ಸಂಗ್ರಹ ಮತ್ತು ನಿರೂಪಣೆ: ಚಿದಂಬರ ನರೇಂದ್ರ
ಕೆಡುಕಿನ ಅಧಿಪತಿ ಮಾರ ತನ್ನ ಸೇವಕರೊಡನೆ ಭಾರತ ದೇಶದ ಹಳ್ಳಿಯೊಂದರ ಮೂಲಕ ಹಾಯ್ದು ಪ್ರಯಾಣ ಮಾಡುತ್ತಿದ್ದ.
ಹೀಗೆ ಪ್ರಯಾಣ ಮಾಡುವಾಗ, ಧ್ಯಾನದಲ್ಲಿ ತಲ್ಲೀನನಾಗಿದ್ದ ಒಬ್ಬ ಮನುಷ್ಯ ಅವನ ಕಣ್ಣಿಗೆ ಬಿದ್ದ. ಅವರು ನೋಡ ನೋಡುತ್ತಿದ್ದಂತೆಯೇ, ಧ್ಯಾನಿಯ ಮುಖ ಪ್ರಖರ ತೇಜಸ್ಸಿನಿಂದ ಹೊಳೆಯತೊಡಗಿತು.
ಯಾಕೆ ಆ ಮನುಷ್ಯನ ಮುಖದ ಸುತ್ತ ಈ ದಿವ್ಯ ಪ್ರಭಾವಳಿ ಎಂದು ಸೇವಕರು ಮಾರನನ್ನು ಕೇಳಿದರು.
“ ಅವನು ಈಗ ತಾನೇ ಸತ್ಯವೊಂದನ್ನು ಕಂಡು ಕೊಂಡಿದ್ದಾನೆ” ಮಾರ ಉತ್ತರಿಸಿದ.
“ಓ ! ಕೆಡಕಿನ ಅಧಿಪತಿ, ಅವನು ಸತ್ಯವೊಂದನ್ನು ಕಂಡುಕೊಂಡಿದ್ದಾನೆ ಎಂದರೆ ನಿನಗೆ ಇನ್ನು ಚಿಂತೆ ಶುರು “
ಸೇವಕನೊಬ್ಬ ಮಾರನನ್ನು ಎಚ್ಚರಿಸಿದ.
“ ಸತ್ಯವನ್ನು ಕಂಡುಕೊಂಡ ಬಹುತೇಕ ಜನ ಮರು ಘಳಿಗೆಯಲ್ಲೇ ಅದರಿಂದ ನಂಬಿಕೆಯೊಂದನ್ನು ಹುಟ್ಟು ಹಾಕುತ್ತಾರೆ, ಹಾಗಾಗಿ ನನಗೇನು ಭಯವಿಲ್ಲ “
ಮಾರ ನಗುತ್ತ ಉತ್ತರಿಸಿದ.
ಬುದ್ಧನ ಹಾರ್ಟ್ ಸೂತ್ರದ ಕುರಿತಾದ ತಮ್ಮ ಉಪನ್ಯಾಸದಲ್ಲಿ ವಿಯೆತ್ನಾಮಿ ಸಂತ Thich Nhat Hanh ಒಂದು ಸುಂದರ ಕಥೆ ಹೇಳುತ್ತಾರೆ. ಈ ಕಥೆಯಲ್ಲಿ ಒಳಿತು ಕೆಡಕುಗಳು ಪರಸ್ಪರ ವಿರೋಧಿಗಳಂತೆ ಕಾಣಿಸಿಕೊಂಡರೂ, ಹೃದಯದ ಸ್ವರ್ಗದಲ್ಲಿ ಹೇಗೆ ಆಪ್ತ ಗೆಳೆಯರಂತೆ ವರ್ತಿಸುತ್ತವೆ ಎನ್ನುವುದನ್ನ ವಿವರಿಸುತ್ತಾರೆ.
ಒಂದು ದಿನ ಬುದ್ಧ ಗುಹೆಯೊಂದರಲ್ಲಿ ಧ್ಯಾನದಲ್ಲಿ ಮಗ್ನನಾಗಿದ್ದ, ಅವನ ಪ್ರಧಾನ ಶಿಷ್ಯ ಆನಂದ ಗುಹೆಯ ಬಾಗಿಲಲ್ಲಿ ಕಾವಲು ಕಾಯುತ್ತಿದ್ದ. ಅದೇ ವೇಳೆಗೆ ಅಲ್ಲಿಗೆ ಆಗಮಿಸಿದ ಕೆಡುಕಿನ ದೊರೆ ಮಾರ, ತಾನು ಬಂದಿರುವ ಸುದ್ದಿಯನ್ನ ಬುದ್ಧನಿಗೆ ತಿಳಿಸುವಂತೆ ಆನಂದನನ್ನು ಆಗ್ರಹಿಸಿದ.
“ ನೀನಿಲ್ಲಿಗೆ ಯಾಕೆ ಬಂದೆ? ಬೋಧಿವೃಕ್ಷದ ಕೆಳಗೆ ಬುದ್ಧನಿಂದ ಸೋಲುಂಡವನು ನೀನು, ಬುದ್ಧನ ವೈರಿ ನೀನು, ಹೊರಟು ಹೋಗು ಇಲ್ಲಿಂದ” ಆನಂದ ಮಾರನಿಗೆ ಗುಹೆಯೊಳಗೆ ಪ್ರವೇಶ ನಿರಾಕರಿಸಿದ.
ಆನಂದನ ಮಾತು ಕೇಳಿ ಮಾರ ಜೋರಾಗಿ ನಕ್ಕುಬಿಟ್ಟ, “ ನಾನು ಅವನ ವೈರಿಯೆಂದು ಬುದ್ಧ ನಿನಗೆ ಹೇಳಿದ್ದಾನೆಯೇ? “
ಮಾರನ ಮಾತು ಕೇಳಿ ಆನಂದನಿಗೆ ಮುಜುಗರವಾಯಿತು, ಅವನು ಗುಹೆಯ ಒಳಗೆ ಹೋಗಿ ಬುದ್ಧನಿಗೆ ಮಾರ ಬಂದಿರುವ ಸುದ್ದಿಯನ್ನು ಮುಟ್ಟಿಸಿದ. “ ಮಾರ ಇಲ್ಲಿಗೆ ಬಂದಿರುವುದು ನಿಜವೆ? “ ಬುದ್ಧ ಲಗುಬಗೆಯಿಂದ ಎದ್ದು ಮಾರನನ್ನು ಸ್ವಾಗತಿಸಲು ತಾನೇ ಸ್ವತಃ ಗುಹೆಯ ಬಾಗಿಲಿಗೆ ಬಂದ. ಅಲ್ಲಿ ನಿಂತಿದ್ದ ಮಾರನಿಗೆ ತಲೆಬಾಗಿ ವಂದಿಸಿ ಬುದ್ಧ, ಅವನ ಉಭಯಕುಶಲೋಪರಿ ವಿಚಾರಿಸಿದ.
“ ನನ್ನ ಪರಿಸ್ಥಿತಿ ತುಂಬ ಕೆಟ್ಟದಾಗಿದೆ ಬುದ್ಧ. ನಾನು ಯಾವಾಗಲೂ ಒಗಟಿನ ಭಾಷೆಯಲ್ಲಿ ಮಾತನಾಡಬೇಕು, ಸದಾ ತಂತ್ರಗಳನ್ನು ಹೆಣೆಯುತ್ತಲೇ ಇರಬೇಕು. ಯಾವತ್ತೂ ಜನರಿಗೆ ಕೆಡಕು ಮಾಡುವುದನ್ನ ಯೋಚಿಸುತ್ತಿರಬೇಕು. ಈ ಬದುಕು ನನಗೆ ಬೇಸರ ತಂದಿದೆ. ಮೇಲಾಗಿ ಈಗ ನನ್ನ ಶಿಷ್ಯರು, ಸಮಾನತೆ, ಸಾಮಾಜಿಕ ನ್ಯಾಯ, ಅಹಿಂಸೆ, ಬಿಡುಗಡೆ ಎಂದೆಲ್ಲ ಮಾತನಾಡುತ್ತಿದ್ದಾರೆ. ನಾನು ನನ್ನ ಶಿಷ್ಯರನ್ನೆಲ್ಲ ನಿನಗೆ ಒಪ್ಪಿಸಿಬಿಡುತ್ತೇನೆ, ನಾನೂ ಬುದ್ಧನಾಗಬೇಕು.” ಮಾರ ತನ್ನ ಸಂಕಟವನ್ನ ಬುದ್ಧನ ಎದುರು ಹೇಳಿಕೊಂಡ.
ಮಾರನ ಮಾತುಗಳನ್ನ ಸಾವಧಾನದಿಂದ ಕೇಳಿಸಿಕೊಂಡು ಬುದ್ಧ ಮಾತನಾಡಿದ, “ ಬುದ್ಧನ ಬದುಕು ಸುಸೂತ್ರ ಎಂದುಕೊಂಡಿರುವೆಯಾ ಮಾರ? ನಾನು ಹೇಳದ ಮಾತುಗಳನ್ನ ನನ್ನ ಶಿಷ್ಯರು ನನ್ನ ಬಾಯಿಯಲ್ಲಿ ತುರುಕುತ್ತಾರೆ. ನನ್ನ ಹೆಸರಲ್ಲಿ ಭವ್ಯ ದೇವಸ್ಥಾನಗಳನ್ನು ಕಟ್ಟುತ್ತಿದ್ದಾರೆ. ನನ್ನ ತಿಳುವಳಿಕೆಯ ಮಾತುಗಳನ್ನ ವ್ಯಾಪಾರದ ಸರಕು ಮಾಡಿಕೊಂಡಿದ್ದಾರೆ. ಇಂಥ ಬದುಕು ನಿನಗೆ ಬೇಡ ಮಾರ.”
ಬುದ್ಧ ಮತ್ತು ಮಾರನ ನಡುವಿನ ಸಂಭಾಷಣೆಯನ್ನು ಆಲಿಸುತ್ತಿದ್ದ ಆನಂದನಿಗೆ ಬುದ್ಧನ ಮಾತು ಕೇಳಿ ದಿಗಿಲಾಯಿತು. ಒಳಿತು ಕೆಡಕುಗಳ ನಡುವಿನ ಈ ಆಪ್ತತೆಯನ್ನ ಒಪ್ಪಿಕೊಳ್ಳುವುದು ಯಾವತ್ತಿಗೂ ಬುದ್ಧಿ ಮತ್ತು ಮನಸ್ಸಿಗೆ ಸಾಧ್ಯವಾಗದ ಸಂಗತಿ.