದ್ಧೇಶಿಸಿ ಮಾತನಾಡಿದ, “ ನಿಮಗೆ ಹೇಳಬೇಕಾದ್ದನ್ನ ನಾನು ಹೇಳಿ ಮುಗಿಸಿರುವೆ, ಯಾವುದನ್ನ ಹೇಳಲಿಕ್ಕಾಗಲಿಲ್ಲವೋ ಅದನ್ನ ಈ ಮಹಾ ಕಶ್ಯಪನಿಗೆ ಕೊಟ್ಟಿದ್ದೇನೆ.” ಬುದ್ಧ ಹೂವು ಕೊಟ್ಟ ಗಳಿಗೆಯಲ್ಲಿಯೇ ಮಹಾಕಶ್ಯಪನಿಗೆ ಜ್ಞಾನೋದಯವಾಯಿತು, ಅವನ ಅಸ್ತಿತ್ವ ಹೂವಿನ ಹಾಗೆ ಅರಳಿಕೊಂಡಿತು.

ಬುದ್ಧ ಏನು ಹೇಳುತ್ತಿದ್ದಾನೆ? ಹೂವನ್ನು ನೋಡುತ್ತ ಬುದ್ಧ ಹೇಳಿದ, “ ಈ ಕ್ಷಣದ ಮೇಲೆ ನಿಮ್ಮ ಗಮನವನ್ನ ಕೇಂದ್ರೀಕರಿಸಿ, ಈ ಹೂವನ್ನು ನೋಡಿ.” ಆದರೆ ಅಲ್ಲಿ ನೆರೆದಿದ್ದ ಸಭಿಕರು, ಬುದ್ಧನಿಂದ ದೊಡ್ಡ ದೊಡ್ಡ ಧರ್ಮದ ಉಪದೇಶಗಳನ್ನ ನಿರಿಕ್ಷಿಸುತ್ತಿದ್ದರು. ‘ಈ ಕ್ಷಣದಲ್ಲಿ ಬದುಕಿ’ ಎನ್ನುವುದು ಬುದ್ಧನ ಸಂದೇಶವಾಗಿತ್ತು. “ ಅಂಗಳದಲ್ಲಿರುವ ಸೈಪ್ರಸ್ ಮರವನ್ನೊಮ್ಮೆ ನೋಡು” ಎಂದು ಮಾಸ್ಟರ್ ಚಾಉ ಚಾಉ ಉತ್ತರಿಸಿದಾಗ, ಯಾವುದು ಅಗತ್ಯ ಧರ್ಮ, ಯಾವುದು ಅನಗತ್ಯ ಎನ್ನುವ ವಿಫಲ ಚರ್ಚೆಯನ್ನ ಬಿಟ್ಟು, ಈ ಕ್ಷಣದ ಸತ್ಯದಲ್ಲಿ ಬದುಕು, ಅಂಗಳದ ಸೈಪ್ರಸ್ ಮರವನ್ನು ನೋಡು ಎಂದು ಮಾಸ್ಟರ್ ಹೇಳುತ್ತಿದ್ದಾನೆ. ಈ ವರ್ತಮಾನದ ಕ್ಷಣದಲ್ಲಿ ಎಚ್ಚರವಾಗಿರು. ಈ ಕ್ಷಣವನ್ನ ನೋಡು, ಈ ನೋಟ, ಈ ಕ್ಷಣ, ಅಗತ್ಯ ಧರ್ಮವನ್ನ ಅನಾವರಣಗೊಳಿಸುತ್ತವೆ.

ಝೆನ್ ಸಂಪೂರ್ಣ ವಿಭಿನ್ನ, ಅಪರಿಮಿತವಾಗಿ ಅನನ್ಯ. ನೀವು ಸಿದ್ಧಾಂತ, ಪರಂಪರೆಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡರೆ ಝೆನ್ ಎಂದೂ ದಕ್ಕುವುದಿಲ್ಲ.

ಒಮ್ಮೆ ಹೀಗಾಯಿತು…….

ಮಾಸ್ಟರ್ ಸೆಯೂಂಗ್ ಸಾನ್ ತನ್ನ ಶಿಷ್ಯರಿಗೆ ಪಾಠ ಮಾಡುತ್ತಿದ್ದ.

ಊಟ ಮಾಡುವಾಗ ಬರೀ ಊಟ ಮಾಡಬೇಕು.
ಪತ್ರಿಕೆ ಓದುವಾಗ ಬರೀ ಪತ್ರಿಕೆ ಓದಬೇಕು.
ಮಾಡುತ್ತಿರುವ ಕೆಲಸವನ್ನು ಬಿಟ್ಟು ಬೇರೇನನ್ನೂ ಮಾಡಬಾರದು.

ಒಂದು ದಿನ ಶಿಷ್ಯನೊಬ್ಬ, ಮಾಸ್ಟರ್ ಪತ್ರಿಕೆ ಓದುತ್ತಾ ಊಟ ಮಾಡುತ್ತಿರುವುದನ್ನು ನೋಡಿದ.

ಮಾಸ್ಟರ್, ನೀವು ಈಗ ಮಾಡುತ್ತಿರುವುದು, ನೀವು ಹೇಳಿಕೊಟ್ಟ ಪಾಠಕ್ಕೆ ವಿರುದ್ಧವಾಗಿದೆಯಲ್ಲವೆ? ಆಶ್ಚರ್ಯಚಕಿತನಾಗಿ ಕೇಳಿದ.

ಸೆಯೂಂಗ್ ಸಾನ್ ಉತ್ತರಿಸಿದ,

ಪತ್ರಿಕೆ ಓದುತ್ತಾ ಊಟಮಾಡುವಾಗ, ಕೇವಲ ಪತ್ರಿಕೆ ಓದುತ್ತಾ ಊಟಮಾಡಬೇಕು.

Leave a Reply