ಮೌನದ ಭಾಷೆ ಗೊತ್ತಿಲ್ಲದೇ ಸಂಭಾಷಣೆ ಹೇಗೆ ಸಾಧ್ಯ? : ಓಶೋ ವ್ಯಾಖ್ಯಾನ

ಮೌನದಲ್ಲಿ ಮಾತುಗಳಿಲ್ಲವಾದರೂ ಸಂಭಾಷಣೆ ಮಾತ್ರ ನಿರಾಂತಕವಾಗಿ ಮುಂದುವರೆಯುತ್ತದೆ. ಶಬ್ದಗಳಿಲ್ಲದ ಇಂಥ ಸಂಭಾಷಣೆಯಲ್ಲಿ ಆಳ ತಿಳುವಳಿಕೆ ಮಾತ್ರ ಅಲ್ಲ, ಭಾಷೆಯ ಹೊರತಾದ ಶಕ್ತಿ ಸಂಚಾರವೂ ಸಾಧ್ಯವಾಗುತ್ತದೆ : ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಒಂದು ರೈಲಿನ ಕಂಪಾರ್ಟನೆಂಟಿನಲ್ಲಿ ಇಬ್ಬರು ಯಹೂದಿಗಳು ಪ್ರಯಾಣ ಮಾಡುತ್ತಿದ್ದರು. ಒಬ್ಬ ಯಹೂದಿ ಇನ್ನೊಬ್ಬನನ್ನು ಪ್ರಶ್ನೆ ಮಾಡಿದ.

“ ಟೈಂ ಎಷ್ಟಾಯ್ತು? “

ಇನ್ನೊಬ್ಬ ಯಹೂದಿಯ ಕಡೆಯಿಂದ ಯಾವ ಉತ್ತರವೂ ಬರಲಿಲ್ಲ.

ಮೊದಲಿನವ ಮತ್ತೆ ಕೇಳಿದ,

“ ಟೈಂ ಎಷ್ಟು ಈಗ ? “

ಈಗಲೂ ಇನ್ನೊಬ್ಬ ಯಹೂದಿ ಯಾವುದೇ ಉತ್ತರ ಕೊಡದೇ ಸುಮ್ಮನಿದ್ದ.

ಇದರಿಂದ ಇರಿಟೇಟ್ ಅದ ಮೊದಲ ವ್ಯಕ್ತಿ ಇನ್ನೊಬ್ಬನ ಭುಜ ಅಲ್ಲಾಡಿಸಿ ಬಹುತೇಕ ಕಿರುಚುವ ದನಿಯಲ್ಲಿ ಕೇಳಿದ “ ಟೈಂ ಎಷ್ಟಾಯು? “

ಈ ಬಾರಿ ಎರಡನೇಯ ಯಹೂದಿ, ತನ್ನ ವಾಚ್ ನೋಡಿಕೊಂಡು ಟೈಂ ಎಷ್ಟು ಎನ್ನುವುದನ್ನ ಅವನಿಗೆ ಹೇಳಿದ.

“ ಮೊದಲ ಎರಡು ಸಲ ನಾನು ಟೈಂ ಕೇಳಿದಾಗ ನೀನು ಯಾಕೆ ಉತ್ತರಿಸಲಿಲ್ಲ “ ಮೊದಲನೇಯವ ಮತ್ತೆ ಪ್ರಶ್ನೆ ಮಾಡಿದ.

“ ಯಾಕೆಂದ್ರೆ, ನೀನು ಟೈಂ ಕೇಳ್ತಿಯಾ, ನಾನು ಟೈಂ ಹೇಳ್ತಿನಿ, ಆಮೇಲೆ ಹಾಗೇ ನಾವಿಬ್ಬರೂ ಮಾತನಾಡಲಿಕ್ಕೆ ಶುರು ಮಾಡ್ತೀವಿ. ಗೆಳಯರಾಗ್ತೀವಿ. ವಿಯೆನ್ನಾ ಸ್ಟೇಷನ್ ಲ್ಲಿ ಇಳಿದಾಗ, ನಾನು ನಿನ್ನ, ಮನೆಗೆ ಬಾ ಚಹಾ ಕುಡಿದು ಹೋಗು ಅಂತ ನನ್ನ ಆಹ್ವಾನಿಸ್ತೀನಿ. ಗೆಳೆಯ ಕರೆದಾಗ ಇಲ್ಲ ಅನ್ನೋಕಾಗ್ದೇ ನೀನು ನನ್ನ ಮನೆಗೆ ಬರ್ತೀಯಾ. ಅಲ್ಲಿ ನನ್ನ ಮಗಳು ನಿನಗೆ ಚಹಾ ತಂದು ಕೊಡ್ತಾಳೆ. ಆಕೆ ತುಂಬ ಚೆಲುವೆ, ಆಕೆಯನ್ನು ನೋಡಿ ನೀನು ಆಕೆಯ ಪ್ರೇಮದಲ್ಲಿ ಬೀಳ್ತೀಯ, ನೀನು ಕೂಡ ಹ್ಯಾಂಡಸಂ, ನನ್ನ ಮಗಳಿಗೂ ನೀನು ಇಷ್ಟ ಆಗಬಹುದು. ಆಮೇಲೆ ನೀವಿಬ್ಬರೂ ಪರಸ್ಪರ ಪ್ರೇಮಿಸುತ್ತ ಮದುವೆ ಆಗೋ ನಿರ್ಧಾರ ಮಾಡ್ತೀರ. ನನ್ನ ಸಮಸ್ಯೆ ಏನು ಅಂದ್ರೆ ; ನನಗೆ ಕೈಯಲ್ಲಿ ವಾಚ್ ಕೂಡ ಇಲ್ಲದವನಿಗೆ ಮಗಳನ್ನನ ಕೊಟ್ಟು ಮದುವೆ ಮಾಡೋದು ಇಷ್ಟ ಇಲ್ಲ. ಅದಕ್ಕಾಗಿಯೇ ನೀನು ಟೈಂ ಕೇಳಿದಾಗ ನಾನು ಉತ್ತರಿಸಲಿಲ್ಲ.” ಎರಡನೇಯ ಯಹೂದಿ ತಾನು ಸುಮ್ಮನೇ ಇದ್ದ ಕಾರಣವನ್ನು ವಿವರಿಸಿ ಹೇಳಿದ.

ಎಷ್ಟು ದೂರದ ಯೋಚನೆ ಇದು! ಅದರೆ ಪ್ರತಿಯೊಬ್ಬರ ಮೈಂಡ್ ಕೂಡ ಇಂಥ ದೂರಾಲೋಚನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತದೆ. ಎಚ್ಚರ ಇರಲಿ, ವ್ಯರ್ಥ ಕಲ್ಪನೆಯಿಂದ ಯಾವ ಪ್ರಯೋಜನವೂ ಇಲ್ಲ. ಕಲ್ಪನೆ ಎಷ್ಟೇ ಸುಂದರವಾಗಿದ್ದರೂ ಅದು ಸಾಬೂನಿನ ಗುಳ್ಳೆ. ಧ್ಯಾನ ಮಾಡಿ, ನಿಮ್ಮ ಅಸ್ತಿತ್ವದ ಪರಿಚಯ ಮಾಡಿಕೊಳ್ಳಿ, ಅದರ ಸ್ಪರ್ಶವನ್ನು ಅನುಭವಿಸಿ, ಆಗ ಮಾತ್ರ ಗಿಡ ಮರಗಳಿಗೆ ಹಲೋ ಹೇಳುವುದು ನಿಮಗೆ ಸಾಧ್ಯವಾಗುವುದು. ಆಗ ಮಾತ್ರ ನಿಮಗೆ ನದಿ, ಮೋಡ, ಪರ್ವತಗಳ ಜೊತೆ ಮಾತನಾಡುವ ಭಾಷೆ ಸಿದ್ಧಿಯಾಗುವುದು. ಮೌನ ಅವುಗಳ ಭಾಷೆ, ನಿಮಗೆ ಮೌನದ ಭಾಷೆ ಗೊತ್ತಿಲ್ಲವಾದರೆ ಅವುಗಳ ಜೊತೆ ಸಂಭಾಷಣೆ ಹೇಗೆ ಸಾಧ್ಯ?

ಮೌನದಲ್ಲಿ ಮಾತುಗಳಿಲ್ಲವಾದರೂ ಸಂಭಾಷಣೆ ಮಾತ್ರ ನಿರಾಂತಕವಾಗಿ ಮುಂದುವರೆಯುತ್ತದೆ. ಶಬ್ದಗಳಿಲ್ಲದ ಇಂಥ ಸಂಭಾಷಣೆಯಲ್ಲಿ ಆಳ ತಿಳುವಳಿಕೆ ಮಾತ್ರ ಅಲ್ಲ, ಭಾಷೆಯ ಹೊರತಾದ ಶಕ್ತಿ ಸಂಚಾರವೂ ಸಾಧ್ಯವಾಗುತ್ತದೆ. ಗಿಡ ಮರಗಳು ನಿಮಗೆ ಏನೂ ಹೇಳುವುದಿಲ್ಲ ಮತ್ತು ನೀವು ಏನನ್ನೂ ಕೇಳಿಸಿಕೊಳ್ಳುವುದಿಲ್ಲ ಆದರೂ ನಿಮ್ಮ ಮತ್ತು ಗಿಡಮರಗಳ ನಡುವೆ ಶಕ್ತಿಯೊಂದರ ವಿನಿಮಯವಾಗುತ್ತದೆ. ಆಗ ನಿಮ್ಮ ಅರಿವಿಗೆ ಬರುವ ಸಂಗತಿಯೆಂದರೆ, ನಿಮ್ಮನ್ನು ಯಾರಾದರೂ ಪ್ರೀತಿಸಬೇಕಾದರೆ, ಮೊದಲು ನೀವು ಅವರನ್ನು ಪ್ರೀತಿಸಬೇಕು ಎನ್ನುವ ವಿಷಯ.

ಹೌದು, ಪರ್ವತಗಳು ಪ್ರೀತಿಸಬಲ್ಲವು, ಮೋಡಗಳು ಪ್ರೀತಿಸಬಲ್ಲವು, ನದಿಗಳು ಪ್ರೀತಿಸಬಲ್ಲವು, ಗಿಡ ಮರಗಳು ಪ್ರೀತಿಸಬಲ್ಲವು. ಆದರೆ ಅವು ನಿಮ್ಮನ್ನು ಪ್ರೀತಿಸುವ ಮೊದಲು, ಹೇಗೆ ಪ್ರೀತಿಸಬೇಕು ಎನ್ನುವುದನ್ನ ನೀವು ಮೊದಲು ಕಲಿಯಬೇಕು, ಈ ಸಮಸ್ತ ಅಸ್ತಿತ್ವನ್ನ ಹೇಗೆ ಪ್ರೀತಿಸಬೇಕು, ಹೇಗೆ ಗೌರವಿಸಬೇಕು ಎನ್ನುವುದು ಮೊದಲು ನಿಮಗೆ ಗೊತ್ತಾಗಬೇಕು. ಆಗ ಒಂದು ಮಧುರ ಸಂಲಗ್ನತೆ ನಿಮ್ಮ ಮತ್ತು ನಿಸರ್ಗದ ನಡುವೆ ಸಾಧ್ಯವಾಗುವುದು ಮತ್ತು ಈ ಸಂಲಗ್ನತೆಯನ್ನು ಸಾಧಿಸುವುದೇ ಮನುಷ್ಯನ ಪರಮ ಕಾಳಜಿಯಾಗಬೇಕು.


Source ~ Osho Stories, Insights, Quotes at “Zorba the Buddha”

Leave a Reply