ಬಿಡುಗಡೆಯ ಭಾವ : ಓಶೋ ವ್ಯಾಖ್ಯಾನ

ನೀವು ರೋಗಗ್ರಸ್ತರಾಗಿದ್ದರೆ ಆರೋಗ್ಯಕ್ಕಾಗಿ ಚಡಪಡಿಸುತ್ತೀರ, ಅರೋಗ್ಯದ ಬಗ್ಗೆ ಆಲೋಚನೆ ಮಾಡುತ್ತೀರ. ಆರೋಗ್ಯಕ್ಕಾಗಿ ತುಡಿಯುವುದು ಕಾಯಿಲೆಯ ಒಂದು ಭಾಗ. ನೀವು ನಿಜವಾಗಿ ಆರೋಗ್ಯವಂತರಾಗಿದ್ದರೆ, ಆರೋಗ್ಯಕ್ಕಾಗಿ ತುಡಿಯುತ್ತಿರಲಿಲ್ಲ! ~ ಓಶೋ; ಕನ್ನಡಕ್ಕೆ: ಚಿದಂಬರ ನರೇಂದ್ರ

ನರೋಪ ನಿಗೆ ಜ್ಞಾನೋದಯವಾದಾಗ ಅವನನ್ನ ಪ್ರಶ್ನೆ ಮಾಡಲಾಯಿತು, “ ಈಗ ನೀನು ಬಿಡುಗಡೆಯ ಭಾವವನ್ನ ಅನುಭವಿಸುತ್ತಿದ್ದೀಯ? “

“ ಹೌದು ಮತ್ತು ಇಲ್ಲ “ ಎಂದು ಉತ್ತರಿಸಿದ ನರೋಪ.

“ ಹೌದು ಏಕೆಂದರೆ, ನಾನೀಗ ಬಂಧನದಲ್ಲಿಲ್ಲ. ಇಲ್ಲ ಏಕೆಂದರೆ, ಬಿಡುಗಡೆ ಎನ್ನುವುದು ಕೂಡ ಬಂಧನದ ಕಾರಣವಾಗಿಯೇ ಹುಟ್ಟಿಕೊಂಡದ್ದು. ಬಿಡುಗಡೆಯ ವಿಷಯ ನನ್ನ ತಲೆಯಲ್ಲಿ ಬಂದದ್ದು ನಾನು ಬಂಧನದಲ್ಲಿದ್ದ ಕಾರಣವಾಗಿ. ನಾನು ಬಂಧನದಲ್ಲಿರದೇ ಹೋದರೆ ಬಿಡುಗಡೆಯನ್ನ ಫೀಲ್ ಮಾಡುವುದು ಸಾಧ್ಯವಿಲ್ಲ. ಅದರ ಸುಖವನ್ನು ಅನುಭವಿಸುವುದು ಸಾಧ್ಯವೇ ಇಲ್ಲ. ಹಾಗಾಗಿ ನನ್ನ ಉತ್ತರ ಹೌದು ಮತ್ತು ಇಲ್ಲ “

ಇದನ್ನ ಹೀಗೆ ವಿಚಾರ ಮಾಡಿ, ನೀವು ರೋಗಗ್ರಸ್ತರಾಗಿದ್ದರೆ ಆರೋಗ್ಯಕ್ಕಾಗಿ ಚಡಪಡಿಸುತ್ತೀರ, ಅರೋಗ್ಯದ ಬಗ್ಗೆ ಆಲೋಚನೆ ಮಾಡುತ್ತೀರ. ಆರೋಗ್ಯಕ್ಕಾಗಿ ತುಡಿಯುವುದು ಕಾಯಿಲೆಯ ಒಂದು ಭಾಗ. ನೀವು ನಿಜವಾಗಿ ಆರೋಗ್ಯವಂತರಾಗಿದ್ದರೆ, ಆರೋಗ್ಯಕ್ಕಾಗಿ ತುಡಿಯುತ್ತಿರಲಿಲ್ಲ. ಅದು ಹೇಗೆ ಸಾಧ್ಯ? ನೀವು ನಿಜವಾಗಿ ಆರೋಗ್ಯವಂತರಾಗಿದ್ದರೆ, ಎಲ್ಲಿದೆ ತುಡಿತ, ಮತ್ತು ಯಾಕೆ? ನೀವು ನಿಜವಾಗಿ ಆರೋಗ್ಯವಂತರಾಗಿದ್ದರೆ ನಿಮಗೆ ಆರೋಗ್ಯದ ಅನುಭವ ಸಾಧ್ಯವೇ ಇಲ್ಲ. ಕೇವಲ ಕಾಯಿಲೆಯಿಂದ ಬಳಲುತ್ತಿರುವ ರೋಗಗ್ರಸ್ತರು ಮಾತ್ರ ಆರೋಗ್ಯವನ್ನ ಫೀಲ್ ಮಾಡಬಲ್ಲರು. ನೀವು ಹುಟ್ಟಿನಿಂದ ಆರೋಗ್ಯವಂತರಾಗಿದ್ದರೆ, ಎಂದೂ ಕಾಯಿಲೆಯನ್ನು ಅನುಭವಿಸಿಲ್ಲವಾದರೆ, ನೀವು ಹೇಗೆ ಆರೋಗ್ಯವನ್ನು ಅನುಭವಿಸುತ್ತೀರಿ? ಆರೋಗ್ಯ ಇದೆ ಆದರೆ ಅದನ್ನ ಅನುಭವಿಸುವುದು ಸಾಧ್ಯವಿಲ್ಲ. ಅದನ್ನ ಕೇವಲ ಇನ್ನೊಂದರ ಎದುರಿಗಿಟ್ಟು ಮಾತ್ರ ನೋಡಬಹುದು, ಅದನ್ನ ವೈರುಧ್ಯದಲ್ಲಿ ಮಾತ್ರ ಗ್ರಹಿಸಬಹುದು. ನೀವು ರೋಗಗ್ರಸ್ತರಾಗಿದ್ದರೆ ಮಾತ್ರ ಆರೋಗ್ಯವನ್ನ ಫೀಲ್ ಮಾಡಬಹುದು, ನೀವು ಆರೋಗ್ಯವನ್ನ ಫೀಲ್ ಮಾಡುತ್ತಿದ್ದೀರೆಂದರೆ, ನೆನಪಿರಲಿ ನೀವು ಇನ್ನೂ ರೋಗಗ್ರಸ್ತರು.

ಆದ್ದರಿಂದ ನರೋಪ ನ ಉತ್ತರ, “ ಹೌದು ಮತ್ತು ಇಲ್ಲ” ‘ಹೌದು’ ಏಕೆಂದರೆ ಈಗ ಅವನು ಬಂಧನದಲ್ಲಿಲ್ಲ. ಬಂಧನದೊಂದಿಗೆ ಅವನ ಬಿಡುಗಡೆಯ ಫೀಲ್ ಕೂಡ ಮಾಯವಾಗಿದೆ. ಅದ್ದರಿಂದ ‘ಇಲ್ಲ’. ಏಕೆಂದರೆ ಬಿಡುಗಡೆ ಬಂಧನದ ಭಾಗವಾಗಿತ್ತು, ಈಗ ಅದು ಬಂಧನದ ಜೊತೆಯೇ ಮಾಯವಾಗಿದೆ. ಈಗ ಅವನು ಬಂಧನ ಮತ್ತು ಬಿಡುಗಡೆ ಎರಡನ್ನೂ ಮಿರಿದ್ದಾನೆ. ಹಾಗಾಗಿ ಈ ಎರಡನ್ನೂ ಅವನು ಇನ್ನು ಅನುಭವಿಸುವುದು ಸಾಧ್ಯವಿಲ್ಲ.

ಧರ್ಮವನ್ನ, ನಿಮ್ಮ ಹುಡುಕಾಟದ, ಬಯಕೆಯ ಸಂಗತಿಯನ್ನಾಗಿ ಮಾಡಿಕೊಳ್ಳಬೇಡಿ. ಮೋಕ್ಷ, ಬಿಡುಗಡೆ, ನಿರ್ವಾಣ ಮುಂತಾದವೆಲ್ಲ ನಿಮ್ಮ ಹುಡುಕಾಟಕ್ಕೆ ಕಾರಣ ಆಗದಿರಲಿ. ಇವು ಸಾಧ್ಯವಾಗೋದೇ ಈ ಬಯಕೆಗಳೆಲ್ಲ ಕರಗಿ ಹೋದಾಗ.

ಒಂದು ದಿನ ಸಾರಾಯಿ ಅಂಗಡಿಯಲ್ಲಿ ಅಪರಿಚಿತನೊಬ್ಬ ತನ್ನ ಆರೋಗ್ಯದ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದ.

“ ಹದಿನೈದು ವರ್ಷಗಳಿಂದ ನನ್ನ ಜೀವನ ಶೈಲಿಯನ್ನ ನಾನು ಕೊಂಚ ಕೂಡ ಬದಲಾಯಿಸಿಕೊಂಡಿಲ್ಲ. ಪ್ರತಿ ದಿನ ಬೆಳಿಗ್ಗೆ ೬ ಗಂಟೆಗೆ ನಿದ್ದೆಯಿಂದ ಏಳುತ್ತೇನೆ, ಅರ್ಧ ಗಂಟೆ ವ್ಯಾಯಾಮ, ಸರಿಯಾಗಿ ೭ ಗಂಟೆಗೆ ಬೆಳಗಿನ ಉಪಹಾರ, ೭.೩೦ ಕ್ಕೆ ಕೆಲಸಕ್ಕೆ ಹಾಜರಿ, ಮಧ್ಯಾಹ್ನ ಸರಿಯಾಗಿ ೧ ಗಂಟೆಗೆ ಊಟ, ಸಂಜೆ ೭ ಗಂಟೆಗೆ ಡಿನ್ನರ್ ಮತ್ತು ರಾತ್ರಿ ೯ ಗಂಟೆಗೆ ನಿದ್ರೆ. ನನ್ನ ಊಟ ಕೂಡ ಬಹಳ ಸರಳ. ಈ ಹದಿನೈದು ವರ್ಷಗಳಲ್ಲಿ ನನಗೆ ಒಮ್ಮೆಯೂ ಕಾಯಿಲೆ ಸತಾಯಿಸಿಲ್ಲ “

“ ಹಾಗೆಯೇ ನೀವು ಜೈಲಿಗೆ ಹೋದ ಕಾರಣವನ್ನೂ ಹೇಳಿಬಿಡಿ ಸ್ವಾಮಿ “

ನಸ್ರುದ್ದೀನ್ ಗಂಭೀರವಾಗಿ ಪ್ರಶ್ನೆ ಮಾಡಿದ.

Leave a Reply